ಖ್ಯಾತ ಲೇಖಕ, ರಾಷ್ಟ್ರೀಯ ವಿಚಾರಗಳ ಪ್ರತಿಪಾದಕ ಸಂತೋಷ್ ತಮ್ಮಯ್ಯ ಅವರ ರಣರಂಗದ ಅಮರಸ್ಮೃತಿ ‘ಸಮರ ಭೈರವಿ’ ಪುಸ್ತಕದ ಕುರಿತು ಪ್ರದೀಪ್ ಅವರು ಹಂಚಿಕೊಂಡಿದ್ದಾರೆ.
“… ಮಾಜಿಗಳ ಬದುಕೇ ಪ್ರೇರಣೆ, ಅವರ ಸಿಡುಕೇ ಕಾರಣ, ಅವರ ‘ಹುಚ್ಚು’ ದೇಶ ಪ್ರೇಮವೇ ಸ್ಫೂರ್ತಿ” ಎಂದು ಪತ್ರಕರ್ತ, ಸಂಪಾದಕ, ಲೇಖಕ ಸಂತೋಷ ತಮ್ಮಯ್ಯ ಅವರು ತಮ್ಮ ಹೊಸ ಹೊತ್ತಿಗೆ ಸಮರಭೈರವಿಯನ್ನು ಬರೆದ ಹಿನ್ನೆಲೆಯನ್ನು ಓದುಗರಿಗೆ ಪುಸ್ತಕದ ಹೊಸ್ತಿಲಲ್ಲೇ ತಿಳಿಸಿಬಿಟ್ಟಿದ್ದಾರೆ. ಇದನ್ನೇಕೆ ಬರೆದೆನೆಂದರೆ – ಎನ್ನುತ್ತಲೇ ಅವರು ಮಾಜಿ ಯೋಧರ ಕತೆಯನ್ನು ತೆರೆದಿಡುತ್ತಾರೆ. ಮುಂದಿನದ್ದು, ಇದನ್ನೇಕೆ ಓದಬೇಕು? ಎನ್ನುವುದು.
ನೀವು ಮಾಜಿ ನಾ? ಎಂದು ಸೈನಿಕನನ್ನು ಪ್ರಶ್ನಿಸಿದರೆ ಇಲ್ಲ, ನಾನು ಮಾಜಿ ಅಲ್ಲವೆಂದೇ ಉತ್ತರ ಬರುತ್ತದೆ. ಒಬ್ಬ ಸೈನಿಕ ತನ್ನನ್ನು ತಾನು ಮಾಜಿ ಎಂದು ಕರೆಸಿಕೊಳ್ಳಲು ಅಥವಾ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅದು ಅಂತಹ ಮನಸ್ಥಿತಿ. ತಮ್ಮಯ್ಯನವರು ಇಲ್ಲಿ ‘ಮಾಜಿ’ ಎಂದಿರುವುದು ಒಬ್ಬ ಸೈನಿಕನ ಮಾನಸಿಕತೆಯ ಪರಿಚಯವಲ್ಲ. ಬದಲಾಗಿ ಪುಸ್ತಕದ ಉದ್ದಕ್ಕೂ ಅವರು ನಿರೂಪಿಸಿರುವುದು ಸೈನ್ಯದಲ್ಲಿ ಸೇವೆ ಸಲ್ಲಿಸಿ ಬಂದಿರುವವರ ಬದುಕು ಮತ್ತು ಸಾಧನೆಯನ್ನು. ಒಂದೊಮ್ಮೆ ಸೈನ್ಯದಲ್ಲಿ ಇದ್ದರು ಎಂಬರ್ಥದಲ್ಲಿ ಮಾತ್ರ. ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿರುವ ಬದುಕು ಯುದ್ಧಕಾಲದ ಯೋಧರದ್ದು. ಶಾಂತಿ ಕಾಲದ ಜೀವನಗಾಥೆಯಲ್ಲ. ಅದಕ್ಕಾಗಿಯೇ ಪುಸ್ತಕಕ್ಕೆ ತಮ್ಮಯ್ಯನವರು “ರಣರಂಗದ ಅಮರಸ್ಮೃತಿ” ಎಂದು ಹೆಸರಿಟ್ಟಿದ್ದಾರೆ. ಹಾಗಾಗಿ ಪುಸ್ತಕದ ನಾಮಕರಣ, ತೋರಣ ಮತ್ತು ಹೂರಣ ಎಲ್ಲವೂ ಸಮಂಜಸ, ಸಮತೂಕ ಮತ್ತು ಸಮೃದ್ಧ.
ಪುಸ್ತಕದ ಕಾಲಘಟ್ಟವು ಎರಡನೇ ವಿಶ್ವಯುದ್ಧದಿಂದ ಬಾಲಾಕೋಟ್ ದಾಳಿ ಮತ್ತು ಅಭಿನಂದನ್ ನ ವರೆಗೂ ಹರಡಿಕೊಂಡಿದೆ. ಕಂಟೋನ್ಮೆಂಟ್, ಮನೇಕ್ ಷಾ, ಧ್ಯಾನಚಂದ್, ಪಂಜಾಬ್ ನ ಕಲಿಗಳು ಎಲ್ಲರೂ ಇಲ್ಲಿ ಜಾಗ ಪಡೆದಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಕರ್ನಾಟಕದ ಹೆಮ್ಮೆಯ ತಾಣ ಕೊಡಗಿನ ವೀರರ ಕತೆಯು ತೆರೆದುಕೊಂಡಿರುವ ಪರಿಯು ಭಾವಪೂರ್ಣವಾಗಿದೆ. ತಮ್ಮಯ್ಯನವರು ಕೊಡಗಿನವರು. ಹಾಗೆಂದು ಅವರ ಬರಹ ತಮ್ಮ ಹುಟ್ಟೂರಿನ ಚೌಕಟ್ಟಿಗೆ ಸೀಮಿತವಾಗಿಲ್ಲ. ಆದರೆ ಅಪರಿಚಿತವಾಗಿಯೇ ಉಳಿದಿದ್ದ ಕೊಡವ ಕಲಿಗಳು, ಕೊಡಗಿನ ಪರಿಸರ, ಅಲ್ಲಿನ ಹೆಸರುಗಳು ಈ ಪುಸ್ತಕದ ಮೂಲಕ ಬೆಳಕು ಕಂಡಿವೆ. ಅದರ ಅಗತ್ಯವಿತ್ತು.
ಜನರಲ್ ತಿಮ್ಮಯ್ಯ, ಅಣ್ಣಯ್ಯ, ದೇವಯ್ಯ, ಹವಾಲ್ದಾರ್ ಜಪ್ಪು, ಗಣಪತಿ ನಮ್ಮೆದುರೇ ಬರುತ್ತಾರೆ. ಬದುಕಿನ ಸಾಯಂಕಾಲದಲ್ಲಿ ಊರುಗೋಲಾಗಬಹುದಾದ ಮಗನನ್ನು ಯುದ್ಧದಲ್ಲಿ ಕಳೆದುಕೊಂಡ ತಾಯಿಯ ಪುತ್ರಶೋಕವು ಮನ ಕಲಕದಿರದು. ಈ ಎಲ್ಲರ ಜೀವನವನ್ನು ನಿರೂಪಿಸುವಾಗ ಸಂತೋಷ್ ಒಬ್ಬ ಅಂಕಣಕಾರ ಅಥವಾ ಸಂಪಾದಕನಿಗಿಂತಲೂ ಒಬ್ಬ ಉತ್ತಮ ಕತೆಗಾರನಾಗಿ ಓದುಗರೆದುರು ನಿಲ್ಲುತ್ತಾರೆ. ಇದು ತಮ್ಮಯ್ಯನವರ ಪ್ರತಿಭೆಯ ಇನ್ನೊಂದು ಮುಖದ ಅನಾವರಣ. ಕನ್ನಡಕ್ಕೆ ಸಮರ ಭೈರವಿಯ ಮೂಲಕ ಕತೆಗಾರನೊಬ್ಬ ಸಿಕ್ಕಿದ್ದಾನೆಂದರೆ ಅತಿಶಯೋಕ್ತಿಯೇನಲ್ಲ.
ಲೇಖಕರ ಬರವಣಿಗೆಯ ಕೃಷಿಗೆ ಈಗ 17 ಸುದೀರ್ಘ ವರ್ಷಗಳ ಅನುಭವ ಮತ್ತು ಪಕ್ವತೆಯಿದೆ. ಅದು ಅವರ ನಿರೂಪಣೆಯ ಶೈಲಿ, ಭಾಷಾ ಸಮೃದ್ಧಿಯಲ್ಲಿ ವ್ಯಕ್ತವಾಗಿದೆ. ಅನಗತ್ಯವಾಗಿ ಇಂಗ್ಲಿಷ್ ಭಾಷೆಯನ್ನು ಎಲ್ಲಿಯೂ ಬಳಸಿಲ್ಲ. ತಾಂತ್ರಿಕ ಪದಗಳು ಎಲ್ಲರಿಗೂ ಅರ್ಥವಾಗುವ ಹಿನ್ನೆಲೆಯಲ್ಲಿ ಬಳಸಲಾಗಿದೆ. ಅವುಗಳಲ್ಲಿ ಬಹುತೇಕ ನಾಮಪದಗಳು. ಹಾಗಾಗಿ ಭಾಷೆಗೆ ಎಲ್ಲಿಯೂ ಅಪಚಾರವಾಗಿಲ್ಲ. ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಬಗೆ ಹೀಗಿರುತ್ತದೆ. ತಮ್ಮಯ್ಯನವರ ಕನ್ನಡವು ಕನ್ನಡವೇ ಆಗಿದೆ. ಕೆಲವೊಮ್ಮೆ ಕನ್ನಡದ ಲೇಖಕರ ಬರವಣಿಗೆಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತದ ಪ್ರಭಾವವು ಅದೆಷ್ಟಿರುತ್ತದೆಂದರೆ “ಟೈಮೆಷ್ಟು” ಎನ್ನುವುದು ಕನ್ನಡ ಪದವೇ ಇರಬಹುದೇನೋ ಎನ್ನುವಷ್ಟರ ಮಟ್ಟಿಗೆ ಕನ್ನಡವು ಬಾಗಿಬಿಡುತ್ತದೆ. ಕನ್ನಡದ ಪತ್ರಿಕೆ, ನಾಟಕ, ಸಿನೆಮಾ, ಶಾಲೆ ಇತ್ಯಾದಿ ಮಾಡುವುದರಿಂದ ಭಾಷೆಯನ್ನು ಉಳಿಸಿ ಬೆಳೆಸಬಹುದು ಎಂಬುದನ್ನು ತಮ್ಮಯ್ಯ ನಡವಳಿಕೆ ಮತ್ತು ಬರವಣಿಗೆಯ ಮೂಲಕ ಸಾಬೀತು ಮಾಡಿದ್ದಾರೆ. ಅವರು ಅಭಿನಂದನಾರ್ಹರು.
ಕೊಡವರು ನಾಡಿನ ರಕ್ಷಣೆ, ವ್ಯಾಪಾರ, ಶಿಕ್ಷಣ ಮತ್ತು ಸಂಸ್ಕೃತಿಗೆ ಅಪಾರ ಕೊಡಿಗೆ ನೀಡಿದ್ದಾರೆ. ಕೋವಿ ಹಿಡಿವ ಕೈಗಳು ಲೇಖನಿ ಹಿಡಿದ ಅಪರೂಪದ ಕಾಲಘಟ್ಟವಿದು. ಸಂತೋಷರಂತೆ ತಕ್ಷಣಕ್ಕೆ ನೆನಪಾಗುವ ಇನ್ನಿಬ್ಬರು ಅಡ್ಡಾಂಡ ಕಾರ್ಯಪ್ಪ ಮತ್ತು ಮೈಸೂರು ಮಿತ್ರ ಪತ್ರಿಕೆಯ ಕೆ. ಬಿ. ಗಣಪತಿಯವರು. ಬೌದ್ಧಿಕ ಪ್ರಖರತೆಗೆ ಕ್ಷಾತ್ರದ ಕಿರೀಟದ ಮೆರಗು ಮೇಳವಿಸಿದ ಅನುಪಮ ವ್ಯಕ್ಕಿತ್ವಗಳು ಇವು.
ಶನಿವಾರ ಸಮರಭೈರವಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ವೇದಿಕೆ ತೂಕದ್ದು. ತಪ್ಪಿಸುವಂತಿಲ್ಲ.
ಓದುಗರು ಓದಲಿ. ಹದ ತಪ್ಪದ ಭಾವ, ಲಯ ತಪ್ಪದ ಓಘ ಮತ್ತು ಕೆಲಸದ ಹಿಂದಿರುವ ಪರಿಶ್ರಮವು ಯುವಕರನ್ನು ಪ್ರೇರೇಪಿಸಿ ಇನ್ನಷ್ಟು ಜನ ಬರೆಯುವಂತಾಗಲಿ.
✍ ಪ್ರದೀಪ್
ಖ್ಯಾತ ಲೇಖಕ, ರಾಷ್ಟ್ರೀಯ ವಿಚಾರಗಳ ಪ್ರತಿಪಾದಕ ಸಂತೋಷ್ ತಮ್ಮಯ್ಯ ಅವರ ರಣರಂಗದ ಅಮರಸ್ಮೃತಿ ‘ಸಮರ ಭೈರವಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು 24-08-2019 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಟೌನ್ಹಾಲ್ನಲ್ಲಿ ನಡೆಯಲಿದೆ.
ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವರಾದ ಜ. (ನಿ.) ವಿ. ಕೆ. ಸಿಂಗ್ ಅವರು ಪುಸ್ತಕವನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಉಪಸ್ಥಿತರಿರುತ್ತಾರೆ. ಪುಸ್ತಕ ಪರಿಚಯವನ್ನು ಸುವರ್ಣ ನ್ಯೂಸ್ ಚಾನೆಲ್ನ ಸುದ್ದಿ ಮತ್ತು ಕಾರ್ಯಕ್ರಮ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್ ಮಾಡಿಕೊಡಲಿದ್ದಾರೆ. ಅತಿಥಿಗಳಾಗಿ ಮಹಾವೀರ ಚಕ್ರ ಪುರಸ್ಕೃತರಾದ ಲೆ.ಕ.(ನಿ.) ಪಿ. ಎಸ್. ಗಣಪತಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಉಪಸ್ಥಿತರಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.