ನವದೆಹಲಿ: ಪ್ರಶಾಂತ ಸಮುದ್ರದ ತಟದಲ್ಲಿ ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಹ ಮರಳಿನ ಶಿಲ್ಪಗಳನ್ನು ರಚಿಸುವಲ್ಲಿ ನಿಸ್ಸೀಮ ಎನಿಸಿರುವ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಅಮೆರಿಕದ ಬೋಸ್ಟನ್ನಲ್ಲಿ ನಡೆದ ಇಂಟರ್ನ್ಯಾಷನಲ್ ಸ್ಯಾಂಡ್ ಆರ್ಟ್ ಚಾಂಪಿಯನ್ಶಿಪ್ 2019 ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪಟ್ನಾಯಕ್ ಅವರ ಸಾಧನೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡು ಹೆಮ್ಮೆಯ ಮಾತನ್ನಾಡಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಟ್ನಾಯಕ್ ಅವರು, ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಮರಳು ಶಿಲ್ಪವನ್ನು ರಚನೆ ಮಾಡಿದ್ದಾರೆ. ಇದರೊಂದಿಗೆ ‘ನಮ್ಮ ಸಾಗರಗಳನ್ನು ಉಳಿಸಿ’ ಎಂಬ ಉದಾತ್ತ ಸಂದೇಶವನ್ನು ನೀಡಿದ್ದಾರೆ. ಪ್ರತಿಭಾವಂತ ಕಲಾವಿದರು ಅದ್ಭುತವಾದ ಮರಳು ಕಲಾಕೃತಿಗಳನ್ನು ಇಲ್ಲಿ ರಚನೆ ಮಾಡಿದ್ದಾರೆ. ತೀರ್ಪುಗಾರರು ವಿವರಗಳ ಆಧಾರದ ಮೇಲೆ ಅತ್ಯುತ್ತಮ ರಚನೆಯನ್ನು ಆರಿಸಿ ಪ್ರಶಸ್ತಿಯನ್ನು ನೀಡಿದ್ದಾರೆ.
Congratulations to renowned Indian sand artist, Sudarsan Pattnaik for bagging ‘People’s Choice Award’ at the prestigious Sand Art Festival in the U.S for his sand sculpture ‘Stop Plastic Pollution, save our ocean’. @sudarsansand #PeoplesChoiceAward pic.twitter.com/7UGyUvYDnS
— VicePresidentOfIndia (@VPSecretariat) July 28, 2019
ಇಲ್ಲಿಯವರೆಗೆ ಪಟ್ನಾಯಕ್ ಅವರು ವಿಶ್ವದಾದ್ಯಂತ 60 ಅಂತಾರಾಷ್ಟ್ರೀಯ ಮರಳು ಶಿಲ್ಪ ಚಾಂಪಿಯನ್ಶಿಪ್ಗಳಲ್ಲಿ ಮತ್ತು ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದೇಶಕ್ಕಾಗಿ 27 ಚಾಂಪಿಯನ್ಶಿಪ್ ಬಹುಮಾನಗಳನ್ನು ಅವರು ಗೆದ್ದಿದ್ದಾರೆ. 2013ರಲ್ಲಿ ಅಟ್ಲಾಂಟಾದಲ್ಲಿ ನಡೆದ ವಿಶ್ವ ಮರಳು ಶಿಲ್ಪ ಚಾಂಪಿಯನ್ಶಿಪ್ನಲ್ಲಿ ಮತ್ತು 2010 ರಲ್ಲಿ ನಡೆದ ಉತ್ತರ ಅಮೆರಿಕಾದ ಏಕವ್ಯಕ್ತಿ ಮರಳು ಶಿಲ್ಪಕಲೆ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಅವರು ಗೆದ್ದಿದ್ದಾರೆ.
ಬೆಲ್ಜಿಯಂ, ಯುಎಸ್ಎ, ಹಾಲೆಂಡ್, ಲಂಡನ್ ಮುಂತಾದ ಹಲವು ದೇಶಗಳ ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅವರು ಮಾಡಿದ ಕಾರ್ಯಗಳನ್ನು ರಾಷ್ಟ್ರಪತಿ, ಪ್ರಧಾನಿ, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಮೆಚ್ಚಿ ಕೊಂಡಾಡಿದ್ದಾರೆ.
2005 ರಲ್ಲಿ ಹೂಸ್ಟನ್ ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವದಲ್ಲಿ ಅವರು ರಚಿಸಿದ ತಾಜ್ ಮಹಲ್ ಅಮೆರಿಕಾದಾದ್ಯಂತ ಭಾರೀ ಗಮನವನ್ನು ಸೆಳೆಯಿತು. ಪಟ್ನಾಯಕ್ ಅವರು ತಮ್ಮ ಮರಳು ಶಿಲ್ಪದ ಮೂಲಕ ವಿಶ್ವ ಶಾಂತಿ, ಜಾಗತಿಕ ತಾಪಮಾನ ಏರಿಕೆ, ಭಯೋತ್ಪಾದನೆ, ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳನ್ನು ಉಳಿಸುವುದು ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.