ಜನಪ್ರಿಯ ರಾಜಕಾರಣಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡದವರಾದ ಇವರು ಬಿಜೆಪಿಯ ಸಿದ್ಧಾಂತಕ್ಕೆ ಸದಾ ಬದ್ಧತೆಯನ್ನು ತೋರಿಸಿದ ನಾಯಕ. ಅಲ್ಲದೆ, ಕಾರ್ಯಕರ್ತರ ನಾಡಿಮಿಡಿತವನ್ನೂ ಅವರು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳಬಲ್ಲರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿರುವ ಅವರ ಮುಂದೆ ಅನೇಕ ಸವಾಲುಗಳಿವೆ. ರಾಜ್ಯದ ಮೂಲೆ ಮೂಲೆಯನ್ನು ಸುತ್ತಿ ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಪಡಿಸಬೇಕಾದ ಮಹತ್ತರವಾದ ಜವಾಬ್ದಾರಿ ಅವರ ಮೇಲಿದೆ. ಕಾರ್ಯಕರ್ತನಾಗಿ, ಸಂಸದನಾಗಿ ಸುದೀರ್ಘ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರಿಗೆ ಪಕ್ಷವನ್ನು ಕಟ್ಟುವ ಸಾಮರ್ಥ್ಯವಿದೆ.
1966ರ ಡಿಸೆಂಬರ್ 7 ರಂದು ದಿ. ನಿರಂಜನ್ ಶೆಟ್ಟಿ ಹಾಗೂ ಶ್ರೀಮತಿ ಸುಶೀಲಾ ಎನ್. ಶೆಟ್ಟಿ ಅವರ ಪುತ್ರನಾಗಿ ಸುಳ್ಯದ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಜನಿಸಿದ ನಳಿನ್ ಕುಮಾರ್ ಕಟೀಲ್ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಪೆರುವಾಜೆಯಲ್ಲಿ, ಪುತ್ತೂರಿನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದರು. ಸುಳ್ಯದ ಕೆವಿಜಿಯಲ್ಲಿ ಪಾಲಿಟೆಕ್ನಿಕ್ನಲ್ಲಿ ಕಲಿಕೆ ಬಳಿಕ ತಂದೆಯ ಊರಾದ ಕಟೀಲು ಬಳಿಯ ಕೊಡೆತ್ತೂರಿನಲ್ಲಿರುವ ತಂದೆಯವರ ಜಾಗಕ್ಕೆ ಅವರು ವಾಸಸ್ಥಳವನ್ನು ಸ್ಥಳಾಂತರಗೊಳಿಸಿದರು. ಮಧ್ಯಮ ಕುಟುಂಬದ ಹಿನ್ನಲೆಯಲ್ಲಿ ಬೆಳೆದು ಬಂದ ಕಾರಣದಿಂದಾಗಿ ನಳಿನ್ ಅವರಿಗೆ ಜನಸಾಮಾನ್ಯರ ಕಷ್ಟಕೋಟಲೆಗಳ ಬಗ್ಗೆ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಗುಣವಿದೆ.
ಆರ್ಥಿಕ ಸಂಕಷ್ಟದಿಂದಾಗಿ ಅವರಿಗೆ ಓದಬೇಕಾದ ಸಮಯದಲ್ಲಿ ದುಡಿಯಬೇಕಾಗಿ ಬಂತು. ಸಣ್ಣ ವಯಸ್ಸಿನಲ್ಲೇ ಪ್ರತಿಭೆ ಇದ್ದರೂ ಕೂಡ ಜೀವನ ನಿರ್ವಹಣೆಗಾಗಿ ಅವರು ಸಣ್ಣ ಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿದರು. ಹೀಗೆ ಸಣ್ಣಪುಟ್ಟ ಕೆಲಸಗಳ ಮಧ್ಯೆ ಬದುಕು ದೂಡುತ್ತಿರುವಾಗ ನಳಿನ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ತೀವ್ರವಾದ ಸಂಪರ್ಕ ಬೆಳೆಯಿತು. ರಾಷ್ಟ್ರ ಸೇವೆ ಮತ್ತು ಸಮಾಜ ಸೇವೆಯನ್ನು ಕೈಗೊಳ್ಳಲು ಸಂಘ ಒಂದೇ ಮಾಧ್ಯಮ ಎಂಬ ನಿಲುವು ಅವರಲ್ಲಿ ಬಲವಾಯಿತು. ಹೀಗೆ ಸಂಘ ಮತ್ತು ಹಲವು ಸಂಘ ಪರಿವಾರ ಸಂಘಟನೆಗಳಲ್ಲಿ ಕೆಲಸ ಮಾಡಿದ ಅವರು ಕೆಲಕಾಲ ಸಂಘದ ಪೂರ್ಣಾವಧಿ ಕಾರ್ಯಕರ್ತ ‘ಪ್ರಚಾರಕ’ರಾಗಿಯೂ ಸೇವೆ ಸಲ್ಲಿಸಿದರು. ಈ ಅವಧಿ ಅವರಲ್ಲಿ ಕರ್ತವ್ಯ ಪ್ರಜ್ಞೆ, ನಿಷ್ಠೆ, ಧ್ಯೇಯ ಮತ್ತು ಶಿಸ್ತನ್ನು ರೂಢಿಸಿಕೊಳ್ಳಲು ಸಹಕಾರಿಯಾಯಿತು. ಪರಿಪೂರ್ಣತೆಯತ್ತ ಸಾಗುವ ದಾರಿಯನ್ನು ನಳಿನ್ ಕಟೀಲ್ ಅವರು ಸಂಘದಲ್ಲಿ ಕಂಡುಕೊಂಡರು. ಬಳಿಕ ಸಂಘ ಇವರನ್ನು ಧರ್ಮ ಜಾಗರಣಕ್ಕೆ ಕುಳುಹಿಸಿದಾಗ ಅಲ್ಲೂ ವಿಭಾಗ ಸಂಚಾಲಕರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಅನಂತರ ಅವರು ಸಂಪೂರ್ಣ ಸಮಾಜಮುಖಿಯಾದರು.
2004ರ ಲೋಕಸಭಾ ಚುನಾವಣೆಯ ಸಂದರ್ಭ ನಳಿನ್ ಅವರು ಬಿ.ಜೆ.ಪಿ. ಜಿಲ್ಲಾ ಕಾರ್ಯಾದರ್ಶಿಯಾಗಿ ಆಯ್ಕೆಯಾದರು ಮತ್ತು ಪಕ್ಷಕ್ಕಾಗಿ ಕಾರ್ಯಕರ್ತರನ್ನು ಸಂಘಟಿಸಿದರು. ಹಗಲು ರಾತ್ರಿಯೆನ್ನದೆ ಪಕ್ಷಕ್ಕಾಗಿ ದುಡಿದರು. ಅವರ ಈ ಕಾರ್ಯ ತತ್ಪರತೆ ಅವರಿಗೆ ರಾಜಕೀಯದ ಸೂಕ್ಷ್ಮಗಳನ್ನು ತಿಳಿಯಲು ಸಹಾಯ ಮಾಡಿದವು. 2009ರ ಲೋಕಸಭಾ ಚುನಾವಣೆಯ ವೇಳೆ ಅವರೇ ಬಿಜೆಪಿಯ ಅಭ್ಯರ್ಥಿಯಾಗಿ ಜಯ ಗಳಿಸಿದರು. 2014 ರಲ್ಲೂ ಅಭೂತಪೂರ್ವ ರೀತಿಯಲ್ಲಿ ಗೆದ್ದು ಬಂದರು. 2019ರ ಚುನಾವಣೆಯಲ್ಲೂ ಮೂರನೇ ಬಾರಿಗೆ ಜಯಭೇರಿ ಬಾರಿಸಿದರು.
2007 ರಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವ ಮತ್ತು 2008ರಲ್ಲಿ ಪಾವಂಜೆಯಲ್ಲಿ ನಡೆದ ಸೌತ್ರಾಮಿ ಗವಾಮಯನ ಯಾಗವನ್ನು ದಕ್ಷಿಣ ಕನ್ನಡ ಜನತೆ ಬಹುಶಃ ಮರೆಯಲಾರರು. ಅದಕ್ಕೆ ಕಾರಣ ನಳಿನ್ ಕುಮಾರ್ ಅವರು. ಕೋಟಿಗಟ್ಟಲೆ ಖರ್ಚಿನ ಕಾರ್ಯಕ್ರಮಗಳನ್ನು ಅದ್ಭುತವಾಗಿ ಸಂಯೋಜಿಸಿ ರಾಜ್ಯ-ಹೊರರಾಜ್ಯಗಳಿಂದ ಭಕ್ತರನ್ನು ಆಕರ್ಷಿಸಿ, ಎಲ್ಲೂ ಕಿಂಚಿತ್ತೂ ಲೋಪವಿಲ್ಲದಂತೆ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ಕಂಡು ಇದೇ ಜಿಲ್ಲೆಯ ಆಸ್ತಿಕ ಗಣವೇ ಮೂಗಿನ ಮೇಲೆ ಬೆರಳಿಟ್ಟಿತು. ಬಿಜೆಪಿ ನಾಯಕರಿಗೆ ಆಗಲೇ ನಳಿನ್ ಅವರ ಸಂಘಟನಾ ಚಾತುರ್ಯತೆ ಗಮನಕ್ಕೆ ಬಂದಿತು. ಈ ಕಾರ್ಯಕ್ರಮಗಳಲ್ಲಿ ನಳಿನ್ ಅವರ ಯೋಚನೆ ಏನೆಂದರೆ ಧಾರ್ಮಿಕ ಕಾರ್ಯಗಳು ಜನರಿಗೆ ಮುಟ್ಟಬೇಕು ಎಂಬುದಾಗಿತ್ತು. ಅದಕ್ಕಾಗಿ ಈ ಯಾಗಗಳ ಸಮಿತಿಗಳ ವತಿಯಿಂದ 3ಕೋಟಿ ರೂ. ವೆಚ್ಚದ ಮೂಲ ಸೌಕರ್ಯ ಕಾಮಗಾರಿಗಳು ನಡೆದವು.
ಇಷ್ಟೆಲ್ಲಾ ಚಟುವಟಿಕೆಯಿಂದ ಇದ್ದರೂ ನಳಿನ್ ಜನರ ನಡುವಿನಿಂದ ದೂರವಾಗಲಿಲ್ಲ ಬದಲಾಗಿ ಮತ್ತಷ್ಟು ಹತ್ತಿರವಾದರು. ಕಡಂದೆಲೆ ಪರಿಸರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಪರಿಸರಕ್ಕೆ ಸ್ಪಂದಿಸಿದರು. ಕಿನ್ನಿಗೋಳಿಯಲ್ಲಿ ರೈತ ಹಿತರಕ್ಷಣಾ ಸಮಿತಿ ರಚಿಸಿ ರೈತರೊಂದಿಗೆ ಕೈ ಜೋಡಿಸಿದರು. ಕೃಷಿಗೂ ಕಾಳಜಿ ವಹಿಸಿದರು. ಗುರುಪುರದಲ್ಲಿ ಮಾತೃ ಭೂಮಿ ಸಹಕಾರಿ ಸಂಘ ಸ್ಥಾಪಿಸಿ ಸರಕಾರಿ ಕ್ಷೇತ್ರದಲ್ಲಿ ಅನುಭವ ಪಡೆದರು. ಹೀಗೆ ನಳಿನರು ನೋಡು ನೋಡುತ್ತಲೇ ನಾಯಕರಾಗಿ ಬೆಳೆದರು. ಅಥವಾ ಜನರು ಅವರನ್ನು ನಾಯಕರನ್ನಾಗಿ ಮಾಡಿದರು. ನಿಸ್ವಾರ್ಥ ಸೇವೆ ಮತ್ತು ಅಗಾಧ ಪರಿಶ್ರಮದ ಫಲ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ರಾಷ್ಟ್ರಕ್ಕಾಗಿ ಯಾವ ಹೊತ್ತಲ್ಲೂ ಸದಾ ಸಿದ್ದ ಎಂಭ ವ್ಯಕ್ತಿತ್ವ ನಳಿನ್ ಅವರದ್ದೆಂದು ಸಂಘ ಮತ್ತು ಪರಿವಾರ ಸಂಘಟನೆಗಳು ಹೇಳುತ್ತವೆ
ಪ್ರಸ್ತುತ ನಳಿನ್ ಕುಮಾರ್ ಅವರು ರಾಜ್ಯಾಧ್ಯಕ್ಷರಾಗಿ ಮಹತ್ತರವಾದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಕಮಲವನ್ನು ಅರಳಿಸುವಂತಹ ಕಾರ್ಯವನ್ನು ಅವರು ಯಶಸ್ವಿಯಾಗಿ ನಡೆಸುತ್ತಾರೆ ಎಂಬ ಆಶಯ ಎಲ್ಲರಲ್ಲೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.