ಬಿರು ಬೇಸಿಗೆಯ ಹೊಡೆತದಿಂದಾಗಿ ತತ್ತರಿಸಿರುವ ಭಾರತಕ್ಕೆ, ಹಲವು ಭಾಗಗಳಲ್ಲಿನ ನೀರಿ ಕೊರತೆಯೂ ದೊಡ್ಡ ಮಟ್ಟದ ಸವಾಲನ್ನು ತಂದೊಡ್ಡಿದೆ. ನೀತಿ ಆಯೋಗದ 2018ರ ವರದಿ ‘ಕಾಂಪೊಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್’ ಪ್ರಕಾರ, ಶುದ್ಧ ಕುಡಿಯುವ ನೀರು ಸಿಗದೆ ಪ್ರತಿವರ್ಷ 2,00,000 ಭಾರತೀಯರು ಸಾಯುತ್ತಿದ್ದಾರೆ ಮತ್ತು 60 ಕೋಟಿ ಭಾರತೀಯರು ಅತೀವ ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 21 ನಗರಗಳು 2020 ರ ವೇಳೆಗೆ ಅಂತರ್ಜಲವಿಲ್ಲದೆ ಒದ್ದಾಡುತ್ತವೆ, ಇದರಿಂದ 10 ಕೋಟಿ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ವರದಿ ಉಲ್ಲೇಖ ಮಾಡಿದೆ.
ಮುಂದಿನ ಭವಿಷ್ಯದ ಈ ಬೃಹತ್ ಸವಾಲನ್ನು ಗಮನದಲ್ಲಿಟ್ಟುಕೊಂಡಿರುವ ಮೋದಿ ಸರ್ಕಾರ ಈಗಾಗಲೇ ಕಾರ್ಯೋನ್ಮುಖಗೊಂಡಿದೆ. ಹೊಸದಾಗಿ ರಚಿಸಲಾದ ಜಲಶಕ್ತಿ ಸಚಿವಾಲಯದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಜಲಶಕ್ತಿ ಅಭಿಯಾನವನ್ನು ಪ್ರಾರಂಭಿಸಿದ್ದರು. ಹಿಂದಿನ ಜಲ ಸಂಪನ್ಮೂಲ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಂಯೋಜಿತ ಆವೃತ್ತಿಯಾಗಿರುವ ಜಲಶಕ್ತಿ ಸಚಿವಾಲಯವು ನೀರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಒಂದೇ ಅಡಿಗೆ ತರುತ್ತದೆ.
ಜಲ ಶಕ್ತಿ ಅಭಿಯಾನಕ್ಕಾಗಿ, ಸರ್ಕಾರವು ವಿವಿಧ ಇಲಾಖೆಗಳ ಮತ್ತು ಸಚಿವಾಲಯಗಳ 255 ಅಧಿಕಾರಿಗಳನ್ನು ಆಯ್ಕೆ ಮಾಡಿದ್ದು, ತಲಾ ಒಂದು ನೀರಿನ ಅಭಾವವಿರುವ ಜಿಲ್ಲೆಗೆ ಒಬ್ಬೊಬ್ಬರನ್ನು ನಿಯೋಜನೆಗೊಳಿಸಿದೆ. ಅಣೆಕಟ್ಟುಗಳು, ಕೊಳಗಳು ಮತ್ತು ಅರಣ್ಯೀಕರಣದ ಮೂಲಕ ನೀರಿನ ಅಭಾವದ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ನಿರ್ಲಕ್ಷ್ಯಕ್ಕೊಳಗಾದ ಮತ್ತು ಹಳೆಯ ಜಲಮೂಲಗಳನ್ನು ಶುದ್ಧೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಕಾರ್ಯವನ್ನೂ ಈ ಅಭಿಯಾನವು ಒಳಗೊಂಡಿದೆ. ಈ ಅಭಿಯಾನವನ್ನು ಒಂದು ಸಾರ್ವಜನಿಕ ಆಂದೋಲನವನ್ನಾಗಿ ರೂಪಿಸಲು ಕೇಂದ್ರ ಸರ್ಕಾರವು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ, ಇದಕ್ಕಾಗಿ ಕೇಂದ್ರದಿಂದ ಹಿಡಿದು ಸ್ಥಳೀಯ ಮಟ್ಟದ ಅಧಿಕಾರಿಗಳ ತಂಡವು ನೀರಿನ ಅಭಾವವಿರುವ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳಿಯ ಸಮುದಾಯ, ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ಜಲ ಶಕ್ತಿ ಅಭಿಯಾನವನ್ನು ಮುನ್ನಡೆಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ಎರಡನೇಯ ಅವಧಿಯ ಮೊದಲ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ, ನೀರಿನ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸ್ವಚ್ಛ ಭಾರತ್ ಅಭಿಯಾನವನ್ನು ಯಶಸ್ಸುಗೊಳಿಸಲು ಭಾರತೀಯ ಸಮಾಜ ಸಾಮೂಹಿಕವಾಗಿ ಪ್ರಯತ್ನಗಳನ್ನು ನಡೆಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, “ನಾವು ಒಗ್ಗಟ್ಟಿನಿಂದ ಶ್ರಮಪಟ್ಟು ಕೆಲಸ ಮಾಡಿದಾಗ, ಅತ್ಯಂತ ಕಷ್ಟಕರವಾದ ಕಾರ್ಯಗಳನ್ನು ಕೂಡ ಯಶಸ್ವಿಯಾಗಿ ಸಾಧಿಸಬಹುದು” ಎಂದು ಹೇಳಿದ್ದರು. ಸ್ವಚ್ಛ ಭಾರತದಂತೆ ನೀರು ಸಂರಕ್ಷಣೆಯ ಅಭಿಯಾನವನ್ನೂ ಜನರು ಯಶಸ್ಸುಗೊಳಿಸಬೇಕು ಎಂದು ಕರೆ ನೀಡಿದ ಅವರು, “ಸ್ವಚ್ಛ ಭಾರತದಂತೆ ನೀರು ಸಂರಕ್ಷಣೆಯ ಅಭಿಯಾನವನ್ನೂ ಜನ ಆಂದೋಲನವಾಗಿಸುವ ಬನ್ನಿ” ಎಂದಿದ್ದಾರೆ.
ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ #JanShakti4JalShakti ಹ್ಯಾಶ್ಟ್ಯಾಗ್ ಬಳಸಿ ನೀರಿನ ಸಂರಕ್ಷಣೆಯ ಮಾಹಿತಿ ಮತ್ತು ಆ ನಿಟ್ಟಿನಲ್ಲಿ ನಡೆಸಲಾದ ಕಾರ್ಯಗಳನ್ನು ಹಂಚಿಕೊಳ್ಳುವಂತೆ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ. ಪ್ರತಿ ಹನಿ ನೀರನ್ನೂ ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಮತ್ತೆ ಅಧಿಕಾರ ಬಂದ ಮೋದಿಯವರು ನಡೆಸಿಕೊಟ್ಟ ಮೊದಲ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆಯು ಒಂದು ದೊಡ್ಡ ಭಾಗವಾಗಿತ್ತು.
ಬೃಹತ್ ಸಾರ್ವಜನಿಕ ಭಾಗವಹಿಸುವಿಕೆಯನ್ನು ಕಂಡ ಸ್ವಚ್ಛ ಭಾರತ್ ಅಭಿಯಾನವು ಸಾಮೂಹಿಕ ಮನೋಭಾವವನ್ನು ಜಾಗೃತಗೊಳಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ, ಈ ಅಭಿಯಾನದ ಮೂಲಕ ಸಾಮಾನ್ಯ ಜನರು ಸ್ವಚ್ಛ ಮತ್ತು ಸುಂದರ ಭಾರತವನ್ನು ನಿರ್ಮಾಣ ಮಾಡುವ ಗುರಿಯೊಂದಿಗೆ ಬೀದಿಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಇದೇ ಮಾದರಿಯಲ್ಲಿ, ಜಲಶಕ್ತಿ ಅಭಿಯಾನ ಕೂಡ ನೀರಿನ ಸಂರಕ್ಷಣೆಗಾಗಿ ಸಾರ್ವಜನಿಕರ ಸಹಭಾಗಿತ್ವವನ್ನು ಎದುರು ನೋಡುತ್ತಿದೆ. ಸಾರ್ವಜನಿಕರ ಮತ್ತು ಸರ್ಕಾರದ ಪ್ರಯತ್ನಗಳು ಒಂದುಗೂಡಿದರೆ ಭಾರತದ ನೀರಿನ ಭದ್ರತೆಯ ಮೇಲೆ ದೊಡ್ಡ ಮಟ್ಟದ ಧನಾತ್ಮಕ ಪ್ರಭಾವ ಬೀರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಮಳೆನೀರು ಕೊಯ್ಲು ವ್ಯವಸ್ಥೆಯ ಪ್ರಸ್ತುತ ಪರಿಸ್ಥಿತಿ ಮತ್ತು ಭಾರತದ ಅನೇಕ ಪ್ರದೇಶಗಳಲ್ಲಿನ ನೀರಿನ ಬಿಕ್ಕಟ್ಟಿನ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದಾರೆ, ಇಡೀ ವರ್ಷದಲ್ಲಿ ಕೇವಲ ಶೇ.8ರಷ್ಟು ಮಳೆ ನೀರನ್ನು ಮಾತ್ರ ನಮ್ಮ ದೇಶದಲ್ಲಿ ಕೊಯ್ಲು ಮಾಡಲಾಗುತ್ತದೆ ಎಂದಿದ್ದಾರೆ. ಮಳೆನೀರನ್ನು ಕೊಯ್ಲು ಮಾಡುವ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನವನ್ನು ನೀಡುವ ಸಲುವಾಗಿ, ಅಸ್ತಿತ್ವದಲ್ಲಿರುವ ನೀರಿನ ಸಂಪನ್ಮೂಲಗಳಿಗೆ ಮರುಜೀವ ನೀಡುವ ಉದ್ದೇಶದೊಂದಿಗೆ ಜಲಶಕ್ತಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಅಂತರ್ಜಲ ಮಂಡಳಿಯು 79,178 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ದೇಶಾದ್ಯಂತ 1.11 ಕೋಟಿ ಮಳೆನೀರು ಕೊಯ್ಲು ಮತ್ತು ಕೃತಕ ರೀಚಾರ್ಜ್ ರಚನೆಯನ್ನು ನಿರ್ಮಿಸುವ ಕಾರ್ಯವನ್ನು ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ದೇಶದಲ್ಲಿ ಸರಾಸರಿಗಿಂತ ಶೇ.38ರಷ್ಟು ಕಡಿಮೆ ಮಳೆಯಾಗಿದೆ.
ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಕೂಡ ಎಚ್ಚೆತ್ತುಕೊಂಡಾಗ ಮಾತ್ರ ನಮ್ಮ ದೇಶದ ಭವಿಷ್ಯ ಉಜ್ವಲವಾಗಲಿದೆ. ನೀರಿಲ್ಲದಿದ್ದರೆ ಭೂಮಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯಲಾರದು ಎಂಬ ಪ್ರಜ್ಞೆ ನಮಗಿರಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.