ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡನೆಗೊಳಿಸಿದೆ. ಈ ಆರ್ಥಿಕ ಸಮೀಕ್ಷೆ 2019 -20ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ. 7 ರಷ್ಟಕ್ಕೆ ನಿಗದಿ ಮಾಡಿದೆ. ಇದು ಕಾರ್ಯರೂಪಕ್ಕೆ ಬಂದರೆ ಚೀನಾವನ್ನು ಹಿಂದಿಕ್ಕಿ ವಿಶ್ವದ ವೇಗದ ಆರ್ಥಿಕತೆ ಸ್ಥಾನಮಾನವನ್ನು ವಾಪಾಸ್ ಪಡೆದುಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿದೆ.
ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಿದ್ದು, ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರು ಸಿದ್ಧಪಡಿಸಿದ್ದಾರೆ. ಎರಡನೇಯ ಅವಧಿಯ ಮೋದಿ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆ ಇದಾಗಿದೆ. ಕೇಂದ್ರ ಬಜೆಟ್ ಮಂಡನೆಗೂ ಒಂದು ದಿನದ ಮುಂಚೆ ಈ ಸಮೀಕ್ಷೆಯನ್ನು ಮಂಡಿಸಲಾಗಿದೆ.
ಕೃಷಿ ಕ್ಷೇತ್ರದ ಮೇಲೆ ಹೆಚ್ಚುತ್ತಿರುವ ರಾಜ್ಯಗಳ ವೆಚ್ಚಗಳ ನಡುವೆ ಆರ್ಥಿಕ ಕುಸಿತವು ತೆರಿಗೆ ಸಂಗ್ರಹದ ಮೇಲೆ ಪ್ರಭಾವ ಬೀರುತ್ತಿದೆ, ಇದರಿಂದ ಭಾರತವು ಹಣಕಾಸಿನ ವಿಷಯದಲ್ಲಿ ಸವಾಲನ್ನು ಎದುರಿಸಲಿದೆ. ಆದರೂ, ಗ್ರಾಹಕರ ಬೇಡಿಕೆ ಮತ್ತು ಬ್ಯಾಂಕ್ ಸಾಲಗಳ ಸುಧಾರಣೆಯ ಹಿನ್ನಲೆಯಲ್ಲಿ ಹೂಡಿಕೆಯ ದರವು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಆರ್ಥಿಕ ಸಮೀಕ್ಷೆಯ ವರದಿ ತಿಳಿಸಿದೆ.
ಜಿಡಿಪಿಯ ಬೆಳವಣಿಗೆಯ ನಿರೀಕ್ಷೆಯು ಆರ್ಥಿಕತೆಯ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಕೆಲ ವರ್ಷಗಳ ರಚನಾತ್ಮಕ ಸುಧಾರಣೆಗಳು ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಸ್ಥಿರವಾಗಿರಲಿದೆ ಮತ್ತು 2019-20ರಲ್ಲಿ ಬೆಳವಣಿಗೆ ಮತ್ತೆ ಪುನಃಶ್ಚೇತನಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
2019-20ರಲ್ಲಿ ತೈಲ ಬೆಲೆ ಕುಸಿಯುವ ನಿರೀಕ್ಷೆಯಿದೆ. ಇದು ಸರ್ಕಾರಕ್ಕೆ ಮತ್ತು ಸಾಮಾನ್ಯ ಜನರಿಗೆ ಸಹಾಯಕವಾಗಲಿದೆ. ಸಾಮಾನ್ಯ ಹಣಕಾಸಿನ ಕೊರತೆಯು ಈ ಹಣಕಾಸು ವರ್ಷದಲ್ಲಿ 5.8% ರಷ್ಟಿದೆ. ಕಳೆದ ವರ್ಷ 6.4% ರಷ್ಟಿತ್ತು. ಕೆಟ್ಟ-ಸಾಲಗಳ ಅನುಪಾತದಲ್ಲಿ ಕಡಿತವಾಗಿರುವುದರಿಂದ ಬಂಡವಾಳ ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.