ಸಾಧಿಸುವ ಛಲವಿದ್ದರೆ ಯಾವ ನ್ಯೂನ್ಯತೆಯೂ ತೊಡಕಾಗುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆಯೊಂದಿದ್ದರೆ ಕೈಕಾಲು ಇಲ್ಲದೆಯೂ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟವರ ನಿದರ್ಶನ ನಮ್ಮ ಮುಂದೆ ಇದೆ. ಅಂತಹವರಲ್ಲಿ ಒಬ್ಬರು ಸಿಂಧನೂರ ತಾಲೂಕಿನ ಅರಳವಳ್ಳಿ ಗ್ರಾಮದ ಸಣ್ಣ ಮಾರೇಶ. ಒಂದು ಕೈ ಇಲ್ಲದಿದ್ದರೂ ಇವರು ವಿಕಲ ಚೇತನರ ಕ್ರಿಕೆಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಸಣ್ಣವರಿರುವಾಗ ಹಿಟ್ಟಿನ ಗಿರಣಿಯಲ್ಲಿ ಇವರು ಎಡಗೈಯನ್ನು ಕಳೆದುಕೊಂಡಿದ್ದಾರೆ. ಒಂಟಿ ಕೈಯಿದ್ದರೂ ವಿಚಲರಾಗದ ಇವರು ಏನಾದರೂ ಸಾಧನೆ ಮಾಡಲೇ ಬೇಕು ಎಂಬ ಛಲವನ್ನು ಮನಸ್ಸಿನಲ್ಲಿ ಬೆಳೆಸಿಕೊಂಡಿದ್ದರು. ಸಿಂಧನೂರು ತಾಲೂಕಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು, ಬಳಿಕ ಪದವಿ ಮಾಡುವ ವೇಳೆ ಇವರಿಗೆ ಈರಣ್ಣ ಎನ್ನುವ ಉಪನ್ಯಾಸಕರು ಗುರುವಾಗಿ ಸಿಕ್ಕರು. ಅವರ ಮಾರ್ಗದರ್ಶನದಲ್ಲಿ ಇವರು ಮೂಸೂರಿನಲ್ಲಿ ವಿಕಲಚೇತನರಿಗಾಗಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನ ಗಿಟ್ಟಿಸಿಕೊಂಡರು. ಅದರಲ್ಲೂ ಓಟದಲ್ಲಿ ಅವರು ಸಾಕಷ್ಟು ನಿಪುಣರಾಗಿದ್ದರು.
ಬಳಿಕ 2011ರಲ್ಲಿ ರಾಷ್ಟ್ರ ಮಟ್ಟದ ವಿಕಲಚೇತನರ ಕ್ರೀಡಾಕೂಟದಲ್ಲಿ ರಾಯಚೂರು ಜಿಲ್ಲೆಯನ್ನು ಪ್ರತಿನಿಧಿಸಿದ ಇವರು, 1100 ಓಟದಲ್ಲಿ ಮೊದಲ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದರು. ಓಟದ ಜೊತೆ ಕ್ರಿಕೆಟ್ ಅನ್ನೂ ಆಡುತ್ತಿದ್ದ ಇವರು 2013ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರ್ ರಾಜ್ಯ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾದರು, ಅಲ್ಲಿ ಒಂಟಿ ಕೈಯಲ್ಲೇ ಬ್ಯಾಟ್ ಹಿಡಿದು ತಮ್ಮ ಚಮತ್ಕಾರ ತೋರಿಸಿದರು.
ಬಳಿಕ ಕ್ರಿಕೆಟಿನಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಹತ್ತಿದ ಇವರು ವಿಕಲಚೇತನರ ವಿವಿಧ ಟೂರ್ನಿಗಳಲ್ಲಿ ಕರ್ನಾಟವನ್ನು ಪ್ರತಿನಿಧಿಸಿದರು. ಆಲ್ ರೌಂಡರ್ ಆಗಿ ತಂಡವನ್ನು ವಿಜಯದತ್ತ ಕೊಂಡೊಯ್ಯುತ್ತಿದ್ದರು. ಕರ್ನಾಟಕವನ್ನು ಇವರು ದೇಶದಲ್ಲಿ ಪ್ರತಿನಿಧಿಸಿದ್ದು ಮಾತ್ರವಲ್ಲ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಖ್ಯಾತಿಯನ್ನೂ ಇವರು ಪಡೆದುಕೊಂಡಿದ್ದಾರೆ.
ಇದೀಗ ಸಣ್ಣ ಮಾರೇಶ ಅವರು ನೇಪಾಳದ ಕಠ್ಮಂಡುವಿನಲ್ಲಿ ನಡೆಯುತ್ತಿರುವ ವಿಕಲಚೇತನ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾರತೀಯ ತಂಡದ ಆಲ್ ರೌಂಡರ್ ಆಗಿ ಭಾಗವಹಿಸುತ್ತಿದ್ದಾರೆ. ಜುಲೈ 12, 13 ಮತ್ತು 14 ರಂದು ಟೂರ್ನಿ ಜರುಗಲಿದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂಬ ಆತ್ಮವಿಶ್ವಾಸದೊಂದಿಗೆ ಮಾರೇಶ ಅವರು ಅಭ್ಯಾಸ ಮಾಡುತ್ತಿದ್ದಾರೆ.
ಪ್ರಸ್ತುತ ಸಣ್ಣ ಮಾರೇಶ ಅವರು ಮಂಗಳೂರಿನ ಎಂಆರ್ಪಿಎಲ್ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನೇಪಾಳದಲ್ಲಿ ಕ್ರಿಕೆಟ್ ಆಡಲು ಹೋಗುವ ಇವರಿಗೆ ಹುಟ್ಟೂರು ಮತ್ತು ಕಾರ್ಯನಿರ್ವಹಿಸುತ್ತಿರುವ ಊರಿನ ಪ್ರೋತ್ಸಾಹಗಳು ಅವರಿಗೆ ಸಿಕ್ಕಿದೆ.
ತನಗೆ ಕೈಯಿಲ್ಲ, ಕಾಲು ಇಲ್ಲ ಎಂದು ಕೊರಗುವವರ ನಡುವೆ, ದೈಹಿಕವಾಗಿ ಸದೃಢರಾಗಿದ್ದರೂ ಭಿಕ್ಷಾಟನೆ ಮಾಡುವ, ಸರ್ಕಾರದ ಸವಲತ್ತುಗಳಿಗೆ ಕಾಯುವ ಮಂದಿಯ ನಡುವೆ ಸಣ್ಣ ಮಾರೇಶ ಅವರಂತಹವರು ಭಿನ್ನವಾಗಿ ನಿಲ್ಲುತ್ತಾರೆ. ಒಂದು ಕೈ ಇಲ್ಲದಿದ್ದರೂ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡುವ, ಬಾಲ್ ಹಿಡಿದು ಬೌಲಿಂಗ್ ಮಾಡುವ ಇವರ ಕಾರ್ಯ ನಾಗರಿಕ ಸಮಾಜದ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇದೇ ರೀತಿ ಭವಿಷ್ಯದಲ್ಲೂ ಅವರು ದೇಶಕ್ಕೆ ಕೀರ್ತಿಯನ್ನು ತರಲು, ಸಾಧನೆಯ ಉತ್ತುಂಗಕ್ಕೆ ಏರಿಲಿ ಎಂದು ನಾವು ಆಶಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.