ಅಸ್ಸಾಂನ ಶಾಲೆಯೊಂದು ವಿದ್ಯಾರ್ಥಿಗಳ ಬಳಿಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಶುಲ್ಕವಾಗಿ ಸ್ವೀಕರಿಸುತ್ತಿದೆ, ಛತ್ತೀಸ್ಗಢದಲ್ಲಿ 1 ಕೆಜಿ ಪ್ಲಾಸ್ಟಿಕ್ ನೀಡಿದರೆ ಉಚಿತವಾಗಿ ಊಟವನ್ನು ನೀಡಲಾಗುತ್ತಿದೆ. ಭಾರತದಲ್ಲಿನ ಹಲವು ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಶಿಂಗ್ ಮೆಶಿನ್ಗೆ ಹಾಕಿದರೆ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲಾಗುತ್ತದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ನಾವೀನ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಗೆ ಬರುತ್ತದೆ ಎಂಬುದರ ದ್ಯೋತಕವಿದು.
ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವವರ ಪೈಕಿ ತೆಲಂಗಾಣದ ಮುಲುಗು ಜಿಲ್ಲೆಯ ಕಲೆಕ್ಟರ್ ಕೂಡ ಒಬ್ಬರು. ಈ ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ‘ಒಂದು ಕೆಜಿ ಪ್ಲಾಸ್ಟಿಕ್ ಕೊಡಿ 1 ಕೆಜಿ ಅಕ್ಕಿ ಪಡೆದುಕೊಳ್ಳಿ’ ಅಭಿಯಾನವನ್ನು ಆರಂಭಿಸಲಾಗಿದೆ. 174 ಜಿಲ್ಲೆಗಳಲ್ಲಿ ಇದು ಕಾರ್ಯಾರಂಭ ಮಾಡಿದೆ. ಏಕ ಬಳಕೆಯ ಪ್ಲಾಸ್ಟಿಕ್ ಹೊಂದಿರುವ ಸ್ಟ್ರಾ, ಸ್ಪೂನ್, ಗ್ಲಾಸ್, ಕ್ಯಾರಿ ಬ್ಯಾಗ್ ಹೀಗೆ ಎಲ್ಲದಕ್ಕೂ ಅಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ವಿಧಿಸಲಾಗಿದೆ.
‘ಒಂದು ಕೆಜಿ ಪ್ಲಾಸ್ಟಿಕ್ ಕೊಡಿ 1 ಕೆಜಿ ಅಕ್ಕಿ ಪಡೆದುಕೊಳ್ಳಿ’ ನಿರ್ದಿಷ್ಟ ದಿನದವರೆಗಿನ ಅಭಿಯಾನವಾಗಿದ್ದು, ಈ ದಿನಗಳಲ್ಲಿ ಮುಲುಗು ಜಿಲ್ಲಾಡಳಿತ ನಿವಾಸಿಗಳಿಂದ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸುತ್ತದೆ. ಇದಕ್ಕಾಗಿಯೇ ಪ್ಲಾಸ್ಟಿಕ್ ಸಂಗ್ರಹ ಕೇಂದ್ರವನ್ನೂ ಆರಂಭಿಸಲಾಗಿದೆ. ಇಲ್ಲಿಗೆ ಒಂದು ಕೆಜಿ ಪ್ಲಾಸ್ಟಿಕ್ ತಂದುಕೊಟ್ಟವರಿಗೆ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.
ಜಿಲ್ಲಾ ಕಲೆಕ್ಟರ್ ಆಗಿರುವ ಸಿ.ನಾರಾಯಣ ರೆಡ್ಡಿ ಅವರ ಕನಸಿನ ಯೋಜನೆ ಇದಾಗಿದ್ದು, “ಜನರಿಗೆ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಲು, ಪ್ಲಾಸ್ಟಿಕ್ ಯಾಕೆ ನಿಷೇಧವಾಗಬೇಕು ಎಂಬ ಬಗ್ಗೆ ತಿಳಿಸಿಕೊಡಲು ಅಕ್ಕಿ ಒಂದು ಅತ್ಯುತ್ತಮ ಪ್ರೇರಕವಾಗಿದೆ. ನಮ್ಮ ಜಿಲ್ಲೆ ವನ್ಯಜೀವಿ ಧಾಮಗಳಿಗೆ ತುಂಬಾ ಫೇಮಸ್ ಆಗಿದೆ, ದೇಶದಾದ್ಯಂತ ಜನರು ನಮ್ಮಲ್ಲಿನ ದೇಗುಲಗಳಿಗೆ ಆಗಮಿಸುತ್ತಾರೆ. ಆಡಳಿತ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸುತ್ತದೆ, ಆದರೆ ಪ್ಲಾಸ್ಟಿಕ್ ಸಮಸ್ಯೆ ದೊಡ್ಡ ಸವಾಲಾಗಿದೆ. ಹೀಗಾಗಿ ಅಕ್ಕಿ ನೀಡುವ ಕಾರ್ಯಕ್ರಮ ಆಯೋಜನೆಗೊಳಿಸಿದೆವು. ಭಾರತವನ್ನು 2020ರ ವೇಳೆಗೆ ಏಕ ಬಳಕೆ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಬೇಕು ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಎಂದಿದ್ದಾರೆ.
ಈ ಕಾರ್ಯಕ್ರಮವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
ಕಾರ್ಯಕ್ರಮವನ್ನು ಉತ್ತೇಜಿಸಲು, ಅಕ್ಕಿ ಅಥವಾ ನಗದಿನ ರೂಪದಲ್ಲಿ ಜನರಿಂದ ಮತ್ತು ಅಧಿಕಾರಿಗಳಿಂದ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ಯಾರಾದರೂ ಅಭಿಯಾನಕ್ಕೆ ದಾನ ಮಾಡಲು ಬಯಸಿದರೆ, ಆಡಳಿತವು ಸಂಖ್ಯೆಯನ್ನು ನೀಡಿದ್ದು, ಅದಕ್ಕೆ ಕರೆ ಮಾಡಿದರೆ ದೇಣಿಗೆ ನೀಡುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
“ದಾನಿಗಳು ವಿವರಗಳನ್ನು ತಿಳಿಯಲು ಗೊತ್ತುಪಡಿಸಿದ ಸಂಖ್ಯೆಗೆ ಕರೆ ಮಾಡಬಹುದು. ವಿಶೇಷ ಕಾರ್ಯಕ್ಕಾಗಿ ನಗದು ಅಥವಾ ಅಕ್ಕಿಯನ್ನು ಎಲ್ಲಿ ಹಸ್ತಾಂತರಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ ” ಎಂದು ಮುಲುಗು ತಹಶೀಲ್ದಾರ್ ಗನ್ಯಾ ನಾಯಕ್ ಹೇಳಿದ್ದಾರೆ.
ನಿರೀಕ್ಷೆಯಂತೆ, ಈ ಕಾರ್ಯಕ್ರಮಕ್ಕೆ ಆಡಳಿತವು ಅಗಾಧವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕಳೆದ 15 ದಿನಗಳಲ್ಲಿ ದಾನಿಗಳು 450 ಕ್ವಿಂಟಾಲ್ ಅಕ್ಕಿ ಮತ್ತು 6 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಪ್ಲಾಸ್ಟಿಕ್ ಬಳಕೆದಾರರಿಂದಲೂ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. 250 ಪ್ಲಾಸ್ಟಿಕ್ ಸಂಗ್ರಹ ಕೇಂದ್ರಗಳಲ್ಲಿ ಅಭಿಯಾನ ಆರಂಭವಾದ ಮೊದಲ ದಿನವೇ ಬಾಟಲಿಗಳು, ಬ್ಯಾಗುಗಳು ಸೇರಿದಂತೆ ಸುಮಾರು 2,400 ಕಿಲೋ ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿದೆ. ಇದುವರೆಗೆ ಒಟ್ಟು 31 ಸಾವಿರ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರವಾಗಿದೆ.
“ಅಭಿಯಾನದ ಅಂತ್ಯದ ವೇಳೆಗೆ 50 ಟನ್ ಪ್ಲಾಸ್ಟಿಕ್ ಸಂಗ್ರಹಿಸುವುದು ನಮ್ಮ ಗುರಿಯಾಗಿದೆ. ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಮರುಬಳಕೆ ಏಜೆನ್ಸಿಗಳಿಗೆ ಸಾಗಿಸಲಾಗುತ್ತದೆ ಮತ್ತು ಕ್ಯಾರಿ ಬ್ಯಾಗ್ಗಳನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ಇಂಧನವಾಗಿ ಪರಿವರ್ತಿಸಲಾಗುತ್ತದೆ ”ಎಂದು ಕಲೆಕ್ಟರ್ ಹೇಳಿದ್ದಾರೆ.
ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವನ್ನು ಒದಗಿಸಲು ಕಲೆಕ್ಟರ್ ಅವರು ಎಲ್ಲಾ ಹಳ್ಳಿಗಳಾದ್ಯಂತ ಬಟ್ಟೆ ಚೀಲದ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ.
“ನಾವು ಪ್ರತಿ ಹಳ್ಳಿಯಲ್ಲೂ ಟೈಲರ್ಗಳನ್ನು ನೇಮಿಸಿಕೊಂಡಿದ್ದೇವೆ, ಅವರು ಬಟ್ಟೆ ಚೀಲಗಳನ್ನು ತಯಾರಿಸುತ್ತಾರೆ ಮತ್ತು ಅದನ್ನು ಸ್ಥಳೀಯರಿಗೆ ಉಚಿತವಾಗಿ ವಿತರಿಸುತ್ತಾರೆ. ದೇಣಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಮರುಬಳಕೆ ಮಾಡಬಹುದಾದ ಚೀಲಗಳನ್ನು ತಯಾರಿಸಲು, ಬಟ್ಟೆಯನ್ನು ಖರೀದಿಸಲು ಟೈಲರ್ಗಳಿಗೆ ನೀಡಲಾಗುವುದು, ”ಎಂದು ಎಂದಿದ್ದಾರೆ.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ದಂಡ ವಿಧಿಸುವಂತಹ ಇತರ ಕ್ರಮಗಳನ್ನು ಜಾರಿಗೆ ತರಲು ಅವರು ಚಿಂತನೆ ನಡೆಸುತ್ತಿದ್ದಾರೆ.
‘ಸಮ್ಮಕ್ಕ ಸರಕ್ಕ ಜತಾರಾ’ ಮುಲುಗು ಜಿಲ್ಲೆಯಲ್ಲಿ ಆಚರಿಸಲಾಗುವ ಒಂದು ಪ್ರಮುಖ ಉತ್ಸವವಾಗಿದೆ. ಇದನ್ನು ಪ್ರತಿವರ್ಷ ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ. ನಾಲ್ಕು ದಿನಗಳ ಈ ಉತ್ಸವವು ಒಂದು ಕೋಟಿ ಪ್ರವಾಸಿಗರಿಗೆ ಸಾಕ್ಷಿಯಾಗಿದೆ. ಈ ಉತ್ಸವದ ವೇಳೆ ಪ್ಲಾಸ್ಟಿಕ್ ತ್ಯಾಜ್ಯವು ಅಗಾಧ ಪ್ರಮಾಣದಲ್ಲಿ ಬೀಳುತ್ತದೆ. ಈ ವೇಳೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತಿದೆ ಮತ್ತು ಹಸಿ ಕಸದೊಂದಿಗೆ ಇದನ್ನು ಬೆರೆಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಜಿಲ್ಲೆಯು ‘ಪರಿವರನ್ ಮಿತ್ರಸ್’ (ಪರಿಸರದ ಸ್ನೇಹಿತರು) ತಂಡವನ್ನು ನೇಮಿಸುವ ಸಾಧ್ಯತೆಯಿದೆ, ಅವರು ಒಣ ತ್ಯಾಜ್ಯ ಕಸದ ತೊಟ್ಟಿಗಳಲ್ಲಿ ಪ್ಲಾಸ್ಟಿಕ್ ಅನ್ನು ಹಾಕಲು ಜನರಿಗೆ ನಿರಂತರವಾಗಿ ಮಾರ್ಗದರ್ಶನ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.