ಮಾರ್ಚ್ 20 ವಿಶ್ವ ಜಲ ಜಾಗೃತ ದಿನ ಮತ್ತು ಮಾರ್ಚ್ 21 ವಿಶ್ವ ಅರಣ್ಯ ದಿನ. ಎರಡೂ ದಿನಗಳು ಒಂದಕ್ಕೊಂದು ಅತೀ ಸಮೀಪದಲ್ಲಿ ಸಂಬಂಧವನ್ನು ಹೊಂದಿವೆ ಎಂದು ಅನಿಸುತ್ತಿದೆ. ಯಾಕೆಂದರೆ ನಾವು ಸಾಮಾನ್ಯ ನಾಗರಿಕರು ಎರಡರ ಮಹತ್ವವನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅತ್ತ ರಾಜಕಾರಣಿಗಳು ಜಲ ಮತ್ತು ಅರಣ್ಯವನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರೆ ಇತ್ತ ಪರಿಸರ ಕಾಳಜಿ ಇರುವ ನಾಗರಿಕರು ಹೋರಾಟ, ಪ್ರತಿಭಟನೆ ಮೂಲಕ ಜನರನ್ನು ಪ್ರಕೃತಿಯೆಡೆಗೆ ಜಾಗೃತಿಗೊಳಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ.
ಇವತ್ತು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಸಹ್ಯಾದ್ರಿ ಸಂರಕ್ಷಣಾ ಸಂಚಯ ಮತ್ತು ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಎತ್ತಿನ ಹೊಳೆ ತಿರುಗಿಸುವ ಸರ್ಕಾರದ ಯೋಜನೆಯ ವಿರುದ್ಧ ಕೊಡಪಾನ ಚಳುವಳಿ ನಡೆಸಿದರು. ಎತ್ತಿನ ಹೊಳೆ ಯೋಜನೆಯಿಂದ ಕರಾವಳಿಯ ಜನರಿಗೆ ಯಾವುದೇ ತೊಂದರೆಯಿಲ್ಲ. ಮಳೆಗಾಲದ ಸಂದರ್ಭದಲ್ಲಿ ಅಂದರೆ ಜೂನ್‌ನಿಂದ ನವೆಂಬರ್ ತನಕ ಪಶ್ಚಿಮ ಘಟ್ಟದಲ್ಲಿ ಬೀಳುವ ಹೆಚ್ಚುವರಿ ನೀರನ್ನು ಬಯಲು ಸೀಮೆಯಾದ ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರದ ಜನರಿಗೆ ಕುಡಿಯಲು ಬಳಸುವ ಯೋಜನೆ ಎಂದು ಸರ್ಕಾರ ಹೇಳುತ್ತಾ ಬರುತ್ತಿದೆ. ನಾವು ಅಲ್ಲಿ 2 ಸಾವಿರ ಟಿಎಂಸಿ ನೀರಿನಲ್ಲಿ ತೆಗೆದುಕೊಳ್ಳುವುದು ಕೇವಲ 24 ಟಿಎಂಸಿ ನೀರು ಮಾತ್ರ. ಅದರಿಂದ ಎತ್ತಿನ ಹೊಳೆಗೆ ಏನೂ ತೊಂದರೆ ಆಗುವುದಿಲ್ಲ ಎನ್ನುವುದು ಅದನ್ನು ಪ್ರತಿಪಾದಿಸುತ್ತಿರುವ ವಾದ.
ಆದರೆ ಈ ಯೋಜನೆ 288 ಕಿ.ಮೀ ಕ್ರಮಿಸಿ ಗ್ರಾವಿಟಿ ಶಕ್ತಿಯಿಂದ ನೀರನ್ನು ಮೇಲಕ್ಕೆ ಎತ್ತಿ ಅದನ್ನು ತುಮಕೂರು, ಹೆಸರಘಟ್ಟ, ಕೋಲಾರದ ಬೇರೆ ಬೇರೆ ಸಂಗ್ರಹಾಲಯದಲ್ಲಿ ಶೇಖರಿಸಿ ನಂತರ ನೀರನ್ನು ಜನರಿಗೆ ಉಣಬಡಿಸುವ ಈ ಕಾರ್ಯಕ್ಕೆ ಸದ್ಯ ಸರ್ಕಾರ ನಿಗದಿಪಡಿಸಿರುವ ಮೊತ್ತ ಸುಮಾರು 12 ಸಾವಿರ ಕೋಟಿ. ಇದು ಸಂಪೂರ್ಣವಾಗಿ ಜಾರಿಗೆ ಬಂದಲ್ಲಿ ಈ ಮೊತ್ತ ದ್ವಿಗುಣಗೊಂಡರೂ ಆಶ್ಚರ್ಯವಿಲ್ಲ. ಅದಕ್ಕೆ ಸರಿಯಾಗಿ ನಮ್ಮ ಎದುರು ವಾರಾಹಿ ಯೋಜನೆಯ ಜ್ವಲಂತ ಉದಾಹರಣೆಯೇ ಇದೆ. ಅತ್ತ ತುಂಬೆ ಅಣೆಕಟ್ಟು ಯೋಜನೆ ಕೂಡ ಸಂಪೂರ್ಣವಾಗಿ ಮುಗಿಯುವ ಸಂದರ್ಭದಲ್ಲಿ ಇನ್ನೆಷ್ಟು ಕೋಟಿ ರೂಪಾಯಿ ಸರ್ಕಾರದ ಕೈ ಬಿಡಲಿದೆ ಎನ್ನುವುದು ಯಾರಿಗೆ ಗೊತ್ತು. ಈ ನಡುವೆ ಎತ್ತಿನ ಹೊಳೆ ಯೋಜನೆ ಜಾರಿಗೊಳ್ಳಲು ಸುಮಾರು 3 ಸಾವಿರ ಎಕ್ಟೇರ್ ಅರಣ್ಯ ಭೂಮಿ ಧರಾಶಾಲಿಯಾಗಲಿದೆ. ಹಾಗಾದರೆ ಆ ಅರಣ್ಯವನ್ನು ಮತ್ತೇ ನಮ್ಮ ಕೈಯಲ್ಲಿ ಬೆಳೆಸಲು ಇನ್ನೇಷ್ಟು ವರ್ಷಗಳು ಬೇಕು. ಅದು ಸುಲಭನಾ? ಒಂದು ವೇಳೆ ಎತ್ತಿನ ಹೊಳೆ ಯೋಜನೆ ಜಾರಿಯಾದರೆ ಅದರ ಬುಡದಲ್ಲಿರುವ ಶೋಲಾ ಕಾಡುಗಳ ಗತಿ ಎನು? ನಮಗೆಲ್ಲಾ ಗೊತ್ತಿರುವಂತೆ ಶೋಲಾ ಕಾಡುಗಳು ನಮ್ಮ ಜಲಸಂಪತ್ತನ್ನು ಕಾಪಾಡಿ ಇಡುವ ನೀರಿನ ಆಶಯಗಳು. ಆದರೆ ಎತ್ತಿನ ಹೊಳೆ ಯೋಜನೆ ಬಂದಾಗ ಮಳೆಯ ನೀರು ಶೋಲಾ ಕಾಡುಗಳನ್ನು ಮುಟ್ಟುವ ಮೊದಲೇ ದಿಕ್ಕು ಬದಲಾಯಿಸಿ ಬಯಲು ಸೀಮೆಯ ಕಡೆಗೆ ಮುಖ ಮಾಡುತ್ತವೆ. ಇದರಿಂದ ಶೋಲಾ ಕಾಡುಗಳು ನೀರಿನ ಕೊರತೆಯಿಂದ ಬಳಲುತ್ತವೆ. ಅದು ಹೇಗೆಂದರೆ ನೇತ್ರಾವತಿಯ ಉಪನದಿಗಳಲ್ಲಿ ಒಂದಾಗಿರುವ ಎತ್ತಿನ ಹೊಳೆಯಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ನೀರು ಇರಲು ಕಾರಣ ಇದೇ ಶೋಲಾ ಕಾಡುಗಳು. ಅವು ನೀರಿನ ಒಸರನ್ನು ತಮ್ಮಲ್ಲಿ ಹಿಡಿದಿಟ್ಟುಕೊಂಡು ಅಗತ್ಯ ಇದ್ದಾಗಲೆಲ್ಲ ಈ ಉಪನದಿಗಳಿಗೆ ನೀರನ್ನು ಬಿಟ್ಟು ಜೀವಚರಗಳ ಸಂತುಲಿತ ಸಮತೋಲನಕ್ಕೆ ಸಹಕಾರಿಯಾಗುತ್ತವೆ.
ಆದರೆ ಎತ್ತಿನ ಹೊಳೆ ಯೋಜನೆ ಇಡೀ ಪಶ್ಚಿಮ ಘಟ್ಟಗಳ ಮೇಲೆ ತನ್ನ ಪರಿಣಾಮವನ್ನು ಬೀರಲಿದೆ. ಬೇಸಿಗೆಯಲ್ಲೂ ತಂಪಿನಿಂದ ಆಹ್ಲಾದಕರ ವಾತಾವರಣವನ್ನು ನೀಡುವ ಶೋಲಾ ಕಾಡುಗಳು ಇನ್ನೂ ಮುಂದೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ನದಿಗಳು ತಮ್ಮ ಉಪನದಿಗಳ ಸಾಂಗತ್ಯವನ್ನು ಕಳೆದುಕೊಳ್ಳಲಿವೆ. ಕರಾವಳಿಯ ಜನ ಜೀವನದಿ ನೇತ್ರಾವತಿಯ ಯಥೇಚ್ಚ ಬಳಕೆಯನ್ನು ಕಡಿಮೆ ಮಾಡಿಕೊಳ್ಳಲಿದ್ದಾರೆ.
ಪಶ್ಚಿಮ ಘಟ್ಟಗಳು ಬರಡಾಗಲಿವೆ. ಇಷ್ಟು ಇದ್ದು ಕೂಡ ಅತ್ತ ಬಯಲು ಸೀಮೆಯ ಜನ ಕುಡಿಯಲು ನೀರು ಬರುತ್ತದೆ ಎಂದು ಕಾದು ಕುಳಿತುಕೊಂಡಿದ್ದಾರೆ. ನಮ್ಮ ಕರಾವಳಿಯ ಜನಪ್ರತಿನಿಧಿಗಳು ಅತ್ತ ಬಯಲು ಸೀಮೆಯ ರಾಜಕಾರಣಿಗಳ ಮುಂದೆ ಮಂಡಿಯೂರಿ ಬಿಟ್ಟಿದ್ದಾರೆ. ನಮ್ಮ ಪರಿಸರ ಪ್ರೇಮಿ ಜನ ಚಳುವಳಿ, ಪ್ರತಿಭಟನೆ ಮಾಡುತ್ತಾ ಜನಜಾಗೃತಿ ಮಾಡುತ್ತಿದ್ದಾರೆ. ಅತ್ತ ಸಕಲೇಶಪುರದ ನ್ಯಾಯಾಲಯ ಎತ್ತಿನಹೊಳೆ ಯೋಜನೆಯ ವಿರುದ್ಧ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈಗ ಕೊನೆಯದಾಗಿ ಕರಾವಳಿಯ ಜನ ಆಸಕ್ತಿಯಿಂದ ಕಾಯುತ್ತಿರುವುದು ಹಸಿರು ನ್ಯಾಯಪೀಠದ ತೀರ್ಪಿಗೆ. ಅಲ್ಲಿ ನಮಗೆ ಗೆಲುವು ಸಿಗುತ್ತಾ? ಸರ್ಕಾರಕ್ಕೆ ಉತ್ತರ ಕೊಡಲು ನಾಡಿದ್ದು ಮಾರ್ಚ್ ೨೪ ಕ್ಕೆ ಹಸಿರು ಪೀಠ ದಿನಾಂಕ ನಿಗದಿಗೊಳಿಸಿದೆ. ಅದರ ಮಧ್ಯದಲ್ಲಿ ಸರ್ಕಾರ ಪೂರ್ಣ ಯೋಜನಾ ವರದಿಯನ್ನು ಸರ್ಕಾರ ಬದಲಾಯಿಸಿ ನ್ಯಾಯಾಲಯದಿಂದ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದರೆ ಮುಗಿಯಿತು, ನಾವು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳಬೇಕು.
ಅತ್ತ ಪಶ್ಚಿಮ ಘಟ್ಟಗಳಲ್ಲಿ ಪಿಸಿಪಿಆರ್‌ಐ ಯೋಜನೆ ಸಹಿತ ಅನೇಕ ಯೋಜನೆಗಳು ಬರಲು ಕಾಯುತ್ತಿವೆ. ಭಾರತದಲ್ಲಿ ಕಾಡುಗಳನ್ನು ಬೆಳೆಸಲು ಜಪಾನ್ ಅನುದಾನ ಬಿಡುಗಡೆ ಮಾಡುತ್ತಿದೆ. ಅಷ್ಟಕ್ಕೂ ನಮಗೆ ವಿಶ್ವ ಜಲ ಜಾಗೃತ ಮತ್ತು ಅರಣ್ಯ ದಿನವನ್ನು ಆಚರಿಸಲು ನಿಜಕ್ಕೂ ಅರ್ಹತೆ ಇದೆಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.