ಅಕ್ರಮ ಒಳನುಸುಳುವಿಕೆ ಭಾರತಕ್ಕೆ ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತ-ಪಾಕಿಸ್ಥಾನ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಒಳನುಸುಳಿವಿಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1 ರಂದು ‘ಆಪರೇಶನ್ ಸುದರ್ಶನ್’ ಅನ್ನು ಆರಂಭಿಸಲಾಗಿದೆ. ಒಳನುಸುಳುವಿಕೆಯ ವಿರುದ್ಧದ ಹೋರಾಟವನ್ನು ಗಡಿಯುದ್ದಕ್ಕೂ ಬಲಪಡಿಸುವ ಸಲುವಾಗಿ, ಬಿಎಸ್ಎಫ್ ತನ್ನ ಹಿರಿಯ ಅನುಭವಿ ಸಿಬ್ಬಂದಿಗಳನ್ನು, ಸಾವಿರಾರು ಸೈನಿಕರನ್ನು ಮತ್ತು ಯಂತ್ರೋಪಕರಣಗಳನ್ನು ಈ ಪ್ರದೇಶಗಳಲ್ಲಿ ಸಜ್ಜುಗೊಳಿಸಿದೆ.
1000 ಕಿ.ಮೀ ಉದ್ದದ ಗಡಿಯನ್ನು ಸಂಪೂರ್ಣವಾಗಿ ಆವರಿಸುವ ಗುರಿಯನ್ನು ‘ಆಪರೇಷನ್ ಸುದರ್ಶನ್’ ಹೊಂದಿದ್ದು, ಇದರಲ್ಲಿ 553 ಕಿ.ಮೀ ಪಂಜಾಬ್ ಮತ್ತು 485 ಕಿ.ಮೀ ಜಮ್ಮುವಿನಲ್ಲಿ ಇದೆ. ಸೂಕ್ಷ್ಮ ಅಂತರರಾಷ್ಟ್ರೀಯ ಗಡಿ (ಐಬಿ)ಯು ರಾಜಸ್ಥಾನ ಮತ್ತು ಗುಜರಾತ್ ಕಡೆಗೆ ಸಾಗುತ್ತದೆ.
ಪಿಟಿಐ ವರದಿಯ ಪ್ರಕಾರ, ಯಂತ್ರೋಪಕರಣಗಳ, ಕಮ್ಯೂನಿಕೇಶನ್ ಇಂಟರ್ಸೆಪ್ಟರ್ಗಳ ಮತ್ತು ಮೊಬೈಲ್ ಬುಲೆಟ್ ಪ್ರೂಫ್ ಬಂಕರ್ಗಳ ಬೃಹತ್ ಸಂಗ್ರಹವನ್ನು ಗಡಿಯುದ್ದಕ್ಕೂ ಸಜ್ಜುಗೊಳಿಸಲಾಗಿದ್ದು, ಈ ಕಾರ್ಯಾಚರಣೆಯ ಭಾಗವಾಗಿ ಸಾವಿರಾರು ಬಿಎಸ್ಎಫ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ. ಫ್ರಾಂಟಿಯರ್ ಮತ್ತು ಬೆಟಾಲಿಯನ್ ಕಮಾಂಡರ್ಗಳು (ಇನ್ಸ್ಪೆಕ್ಟರ್ ಜನರಲ್ನಿಂದ ಹಿಡಿದು ಕಮಾಂಡೆಂಟ್ ಶ್ರೇಣಿಯವರೆಗೆ), ಅವರ ಸೆಕೆಂಡ್ ಇನ್ ಕಮಾಂಡ್ಗಳು ಮತ್ತು ಬಿಎಸ್ಎಫ್ನ ಸುಮಾರು 40 ಬೆಟಾಲಿಯನ್ಗಳ ಕಂಪನಿ (ಯುನಿಟ್) ಕಮಾಂಡರ್ಗಳು ಎರಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದಾರೆ. ಹದಿನೈದು ದಿನಗಳ ಕಾಲ ಅಲ್ಲಿ ಇವರು ಕಾರ್ಯಾಚರಣೆಯನ್ನು ನಡೆಸಲಿದ್ದಾರೆ ಮತ್ತು ಜುಲೈ 15 ರೊಳಗೆ ತಮ್ಮ ನೆಲೆಗೆ ಇವರು ವಾಪಾಸ್ಸಾಗಲಿದ್ದಾರೆ.
ಅಲ್ಲದೇ, ನೆರೆಯ ದೇಶದ ಭಯೋತ್ಪಾದಕರು ಮತ್ತು ಮಾದಕವಸ್ತು ಸಾಗಾಣೆದಾರರ ಒಳನುಸುಳುವಿಕೆಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಈ ಗಡಿಗಳಲ್ಲಿ ಆಕ್ರಮಣಕಾರಿ ಕ್ರಮಗಳನ್ನು ಸೇನೆ ಅಳವಡಿಸಿಕೊಂಡಿದೆ. ಭಾರತೀಯ ರಕ್ಷಣಾ ಸ್ಥಿತಿಗಳನ್ನು ಮತ್ತು ಸ್ಥಳಗಳನ್ನು ಬಲಪಡಿಸಲು ಅನೇಕ ಬಾರಿ ಗಸ್ತು ತಿರುಗಲಾಗುತ್ತಿದೆ.
ವಾಚ್ ಟವರ್ ಮತ್ತು ಸೆಂಟ್ರಿ ಪೋಸ್ಟ್ಗಳನ್ನು ಉತ್ತಮವಾಗಿ ಸಜ್ಜುಗೊಳಿಸುವಂತೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಡಂಪ್ಗಳನ್ನು ತುಂಬಿಸಿಡುವಂತೆ, ಫಿರಂಗಿ ಸ್ಥಾನಗಳನ್ನು ಬಲಪಡಿಸುವಂತೆ, ಗಡಿ ಬೇಲಿ ಉಲ್ಲಂಘನೆಗಳನ್ನು ಪರಿಶೀಲಿಸುವಂತೆ ಮತ್ತು ಭೂಗತ ಮತ್ತು ಗಡಿಯಾಚೆಗಿನ ಸುರಂಗಗಳನ್ನು ಪತ್ತೆಹಚ್ಚುವಂತೆ, ಎಲ್ಲಾ ಕಾರ್ಯಾಚರಣೆ ಮತ್ತು ವ್ಯವಸ್ಥೆಗಳನ್ನು ಸಜ್ಜುಗೊಳಿಸಿಡುವಂತೆ, ಸೂಕ್ಷ್ಮ ಮತ್ತು ಒಳನುಸುಳುವಿಕೆ ಪೀಡಿತ ಗಡಿಗಳಲ್ಲಿ ಕಾವಲು ಕಾಯುವಿಕೆ ಮತ್ತು ಗಸ್ತು ತಿರುಗುವಿಕೆಯನ್ನು ಬಲಿಷ್ಠಗೊಳಿಸುವಂತೆ ಬಿಎಸ್ಎಫ್ ಕಮಾಂಡರ್ಗಳಿಗೆ ಸೂಚಿಸಲಾಗಿದೆ.
ಅಲ್ಲದೇ, ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳು ಸಲುವಾಗಿ ಯೋಧರು ಪ್ರಮಾಣಿಕೃತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನೂ ಗಮನಿಸುವಂತೆಯೂ ಕಮಾಂಡರ್ಗಳಿಗೆ ಸೂಚಿಸಲಾಗಿದೆ. ಯೋಧರು ಆಲ್ ಟೈಮ್ ಸ್ಟಾಕ್ ಆಫ್ ಬುಲೆಟ್ ಪ್ರೂಫ್ ವೆಸ್ಟ್ಸ್ ‘ಪಟ್ಕಾ’ (ಶಸ್ತ್ರಸಜ್ಜಿತ ಹೆಡ್ ಗೇರ್) ಮತ್ತು ಕಂಬಾತ್ ಗೇರ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಗಡಿಯಲ್ಲಿನ ಯಾವುದೇ ಚಲನವಲನಗಳ ಬಗ್ಗೆ ಮತ್ತು ಕೊರಿಯರ್ ಮೂಲಕ ಮಾದಕವಸ್ತು ಕಳ್ಳಸಾಗಣೆ ಮಾಡುವ ಸನ್ನಿವೇಶಗಳ ಬಗ್ಗೆ ಸದಾ ಎಚ್ಚರವಾಗಿರಲು, ಗಡಿಯಲ್ಲಿ ಬೆಳೆಯುವ ‘ಸರ್ಕಂಡ’ ಅಥವಾ ಉದ್ದನೇಯ ಹುಲ್ಲನ್ನು ಕತ್ತರಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ. ಉದ್ದನೇಯ ಹುಲ್ಲುಗಳು ದೂರದ ಅಥವಾ ಹತ್ತಿರದ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣಲು ತೊಡಕಾಗಿ ಪರಿಣಮಿಸುತ್ತವೆ.
ಮೂಲಗಳ ಪ್ರಕಾರ, ಕಾರ್ಯಾಚರಣೆಯ ಭಾಗವಾಗಿ, ಅಂತಾರಾಷ್ಟ್ರೀಯ ಗಡಿಯಲ್ಲಿ ಇರುವ ದೊಡ್ಡ ಮಣ್ಣಿನ ದಿಬ್ಬಗಳನ್ನು ಸಮತಟ್ಟು ಮಾಡಲಾಗುತ್ತಿದೆ, ಹೊಸ ಬಂಕರ್ಗಳು ಮತ್ತು ‘ಕಂದಕಗಳನ್ನು ಅಗೆಯಲಾಗುತ್ತಿದೆ ಮತ್ತು ಸ್ನೈಪರ್ ಗುಂಡಿನ ದಾಳಿಯಂತಹ ಘಟನೆಗಳನ್ನು ಎದುರಿಸುವ ಸಲುವಾಗಿ ಬಿಎಸ್ಎಫ್ ಪೋಸ್ಟ ಗಳನ್ನು ಸಮರ್ಪಕವಾದ ರೀತಿಯಲ್ಲಿ ಶಸ್ತ್ರಸಜ್ಜಿತಗೊಳಿಸಲಾಗುತ್ತಿದೆ. ಗಡಿಗಳಲ್ಲಿ ನಿಯೋಜನೆಗೊಳಿಸಲು 4X4 ವಾಹನಗಳನ್ನು ರವಾನಿಸುತ್ತಿರುವುದು ಮಾತ್ರವಲ್ಲದೇ, ಭಾರೀ ಮತ್ತು ಕಠಿಣ ಭೂಪ್ರದೇಶಗಳಲ್ಲಿ ಸಂಚರಿಸಲು ಸೂಕ್ತವಾದ ವಾಹನಗಳನ್ನೂ ಈ ಪ್ರದೇಶಗಳಲ್ಲಿ ನಿಯೋಜನೆಗೊಳಿಸಲಾಗುತ್ತಿದೆ.
ಸರ್ಕಾರದ ಒಳನುಸುಳುವಿಕೆ ವಿರೋಧಿ ನೀತಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಗುರಿಯೊಂದಿಗೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಳೆದ ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಸುಳುವಿಕೆಯು ಶೇ. 43 ರಷ್ಟು ಕಡಿಮೆಯಾಗಿದೆ ಎಂದು ಇತ್ತೀಚೆಗೆ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಸಂಸತ್ತಿಗೆ ತಿಳಿಸಿದ್ದರು.
“ಗಡಿಯಲ್ಲಿನ ಒಳನುಸುಳುವಿಕೆಯ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ. ಭದ್ರತಾ ಪಡೆಗಳ ಸಂಘಟಿತ ಮತ್ತು ಸಹಭಾಗಿತ್ವದ ಪ್ರಯತ್ನಗಳಿಂದಾಗಿ, ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿಯು ಈ ವರ್ಷದ ಮೊದಲಾರ್ಧದಲ್ಲಿ 2018ರ ಮೊದಲಾರ್ಧಕ್ಕಿಂತ ಸುಧಾರಣೆಗೊಂಡಿದೆ. ಒಳನುಸುಳುವಿಕೆಯ ಒಟ್ಟು ಪ್ರಮಾಣವು ಶೇ.43 ರಷ್ಟು ಕಡಿಮೆಯಾಗಿದೆ” ಎಂದಿದ್ದಾರೆ.
ಅಲ್ಲದೇ, ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಿ ಕಿಶನ್ ರೆಡ್ಡಿ ಅವರು ಸಂಸತ್ತಿನಲ್ಲಿ ಭಯೋತ್ಪಾದನೆ ವಿರುದ್ಧದ ಕ್ರಮಗಳ ಬಗ್ಗೆ ಮಾತನಾಡಿದ ವೇಳೆ, “ಭಯೋತ್ಪಾದಕ ಪ್ರಾಯೋಜಿತ ಘಟನೆಗಳು ಶೇ.28ರಷ್ಟು ಕುಸಿತವನ್ನು ಕಂಡಿವೆ, ಒಟ್ಟು ಒಳನುಸುಳುವಿಕೆಯ ಪ್ರಮಾಣವು ಶೇ.43ರಷ್ಟು ಕಡಿಮೆಯಾಗಿದೆ, ಭಯೋತ್ಪಾದನಾ ಸಂಘಟನೆಗಳಿಗೆ ಸ್ಥಳೀಯ ನೇಮಕಾತಿಯು ಶೇ.40ರಷ್ಟು ಕುಸಿತವನ್ನು ಕಂಡಿದೆ ಮತ್ತು ಭಯೋತ್ಪಾದಕರ ಹತ್ಯೆಯ ಪ್ರಮಾಣವು ಶೇ.22 ರಷ್ಟು ಹೆಚ್ಚಾಗಿದೆ” ಎಂದಿದ್ದಾರೆ.
ಆಪರೇಷನ್ ಸುದರ್ಶನ್ ಜಾರಿಯಲ್ಲಿರುವುದರಿಂದ, ಒಳನುಸುಳುವಿಕೆಯನ್ನು ತಡೆಯುವ ಪ್ರಯತ್ನಗಳು ಮತ್ತಷ್ಟು ವೃದ್ಧಿಯನ್ನು ಕಾಣುತ್ತಿವೆ. ಸೇನಾ ಪಡೆಗಳ ಸಜ್ಜುಗೊಳಿಸುವಿಕೆ ಮತ್ತು ಭದ್ರತಾ ಕ್ರಮಗಳ ದುಪ್ಪಟ್ಟುಗೊಳಿಸುವಿಕೆ ಮೂಲಕ ಭಯೋತ್ಪಾದನೆಯನ್ನು, ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಮಹತ್ತರವಾದ ಕ್ರಮಗಳನ್ನು ಸರ್ಕಾರದ ವತಿಯಿಂದ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಭಾರತದ ಸಾಂಪ್ರದಾಯಿಕ ವಿರೋಧಿ ನೆರೆಹೊರೆಯವರು ಎಚ್ಚರವಾಗಿರುವುದು ಅನಿವಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.