ಹಲಸಿನ ಹಣ್ಣೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಸಿಹಿಯಾದ ಹಲಸಿನ ಹಣ್ಣನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಿಂದ ಬಗೆಬಗೆಯ ಸ್ವಾದಿಷ್ಟ ಖಾದ್ಯ ಮಾಡಿಕೊಂಡು ಸವಿಯುತ್ತಾರೆ. ಋತುಮಾನದಲ್ಲಿ ಸಾಮಾನ್ಯವಾಗಿ ಸಿಗುವ ಹಲಸಿನ ಹಣ್ಣು ಈಗ ಆದಾಯದ ಮೂಲವಾಗಿಯೂ ಪರಿವರ್ತನೆಗೊಂಡಿದೆ. ತುಮಕೂರು ಜಿಲ್ಲೆಯ ಹಿರೇಹಳ್ಳಿಯ ಪರಮೇಶ ಮತ್ತು ಅವರ ಕುಟುಂಬ ಇಂದು ಹಲಸಿನ ಹಣ್ಣಿನಿಂದಲೇ ಲಕ್ಷಾಂತರ ಆದಾಯವನ್ನು ಗಳಿಸುತ್ತಿದೆ.
2017ರ ವರೆಗೆ ಈ ಕುಟುಂಬಕ್ಕೆ ತಮ್ಮ ಮರದಲ್ಲಿ ಬೆಳೆಯುವ ತಾಮ್ರದ ಬಣ್ಣದ ಹಲಸಿನ ಹಣ್ಣಿನ ಮಹತ್ವವೇ ತಿಳಿದಿರಲಿಲ್ಲ. ಪರಮೇಶ ಅವರ ತಂದೆ ಸಿದ್ದಪ್ಪ 35 ವರ್ಷಗಳ ಹಿಂದೆ ವಿಭಿನ್ನ ಹಲಸನ್ನು ನೀಡುವ ಬೀಜವನ್ನು ತಂದು ಹಾಕಿದ್ದರು, ಇಂದು ಅದು ಹೆಮ್ಮರವಾಗಿ ಬೆಳೆದು ಭಾರೀ ಬೇಡಿಕೆಯನ್ನು ಸೃಷ್ಟಿಸಿದೆ. ಈ ಹಲಸಿಗೆ ಸಿದ್ದಪ್ಪ ಅವರ ಗೌರವಾರ್ಥ ‘ಸಿದ್ದು’ ಎಂದು ಹೆಸರಿಡಲಾಗಿದೆ.
2017 ರಲ್ಲಿ ಖ್ಯಾತ ಹೆಸರಘಟ್ಟ ಮೇಳದಲ್ಲಿ ಈ ತಾಮ್ರದ ಬಣ್ಣದ ‘ಸಿದ್ದು’ ಹಲಸಿನ ಹಣ್ಣು ಏಕಾಏಕಿ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಈ ಮೇಳದಲ್ಲಿ ಹಲವಾರು ಮಂದಿ ರೈತರು ಹಲಸು, ಮಾವಿನ ಹಣ್ಣು ಇತ್ಯಾದಿಗಳನ್ನು ತಂದು ಪ್ರದರ್ಶಿಸಿದ್ದರು. ಆದರೆ ಪರಮೇಶ ಅವರ ಮನೆಯ ಹಲಸು ಎಲ್ಲರ ಕೇಂದ್ರ ಬಿಂದುವಾಗಿತ್ತು
ಮೇಳದಲ್ಲಿ ಪ್ರದರ್ಶಿಸಲಾಗಿದ್ದ 170 ಬಗೆಯ ಹಲಸುಗಳ ಪೈಕಿ, ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ ((IIHR) ಈ ವಿಭಿನ್ನ ಹಲಸಿನ ಮೇಲೆ ಗಮನವನ್ನು ಹರಿಸಿತು. ಅದರ ವಿಭಿನ್ನ ಬಣ್ಣ, ಗಾತ್ರ, ರುಚಿ ಎಲ್ಲವೂ ಅವರನ್ನು ಆಕರ್ಷಿಸಿತ್ತು. ಈ ವೈವಿಧ್ಯ ತಳಿಯ ಪಾಲಕ ಎಂದು ಪರಮೇಶ ಅವರನ್ನು ಅದು ನಾಮನಿರ್ದೇಶನಗೊಳಿಸಿತು ಮತ್ತು ಅವರೊಂದಿಗೆ ಡೀಲ್ ಕುದುರಿಸಿತು.
ಡೀಲ್ ಪ್ರಕಾರ, IIHR ಈ ವಿಶೇಷ ಹಣ್ಣಿನ ಸಸಿಗಳಿಂದ ಬಂದ ಶೇ. 25 ರಷ್ಟು ಆದಾಯವನ್ನು ಪರಮೇಶ್ ಅವರಿಗೆ ನೀಡುವುದಾಗಿ ಹೇಳಿತು. ಪ್ರತಿ ಸಸಿಯನ್ನೂ 150 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಪರಮೇಶ ಅವರು ಸಸಿಯನ್ನು ಬೆಳೆಸಿ IIHRಗೆ ನೀಡುತ್ತಾರೆ.
ಲ್ಯಾಬ್ ಪರೀಕ್ಷೆಯ ಪ್ರಕಾರ, ಈ ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ (100 ಗ್ರಾಂ ಹಲಸಿನ ಹಣ್ಣಿನಲ್ಲಿ 6.48 ಗ್ರಾಂ ವಿಟಮಿನ್) ಇದೆ ಎಂಬುದು ಸಾಬೀತಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾರೊಟಿನಾಯ್ಡ್ಸ್ ಮತ್ತು ಫ್ಲೇವನಾಯ್ಡ್ಸ್ ಇದೆ ಎಂಬುದು ಕೂಡ ತಿಳಿದು ಬಂದಿದೆ.
ಪರಮೇಶ ಅವರ ಕುಟುಂಬವು 25 ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ನರ್ಸರಿಯನ್ನು ಕೂಡ ಇವರು ಹೊಂದಿದ್ದಾರೆ.
ತಮ್ಮ ‘ಸಿದ್ದು’ ಹಲಸಿನ ಹಣ್ಣಿನ ಬಗ್ಗೆ ಮಾತನಾಡಿರುವ ಪರಮೇಶ ಅವರು, “2017ರವರೆಗೂ ಈ ಹಲಸನ್ನು ನಾವು ಸ್ನೇಹಿತರು ಮತ್ತು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡುತ್ತಿದ್ದೆವು. ನಮ್ಮ ಜಾಗದಲ್ಲಿ ಬೆಳೆಯುವ ಈ ಹಲಸು ಅತ್ಯಂತ ವಿಭಿನ್ನ ಎಂಬುದು ನಮಗೆ ತಿಳಿದಿತ್ತು, ಆದರೆ ಅದು ಇಷ್ಟೊಂದು ಮೌಲ್ಯಯುತವಾದುದು ಎಂದು ಗೊತ್ತಿರಲಿಲ್ಲ” ಎಂದಿದ್ದಾರೆ.
ಪಿರಮಿಡ್ ಆಕಾರದ ಹಣ್ಣನ್ನು ಸಣ್ಣ ಗಾತ್ರದ ಹಣ್ಣುಗಳ (2-5 ಕಿಲೋ) ಅಡಿಯಲ್ಲಿ ವರ್ಗೀಕರಿಸಲಾಗಿದೆ, ಮತ್ತು ಪ್ರತಿ ಮರವು 1,098 ಕಿಲೋ ವರೆಗೆ ಇಳುವರಿ ನೀಡುತ್ತದೆ. ಪ್ರತಿ ಹಣ್ಣಿನಲ್ಲಿ 25-30 ತೊಳೆಗಳು ಇರುವುದರಿಂದ ಹಣ್ಣಿನ ಸೇವನೆಯು ನಾಲ್ಕು ಸದಸ್ಯರ ಕುಟುಂಬಕ್ಕೆ ಸೂಕ್ತವಾಗಿದೆ. ಸಾಮಾನ್ಯವಾಗಿ ಹಳದಿ ಮತ್ತು ಬಿಳಿ ಬಣ್ಣದ ತೊಳೆಗಳನ್ನು ಹೊಂದಿರುವ ಹಲಸಿಗೆ ಹೋಲಿಸಿದರೆ ತಾಮ್ರದ ಬಣ್ಣದ ಇದರ ತೊಳೆಗಳು ಹೆಚ್ಚು ಗರಿಗರಿಯಾಗಿ ಮತ್ತು ಸಿಹಿಯಾಗಿರುತ್ತವೆ.
ಈ ಹಲಸು ಪರಮೇಶ ಕುಟುಂಬದ ಅದೃಷ್ಟವನ್ನೇ ಬದಲಾಯಿಸಿದ್ದು, ಭಾರೀ ಆದಾಯವನ್ನು ತಂದು ಕೊಡುತ್ತಿದೆ. ಹಲಸಿನ ಮರಗಳಿರುವ ಸ್ಥಳಗಳನ್ನು ಪರಮೇಶ ಅವರು ಬೇಲಿ ಮತ್ತು ಸಿಸಿ ಕ್ಯಾಮೆರಾ ಹಾಕಿ ಸಂರಕ್ಷಿಸಿದ್ದಾರೆ. ಪ್ರತಿ ಮರವು ವರ್ಷಕ್ಕೆ 400 ಹಣ್ಣುಗಳು ಬೆಳೆಯುತ್ತದೆ ಆದರೆ ಈ ವರ್ಷ ಫಸಲು ಕಡಿಮೆಯಾಗಿದೆ. ಗಿಡಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಗಿಡಗಳನ್ನು ನೆಡುವ ಸಲುವಾಗಿ ಅವರಿಗೆ ಹಲಸಿನ ಮರಗಳ ಗೆಲ್ಲುಗಳನ್ನು ಕಡಿಯುವುದು ಅನಿವಾರ್ಯವಾಗಿದೆ. ಇದು ಕೂಡ ಕಡಿಮೆ ಫಸಲಿಗೆ ಕಾರಣವಾಗುತ್ತದೆ.
ಈ ವರ್ಷ 20 ಸಾವಿರ ಗಿಡಗಳಿಗೆ ಆರ್ಡರ್ ಬಂದಿದೆ, ಈ ಮೂಲಕ ಒಟ್ಟು ಬೇಡಿಕೆ 1 ಲಕ್ಷಕ್ಕೇರಿದೆ. ಆದರೆ ವರ್ಷಕ್ಕೆ 10 ಸಾವಿರ ಗಿಡ ಪೂರೈಸಲು ಮಾತ್ರ ಅವರಿಗೆ ಸಾಧ್ಯವಾಗುತ್ತಿದೆ. ಪರಮೇಶ ಅವರ ಇಡೀ ಕುಟುಂಬವೇ ಗಿಡ ಬೆಳೆಯುವ ಕಾರ್ಯದಲ್ಲಿ ನಿರತವಾಗಿದೆ.
9902794969 ನಂಬರಿನ ಮೂಲಕ ಪರಮೇಶ್ವರ ಅವರನ್ನು ಸಂಪರ್ಕಿಸಿ ಗಿಡಕ್ಕೆ ಆರ್ಡರ್ ನೀಡಬಹುದಾಗಿದೆ. ಸೆಪ್ಟಂಬರ್ ಅಂತ್ಯದ ಬಳಿಕ ಅವರು ಆರ್ಡರ್ ಸ್ವೀಕರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.