ಕೆಲವರು ಹುಟ್ಟಿನಿಂದಲೇ ಶ್ರೇಷ್ಠರಾಗಿರುತ್ತಾರೆ, ಇನ್ನು ಕೆಲವರು ತಮ್ಮ ಅವಿರತ ಶ್ರಮದಿಂದಾಗಿ ಶ್ರೇಷ್ಠತೆಯ ಮಟ್ಟವನ್ನು ತಲುಪುತ್ತಾರೆ, ಇನ್ನು ಕೆಲವರು ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಎರಡನೇಯ ವಿಭಾಗಕ್ಕೆ ಸೇರಿದವರು. ಶೂನ್ಯದಿಂದ ಆರಂಭಿಸಿ ಅವರು ಸಮಕಾಲೀನ ಭಾರತೀಯ ರಾಜಕೀಯ ಜೀವನದಲ್ಲಿ ಉತ್ತುಂಗವನ್ನು ಏರಿದವರು. ಅವರ ಸಿದ್ಧಾಂತಗಳು ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ. ಎಲ್ಲಾ ಸಂಕಷ್ಟವನ್ನು ನಿವಾರಿಸಿ, ಎಲ್ಲಾ ಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಇತಿಹಾಸ ನಿರ್ಮಿಸಿದ ನಾಯಕರ ಸಾಲಿನಲ್ಲಿ ಅವರು ನಿಲ್ಲುತ್ತಾರೆ.
1916ರ ಸೆಪ್ಟೆಂಬರ್ 25ರಂದು ಉತ್ತರಪ್ರದೇಶದ ಧಂಕಿಯಾ ಗ್ರಾಮದಲ್ಲಿ ಜನಿಸಿದ ದೀನದಯಾಳ್ ಉಪಾಧ್ಯಾಯ ಅವರು ತಮ್ಮ ಮೂರನೇ ವಯಸ್ಸಿನಲ್ಲಿ ತಂದೆ ಭಗವತಿ ಪ್ರಸಾದ್ ಅವರನ್ನು ಕಳೆದುಕೊಂಡರು ಮತ್ತು ತಾಯಿಯನ್ನು ಕೇವಲ ಎಂಟು ವರ್ಷದವರಿದ್ದಾಗ ಕಳೆದುಕೊಂಡರು. ಅವರ ಮಾವ ರಾಧರಮಣ್ ಶುಕ್ಲಾ ಅನಾಥ ಮಗುವನ್ನು ಬೆಳೆಸಿದರು. ಆದರೆ ಬಾಲ್ಯದಿಂದಲೂ ಅದ್ಭುತ ಮತ್ತು ಮಹೋನ್ನತ ಚಿಂತಕರಾಗಿದ್ದ ಉಪಾಧ್ಯಾಯ ಅವರು ಅಜ್ಮೀರ್ ಮಂಡಳಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು. ಪಿಲಾನಿಯ ಬಿರ್ಲಾ ಕಾಲೇಜಿನಿಂದ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಕಾನ್ಪುರದ ಎಸ್ಡಿ ಕಾಲೇಜಿನಿಂದ ಬಿ.ಎ ಮತ್ತು ಅಲಹಾಬಾದ್ನಿಂದ ಬಿ.ಟಿ ಪದವಿಯನ್ನು ಪಡೆದುಕೊಂಡರು.
ತನ್ನ ಅಧ್ಯಯನದ ಸಮಯದಲ್ಲೇ ಅವರು, ಹಿಂದೂ ಸಮಾಜವನ್ನು ಸಂಘಟಿಸಲು ಮತ್ತು ಮಾತೃಭೂಮಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು 1925 ರಲ್ಲಿ ನಾಗ್ಪುರದಲ್ಲಿ ಡಾ. ಕೆ ಬಿ ಹೆಡ್ಗೆವಾರ್ ಅವರು ಪ್ರಾರಂಭಿಸಿದ ರಾಷ್ಟ್ರೀಯವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಸಂಘವು ಯುಪಿಯಲ್ಲಿ 1937 ರ ಸುಮಾರಿಗೆ ತನ್ನ ಕೆಲಸವನ್ನು ಪ್ರಾರಂಭಿಸಿತ್ತು ಮತ್ತು ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಮೊದಲ ಸ್ವಯಂಸೇವಕರಲ್ಲಿ ಉಪಾಧ್ಯಾಯ ಅವರೂ ಒಬ್ಬರು.
ಸಂಘದ ಕಾರ್ಯಕರ್ತರಾದ ಬಾಳಸಾಹೇಬ್ ದಿಯೋರಸ್, ಬಾಪುರಾವ್ ಮೊಘೆ ಮತ್ತು ಇತರರಿಂದ ಪ್ರೇರಿತರಾದ ಉಪಾಧ್ಯಾಯ ಅವರು ಕೂಡ ಆರ್ ಎಸ್ ಎಸ್ ಮೂಲಕ ಮಾತೃಭೂಮಿಯ ಸೇವೆಗಾಗಿ ತಮ್ಮ ಜೀವನವನ್ನು ಅರ್ಪಿಸಲು ನಿರ್ಧರಿಸಿದರು. ಆರ್ಎಸ್ಎಸ್ ಪ್ರಚಾರಕ್ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು ಮತ್ತು ಪೂರ್ವ ಯುಪಿಯ ಲಖಿಂಪುರ ಖಿರಿ ಜಿಲ್ಲೆಗೆ ಅವರನ್ನು ನಿಯೋಜಿಸಲಾಯಿತು. ಆಗ 1942 ರಲ್ಲಿ ದಿಯೋರಸ್ ಅವರ ಜತೆಗೆ ಇವರನ್ನೂ ‘ಸಹ-ಪ್ರಾಂತ್ ಪ್ರಚಾರಕ್’ ಹುದ್ದೆಗೆ ನೇಮಿಸಲಾಯಿತು. ನಂತರ ಇವರು ಜನಸಂಘದ ಸ್ಥಾಪನೆಯಲ್ಲೂ ಮಹತ್ವದ ಪಾತ್ರ ನಿಭಾಯಿಸಿದರು.
1952 ರಲ್ಲಿ ಡಾ.ಶ್ಯಾಮ ಮುಖರ್ಜಿಯವರು ಉಪಾಧ್ಯಾಯ ಅವರನ್ನು ಜನ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಜನ ಸಂಘದ ಕಾನ್ಪುರ ಅಧಿವೇಶನದ ನಂತರ ಡಾ. ಮುಖರ್ಜಿ ಅವರು, “ನಾನು ಇನ್ನೂ ಎರಡು ದೀನದಯಾಳ್ ಅವರನ್ನು ಪಡೆದರೆ ಭಾರತದ ರಾಜಕೀಯ ಭವಿಷ್ಯವನ್ನು ಬದಲಾಯಿಸುತ್ತೇನೆ” ಎಂದು ಹೇಳಿದ್ದರು. ಶ್ರೀನಗರದ ಶೇಖ್ ಅಬ್ದುಲ್ಲಾ ಜೈಲಿನಲ್ಲಿ ಡಾ. ಮುಖರ್ಜಿ ಅವರ ನಿಗೂಢ ಮರಣದ ನಂತರ, ಹೊಸ ಜನ ಸಂಘವನ್ನು ಪೋಷಿಸುವ ಜವಾಬ್ದಾರಿಯು ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮತ್ತು ಇತರರ ಮೇಲೆ ಬಿತ್ತು.
ಕಠಿಣ ಪರಿಶ್ರಮ, ಮಾನವ ಸಂಪನ್ಮೂಲವನ್ನು ನಿಭಾಯಿಸುವ ಕೌಶಲ್ಯ ಮತ್ತು ಸಂಘಟನೆಯನ್ನು ನಿರ್ಮಿಸುವ ಕೌಶಲ್ಯದಿಂದ, ಸಮಕಾಲೀನ ಭಾರತದ ರಾಜಕೀಯ ರಂಗದಲ್ಲಿ ಊಹೆಯೂ ಮಾಡಲಾಗದಂತೆ ಜನ ಸಂಘವನ್ನು ಒಂದು ಶಕ್ತಿಯನ್ನಾಗಿ ಮಾಡಲು ಅವರು ಶ್ರಮಿಸಿದರು. 1952 ರಿಂದ 1967 ರ ಅಲ್ಪಾವಧಿಯಲ್ಲಿ, ಜಾತ್ಯತೀತ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಸಮಾಜವಾದಿಗಳು ಒಗ್ಗೂಡಿದ ಶಕ್ತಿಗೆ ಪರ್ಯಾಯವಾಗಿ ಜನ ಸಂಘವನ್ನು ಸ್ಥಾಪಿಸಲು ಅವರು ಕಠಿಣ ಪರಿಶ್ರಮವನ್ನು ಪಟ್ಟರು. ಜನ ಸಂಘವು ಕ್ಷಿಪ್ರವಾಗಿಯೇ ದೇಶದ ಎರಡನೇ ಅತೀದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿತು. ಉಪಾಧ್ಯಾಯ ಅವರು ಎಂದಿಗೂ ಸಂಸದರಾಗಿರಲಿಲ್ಲ ಆದರೆ ಇತರರನ್ನು ಸಂಸತ್ತಿಗೆ ಕಳುಹಿಸಿದರು. ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ, “ಅವರು ಸ್ವತಃ ಸಂಸದರಲ್ಲ, ಆದರೆ ಅವರು ಜನ ಸಂಘದ ಸಂಸದರನ್ನು ತಯಾರು ಮಾಡಿದರು. ಆದರೂ ಯಾವತ್ತೂ ಅವರು ತಮ್ಮ ಬಗ್ಗೆ ಅಥವಾ ತಮ್ಮ ಪ್ರಯತ್ನಗಳ ಬಗ್ಗೆ ಮಾತನಾಡಿರುವುದನ್ನು ಯಾರೂ ಕೇಳಿಲ್ಲ”.
ಪ್ರತಿಯೊಬ್ಬ ಕಾರ್ಯಕರ್ತನನ್ನು ಸೇರ್ಪಡೆಗೊಳಿಸಿ ಆತನನ್ನು ರೂಪಿಸುವ ಮೂಲಕ ಅವರು ಅಸಾಧಾರಣ ಪಕ್ಷ ಸಂಘಟನೆಯನ್ನು ಮಾಡಿದರು. ಪಂಡಿತ್ ಯಜ್ಞದುತ್ತ ಶರ್ಮಾ ಅವರು ದೀನದಯಾಳ್ ಉಪಾಧ್ಯಾಯರನ್ನು ಪವಿತ್ರವಾದ ‘ತ್ರಿವೇಣಿ ಸಂಗಮ’ದೊಂದಿಗೆ ಹೋಲಿಸಿದ್ದಾರೆ. ಈ ಸಂಗಮದಲ್ಲಿ‘ ತಮಸ್ ’ಸರಸ್ವತಿಯಂತೆ ಅಗೋಚರವಾಗುತ್ತದೆ, ಆದರೆ‘ ರಾಜಸ್ ’ಮತ್ತು‘ ಸಾತ್ವಿಕ ’ಯಮುನಾ ಮತ್ತು ಗಂಗಾದಷ್ಟು ಆಳ ಮತ್ತು ಅಗಲವಿದೆ. ಪ್ರತಿಯೊಬ್ಬರೂ ‘ತ್ರಿವೇಣಿ ಸಂಗಮ’ ದಲ್ಲಿ ಪವಿತ್ರ ಸ್ನಾನವನ್ನು ಮಾಡಿ ತಮ್ಮನ್ನು ತಾವು ಶುದ್ಧೀಕರಿಸಿದಂತೆ ಪ್ರತಿಯೊಬ್ಬರೂ ಉಪಾಧ್ಯಾಯರ ನಿಕಟತೆಯಲ್ಲಿ ಆಂತರಿಕ ಶುದ್ಧೀಕರಣವನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದರು.
ಪಂಡಿ ದೀನದಯಾಳ್ ಉಪಾಧ್ಯಾಯರು ಪತ್ರಕರ್ತರು ಕೂಡ ಆಗಿದ್ದರು. ಅವರು ಪಾಂಚಜನ್ಯ ಮಾಸಿಕ ಮತ್ತು ಸ್ವದೇಶ್ ದೈನಿಕದ ಸಂಪಾದಕರಾಗಿದ್ದರು. ಸಂಕಲನದಿಂದ ಹಿಡಿದು ಸಂಪಾದಕರವರೆಗೆ ಎಲ್ಲಾ ಕಾರ್ಯವನ್ನು ಅವರೇ ನೋಡಿಕೊಳ್ಳುತ್ತಿದ್ದರು. ಪ್ರಿಂಟ್ ಆದ ಪುಟಗಳನ್ನು ಪ್ಯಾಕ್ ಕೂಡ ಮಾಡುತ್ತಿದ್ದರು. ಅವರು ಕೇವಲ 16 ಗಂಟೆಗಳಲ್ಲಿ ಚಂದ್ರಗುಪ್ತನ ಬಗ್ಗೆ ಒಂದು ಸಣ್ಣ ಕಾದಂಬರಿಯನ್ನೂ ಬರೆದಿದ್ದಾರೆ. ಆದಿ ಶಂಕರಾಚಾರ್ಯರ ಕುರಿತಾದ ಅವರ ಗ್ರಂಥವು ಹಿಂದೂ ಧರ್ಮದ ಆ ಮಹಾನ್ ಸಂತನ ಬಗೆಗಿನ ಅವರ ಜೀವನ ಮತ್ತು ಧ್ಯೇಯದ ಬಗ್ಗೆ ಆಸಕ್ತಿದಾಯಕ ಒಳನೋಟವನ್ನು ನೀಡುತ್ತದೆ. ಅದೇ ರೀತಿ, ನಾನಾ ಪಾಲ್ಕರ್ ಬರೆದ ಆರ್ಎಸ್ಎಸ್ ಸಂಸ್ಥಾಪಕ ಡಾ.ಹೆಡ್ಗೆವಾರ್ ಅವರ ಮರಾಠಿ ಜೀವನ ಚರಿತ್ರೆಯನ್ನು ಕೂಡ ಅವರು ಅನುವಾದಿಸಿದ್ದಾರೆ. ಅನುವಾದವು ಎಷ್ಟು ಪರಿಪೂರ್ಣವಾಗಿತ್ತೆಂದರೆ ಅದು ಮೂಲ ಕೃತಿಗಿಂತಲೂ ಹೆಚ್ಚು ನೈಜವಾಗಿತ್ತು.
ಉಪಾಧ್ಯಾಯ ಅವರು ಗಣಿತ ಮತ್ತು ಸಂಸ್ಕೃತದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಸಾರ್ವಜನಿಕ ಜೀವನದಲ್ಲಿ ಅರ್ಥಶಾಸ್ತ್ರದ ಮಹತ್ವವನ್ನು ನಿರ್ಣಯಿಸಿದರು, ಅದರ ಮೇಲೆ ಕೇಂದ್ರೀಕರಿಸಿದರು. ‘ಸಮಗ್ರ ಮಾನವತಾವಾದ’ ಕುರಿತ ಅವರ ಗ್ರಂಥವು ಅವರ ಅಧ್ಯಯನ, ಪಾಂಡಿತ್ಯ ಮತ್ತು ಆರ್ಥಿಕ ಸಿದ್ಧಾಂತದ ತಿಳುವಳಿಕೆಯ ಒಟ್ಟು ಫಲಿತಾಂಶವಾಗಿದೆ. ಇದು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಭಾರತೀಯ ಪರಿಕಲ್ಪನೆಗಳ ಪರಿಪೂರ್ಣ ಸಮನ್ವಯದೊಂದಿಗೆ ಪ್ರಾರಂಭವಾಗುತ್ತದೆ.
ಅವರ ‘ಸಮಗ್ರ ಮಾನವತಾವಾದ’ ಅಥವಾ ‘ಏಕತ್ಮ ಮಾನವ ದರ್ಶನ’ ದ ತತ್ವದ ಕಲ್ಪನೆಯು ಮನುಷ್ಯನ ಸಂಪೂರ್ಣ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಸರ್ವರ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಸಮಗ್ರ ಸಮತೋಲನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನೋಯಿಸದೆ, ತೊಂದರೆಗೊಳಿಸದೆ ಮತ್ತು ದುರುಪಯೋಗಪಡಿಸಿಕೊಳ್ಳದೆ ಸುಸ್ಥಿರ ಅಭಿವೃದ್ಧಿಗೆ ನೀತಿಗಳನ್ನು ರೂಪಿಸಲು ಉಪಾಧ್ಯಾಯ ಅವರ ಮಾನವತಾವಾದದ ಕುರಿತಾದ ಆಲೋಚನೆಗಳು ಅತ್ಯಂತ ಪ್ರಸ್ತುತ ಸಾಧನವಾಗಿದೆ. ಭೌರವ್ ದೇವ್ರಾಸ್ ಹೇಳಿದಂತೆ, ಅವರ ‘ಅಂತ್ಯೋದಯ’ ಪರಿಕಲ್ಪನೆಯು ಈಗಿನ ಸರ್ಕಾರದ ಆರ್ಥಿಕ ನೀತಿಗಳ ಬೆನ್ನೆಲುಬಾಗಿ ರೂಪುಗೊಂಡಿದೆ.
ಉಪಾಧ್ಯಾಯರು ಭಾರತೀಯ ಜನರ ಐಕ್ಯತೆಯನ್ನು ನಂಬಿದ್ದರು. ಜಾತಿ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಅವರು ನಿರಾಕರಿಸಿದ್ದರು. ಯುಪಿ ಯ ಜೌನ್ಪುರದಿಂದ ಅವರು ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು, ಅವರ ಇಚ್ಛೆಗೆ ವಿರುದ್ಧವಾಗಿ ಮತ್ತು ದೀರ್ಘಕಾಲದ ಮನವೊಲಿಸಿದ ನಂತರ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಇದು ಬ್ರಾಹ್ಮಣ ಬಹುಸಂಖ್ಯಾತ ಪ್ರದೇಶವಾದ್ದರಿಂದ ಜಾತಿಯ ಹೆಸರಿನಲ್ಲಿ ಮತಗಳನ್ನು ಕೇಳಿ ಎಂದು ಅನೇಕರು ಅವರಿಗೆ ಸಲಹೆಯನ್ನು ನೀಡಿದ್ದರು. ಆದರೆ ಅವರು ಸೋಲನ್ನು ಸ್ವಾಗತಿಸುತ್ತೇನೆ ಆದರೆ ಜಾತಿಯ ಹೆಸರಿನಲ್ಲಿ ಎಂದಿಗೂ ಮತಗಳನ್ನು ಪಡೆಯುವುದಿಲ್ಲ ಎಂದು ಹೇಳುವ ಮೂಲಕ ಸಲಹೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು. “ಒಮ್ಮೆ ನಾವು ಜಾತಿ ಹೆಸರಿನಲ್ಲಿ ಮತ ಕೇಳಿದರೆ, ಭವಿಷ್ಯದಲ್ಲಿ ನಮ್ಮ ನೀತಿಗಳು ಮತ್ತು ಕಾರ್ಯತಂತ್ರಗಳಲ್ಲಿ ಜಾತಿವಾದವು ಪ್ರಾಬಲ್ಯ ಸಾಧಿಸುತ್ತದೆ. ಇದು ನಮ್ಮ ನೀತಿಗಳಿಗೆ ವಿರುದ್ಧವಾಗಿದೆ” ಎಂದು ಅವರು ಪ್ರತಿಪಾದಿಸಿದ್ದರು.
1968ರ ಇಸವಿ ಜನಸಂಘಕ್ಕೆ ಅತ್ಯಂತ ದುಬಾರಿಯಾಗಿ ಪರಿಣಮಿಸಿತು. ಪಕ್ಷಕ್ಕೆ ಸರಿಯಾದ ದಿಸೆಯನ್ನು ನೀಡುವತ್ತ ಕಾರ್ಯೋನ್ಮುಖರಾಗಿದ್ದ ದೀನದಯಾಳ್ ಅವರು ಫೆ.11ರಂದು ಮುಘಲ್ಸರಾಯಿ ರೈಲ್ವೇ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದರು. ಸಮಾಜಘಾತುಕ ಶಕ್ತಿಗಳು ಅವರನ್ನು ಹತ್ಯೆ ಮಾಡಿದ್ದವು. ಅವರ ಸಾವು ಎಂದೂ ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿಯಿತು.
ಆದರೆ ಉಪಾಧ್ಯಾಯ ಅವರು ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತವಾದ ಸಾಧನೆಯನ್ನು ಮಾಡಿದರು. ದೀನದಲಿತರ ಉದ್ದಾರಕ್ಕಾಗಿ ಜೀವನ ಮುಡುಪಾಗಿಟ್ಟರು. ಅವರು ಸಿದ್ಧಾಂತ, ತತ್ವಗಳು ಇಂದಿಗೂ ಪ್ರಸ್ತುತವಾಗಿದೆ, ಚಿರಸ್ಥಾಯಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.