ನವದೆಹಲಿ: ಈರುಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಏರುತ್ತಿರುವ ಬೆಲೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರಕಾರವು ಡಿಸೆಂಬರ್ ಅಂತ್ಯದ ವೇಳೆಗೆ ಟರ್ಕಿಯಿಂದ 11000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಈಗಾಗಲೇ ಎನ್ಎಂಟಿಸಿ ಎರಡನೇ ಆಮದು ಒಪ್ಪಂದಕ್ಕೆ ಟರ್ಕಿಯೊಂದಿಗೆ ಸಹಿಯನ್ನು ಹಾಕಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಜನವರಿ ಆರಂಭದ ವೇಳೆಗೆ ಟರ್ಕಿಯಿಂದ ಈರುಳ್ಳಿಯು ಭಾರತಕ್ಕೆ ಬರುವ ನಿರೀಕ್ಷೆ ಇದೆ.
ಈಗಾಗಲೇ ಎನ್ಎಂಟಿಸಿ ಈಜಿಪ್ಟ್ನೊಂದಿಗೆ ಮೊದಲ ಒಪ್ಪಂದಕ್ಕೆ ಸಹಿ ಹಾಕಿದ್ದು, ಮುಂದಿನ ಹತ್ತು ದಿನಗಳೊಳಗೆ 6,900 ಟನ್ ಈರುಳ್ಳಿ ಭಾರತಕ್ಕೆ ಆಗಮಿಸಲಿದೆ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 80 ರೂಪಾಯಿಗಳಿಂದ 120 ರೂಪಾಯಿಗಳವರೆಗೆ ಏರಿಕೆಯಾಗಿದೆ. ಹೀಗಾಗಿ ಈರುಳ್ಳಿಯ ದರವನ್ನು ಕಡಿಮೆ ಮಾಡುವ ಸಲುವಾಗಿ ಬೇರೆ ದೇಶಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ನವೆಂಬರ್ 20 ರಂದು ಕೇಂದ್ರ ಸಂಪುಟವು 1.2 ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಅನುಮೋದನೆಯನ್ನು ನೀಡಿತ್ತು.
ಮಳೆಗಾಲದ ಕೊನೆಯಲ್ಲಿ ಅತಿವೃಷ್ಟಿ ಸಂಭವಿಸಿದ ಕಾರಣದಿಂದಾಗಿ ಈರುಳ್ಳಿ ಬೆಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಇದರಿಂದ ಪೂರೈಕೆಯು ಕಡಿಮೆಯಾಗಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆಯೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ಬೇಕಾಬಿಟ್ಟಿಯಾಗಿ ಏರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.