ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿರುವುದು ನಿಜ. ಆದರೆ ಡ್ರಾಪ್ಸ್ ಹಾಕಿಕೊಳ್ಳದ ಮಕ್ಕಳಲ್ಲಿ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪೋಲಿಯೋ ಅಭಿಯಾನವನ್ನು ನಿತ್ಯ ನಿರಂತರವಾಗಿಡಬೇಕಾದುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಕರು ಅಚ್ಚುಕಟ್ಟಾಗಿ ನಿಭಾಯಿಸತ್ತಾ ಬರುತ್ತಿದ್ದಾರೆ. ಅಂತಹವರಲ್ಲಿ ಒಬ್ಬರು ರೋಟರಿ ಕ್ಲಬ್ ಸದಸ್ಯ ಸತೀಶ್ ಕುಮಾರ್. ಪೋಲಿಯೋ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅವರು ಚೆನ್ನೈನಿಂದ ಭೂತಾನಿನ ಥಿಂಪುವಿಗೆ ಸೈಕಲ್ ಪರ್ಯಟನೆ ನಡೆಸಿದ್ದಾರೆ. ದಾರಿಯುದ್ದಕ್ಕೂ ಅವರು ಜನರಿಗೆ ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.
ಐಟಿ ವೃತ್ತಿಪರನಾಗಿರುವ 28 ವರ್ಷದ ಸತೀಶ್ ಚೆನ್ನೈನವರಾಗಿದ್ದಾರೆ, ನಾಲ್ಕು ವರ್ಷಗಳ ಕಾಲ ಐಟಿ ಸಂಸ್ಥೆಯಲ್ಲಿ ದುಡಿದು ಈಗ ಸೈಕಲ್ ಪರ್ಯಟನೆಯನ್ನು ಜೀವನವನ್ನಾಗಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ಅವರು, #FearTheRoutine ಎಂಬ ಟ್ಯಾಗ್ಲೈನ್ ಮೂಲಕ ಚೆನ್ನೈನಿಂದ ದೆಹಲಿಗೆ ಸೈಕಲ್ ಪರ್ಯಟನೆ ನಡೆಸಿ, ನಿತ್ಯ 8 ಗಂಟೆಗಳ ಕಾಲ ದುಡಿಯುವವರು ತಮ್ಮ ಪ್ಯಾಷನ್ ಅನ್ನು ಮುಂದುವರೆಸಬೇಕು ಅದನ್ನು ಬಿಟ್ಟು ಬಿಡಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ. ತಾನು ಕಲಿತ ಶಾಲೆಗೆ ತೆರಳಿ ಅಲ್ಲಿ ಪ್ರೇರಣಾ ಭಾಷಣವನ್ನು ಮಾಡಿದ ಹೆಮ್ಮೆಯೂ ಇವರಿಗಿದೆ.
ರೋಟರಿ ಕ್ಲಬಿನ ಸಕ್ರಿಯ ಸದಸ್ಯನಾಗಿರುವ ಸತೀಶ್ ಅದರ ಸಹಕಾರದೊಂದಿಗೆ ಚೆನ್ನೈನಿಂದ ಥಿಂಪುವಿಗೆ ಪೋಲಿಯೋ ಜಾಗೃತಿ ಮೂಡಿಸಲು ಸೈಕಲ್ ಪರ್ಯಟನೆಯನ್ನು ನಡೆಸಿದ್ದಾರೆ. ಇವರ ಪರ್ಯಟನೆಗೆ ರೋಟರಿ ಕ್ಲಬ್ ದೇಣಿಗೆ ಮೂಲಕ ಹಣ ಸಂಗ್ರಹ ಮಾಡಿದೆ.
ಮೇ ತಿಂಗಳಲ್ಲಿ ಸತೀಶ್ ಅವರು ತಮ್ಮ ಪರ್ಯಟನೆಯನ್ನು ಸಂಪೂರ್ಣಗೊಳಿಸಿದ್ದಾರೆ. 3232 ಕಿಮೀ ಪ್ರಯಾಣವನ್ನು 45 ದಿನಗಳಲ್ಲಿ ಮುಕ್ತಾಯಗೊಳಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮಬಂಗಾಳ, ಬಿಹಾರ ಮತ್ತು ಭೂತಾನಿಗೆ ಅವರು ಸೈಕಲ್ ಮೂಲಕ ಪ್ರಯಾಣಿಸಿ ಪೋಲಿಯೋ ಜಾಗೃತಿ ಮೂಡಿಸಿದ್ದಾರೆ. ದಾರಿಯುದ್ದಕ್ಕೂ ಅವರು 33 ರೋಟರಿ ಕ್ಲಬ್ ಸದಸ್ಯರನ್ನು ಭೇಟಿಯಾಗಿದ್ದಾರೆ, 10 ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಸಾಮಾನ್ಯ ಜನರೊಂದಿಗೆ ಮಾತನಾಡಿ ಪೋಲಿಯೋ ಲಸಿಕೆಯ ಬಗ್ಗೆ ಅವರಿಗೆ ತಿಳಿಸಿಕೊಟ್ಟಿದ್ದಾರೆ.
“ಪೋಲಿಯೋ ಮನುಷ್ಯನನ್ನು ಪ್ಯಾರಲೈಝ್ ಮಾಡುತ್ತದೆ. 25 ವರ್ಷಗಳ ಹಿಂದೆ ನನಗೆ ಪೋಲಿಯೋ ಲಸಿಕೆ ಹಾಕಿದ ಪರಿಣಾಮ ಇಂದು ನಾನು ಆರೋಗ್ಯವಾಗಿದ್ದೇನೆ, ಕನಸನ್ನು ಬೆನ್ನತ್ತಿ ಹೋಗುತ್ತಿದ್ದೇವೆ. ಹೀಗಾಗಿ ಎಲ್ಲರೂ ಪೋಲಿಯೋ ಲಸಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಮತ್ತು ಪೋಲಿಯೋವನ್ನು ಜಗತ್ತಿನಿಂದಲೇ ನಿರ್ಮೂಲನೆ ಮಾಡಬೇಕು” ಎಂದು ಸತೀಶ್ ಹೇಳುತ್ತಾರೆ.
ಸತೀಶ್ ಅವರ ಪಯಣದುದ್ದಕ್ಕೂ ಅವರಿಗೆ ಜನರಿಂದ ಅಭೂತಪೂರ್ವವಾದ ಜನ ಬೆಂಬಲ ಸಿಕ್ಕಿದೆ. ಅದರಲ್ಲೂ ರೋಟರಿ ಕ್ಲಬ್ ಸದಸ್ಯರು ಇವರಿಗೆ ಸಾಕಷ್ಟು ನೆರವು ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ. ಬಿಸಲ ಧಗೆಯಲ್ಲಿ ಜನ ನೀರು ಕೊಟ್ಟಿದ್ದನ್ನು, ಸೈಕಲ್ ರಿಪೇರಿ ಮಾಡಿಕೊಟ್ಟದ್ದನ್ನು ಅವರು ಅತ್ಯಂತ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.
ಚೆನ್ನೈ ಟು ಭೂತಾನ್ ಸೈಕಲ್ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸತೀಶ್ ಅವರಿಗೆ, ಭಾರತದಿಂದ ಯುರೋಪ್, ಅಮೆರಿಕಾ ಖಂಡದವರೆಗೆ ಸೈಕಲ್ ಯಾತ್ರೆ ಮಾಡಬೇಕು ಎಂಬ ಗುರಿ ಇದೆ. ಕ್ಯಾನ್ಸರ್ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವುದು ಮತ್ತು ಕ್ಯಾನ್ಸರ್ ರೋಗಿಗಳಿಗೆ ಹಣ ಸಂಗ್ರಹ ಮಾಡುವುದು ಅವರ ಉದ್ದೇಶವಾಗಿದೆ. “ಕ್ಯಾನ್ಸರ್ 3 ಅಥವಾ ನಾಲ್ಕನೇ ಹಂತಕ್ಕೆ ಹೋಗುವಾಗಲೇ ಬಹುತೇಕರಿಗೆ ತಮಗೆ ಕ್ಯಾನ್ಸರ್ ಇದೆ ಎಂಬ ಅರಿವಾಗುತ್ತದೆ. ಆದರೆ ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಬಂದಿದೆ ಎಂಬುದನ್ನು ಅರಿತುಕೊಂಡರೆ ಗುಣಮುಖರಾಗುವುದು ಸಾಧ್ಯವಿದೆ” ಎಂದು ಸತೀಶ್ ಹೇಳುತ್ತಾರೆ.
ಐಟಿ ಕಂಪನಿಯ ವೃತ್ತಿ ಬಿಟ್ಟು ಸೈಕಲ್ ಅನ್ನೇ ಜೀವನವನ್ನಾಗಿಸಿಕೊಂಡಿರುವ ಸತೀಶ್ ಅವರು, ತಮ್ಮ ಕುಟುಂಬವನ್ನು ಪೋಷಣೆ ಮಾಡುವ ಸಲುವಾಗಿ ಫ್ರೀಲ್ಯಾನ್ಸ್ ಡಿಜಿಟಲ್ ಮಾರ್ಕೆಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರಾವೆಲ್ ಇಂಡಸ್ಟ್ರೀಯಲ್ಲೇ ಪೂರ್ಣ ಪ್ರಮಾಣದ ವೃತ್ತಿಯನ್ನು ಮಾಡುವ ಆಶಯವೂ ಅವರಿಗಿದೆ.
ವಿಶ್ವದಲ್ಲಿ ಬಹಳಷ್ಟು ಸಕಾರಾತ್ಮಕತೆ ಇದೆ. ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ ಮುಂದೆ ಸಮಯ ಕಳೆಯುವುದನ್ನು ಕಡಿಮೆ ಮಾಡಿ, ಮನುಷ್ಯರೊಂದಿಗೆ ಸಂವಾದವನ್ನು ಹೆಚ್ಚು ಮಾಡಿ. ನಮ್ಮ ಬದುಕು ಮತ್ತು ಸಮಾಜ ಪ್ರೀತಿಯನ್ನು ಅವಲಂಬಿಸಿದೆ, ಜನರೊಂದಿಗೆ ಸಂವಾದ ನಡೆಸುವುದನ್ನು ಮತ್ತು ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುವುದನ್ನು ನಾವು ಉತ್ತೇಜಿಸಬೇಕು ಎಂಬ ಸಂದೇಶವನ್ನು ಸತೀಶ್ ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.