ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗ್ರಾಮೀಣ ಭಾರತ ಬಯಲು ಶೌಚ ಮುಕ್ತಗೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. ಗುಜರಾತ್ನ ಸುಮಾರು 20 ಸಾವಿರ ಗ್ರಾಮ ಮುಖ್ಯಸ್ಥರ ಸಮ್ಮುಖದಲ್ಲಿ ಘೋಷಣೆಯನ್ನು ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನವನ್ನು ಆಚರಿಸುವ ಸಲುವಾಗಿ ಸಬರಮತಿ ನದಿ ತಟದಲ್ಲಿ ಏರ್ಪಡಿಸಲಾದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಗಾಂಧಿಯನ್ ಸಂಸ್ಥೆಗಳು, ಹೈಕೋರ್ಟ್ ನ್ಯಾಯಾಧೀಶರುಗಳು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ವಿದ್ಯಾರ್ಥಿಗಳು, ಶೈಕ್ಷಣಿಕ ತಜ್ಞರುಗಳು ಮತ್ತು ಗ್ರಾಮೀಣ ಮಟ್ಟದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಳೆದ ಐದು ವರ್ಷದಲ್ಲಿ ದೇಶದಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರನ್ನು ಅವರು ಶ್ಲಾಘಿಸಿದರು. “ಈ ಹಿಂದೆ ಕಷ್ಟದ ವಿಷಯವಾಗಿದ್ದ ಶೌಚಾಲಯವನ್ನು ಈಗ ನಿರ್ಮಾಣ ಮಾಡಲು ಯೋಜನೆ ಸಾಕಷ್ಟು ಸಹಾಯ ಮಾಡಿದೆ, ಶೌಚಾಲಯ ಈಗ ಚರ್ಚೆಯ ಸಾಮಾನ್ಯ ವಿಷಯವಾಗಿದೆ. ಮದುವೆಯಾಗುವ ಹೆಣ್ಣು ಮಕ್ಕಳಿಂದ ಹಿಡಿದು ಬಾಲಿವುಡ್ವರೆಗೆ ಎಲ್ಲರೂ ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿಸಲು ಕೊಡುಗೆಯನ್ನು ನೀಡಿದ್ದಾರೆ. ಇದು ಮಹಾತ್ಮ ಗಾಂಧೀಜಿಯ ಕನಸು ಮಾಡಲು ನಾವು ಕೈಗೊಂಡ ಪಣ ಎಂದು ಪ್ರಧಾನಿ ತಿಳಿಸಿದರು.
“ಸ್ವಚ್ಛ ಭಾರತ ಅಭಿಯಾನ ಮಹಿಳೆಯರನ್ನು ಸಬಲೀಕರಣಗೊಳಿಸಿದೆ ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸಿದೆ. 75 ಲಕ್ಷ ಉದ್ಯಮ ಅವಕಾಶಗಳನ್ನು ಇದು ಸೃಷ್ಟಿಸಿದೆ” ಎಂದಿದ್ದಾರೆ. ಈ ಸಾಧನೆಯು ಮಹಾತ್ಮ ಗಾಂಧೀಜಿಯವರ ದೃಷ್ಟಿಯನ್ನು ಆಧರಿಸದ್ದಾಗಿದೆ ಎಂದಿದ್ದಾರೆ.
ಗ್ರಾಮೀಣ ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವ ಮೂಲಕ ಅಭಿವೃದ್ಧಿ ಹೊಂದಿದ ಭಾರತವಾಗಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದಿದ್ದಾರೆ. ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೇಂದ್ರ ಸರಕಾರವು ಶೀಘ್ರದಲ್ಲೇ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಸವಿ ನೆನಪಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 150 ರೂ. ಮೌಲ್ಯದ ವಿಶೇಷ ನಾಣ್ಯವನ್ನು ಈ ಸಂದರ್ಭದಲ್ಲಿ ಬಿಡಗುಡೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.