ಬಂಟ್ವಾಳ : ವಿವಿಧ ಸಂಘಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದೇ ರೀತಿ ಶೈಕ್ಷಣಿಕ ವಿಚಾರಗಳ ಈಡೇರಿಕೆಗೆ ವಿದ್ಯಾರ್ಥಿ ಸಂಘ ನೆರವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಗಟ್ಟಿ ಹೇಳಿದರು. ಅವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ 2015-16ನೇ ಸಾಲಿನ ಶೈಕ್ಚಣಿಕ ವರ್ಷದ ವಿದ್ಯಾರ್ಥಿ ಹಾಗೂ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜಿನ ಹಿತಕ್ಕೆ ಧಕ್ಕೆ ಬಾರದಂತೆ ಪ್ರತಿನಿಧಿಗಳು ವಿದ್ಯಾರ್ಥಿಗಳ ಈಡೇರಿಕೆಯನ್ನು ಪೂರೈಸುವಲ್ಲಿ ನೆರವಾಗಬೇಕು ಎಂದರು. ಕಾಲೇಜಿನ ಅಭಿವೃದ್ಧಿ ವಿದ್ಯಾರ್ಥಿ ಪ್ರತಿನಿಧಿಗಳ ಕೈಯಲ್ಲಿದೆ, ಉದ್ಘಾಟಿಸಿದ ದೀಪವು ಬೆಳಗುವ ರೀತಿಯಲ್ಲಿ ಪ್ರತಿಜ್ಞೆ ಮಡಿದ ವಿದ್ಯಾರ್ಥಿಗಳು ವಿದ್ಯಾಲಯವನ್ನು ಬೆಳಗುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿ ಪ್ರತಿನಿಧಿಗಳು ಭಿನ್ನವಾದ ರೀತಿಯಲ್ಲಿ ಯೋಚಿಸಿ, ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು, ಸ್ವಂತ ಆಲೋಚನೆಗಳನ್ನು ಬೆಳೆಸಿ ಗುರುಗಳ ಮಾರ್ಗದರ್ಶನದೊಂದಿಗೆ ಅವುಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಚುರುಕಾಗಿದ್ದು ನಿರಂತರವಾಗಿ ಎಚ್ಚೆತ್ತುಕೊಳ್ಳಬೇಕು. ಸೃಜನಾತ್ಮಕ ಕಾರ್ಯಕ್ರಮಗಳು ಈ ವಿದ್ಯಾಸಂಸ್ಥೆಯಲ್ಲಿ ಮೂಡಿಬರಲಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿವೇಕಾನಂದ ಡಿ.ಎಡ್. ಕಾಲೇಜಿನ ಉಪನ್ಯಾಸಕ ಮತ್ತು ನಿರ್ದೇಶಕರು,ಶಿಕ್ಷಕ ತರಬೇತಿ ಘಟಕ, ವಿವೇಕಾನಂದ ವಿದ್ಯಾವರ್ಧಕ ಸಂಘ,ಪುತ್ತೂರು ಶ್ರೀ ರಘುನಾಥ್ ಉಬರಡ್ಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಸಂತ ಮಾಧವರವರು ಮಾತನಾಡಿ, ಭಾರತೀಯ ಕ್ಷೇತ್ರದ ಎಲ್ಲಾ ರಂಗಗಳಲ್ಲೂ ಜಾಗೃತಿ ಮೂಡಿಸುವುದೇ ಶಿಕ್ಷಣ. ಈ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿ ಸಂಘಗಳು ನಡೆಸುತ್ತವೆ. ಭಾರತದಲ್ಲಿ ಸ್ವಚ್ಛತಾ ಆಂದೋಲನ ಯೋಗ ಕಾರ್ಯಕ್ರಮ ಮೊದಲಾದ ಹೊಸ ಚಿಂತನೆಗಳು ಕಾರ್ಯಗತವಾಗಿದೆ. ಅಂತೆಯೇ ಹೊಸ ಚಿಂತನೆಗಳನ್ನು ಮೈಗೂಡಿಸಿಕೊಳ್ಳವಲ್ಲಿ ವಿದ್ಯಾರ್ಥಿ ಸಂಘಟನೆ ಜಾಗೃತವಾಗಬೇಕು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ಗಳ ಮಾರ್ಗದರ್ಶನ ಪಡೆಯಬೇಕು. ಕಾಲೇಜಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಪ್ರತಿನಿಧಿಗಳು ಚೆನ್ನಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಸಂತ ಬಲ್ಲಾಳರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಿಂದ ಪ್ರಮಾಣ ವಚನ ಸ್ವೀಕಾರ ನಡೆಯಿತು. ವಿದ್ಯಾರ್ಥಿ ಸಂಘದ ನಿರ್ದೇಶಕಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಅಕ್ಷತಾ ಚುನಾವಣಾ ಪ್ರಕ್ರಿಯೆಯ ವರದಿ ವಾಚನ ಮಾಡಿದರು. ವಿದ್ಯಾರ್ಥಿ ಸಂಘದ ನಿರ್ದೇಶಕ ರಸಾಯನ ಶಾಸ್ತ್ರದ ಉಪನ್ಯಾಸಕ ಗಿರೀಶ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ದೀಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರೆ, ವಿದ್ಯಾರ್ಥಿ ಸತ್ಯಶ್ಯಾಮ ಸ್ವಾಗತಿಸಿ, ವಿದ್ಯಾರ್ಥಿನಿ ರಚನಾ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.