ನಾವು ಓದಿ ಮುಗಿಸಿದ ಹಳೆ ಪುಸ್ತಕಗಳು, ನಿಯತಕಾಲಿಕೆಗಳು ಮನೆಯ ಮೂಲೆಯಲ್ಲಿ ಧೂಳು ಹಿಡಿದು ಕೂತಿರುತ್ತವೆ. ಒಂದು ಸಮಯದಲ್ಲಿ ನಮ್ಮ ಜ್ಞಾನ ಉದ್ದೀಪನ ಮಾಡಿದ್ದ, ಶಾಲಾ ಪರೀಕ್ಷೆಗೆಂದು, ಅತೀ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗೆಂದು ರಾತ್ರಿ ಹಗಲೆನ್ನದೆ ಕುಳಿತು ಓದಿದ್ದ ಪುಸ್ತಕಗಳನ್ನು ತ್ಯಾಜ್ಯಕ್ಕೆ ಎಸೆಯುವುದು ಸಮಂಜಸವಾದ ಕಾರ್ಯವಲ್ಲ. ಹಾಗಂತ ಈ ಪುಸ್ತಕಗಳನ್ನು ನಮ್ಮ ಜೊತೆಗೇ ಇರಿಸಿಕೊಳ್ಳಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿ ಜಾಗ ಕಡಿಮೆ ಇದೆ, ಮನೆಯಲ್ಲಿಟ್ಟರೆ ಗೆದ್ದಲು ತಿನ್ನಬಹುದು ಇತ್ಯಾದಿ ಸವಾಲುಗಳ ನಡುವೆ ಪುಸ್ತಕವನ್ನು ಸುದೀರ್ಘ ಕಾಲ ಜೋಪಾನವಾಗಿಟ್ಟುಕೊಳ್ಳುವುದು ದೊಡ್ಡ ಸವಾಲು ಎನಿಸಿಕೊಳ್ಳುತ್ತದೆ.
ಹಾಗಾದರೆ ಈ ಪುಸ್ತಕಗಳನ್ನು ಸಂರಕ್ಷಿಸುವ ಹಾಗೂ ಸದ್ಭಳಕೆ, ಮರು ಬಳಕೆ ಮಾಡಿಕೊಳ್ಳುವ ಬಗೆ ಹೇಗೆ? ಹೇಗೆಂದರೆ – ದಾನ ಮಾಡುವುದು.
ಕಳೆದ ವರ್ಷ ದೆಹಲಿ ಮೂಲದ ಸ್ನೇಹಿತರಾದ ತರನ್ ಪ್ರೀತ್ ಸಿಂಗ್ ಮತ್ತು ಅಂಶುಲ್ ಮೋಹನ್ ಅವರು ಒಂದೇ ನಗರದ ಪುಸ್ತಕ ಪಡೆಯಲು ಬಯಸುವವರನ್ನು ಮತ್ತು ಪುಸ್ತಕವನ್ನು ದಾನ ಅಥವಾ ಮಾರಾಟ ಮಾಡಲು ಬಯಸುವವರನ್ನು ಒಂದೇ ವೇದಿಕೆಯಡಿ ತರಲು ನಿರ್ಧರಿಸಿ ಬುಕ್ ಮಂಡೀ ಅನ್ನು ಸ್ಥಾಪನೆ ಮಾಡಿದರು.
ಪುಸ್ತಕ ನೀಡಲು ಅಥವಾ ಪಡೆಯಲು ಬಯಸುವವರು ಇಲ್ಲಿ ಮಾಡಬೇಕಾದ ಕಾರ್ಯವೇನೆಂದರೆ, ಮೊದಲು ರಿಜಿಸ್ಟರ್ ಆಗುವುದು, ಅಕೌಂಟ್ ಕ್ರಿಯೇಟ್ ಮಾಡುವುದು ಮತ್ತು ವೆಬ್ಸೈಟ್ನಲ್ಲಿ ಜಾಹೀರಾತು ಹಾಕುವುದು, ದರವನ್ನು ನಮೂದಿಸುವುದು.
ಈ ಬುಕ್ ಮಂಡಿಗೆ ಈ ಸ್ನೇಹಿತರು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಸ್ಪಂದನೆ ದೊರೆತಿದೆ, ಇದು ದೇಶದಾದ್ಯಂತದ ಪುಸ್ತಕ ಪ್ರೇಮಿಗಳು ತಲುಪಿ ದೊಡ್ಡ ಸಾಧನೆಯನ್ನೇ ಮಾಡಿದೆ.
ಪುಸ್ತಕವನ್ನು ದಾನ ಮಾಡುವಂತಹ ಅಥವಾ ಖರೀದಿ ಮಾಡುವಂತಹ ಹಲವಾರು ಪೋರ್ಟಲ್ಗಳು ಈಗ ದೇಶದಲ್ಲಿ ಇರಬಹುದು, ಆದರೆ ಈ ಪೋರ್ಟಲ್ ಶೂನ್ಯ ದರದಲ್ಲೂ ಪುಸ್ತಕವನ್ನು ಮಾರಾಟ ಮಾಡುವ ಅರ್ಥಾತ್ ದಾನ ಮಾಡುವ ಆಯ್ಕೆಯನ್ನು ಇದು ನೀಡುತ್ತದೆ.
ಬುಕ್ ಮಂಡಿ ಪೋರ್ಟಲ್ ಅನ್ನು ಹೊರತುಪಡಿಸಿ ದೇಶದಲ್ಲಿ ಪುಸ್ತಕವನ್ನು ದಾನ ಮಾಡಲು ಪ್ರೇರೇಪಿಸುವಂತಹ ಐದು ವಿಭಿನ್ನ ಕಾರ್ಯಕ್ರಮಗಳ ಪುಟ್ಟ ವಿವರ ಇಲ್ಲಿದೆ.
1. ಸಿಸ್ಟರ್ಸ್ ಆಫ್ ದಿ ಪೀಪಲ್, ದೆಹಲಿ
ದೆಹಲಿಯ ಲಾಜಪತ್ ಭವನ್ ಮೂಲೆಯಲ್ಲಿ ಇರುವ ಪುಸ್ತಕ ಅಂಗಡಿಯೇ ‘ಸಿಸ್ಟರ್ಸ್ ಆಫ್ ದಿ ಪೀಪಲ್’. ಇಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕವನ್ನು ಸಂಗ್ರಹ ಮಾಡಲಾಗುತ್ತದೆ. ಪುಸ್ತಕಗಳನ್ನು ಅರ್ಧ ಬೆಲೆಗೆ, ಕೆಲವು ಪುಸ್ತಕಗಳನ್ನು ರೂ.10ಕ್ಕೂ ಮಾರಾಟ ಮಾಡಲಾಗುತ್ತದೆ. ಉತ್ತಮ ಸ್ಥಿತಿಯಲ್ಲಿ ಇಲ್ಲದ ಪುಸ್ತಕಗಳೂ ಇಲ್ಲಿ ಪ್ರೀತಿ, ಗೌರವವನ್ನು ಪಡೆಯುತ್ತದೆ. ಯಾರೂ ಬೇಕಾದರೂ ಇಲ್ಲಿ ಹಳೆಯ ಪುಸ್ತಕವನ್ನು ದಾನವಾಗಿ ನೀಡಬಹುದು. ಈ ಶಾಪ್ನೊಂದಿಗೆ ಸಂಪರ್ಕ ಸಾಧಿಸಲು ಇನ್ಸ್ಟಾಗ್ರಾಂ ಬಳಸಬಹುದು. ಯಾವುದಾದರೂ ನಿರ್ದಿಷ್ಟ ಪುಸ್ತಕದ ಅವಶ್ಯಕತೆ ಇದ್ದರೆ +91 93123 88882. ನಂಬರಿಗೆ ವಾಟ್ಸಾಪ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
2. ಬುಕಥಾನ್, ತಿರುವನಂತಪುರಂ
ಟೆಕ್ನೋಪಾರ್ಕ್ನಲ್ಲಿ ಕಾರ್ಯಾಚರಿಸುವ ಎರಡು ಚಾರಿಟೇಬಲ್ ಟ್ರಸ್ಟ್ಗಳಾದ ತೇಜಸ್ ಮತ್ತು HANDS ಜಂಟಿಯಾಗಿ ಆರಂಭಿಸಿದ ಕಾರ್ಯಕ್ರಮವೇ ಬುಕಥಾನ್. ಇದು ಹಳೆಯ ಪುಸ್ತಕವನ್ನು ಸಂಗ್ರಹಿಸುತ್ತದೆ ಮತ್ತು ಕೇರಳ ರಾಜಧಾನಿಯ ಅನಾಥಾಶ್ರಮಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಾಣ ಮಾಡುತ್ತದೆ. ಯಾರಾದರೂ ಬಂದು ಪುಸ್ತಕ ದಾನ ಮಾಡಿ ಎಂದು ಆಹ್ವಾನ ನೀಡುವ ಈ ಸಂಸ್ಥೆ, 50 ಸಾವಿರ ಪುಸ್ತಕ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದರಿಂದ ಅದು ತಿರುವನಂಪತಪುರಂನಲ್ಲಿ 120 ಗ್ರಂಥಾಲಯ ಸ್ಥಾಪನೆ ಮಾಡಲಿದೆ. ಮ್ಯಾಗಜೀನ್, ಮಕ್ಕಳ ಪುಸ್ತಕ, ಕಾದಂಬರಿ ಯಾವುದನ್ನು ಬೇಕಾದರೂ ಇಲ್ಲಿ ನೀಡಬಹುದು.
3. #10000 ಬುಕ್ಸ್
ಶಾಲಾ ಪುಸ್ತಕ, ಕಾಲೇಜು ಪುಸ್ತಕ, ಕಥೆ ಪುಸ್ತಕ, ಬೋರ್ಡ್ ಗೇಮ್ಸ್ ಮತ್ತು ನೈರ್ಮಲ್ಯ-ಹೀಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪುಸ್ತಕವನ್ನು ಇಲ್ಲಿ ದಾನ ಮಾಡಬಹುದು. #10000 ಬುಕ್ ಟೀಮ್, ವೈಯಕ್ತಿಕವಾಗಿ ಮನೆಗೆ ಬಂದು ಪುಸ್ತಕವನ್ನು ಸಂಗ್ರಹಿಸಿಕೊಂಡು ಹೋಗುತ್ತದೆ. ಇದಕ್ಕಾಗಿ ಒಬ್ಬರು ಮಾಡಬೇಕಾದುದು ಏನೆಂದರೆ ಫಾರ್ಮ್ ಭರ್ತಿ ಮಾಡುವುದು. ಇಲ್ಲಿ ದಾನ ಮಾಡುವ ಪುಸ್ತಕ ಬಡವರ್ಗದ ನೂರಾರು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ಕ್ಲಿಕ್ಕಿಸಿ.
4. ಮೈ ಪುಸ್ತಕ್, ಕೋಲ್ಕತ್ತಾ
ಇದೊಂದು ಸ್ಟಾರ್ಟ್ ಅಪ್ ಆಗಿದ್ದು, ಇಲ್ಲಿ ಯಾರಾದರೂ ಪರೀಕ್ಷಾ ಸಂಬಂಧಿತ ಪುಸ್ತಕ, ಕಥೆ ಪುಸ್ತಕಗಳನ್ನು ಒದಗಿಸಬಹುದು. ಈ ಪುಸ್ತಕಗಳನ್ನು ಅವರು ಕೇವಲ ಡೆಲಿವರಿ ದರ ಪಡೆದುಕೊಂಡು ಬೇಕಾದವರಿಗೆ ತಲುಪಿಸುತ್ತಾರೆ. ದುಬಾರಿ ಪುಸ್ತಕ ಕೊಂಡುಕೊಳ್ಳಲು ಹಣದ ಸಮಸ್ಯೆಯಿದೆ ಎಂಬ ಕಾರಣಕ್ಕೆ ಯಾರೂ ಓದುವಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂಬುದು ಇದರ ಉದ್ದೇಶವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕವನ್ನು ಡೀಲರ್ಗಳಿಗೆ ನೀಡುವ ಬದಲು ಇಲ್ಲಿ ನೀಡಬಹುದು. ಮನೆ ಬಾಗಿಲಿಗೆ ಇದನ್ನು ಬಂದು ತೆಗೆದುಕೊಂಡು ಹೋಗುತ್ತಾರೆ. ಬಳಿಕ ತಮ್ಮ ವೆಬ್ಸೈಟ್ ಬುಕ್ ಲಿಸ್ಟ್ನಲ್ಲಿ ಇದನ್ನು ಹಾಕುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ಕ್ಲಿಕ್ಕಿಸಿ.
5. ಇಂಡಿಯಾ ಲೆಟರೆಸಿ ಪ್ರಾಜೆಕ್ಟ್, ಬೆಂಗಳೂರು
ಭಾರತದಲ್ಲಿ ಶೇ. 100ರಷ್ಟು ಸಾಕ್ಷರತೆಯನ್ನು ಸಾಧಿಸುವ ಸಲುವಾಗಿ ಈ ಸಂಸ್ಥೆಯು ಕಾರ್ಯೋನ್ಮುಖಗೊಂಡಿದೆ. ಬೆಂಗಳೂರಿನಲ್ಲಿ ಬಡ ಜನರಿಗಾಗಿ ಗ್ರಂಥಾಲಯವನ್ನು ಸ್ಥಾಪನೆ ಮಾಡಿದೆ. ಸಾಕ್ಷರತೆ ಪ್ರಚಾರಪಡಿಸುವಿಕೆಯಿಂದ ಹಿಡಿದು ಜ್ಞಾನ ಹಂಚಿಕೆ ಕಾರ್ಯವನ್ನು ಎನ್ ಜಿಓಗಳ ಜೊತೆಗೂಡಿ ನಡೆಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ilpindia@gmail.com ಗೆ ಇ-ಮೇಲ್ ಮಾಡಬಹುದು, ಇಲ್ಲವಾದಲ್ಲಿ 080-23519693 ಕ್ಕೆ ದೂರವಾಣಿ ಮೂಲಕವೂ ಸಂರ್ಪಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ಕ್ಲಿಕ್ಕಿಸಿ.
ಈ ಮೇಲಿನ ಐದು ಸಂಸ್ಥೆಗಳು ನಮಗೆ ಪುಸ್ತಕದ ಮಹತ್ವ ಎಂತಹುದು ಎಂಬ ಬಗ್ಗೆ ಸಾರಿ ಹೇಳುತ್ತದೆ. ಹೀಗಾಗಿ, ಹಳೆಯ ಪುಸ್ತಕವನ್ನು ದಾನ ಮಾಡಬೇಕು ಅಥವಾ ಮಾರಾಟ ಮಾಡಬೇಕು ಎಂದು ಬಯಸುವವರು, ಪುಸ್ತಕವನ್ನು ಕಡಿಮೆ ದರಕ್ಕೆ ಪಡೆಯಲು ಬಯಸುವವರು ಈ ಮೇಲಿನ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.