ಭಾರತದ ಹೆಮ್ಮೆಯ ವಾಯುಸೇನೆ ತನ್ನ 87ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಜಗತ್ತಿನ 4ನೇ ಶಕ್ತಿಶಾಲಿ ವಾಯುಪಡೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮ ಭಾರತೀಯ ವಾಯುಸೇನೆ ತ್ಯಾಗ, ಶೌರ್ಯ, ಬದ್ಧತೆ, ಸಮರ್ಪಣಾ ಭಾವದ ಸಂಕೇತವಾಗಿ ಭಾರತೀಯರನ್ನು ಹೆಮ್ಮೆಗೊಳಿಸುತ್ತಿದೆ. ದೇಶಸೇವೆಗೆ ಕಟಿಬದ್ಧರಾಗಿ ನಿಂತಿರುವ ವಾಯು ವೀರರು ನಮ್ಮ ದೇಶದ ಶ್ರೇಷ್ಠತೆ, ಉತ್ಕೃಷ್ಟತೆಯ ಪ್ರತೀಕವಾಗಿದ್ದಾರೆ.
ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ್ದು 1932ರ ಅಕ್ಟೋಬರ್ 8ರಂದು. ಆ ಬಳಿಕ ವಾಯುಸೇನೆಯ ನ೦. 1 ಸ್ಕ್ವಾಡ್ರನ್ 1933ರಲ್ಲಿ ಕರಾಚಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು ಮಾತ್ರ. ಕೇವಲ ನಾಲ್ಕು ಯುದ್ಧ ವಿಮಾನಗಳನ್ನು ಹೊ೦ದಿದ್ದ ವಾಯುಸೇನೆ ಇ೦ದು 2000 ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದ ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಸೇನೆಗಳಲ್ಲಿ ಒಂದು ಎನಿಸಿಕೊಂಡಿದೆ.
ಹರಿಶ್ಚಂದ್ರ ಸರ್ಕಾರ್, ಸುಬ್ರೊತೊ ಮುಖರ್ಜಿ, ಭೂಪೇ೦ದ್ರ ಸಿ೦ಗ್, ಎ. ಬಿ. ಅವನ್ ಮತ್ತು ಅಮರ್ಜೀತ್ ಸಿ೦ಗ್ ಇವರು ಭಾರತೀಯ ವಾಯುಸೇನೆಯಲ್ಲಿ ಮೊದಲಿಗರಾಗಿ ಸೇವೆ ಸಲ್ಲಿಸಿದ ಐವರು ಪೈಲೆಟ್ಗಳು. 1933ರಲ್ಲಿ ಈ ಐವರೂ ಸೇವೆಗೆ ಸೇರ್ಪಡೆಗೊಂಡರು. ಆದರೆ ಭೂಪೇ೦ದ್ರ ಸಿ೦ಗ್ ಮತ್ತು ಅಮರ್ಜೀತ್ ಸಿ೦ಗ್ ವಿಮಾನ ಅಪಘಾತಗಳಲ್ಲಿ ಮೃತಪಟ್ಟರು, ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟು ಹೋದರು. ಎ ಬಿ ಅವನ್ ಭಾರತದ ವಿಭಜನೆಯ ನಂತರ ಪಾಕಿಸ್ಥಾನವನ್ನು ಸೇರಲು ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಬಳಿಕ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾಗಿ ಆಯ್ಕೆಯಾದರು. ಎರಡನೆಯ ಮಹಾಯುದ್ಧಕ್ಕೂ ಮುಂಚಿತವಾಗಿ ಇನ್ನಷ್ಟು ವಿಮಾನಗಳು ಮತ್ತು ಪೈಲಟ್ಗಳು ವಾಯುಸೇನೆಯನ್ನು ಸೇರ್ಪಡೆಗೊಂಡವು. ಎರಡನೇಯ ಮಹಾಯುದ್ಧದಲ್ಲಿ 2.5 ಮಿಲಿಯನ್ ಭಾರತೀಯ ಯೋಧರು ಪಾಲ್ಗೊಂಡಿದ್ದರು. ಭಾರತದ ವಾಯುಸೇನೆ ಕೂಡ ಇದರಲ್ಲಿ ಪಾಲ್ಗೊಂಡಿತ್ತು.
ಪ್ರಸ್ತುತ ವಾಯುಸೇನೆಯು ಅತ್ಯಂತ ಬಲಿಷ್ಠತೆಯಿಂದ ಕೂಡಿದ್ದು, ಆಕಾಶವನ್ನು ಸೀಳಿ ವಿಜಯಿಯಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ವಾಯು ವೀರರು ಹೊಂದಿದ್ದಾರೆ. ಅವರ ಸಮರ್ಪಣಾ ಭಾವ, ತ್ಯಾಗ, ಶೌರ್ಯಕ್ಕೆ ಸರಿಸಾಟಿಯಾದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದಕ್ಕೆ ಇತ್ತೀಚಿಗೆ ನಡೆದ ಬಾಲಕೋಟ್ ವೈಮಾನಿಕ ದಾಳಿಯೇ ಸಾಕ್ಷಿ. ಈ ದಾಳಿಯಲ್ಲಿ ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಬಾಂಬ್ ಹಾಕಿ ಹಿಂದಿರುಗಿದ್ದಾರೆ ನಮ್ಮ ವಾಯು ವೀರರು. ಈ ಘಟನೆಯ ಬಳಿಕ ನಡೆದ ಬೆಳವಣಿಗೆಯಲ್ಲೂ ವಾಯು ವೀರರ ಶೌರ್ಯ ದಂತಕಥೆಯಾಗಿ ಹೊರಹೊಮ್ಮಿದೆ. ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಭಾರತದ ಹೀರೋ ಆಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ವಾಯುಸೇನೆಯ ಬಲವನ್ನು ಗಮನಿಸಿದರೆ, 32 ವಿಮಾನದಳ ತುಕಡಿಗಳನ್ನು ಒಳಗೊಂಡಿದೆ. ಭಾರತದ ಬಳಿ 590 ಯುದ್ಧ ವಿಮಾನಗಳು, 204 ದಾಳಿ ವಿಮಾನಗಳು, 708 ಟ್ರಾನ್ಸ್ಪೋರ್ಟ್ ಮತ್ತು 251 ಟ್ರೈನರ್ಗಳು ಇವೆ. ಅಟ್ಯಾಕ್ ಏರ್ಕ್ರಾಫ್ಟ್ಗಳು ನೆಲ ಮತ್ತು ಮೇಲ್ಮೈ ಟಾರ್ಗೆಟ್ಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬಳಿ 720 ಹೆಲಿಕಾಫ್ಟರ್ಗಳಿವೆ, ಇದರಲ್ಲಿ 15 ಅಟ್ಯಾಕ್ ಹೆಲಿಕಾಫ್ಟರ್ಗಳಾಗಿವೆ. ಅಟ್ಯಾಕ್ ಹೆಲಿಕಾಫ್ಟರ್ಗಳು ನಿರ್ದಿಷ್ಟವಾಗಿ ನೆಲದ ಟಾರ್ಗೆಟ್ಗಳ ಮೇಲೆ ದಾಳಿ ನಡೆಸುವ ಸಲುವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ-ಎಂಜಿನ್, ರೋಟರಿ ವಿಂಗ್ ಸಿಸ್ಟಮ್ಗಳನ್ನು ಒಳಗೊಂಡಿದೆ. 1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್ ಯುದ್ಧವಿಮಾನಗಳ ಸೇರ್ಪಡೆಯಾಯಿತು. 872 ಮಿಗ್–21 ಎಂಎಫ್ ಮತ್ತು ಮಿಗ್–21 ಬಿಸನ್ ವಿಮಾನಗಳು ವಾಯುಸೇನೆಯಲ್ಲಿ ಇದ್ದವು. 2013ರ ಡಿಸೆಂಬರ್ ಮಿಗ್–21 ಎಂಎಫ್ ವಿಮಾನಗಳು ಸೇವೆಯಿಂದ ನಿವೃತ್ತಿಯಾಗಿವೆ. ಸದ್ಯ 150 ಮಿಗ್–21 ಬಿಸನ್ ವಿಮಾನಗಳು ಕಾರ್ಯಾಚರಣೆಯಲ್ಲಿವೆ. 2022 ಕ್ಕೆ ಮಿಗ್–21 ವಿಮಾನಗಳು ಸಂಪೂರ್ಣವಾಗಿ ಸೇವೆಯಿಂದ ನಿವೃತ್ತಿಯಾಗಲಿದೆ ಎನ್ನಲಾಗಿದೆ.
ಭಾರತದ ವಾಯುಶಕ್ತಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿದೆ ರಫೆಲ್ ಯುದ್ಧ ವಿಮಾನ. ಇದು ವಾಯುಸೇನೆಯ ಶಕ್ತಿಯನ್ನು ಇಮ್ಮಡಿಗೊಳಿಸಲಿದೆ. ಈಗಾಗಲೇ ಇದರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು 36 ರಫೆಲ್ ಯುದ್ಧ ವಿಮಾನವನ್ನು ಭಾರತ ಸ್ವೀಕರಿಸಲಿದೆ. ರಫೆಲ್ 60 ಸಾವಿರ ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ, ಇದರ ಸಾಮಾನ್ಯ ವೇಗ 75 ನಾಟ್ಸ್, ಒಂದದೇ ಬಾರಿಗೆ 2000 ನಾಟಿಕಲ್ ಮೈಲಿ ಹಾರುವ ಸಾಮರ್ಥ್ಯ ಇದಕ್ಕಿದೆ. ದೀರ್ಘಾವಧಿಯಲ್ಲಿ ಇದರ ಹಾರಾಟದ ವೇಗ 1032 ನಾಟ್ಸ್. ಹಾರಾಟ ನಡೆಸುತ್ತಲೇ ಆಕಾಶದಿಂದ ಆಕಾಶಕ್ಕೆ 150ಕಿಮೀ ಮತ್ತು ಆಕಾಶದಿಂದ ಭೂಮಿಗೆ 300ಕಿಮೀ ದೂರದವರೆಗೆ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇಷ್ಟೆಲ್ಲಾ ಸಾಮರ್ಥ್ಯವನ್ನು ಹೊಂದಿರುವ ರಫೆಲ್ ನಮ್ಮ ವಾಯುಶಕ್ತಿಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯಲಿದೆ. ಪಾಕಿಸ್ಥಾನ ಮತ್ತು ಚೀನಾ ದೇಶಗಳಿಗೆ ಸೆಡ್ಡು ಹೊಡೆಯುವಲ್ಲಿ ಮುಂಚೂಣಿಯ ಕಾರ್ಯವನ್ನು ನಿರ್ವಹಿಸಲಿದೆ.
ಭಾರತೀಯ ವಾಯುಸೇನೆಯ ಶೌರ್ಯ ಭಾರತದ ಹೆಮ್ಮೆ. ವಾಯುವೀರರು ತ್ಯಾಗ ಮತ್ತು ಶೌರ್ಯದ ಪ್ರತೀಕ. “ನಮ್ಮ ವಾಯುಸೇನೆಯ ಆದರ್ಶಪ್ರಾಯವಾದ ಧೈರ್ಯ, ದೃಢತೆ, ದೃಢ ನಿಶ್ಚಯ ಮತ್ತು ನಿಸ್ವಾರ್ಥ ಸೇವೆಗೆ ಒಂದು ಪ್ರಜ್ವಲಿಸುವ ಉದಾಹರಣೆಯಾಗಿದೆ. ನೀಲಿ ಬಣ್ಣದಲ್ಲಿನ ನಮ್ಮ ಪುರುಷ ಮತ್ತು ಮಹಿಳೆಯರು ಶೌರ್ಯ ಮತ್ತು ವೈಭವದಿಂದ ಆಕಾಶವನ್ನು ಸ್ಪರ್ಶಿಸುವ ಸಾಮರ್ಥ್ಯವುಳ್ಳವರು”‘ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಅಕ್ಷರಶಃ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.