ಬೆಳ್ತಂಗಡಿ: ರಾಜ್ಯದಲ್ಲಿ ಅಗ್ಗದ ಸಾರಾಯಿ ಮಾರಾಟ ಪುನರಾರಂಭ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾವವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದಾಗ ಯಾವ ಶಾಸಕರೂ ವಿರೋಧ ವ್ಯಕ್ತಪಡಿಸದಿರುವುದು ಕರ್ನಾಟಕ ಜನತೆಯ ದುರಂತ ಎಂದು ವೇದಿಕೆ ವಿಷಾದಿಸಿದೆ.
ರಾಜ್ಯದ ಗಡಿಭಾಗಗಳಿಂದ ಮದ್ಯದ ಕಳ್ಳಸಾಗಾಟ, ಅಕ್ರಮ ಮದ್ಯಮಾರಾಟ, ಬಡವರು ಹೆಚ್ಚು ಬೆಲೆಕೊಟ್ಟು ಮದ್ಯಪಾನ ಸೇವನೆ ಮಾಡುತ್ತಿದ್ದಾರೆ ಎನ್ನುವ ನೆಪವನ್ನು ಮುಂದಿಟ್ಟು, ರಾಜ್ಯದಲ್ಲಿ ಅಗ್ಗದ ಮದ್ಯಮಾರಾಟ, ಬಾರ್ ಆಂಡ್ ರೆಸ್ಟೋರೆಂಟ್ಗಳಿಗೆ ಹೊಸ ಪರವಾನಿಗೆ ಮತ್ತು ಮದ್ಯದಂಗಡಿಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಸರಕಾರ ಮುಂದಾದರೆ ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಕೆ.ದೇವದಾಸ್ ಹೆಬ್ಬಾರ್ ಎಚ್ಚರಿಸಿದ್ದಾರೆ.
ಅಕ್ರಮ ಸಾರಾಯಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಪೋಲೀಸರೇ ಮಾರಾಟಗಾರರೊಂದಿಗೆ ಶಾಮೀಲಾಗಿ ಮದ್ಯಮಾರಾಟ ವ್ಯಾಪಕವಾಗಲು ಕಾರಣವಾಗಿದೆ. ಪಾನನಿಷೇಧ ಜಾರಿಯಾದರೂ ಇದರ ಯಶಸ್ವಿಗೆ ಯಾವುದೇ ಅನುದಾನ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಲಿಲ್ಲ. ಅಬಕಾರಿ ಇಲಾಖೆಗೆ ಮದ್ಯ ಮಾರಾಟ ಮಾಡುವ ವ್ಯವಹಾರದ ಕೇಂದ್ರವನ್ನಾಗಿ ಮಾಡಿ ಟಾರ್ಗೆಟ್ ನೀಡುವಂತಹದ್ದು ಇಂತಹ ಅಕ್ರಮಗಳಿಗೆ ಮುಖ್ಯ ಕಾರಣವಾಗಿದೆ. ಆದುದರಿಂದ ಸರಕಾರವು ಅಬಕಾರಿ ಕಾಯಿದೆಯನ್ನು ಪುನರ್ಪರಿಶೀಲಿಸಿ ಇದರ ತಡೆಗೆ ಅಬಕಾರಿ ಜಾರಿ ವಿಭಾಗವನ್ನು ಬಲಪಡಿಸಬೇಕೆಂದು ವೇದಿಕೆಯು ಅಗ್ರಹಿಸಿದೆ.
ಜನಜಾಗೃತಿ ವೇದಿಕೆಯು ಹಲವಾರು ವರ್ಷದಿಂದ ದುಶ್ಚಟಕ್ಕೆ ಒಳಗಾದ ಕುಟುಂಬಗಳಿಗೆ ಸಾಂತ್ವನ, ಸಲಹೆ, ಚಿಕಿತ್ಸೆ ನೀಡುತ್ತಾ ಬಂದಿದೆ. ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಂದು ಲಕ್ಷಕ್ಕೂ ಮಿಕ್ಕಿದ ವ್ಯಸನಿಗಳು ವೇದಿಕೆಯ ಸಹಕಾರದಿಂದ ಪಾನಮುಕ್ತರಾಗಿದ್ದಾರೆ.
ಸರಕಾರ ಪ್ರಾಯೋಜಿತ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸಲಾಗಿದೆ. ಈ ಎಲ್ಲಾ ವೇದಿಕೆಯ ಪ್ರಯತ್ನಗಳಿಗೆ ಸರಕಾರ ಅಗ್ಗದ ಸಾರಾಯಿ ನೀಡುವ ನಿರ್ಧಾರದಿಂದ ಬಹಳಷ್ಟು ತೊಂದರೆಯಾಗಲಿದೆ ಎಂದು ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.