ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣ ಏಕೀಕರಣ ಮಾಡಲು ಕೆಚ್ಚೆದೆಯಿಂದ ಹೋರಾಡಿದ್ದರು ಜನಸಂಘದ ಸಂಸ್ಥಾಪಕ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ. ಇದೀಗ ಜಮ್ಮುವನ್ನು ಕಾಶ್ಮೀರ ಕಣಿವೆಯ ಹಲವಾರು ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವ ಭಾರತದ ಅತಿ ಉದ್ದದ ಚೆನಾನಿ-ನಶ್ರಿ ಸುರಂಗಕ್ಕೆ ಅವರ ಹೆಸರನ್ನು ಇಡಲು ನಿರ್ಧಾರ ಮಾಡಲಾಗಿದೆ. ಇದು ಅವರಿಗೆ ಸಲ್ಲಿಸಲಾಗುತ್ತಿರುವ ಅತ್ಯಂತ ಸೂಕ್ತ ಗೌರವ ಎನ್ನುವುದರಲ್ಲಿ ಅನುಮಾನವಿಲ್ಲ.
ಈ ಬಗ್ಗೆ ಘೋಷಣೆ ಮಾಡಿದ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, “ಜಮ್ಮು ಮತ್ತು ಕಾಶ್ಮೀರದ ಎನ್ಎಚ್ 44 ರಲ್ಲಿರುವ ಚೆನಾನಿ- ನಶ್ರಿ ಸುರಂಗಕ್ಕೆ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಹೆಸರಿಡುವ ಐತಿಹಾಸಿಕ ನಿರ್ಧಾರವನ್ನು ಮಾಡಲಾಗಿದೆ. ಇದು ಶ್ಯಾಮಾ ಪ್ರಸಾದ್ ಜಿ ಅವರಿಗೆ ನಮ್ಮ ವಿನಮ್ರ ಗೌರವ, ಅವರ ಕಾಶ್ಮೀರಕ್ಕಾಗಿನ ಹೋರಾಟ, ‘ಒಂದು ರಾಷ್ಟ್ರ ಒಂದು ಧ್ವಜ’ ಘೋಷಣೆ ಏಕೀಕರಣದಲ್ಲಿ ಅಪಾರ ಕೊಡುಗೆ ನೀಡಿದೆ” ಎಂದಿದ್ದಾರೆ.
ಭಾರತದ ಅತಿ ಉದ್ದದ ಸುರಂಗ ಮಾರ್ಗವಾಗಿರುವ 9.2 ಕಿ.ಮೀ ಉದ್ದದ ಚೆನಾನಿ- ನಶ್ರಿ ಸುರಂಗವನ್ನು 2017 ರಲ್ಲಿ ಪ್ರಧಾನಿ ಮೋದಿ ಅವರು ದೇಶಕ್ಕೆ ಸಮರ್ಪಿಸಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಈ ಸುರಂಗವು ಒಂದಾಗಿದ್ದು, ಕಣಿವೆಯನ್ನು ಭಾರತದ ಉಳಿದ ಭಾಗಗಳಿಗೆ ಹತ್ತಿರ ತರುವಲ್ಲಿ ಸಹಕಾರಿಯಾಗಲಿದೆ.
ಈ ಸುರಂಗವು ಶ್ರೀನಗರ ಮತ್ತು ಜಮ್ಮು ನಡುವಿನ ರಸ್ತೆ ದೂರವನ್ನು 300 ಕಿ.ಮೀ ನಿಂದ 250 ಕಿ.ಮೀ.ಗೆ ಇಳಿಸಿದೆ. ಇದು ಜಮ್ಮು ಮತ್ತು ಶ್ರೀನಗರ ನಡುವೆ ಎಲ್ಲಾ ಹವಾಮಾನದ ಸಂಪರ್ಕವನ್ನೂ ಕಲ್ಪಿಸುತ್ತದೆ.
ಈ ಸುರಂಗವು ಉಧಂಪುರದ ಚೆನಾನಿಯನ್ನು ರಾಂಬನ್ ಜಿಲ್ಲೆಯನ್ನು ನಶ್ರಿಯೊಂದಿಗೆ ಸಂಪರ್ಕಿಸುತ್ತದೆ. ಇವೆರಡರ ನಡುವಿನ ಅಂತರವನ್ನು 41 ಕಿ.ಮೀ.ನಿಂದ 9.2 ಕಿ.ಮೀ.ಗೆ ಇಳಿಸುತ್ತದೆ. ಇದಲ್ಲದೆ, ಇದು ಹೆದ್ದಾರಿಯಲ್ಲಿನ ಹಿಮಪಾತ ಮತ್ತು ಭೂಕುಸಿತ ಪೀಡಿತ ತಾಣಗಳನ್ನು ಸಹ ಬೈಪಾಸ್ ಮಾಡುತ್ತದೆ. ಪ್ರತಿ 150 ಮೀಟರ್ಗೆ ಒಂದು ಎಸ್ಒಎಸ್ ಕಾಲ್-ಬಾಕ್ಸ್ಗಳು, ಅಗ್ನಿಶಾಮಕ ವ್ಯವಸ್ಥೆ, ಕಣ್ಗಾವಲು ಮುಂತಾದ ಭದ್ರತಾ ವೈಶಿಷ್ಟ್ಯಗಳನ್ನು ಸಹ ಈ ಸುರಂಗ ಹೊಂದಿದೆ. ಪ್ರತಿ 300 ಮೀಟರ್ಗೆ ಸಂಪರ್ಕ ಕಲ್ಪಿಸುವ ‘ಕ್ರಾಸ್ ಪ್ಯಾಸೇಜ್ಗಳು’ಗಳೊಂದಿಗೆ ಎಸ್ಕೇಪ್ ಟನಲ್ಗಳು ಕೂಡ ಇದರಲ್ಲಿದೆ.
ವಿಶ್ವ ದರ್ಜೆಯ ಸಮಗ್ರ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ, ಪ್ರತೀ ವಾಹನದ ಪ್ರವೇಶ ಹಾಗೂ ನಿರ್ಗಮನವನ್ನು ಗುರುತಿಸಿ ದಾಖಲಿಸುವ ಎಲೆಕ್ಟ್ರಾನಿಕ್ ಟ್ಯಾಗಿಂಗ್ ವ್ಯವಸ್ಥೆ ಇದರಲ್ಲಿ ಇದೆ. ಸುರಂಗದೊಳಗೆ ಯಾವುದೇ ರೀತಿಯಲ್ಲಿ ಅಗ್ನಿ ಅವಗಡ ಸಂಭವಿಸಿದರೆ ಅದನ್ನು ತಡೆಯುವುದಕ್ಕೆಂದೇ ಇರುವ ’ಕ್ರಿಯಾತ್ಮಕ ಅಗ್ನಿ ನಂದಿಸುವ ವ್ಯವಸ್ಥೆ, ಸುರಂಗದೊಳಗೆ ಪರಿಶುದ್ಧ ಗಾಳಿ ನಿರಂತರವಾಗಿ ಸಂಚರಿಸುವಂತೆ ಮಾಡಿ ಇಂಗಾಲದ ವಿಷಯುಕ್ತ ಗಾಳಿಯನ್ನು ಮತ್ತೊಂದು ಏರ್ ಡಕ್ಗಳ ಮೂಲಕ ಹೊರಹಾಕುವ ’ಸುರಂಗ ವೆಂಟಿಲೇಶನ್ ವ್ಯವಸ್ಥೆಯನ್ನು ಇದು ಹೊಂದಿದೆ. ಸುರಂಗಮಾರ್ಗದಲ್ಲಿ ಅತಿಯಾದ ವೇಗದಿಂದ ಚಲಿಸಿದರೆ ಅಥವಾ ಸಂಶಯಾಸ್ಪದ ಸಮಯವನ್ನು ಕಳೆದರೆ ಅದನ್ನು ಹೊರಗಿನಿಂದಲೇ ಗುರುತಿಸುವ ’ಎಲೆಕ್ಟ್ರಾನಿಕ್ ಬೇಹುಗಾರಿಕಾ ವ್ಯವಸ್ಥೆ’ ಅದಕ್ಕಾಗಿ ಸುರಂಗದೊಳಗೆ 124 ಸಿಸಿ(ಕ್ಲೋಸ್ಡ್ ಸರ್ಕ್ಯುಟ್) ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರ, ವಾಹನಗಳ ಹಾಗೂ ಸುರಂಗದ ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ.
ಇಷ್ಟು ಮಾತ್ರವಲ್ಲದೇ, ಅಪಘಾತ ಅಥವಾ ಅವಗಡದ ಸಂದರ್ಭದಲ್ಲಿ ತುರ್ತಾಗಿ ಕಾರ್ಯನಿರ್ವಹಿಸಿ ಜೀವ ರಕ್ಷಿಸಲು ಸಹಾಯಮಾಡುವ ’ಎಮರ್ಜೆನ್ಸಿ ಬ್ರಾಡ್ಕಾಸ್ಟ್ ವ್ಯವಸ್ಥೆ’, ನಿರಂತರವಾಗಿ ಕಾರ್ಯನಿರ್ವಹಿಸುವ ಆಂಬ್ಯುಲೆನ್ಸ್ ಸೇರಿದಂತೆ ಇತರ ಮೂಲಭೂತ ಸೇವೆಗಳು ಇದರಲ್ಲಿ ಇದೆ. ಇದರಲ್ಲಿ ಅಪಘಾತಗಳನ್ನು ತಡೆಯುವುದಕ್ಕೆ ಪ್ರತ್ಯೇಕ ಲೇನ್ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆಯೂ ಇದೆ. ಹೀಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಹಾಗೂ ಗಣನೀಯವಾಗಿ ಹೆಚ್ಚುವರಿ ಕಾಳಜಿ ವಹಿಸಲಾಗಿರುವ ವ್ಯವಸ್ಥೆಯೇ ಇದನ್ನು ಸಮರ್ಥ ಸುರಂಗಮಾರ್ಗವನ್ನಾಗಿಸುತ್ತದೆ.
ಈ ಸುದೀರ್ಘ ಹಾದಿಯಲ್ಲಿ ವಾಹನಗಳು ಕೈಕೊಟ್ಟರೆ(ಕೆಟ್ಟು ನಿಂತರೆ)? ಅದಕ್ಕಾಗಿಯೇ, ಅಂತಹ ಸಂದರ್ಭಗಳಿಗೆ ಅನ್ವಯವಾಗಲೆಂದು ಸುರಂಗದೊಳಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 24/7 ವಾತಾವರಣದ ಪರಿಶುದ್ಧ ಗಾಳಿಯ ಲಭ್ಯತೆ ಹಾಗೂ ಪರಿಶುದ್ಧವಲ್ಲದ ಗಾಳಿಯ ನಿಶ್ವಾಸ ತಂತ್ರಜ್ಞಾನ ಭಾರತದಲ್ಲಿ ಸುರಂಗಕ್ಕೆ ಬಳಕೆಯಾಗಿರುವುದು ಇದೇ ಮೊದಲು. ಎರಡು ಏರ್ಡೆಕ್ಗಳು ಏಕಕಾಲಕ್ಕೆ ಸುರಂಗದ ಹೊರ ವಾತಾವರಣದ ಶುದ್ಧಗಾಳಿಯನ್ನು ದೊರಕಿಸಿ, ಒಳಗಾಳಿಯನ್ನು ಸುರಂಗದ ಹೊರಹಾಕುವ ಈ ತಂತ್ರಜ್ಞಾನಕ್ಕೆ ’ಟ್ರಾನ್ಸ್ವರ್ಸ್ ವೆಂಟಿಲೇಶನ್’ ಎನ್ನಲಾಗುತ್ತದೆ.
ಮನಸ್ಸು ಮಾಡಿದ್ದಾರೆ ಈ ಸುರಂಗವನ್ನು ಬೇಗ ಬೇಗನೇ ಮುಗಿಸಿ ಸಾಗುವುದಕ್ಕಾಗಿ ಸುರಂಗದ ಮೇಲಿನ ಎಲ್ಲಾ ಮರಗಿಡ, ನೈಸರ್ಗಿಕ ಆವೃತ್ತಿಯನ್ನು ನಿರ್ಣಾಮಗೊಳಿಸಬಹುದಿತ್ತು. ಆದರೆ ತುಸು ತಡವಾದರೂ ಜಮ್ಮು ಕಾಶ್ಮೀರದ ಶಕ್ತಿ ಹಾಗೂ ಶ್ರೀಮಂತಿಕೆಯಾದ ನೈಸರ್ಗಿಕ ಸಂಪತ್ತನ್ನು ಒಂದಿನಿತು ಮುಟ್ಟದೇ ಹಾಗೇ ಉಳಿಸಿಕೊಂಡಿದ್ದು ಸುಸ್ಥಿರ ಅಭಿವೃದ್ಧಿಯ ನಿದರ್ಶನ. ಸುರಂಗದೊಳಗೂ ಮೊಬೈಲ್ ಪೋನ್ಗಳ ಬಳಕೆಗೆ ಸಹಕಾರಿಯಾಗುವಂತೆ ನಿರಂತರವಾಗಿ ದೊರೆಯುವ ಟವರ್ ಸಿಗ್ನಲ್ ವ್ಯವಸ್ಥೆ ಇದೆ. ಎಂತಹ ಮಳೆ ಅಥವಾ ಹಿಮಪಾತದ ಸಂದರ್ಭದಲ್ಲಿಯೂ ಒಂದಿನಿತೂ ನೀರು ಸೋರದಂತಹ “ವಾಟರ್ಪ್ರೂಫ್” ಸೀಲಿಂಗ್(ಸುರಂಗದ ಮೇಲು ಹೊದಿಕೆ) ವ್ಯವಸ್ಥೆ ಇದೆ. ಪ್ರತೀ 150 ಮೀಟರ್ಗಳಿಗೆ ಒಮ್ಮೆ ಅಳವಡಿಸಲಾಗಿರುವ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಸಹಾಯಮಾಡುವ “ಎಸ್ಒಎಸ್” ಬಾಕ್ಸ್ಗಳು. ಅನಿವಾರ್ಯ ಸಂದರ್ಭದಲ್ಲಿ ಅದರ ಬಾಗಿಲು ತೆರೆದು “ಹಲೋ” ಎಂದರೆ ಸಾಕು, ಅದೇ ಅದಾಗಿ ಸುರಂಗದಿಂದ ತಪ್ಪಿಸಿಕೊಳ್ಳುವ ಹಾದಿ, ಹತ್ತಿರದ ಆಂಬ್ಯುಲೆನ್ಸ್ ಸೇವೆ ಇತ್ಯಾದಿಗಳ ವಿವರ ಒದಗಿಸಿ, ಅಗತ್ಯ ಸಹಾಯವನ್ನು ಮಾಡಲಿದೆ. 24/7 ಒಂದೇ ರೀತಿಯ ತಡೆರಹಿತ “ಲ್ಯುಮಿನಸ್ ಇಂಟೆನ್ಸಿಟಿ” ಲೈಟಿಂಗ್ ವ್ಯವಸ್ಥೆ. ಇದರಿಂದ ಚಾಲಕರ ಕಣ್ಣಿನ ಮೇಲೆ ಯಾವುದೇ ಪರಿಣಾಮ ಬಿರದು ಮತ್ತು ತಡೆರಹಿತ ಬೆಳಕಿನಿಂದ ಸುರಕ್ಷತೆ ಹಾಗೂ ಸುಗಮ ಸಂಚಾರ ಸುಲಭವಾಗಲಿದೆ.
ಇಷ್ಟೊಂದು ವೈಶಿಷ್ಟ್ಯಗಳನ್ನು ಹೊಂದಿರುವ ಈ ಸುರಂಗ ಮಾರ್ಗಕ್ಕೆ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಇಡುತ್ತಿರುವುದು ನಿಜಕ್ಕೂ ಮಹತ್ವದ ಹೆಜ್ಜೆಯೇ ಆಗಿದೆ. ಅವರು ಜಮ್ಮು ಕಾಶ್ಮೀರವನ್ನು ಭಾರತದೊಳಗೆ ಏಕೀಕರಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ. ಉಳಿದ ರಾಜ್ಯಗಳಂತೆ ಅದನ್ನೂ ಭಾರತದ ಮುಖ್ಯ ವಾಹಿನಿಯ ರಾಜ್ಯವನ್ನಾಗಿಸಬೇಕು ಎಂಬುದು ಅವರ ಕನಸಾಗಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ನನಸಾಗಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.