ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಬಳಸಿಕೊಂಡು ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದ ಪಾಕಿಸ್ಥಾನಕ್ಕೆ ಈಗ ತನ್ನ ಪರಮ ಸ್ನೇಹಿತ ಚೀನಾ ದೊಡ್ಡ ತೊಡಕಾಗಿ ಪರಿಣಮಿಸಿದೆ. ಪ್ರತ್ಯೇಕತಾವಾದಿಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುವಂತೆ ಪಾಕಿಸ್ಥಾನಕ್ಕೆ ಚೀನಾ ತಾಕೀತು ಮಾಡಲು ನಿರ್ಧರಿಸಿದೆ. ಚೀನಾದ ಮುಸ್ಲಿಮರ ಬಗ್ಗೆ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ಹೇಳಿಕೆ ನೀಡಿರುವುದೇ ಇದಕ್ಕೆ ಕಾರಣ.
ಚೀನಾ ತನ್ನ ನೆಲದಲ್ಲಿರುವ ವುಯಿಘರ್ ಮುಸ್ಲಿಮರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಗಿಲಾನಿ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದು ಚೀನಾವನ್ನು ಕೆರಳುವಂತೆ ಮಾಡಿದೆ. ಹೀಗಾಗಿ ಅದು ಪಾಕಿಸ್ಥಾನಕ್ಕೆ ಈ ಪ್ರತ್ಯೇಕತಾವಾದಿಗಳಿಂದ ದೂರವಿರುವಂತೆ ಸೂಚಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
“ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನೀಡಿರುವ ಹೇಳಿಕೆ ಚೀನಾಕ್ಕೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪಾಕಿಸ್ಥಾನ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳು ವುಯಿಘರ್ ಮುಸ್ಲಿಮರ ಬಗ್ಗೆ ಮೌನವಾಗಿದ್ದರೆ, ಗಿಲಾನಿ ಮಾತ್ರ ಚೀನಾ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಪಾಕಿಸ್ಥಾನ ಸದಾ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಬಳಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ಥಾನ ಮತ್ತು ಪ್ರತ್ಯೇಕತಾವಾದಿಗಳ ನಡುವಿನ ಮೈತ್ರಿ ಬಗ್ಗೆ ಚೀನಾ ಸದಾ ಮೌನವಾಗಿದೆ. ಆದರೆ ಈಗ ವುಯಿಘರ್ ಮುಸ್ಲಿಮರ ಬಗ್ಗೆ ಗಿಲಾನಿಯ ಟೀಕೆಗಳು ಬೀಜಿಂಗ್ ಅನ್ನು ಕೋಪಗೊಳ್ಳುವಂತೆ ಮಾಡಿದೆ.
ಜುಲೈ 10 ರಂದು, ಪಾಕಿಸ್ಥಾನ ಮತ್ತು ಸೌದಿ ಅರೇಬಿಯಾ ಸೇರಿದಂತೆ ಬಹುತೇಕ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಚೀನಾದಲ್ಲಿನ ವುಯಿಘರ್ ಮುಸ್ಲಿಮರ ವಿರುದ್ಧದ ದೌರ್ಜನ್ಯದ ವಿಷಯದಲ್ಲಿ ಚೀನಾವನ್ನು ಸಮರ್ಥಿಸಿಕೊಂಡಿವೆ. ಆದರೆ, ಎಲ್ಲಾ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 22 ದೇಶಗಳು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆ ನೀಡಿವೆ.
ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ, ವುಯಿಘರ್ ಮುಸ್ಲಿಮರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ ಎಂಬ ವರದಿಗಳು ಬಹಳ ಹಿಂದಿನಿಂದಲೂ ಇವೆ. ಕೆಲವು ಮಾಧ್ಯಮ ವರದಿಗಳಲ್ಲಿ, ಚೀನಾದ ಆಡಳಿತವು ಮುಸ್ಲಿಮರನ್ನು ಬಂಧನ ಕೇಂದ್ರಗಳಲ್ಲಿ ಇರಿಸುತ್ತಿದೆ ಮತ್ತು ಅವರ ಧಾರ್ಮಿಕ ಗುರುತನ್ನು ಬದಲಾಯಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.