ಬೆಳ್ತಂಗಡಿ: ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಜನರಿಗೆ ಮನೆ ನಿವೇಶನಗಳಿಗೆ ಹಕ್ಕುಪತ್ರ ನೀಡಲು ಜಾರಿಗೆ ತಂದಿರುವ 94ಸಿ ಯೋಜನೆ ಅನುಷ್ಠಾನ ತಾಲೂಕಿನಲ್ಲಿ ಸರಿಯಾಗಿ ಆಗುತ್ತಿಲ್ಲ. ಹಣ ಕೊಟ್ಟವರಿಗೆ ಮಾತ್ರ ನಿವೇಶನ ಅಳತೆ ಮಾಡಿ ಕೊಡಲಾಗುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಭಾರೀ ಲಂಚ ಹಾಗೂ ಭ್ರಷ್ಟಾಚಾರ ನಡೆಯುತ್ತಿದ್ದು ಈ ಬಗ್ಗೆ ಕಂದಾಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಪಂಚಾಯತಿನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕು ಪಂಚಾಯತಿನ ಸಾಮಾನ್ಯ ಸಭೆ ತಾ.ಪಂ ಉಪಾಧ್ಯಕ್ಷ ವಿಷ್ಣು ಮರಾಠೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ವಿಜಯ ಗೌಡ ಈ ವಿಚಾರ ಪ್ರಸ್ತಾಪಿಸಿ ಈ ಅರ್ಜಿಗಳಲ್ಲಿ ಸಮೀಕ್ಷೆ ಮಾಡುವ ಜವಾಬ್ದಾರಿ ಯಾರದ್ದು? ಸಮೀಕ್ಷೆ ಇಲಾಖೆಗೆ ಹೋದರೆ ಖಾಸಗಿಯವರಿಂದ ಮಾಡಿಸಿ ಎಂಬ ಉತ್ತರ ಬರುತ್ತಿದೆ ಎಂದರು.
ಕೇಳಿದಷ್ಟು ಹಣ ಕೊಟ್ಟವರದ್ದು ಮಾತ್ರ ಕೆಲಸ ಆಗುತ್ತಿದೆ ಎಂದು ಸದಸ್ಯರುಗಳು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಸದಸ್ಯ ಧರ್ಣಪ್ಪ ಪೂಜಾರಿ ಅವರು, ಕನಿಷ್ಟ ಇಬ್ಬರು ಸರ್ವೆಯವರನ್ನಾದರು ಇದೇ ಕೆಲಸಕ್ಕೆ ನಿಯೋಜಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾಮಕರಣಿಕರ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದರು. ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಅವರು, ತಾಲೂಕಿನಲ್ಲಿ 9260 ಅರ್ಜಿಗಳು ಬಂದಿದೆ. 304 ಮಂದಿಗೆ ಈಗಾಗಲೆ ಹಕ್ಕುಪತ್ರ ವಿತರಿಸಲಾಗಿದೆ. ಸರ್ವೆಯವರು ಕೆಲಸದ ಒತ್ತಡದಲ್ಲಿದ್ದಾರೆ. ಸರ್ವೆಯವರ ಹಾಗೂ ಗ್ರಾಮಕರಣಿಕರ ಮೂಲಕ ಸರ್ವೇ ನಡೆಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅರಸಿನಮಕ್ಕಿಯ ರುದ್ರಭೂಮಿಯ ಅಕ್ರಮ ತೆರವು ಕಾರ್ಯಾಚರಣೆ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ತಾಲೂಕಿನಲ್ಲಿ ಇರುವ ಇಂತಹ ಎಲ್ಲ ಅಕ್ರಮಗಳನ್ನು ತೆರವುಗೊಳಿಸದೆ ಕೇವಲ ಅರಸಿನಮಕ್ಕಿಗೆ ಮಾತ್ರ ಒತ್ತು ನೀಡಲಾಗುತ್ತಿದೆ ಎಂದು ಸಭಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಾ ಚಂದ್ರಶೇಖರ್ ಪ್ರಶ್ನಿಸಿದರು. ಜಮೀನು ಗುರುತಿಸುವ ಕಾರ್ಯ ಮಾಡಿರುತ್ತಾರೆ. ದಶಕದ ಬಳಿಕ ಅದು ಕೃಷಿ ಭೂಮಿಯಾಗಿ ಮಾರ್ಪಟ್ಟಿರುತ್ತದೆ. ಇಂತಹ ಪ್ರಕರಣಗಳು ತುಂಬಾ ಇದೆ. ಅದನ್ನು ಮಾನವೀಯತೆಯ ದೃಷ್ಟಿಯಿಂದ ಗಮನಿಸಿ ಕ್ರಮ ಕೈಗೊಳ್ಳಿ ಎಂದು ಸದಸ್ಯರುಗಳು ಆಗ್ರಹಿಸಿದರು.
ಹೆಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಕಾಮಗಾರಿ ತಾಲೂಕಿನಲ್ಲಿ ಅಲ್ಲಲ್ಲಿ ನಡೆಯುತ್ತಿದ್ದು, ಜನರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ. ಪೈಪ್ಲೈನ್ ಅಳವಡಿಸಲು ಬೃಹತ್ ಹೊಂಡಗಳನ್ನು ಅಲ್ಲಲ್ಲಿ ಅಗೆದು ಹಾಕಿದ್ದು, ಇದಕ್ಕೆ ಸಾಕು ಪ್ರಾಣಿಗಳು ಬಿದ್ದು ಮೃತಪಟ್ಟ ಘಟನೆಗಳು ನಡೆದಿವೆ. ಶಾಲೆಗಳಿಗೆ ಹೋಗುವ ಮಕ್ಕಳಿಗೆ ಇದು ಅಪಾಯದ ಸಂಕೇತವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಮಮತಾ ಶೆಟ್ಟಿ, ಗೀತಾ ರಾಮಣ್ಣ ಗೌಡ ಸಭೆಯ ಗಮನ ಸೆಳೆದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಆದ ನಷ್ಟಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿರ್ಧರಿಸಲಾಯಿತು.
ಕಂದಾಯ ಇಲಾಖೆಯ ಕಾರ್ಯನಿರ್ವಣೆಯ ಬಗ್ಗೆ ಸದಸ್ಯರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಹಲವೆಡೆ ಇರುವ ಜಮೀನು ಅಕ್ರಮಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ. ಕುಂಟು ನೆಪಗಳನ್ನು ನೀಡುತ್ತಾ ಆಕ್ರಮಣಕಾರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ವೇಣೂರು ಕೆರೆಯ ಬಗ್ಗೆ ಕಳೆದ 5 ವರ್ಷಗಳಿಂದ ಸಭೆಯಲ್ಲಿ ಚರ್ಚೆಯಾಗಿದ್ದರೂ, ನ್ಯಾಯಾಲಯದ ತೀರ್ಪು ಬಂದಿದ್ದರೂ ಇಲಾಖೆ ಇನ್ನೂ ಅತ್ತ ತಲೆ ಹಾಕಿಲ್ಲ. ಇಂತಹ ಹಲವಾರು ಪ್ರಕರಣಗಳು ತಾಲೂಕಿನ ವಿವಿಧೆಡೆಯಲ್ಲಿದೆ ಎಂದು ಸದಸ್ಯರುಗಳು ಗಮನ ಸೆಳೆದರು.
ಪಹಣಿಪತ್ರದಲ್ಲಿ ಬೆಳೆಯನ್ನು ದಾಖಲಿಸುವ ಕಾರ್ಯ ನಡೆಯುತ್ತಿಲ್ಲ. ಇದರಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯೆ ಲೀನಾ ಡಿ. ಕೋಸ್ಟಾ ಗಮನ ಸೆಳೆದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಯಿತು. ಸಭೆಯ ತಾಲೂಕಿನ ವಿವಿಧ ಅಭಿವೃದ್ದಿ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಾ ಚಂದ್ರಶೇಖರ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಮಹಾಂತೇಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.