ನವದೆಹಲಿ: ಇದೇ ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ 2019 ಕ್ಕೆ ಭಾರತ ಆತಿಥೇಯ ರಾಷ್ಟ್ರವಾಗಿದೆ. ‘ಪ್ರವಾಸೋದ್ಯಮ ಮತ್ತು ಉದ್ಯೋಗಗಳು: ಸರ್ವರಿಗೂ ಉತ್ತಮ ಭವಿಷ್ಯ’ ಎಂಬ ಥೀಮ್ನ ಅಡಿಯಲ್ಲಿ ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಮಂಡಳಿ ನೇತೃತ್ವದಲ್ಲಿ ಆಚರಿಸಲಾಗುತ್ತದೆ. ಪ್ರವಾಸೋದ್ಯಮದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಕುರಿತು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಈ ವಲಯವು ನೀಡುವ ಕೊಡುಗೆ ಕುರಿತು ಜಾಗತಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಪ್ರಸಕ್ತ ವರ್ಷ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಕೌಶಲ್ಯಗಳು, ಶಿಕ್ಷಣ ಮತ್ತು ಉದ್ಯೋಗಗಳ ಮೇಲೆ ಹೆಚ್ಚು ಗಮನ ಹರಿಸುವುದಕ್ಕೆ ಅನುಗುಣವಾಗಿ, ವಿಶ್ವ ಪ್ರವಾಸೋದ್ಯಮ ದಿನವು ‘ಪ್ರವಾಸೋದ್ಯಮ ಮತ್ತು ಉದ್ಯೋಗಗಳು: ಎಲ್ಲರಿಗೂ ಉತ್ತಮ ಭವಿಷ್ಯ’ ಎಂಬ ವಿಷಯದ ಮೇಲೆ ಕೇಂದ್ರೀಕರಿಸಿ ಆಚರಣೆಯಾಗಲಿದೆ. ವಿಶ್ವ ಪ್ರವಾಸೋದ್ಯಮವು ಉದ್ಯೋಗ ಸೃಷ್ಟಿಗೆ, ಸುಸ್ಥಿರ ಅಭಿವೃದ್ಧಿಗೆ, ಸಂಸ್ಕೃತಿ ರಕ್ಷಣೆಗೆ ಕೊಡುಗೆಯಾಗಲಿದೆ.
ಎಷ್ಟು ಸ್ಥಳಗಳನ್ನು ಸುತ್ತಾಡಿದರೂ ಪ್ರವಾಸಿಯ ಮನಸ್ಸು ಸದಾ ಮತ್ತೊಂದು ತಾಣದ ವೀಕ್ಷಣೆಗಾಗಿ ಹಾತೊರೆಯುತ್ತದೆ. ಪ್ರತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗಲೂ ಅನುಭವ ಮತ್ತು ಹೊಸ ಜ್ಞಾನ ಪ್ರವಾಸಿಗೆ ಸಿಗುತ್ತದೆ. ಹೊಸ ತಾಣವನ್ನು ಮತ್ತು ಸಂಸ್ಕೃತಿಯನ್ನು ಅನ್ವೇಷಿಸಬೇಕು ಎಂಬ ಮನುಷ್ಯನ ತುಡಿತವೂ ವಿಶ್ವವನ್ನು ಒಂದುಗೂಡಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ. ಇಂದು ಪ್ರಯಾಣವೆಂಬುದು ಹೆಚ್ಚು ಆರ್ಥಿಕ, ಹೆಚ್ಚು ಸುಲಲಿತ ಮತ್ತು ಆರಾಮದಾಯಕವಾಗಿ ಪರಿವರ್ತನೆಗೊಂಡಿದೆ. ಹೀಗಾಗಿ ಪ್ರವಾಸೋದ್ಯಮವು ಇಂದು ಹಲವು ರಾಷ್ಟ್ರಗಳ ಆರ್ಥಿಕತೆಗೆ ಮಹತ್ತರವಾದ ಕೊಡುಗೆಯನ್ನು ನೀಡುವ ಕ್ಷೇತ್ರವಾಗಿ ಹೊರಹೊಮ್ಮಿದೆ.
ಆರ್ಥಿಕತೆಯ ಪ್ರಮುಖ ಕೊಡುಗೆದಾರನಾಗಿ ಪರಿವರ್ತನೆಗೊಂಡಿರುವ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಮಂಡಳಿಯು ಪ್ರತಿವರ್ಷ ಸೆಪ್ಟೆಂಬರ್ 27 ಅನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದೆ.
1980 ರಿಂದಲೂ ಸೆಪ್ಟೆಂಬರ್ 27 ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಬೇರೆ ಬೇರೆ ದೇಶಗಳು ಬೇರೆ ಬೇರೆ ಥೀಮ್ನೊಂದಿಗೆ ಈ ದಿನವನ್ನು ಆಯೋಜನೆಗೊಳಿಸುತ್ತದೆ. ಈ ಬಾರಿ ವಿಶ್ವಪ್ರವಾಸೋದ್ಯಮ ದಿನವನ್ನು ಆಯೋಜನೆ ಮಾಡುವ ಅವಕಾಶವನ್ನು ಭಾರತ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.