2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು ಮಾತನಾಡುತ್ತಾ ಕೊನೆಗೆ ವಿಷಯವು ರಾಜಕೀಯ ಫಲಿತಾಂಶದ ಕಡೆಗೇ ಸಾಗುತ್ತಿದೆ. ಇವುಗಳ ನಡುವೆ ಬದಲಾದ ಕಾಲಘಟ್ಟ ಹಾಗೂ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಚುನಾವಣಾ ವಿದ್ಯಮಾನವು ಕ್ಷಣದಿಂದ ಕ್ಷಣಕ್ಕೆ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವ ಹೆಚ್ಚಾಗಿದೆ. 10 ವರುಷಗಳ ಹಿಂದೆ ಜನರು ಸುದ್ದಿ ಹಾಗೂ ಆಗುಹೋಗುಗಳ ಬಗ್ಗೆ ತಿಳಿಯಲು ಪ್ರಿಂಟ್ ಹಾಗೂ ದೃಶ್ಯ ಮಾಧ್ಯಮಗಳನ್ನೇ ಅವಲಂಬಿಸಿರುತ್ತಿದ್ದರು. ಹಾಗಾಗಿ ಈ ಮುಖ್ಯವಾಹಿನಿಯ ಮಾಧ್ಯಮಗಳು ಜನಾಭಿಪ್ರಾಯವನ್ನು ಮೂಡಿಸುವ ಮಾಧ್ಯಮಗಳಾಗಿದ್ದವು. ಮಾಧ್ಯಮದ ಮಾಲಕರು ಹಾಗೂ ನಿರೂಪಕರು ಯಾವ ಪಕ್ಷವನ್ನು ಅಥವಾ ಅಭ್ಯರ್ಥಿಯನ್ನು ಇಷ್ಟ ಪಡುತ್ತಾರೋ ಆ ಪಕ್ಷದ ಬಗೆಗೆ ಸಕಾರಾತ್ಮಕ ವರದಿಗಳನ್ನು ಹಾಗೂ ಸುದ್ದಿಗಳನ್ನು ಪ್ರಕಟಿಸುತ್ತಿದ್ದವು. ಇಷ್ಟವಾಗದ ಪಕ್ಷ ಅಥವಾ ಅಭ್ಯರ್ಥಿಗಳ ಬಗ್ಗೆ ನಕಾರಾತ್ಮಕವಾಗಿ ಬರೆಯುತ್ತಿದ್ದವು. ಇದನ್ನೇ ಓದುಗರು ಹಾಗೂ ವಾಹಿನಿಯ ವೀಕ್ಷಕರು ಪರಮ ಸತ್ಯವೆಂದು ತಿಳಿದು ತಮ್ಮ ಅಭಿಪ್ರಾಯಗಳನ್ನು ರೂಪಿಸಿಸಿಕೊಳ್ಳುತ್ತಿದ್ದರು.
ಆದರೆ ಈ ಡಿಜಿಟಲ್ ಕಾಲಾವಧಿಯಲ್ಲಿ ಜನರು ಮುಖ್ಯವಾಹಿನಿಯ ಮಾಧ್ಯಮಗಳ ಪ್ರಭಾವದಿಂದ ಹೊರಬಂದಿದ್ದಾರೆ. ಸುದ್ದಿ ಪತ್ರಿಕೆಯಲ್ಲಿ ಅಥವಾ ಟಿವಿ ಮಾಧ್ಯಮಗಳಲ್ಲಿ ಬಂದ ಪೂರ್ವಾಗ್ರಹ ಪೀಡಿತ ಸುದ್ದಿ , ವಿಶ್ಲೇಷಣೆ ಹಾಗೂ ವರದಿಗಳ ಸತ್ಯಾಸತ್ಯತೆಯನ್ನು ಕ್ಷಣಮಾತ್ರದಲ್ಲಿ ಒರೆಗೆ ಹಚ್ಚಿ ನೋಡುವ ಸಾಮಾಜಿಕ ಮಾಧ್ಯಮಗಳು ಮುಖ್ಯವಾಹಿನಿಯ ಮಾಧ್ಯಮಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿವೆ. ವಾಹಿನಿಯೊಂದರ ಸುದ್ದಿಯೊಂದು ಪ್ರಕಟವಾದೊಡನೆಯೇ ಅದಕ್ಕೆ ಪ್ರತಿಕ್ರಿಯೆಯನ್ನು ಸಾಕ್ಷಿ ಸಮೇತ ಸಾಮಾಜಿಕ ಮಾಧ್ಯಮದ ಮೂಲಕ ಕೊಡಲಾಗುತ್ತದೆ. ಹೀಗಾಗಿ ಈ ಡಿಜಿಟಲ್ ಯುಗದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಜನರ ಮೇಲೆ ತಮ್ಮ ರಾಜಕೀಯ ದೃಷ್ಟಿಕೋನಗಳನ್ನು ಹೇರಲು ಸಾಧ್ಯವಾಗುತ್ತಿಲ್ಲ.
ಪ್ರಸ್ತುತ ದೇಶದ 37 ಶೇಕಡಾ ಜನರು ಸ್ಮಾರ್ಟ್ ಫೋನ್ಗಳನ್ನು ಬಳಸುತ್ತಿದ್ದಾರೆ. 2022 ಕ್ಕೆ ಈ ಪ್ರಮಾಣ 60% ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಈಗ ಭಾರತದ 45 ಕೋಟಿ ಪ್ರಜೆಗಳು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಬಹುತೇಕ ಮಂದಿ ಇಂಟರ್ನೆಟ್ ಬಳಸುತ್ತಾರೆ ಹಾಗೂ ಒಂದಲ್ಲ ಒಂದು ರೀತಿಯ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಜಿಯೋ, ಏರ್ಟೆಲ್, ಐಡಿಯಾ-ವೊಡಾಫೋನ್ ಹಾಗೂ ಬಿ ಎಸ್ ಎನ್ ಎಲ್ ಗಳ ಒಟ್ಟು 34 ಕೋಟಿ ಚಂದಾದಾರರು 4 ಜಿ ಹಾಗೂ 3 ಜಿ ಇಂಟರ್ನೆಟ್ ಬಳಕೆದಾರರಾಗಿದ್ದಾರೆ. ಉಳಿದವರು ಬ್ರಾಡ್ ಬ್ಯಾಂಡ್ ಮೂಲಕ ಇಂಟರ್ನೆಟ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ. ಜಾಗತಿಕವಾಗಿ ಅತೀ ಹೆಚ್ಚು ವಾಟ್ಸಾಪ್ ಬಳಕೆದಾರರು ಇರುವುದು ಭಾರತದಲ್ಲೇ. 2017 ರಲ್ಲಿ 20 ಕೋಟಿ ವಾಟ್ಸಾಪ್ ಬಳಕೆದಾರರಿದ್ದು ಅದು 2018 ರಲ್ಲಿ 30 ಕೋಟಿಗೇರಿತು. 2019 ರಲ್ಲಿ ಆ ಸಂಖೆ 40 ಕೋಟಿಯ ಆಸುಪಾಸಿನಲ್ಲಿರಬಹುದೆಂದು ಅಂದಾಜಿಸಲಾಗಿದೆ. 10 ಕೋಟಿಗಿಂತಲೂ ಹೆಚ್ಚು ಭಾರತೀಯರು ಫೇಸ್ಬುಕ್ ಬಳಕೆದಾರರಾಗಿದ್ದಾರೆ. 3.4 ಕೋಟಿ ಭಾರತೀಯರು ಟ್ವೀಟರ್ನಲ್ಲಿ ಸಕ್ರಿಯರಾಗಿದ್ದಾರೆ. 7.4 ಕೋಟಿ ಜನ ಭಾರತೀಯರು ಇನ್ಸ್ಟಾಗ್ರಾಂ ಬಳಸುತ್ತಿದ್ದಾರೆ. ಇದಲ್ಲದೆ ಬಹು ಸಂಖ್ಯೆಯ ಭಾರತೀಯರು ಯೂಟ್ಯೂಬ್, ಗೂಗುಲ್ ಹ್ಯಾಂಗೌಟ್ ಮುಂತಾದವುಗಳನ್ನು ಬಳಸುತ್ತಿದ್ದಾರೆ.
ದೇಶದ 45% ಜನರು ಸಾಮಾಜಿಕ ಮಾಧ್ಯಮದಲ್ಲಿರುವಾಗ ರಾಜಕೀಯ ನಾಯಕರು ಕೂಡಾ ಸಾಮಾಜಿಕ ಮಾಧ್ಯಮಗಳಿಂದ ದೂರಾಗಿ ಉಳಿಯಲು ಸಾಧ್ಯವಿಲ್ಲ. ಭಾರತದ ಬಹುತೇಕ ರಾಜಕೀಯ ನಾಯಕರು ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂಗಳಲ್ಲಿ ಇದ್ದಾರೆ. ನರೇಂದ್ರ ಮೋದಿಯವರಿಗೆ ಫೇಸ್ಬುಕ್ನಲ್ಲಿ ಸುಮಾರು 4.37 ಕೋಟಿ ಫಾಲೋವರ್ಗಳು ಇದ್ದಾರೆ, ಟ್ವೀಟರ್ನಲ್ಲಿ 4.72 ಕೋಟಿ ಫಾಲೊವರ್ಗಳು ಇದ್ದಾರೆ ಹಾಗೂ ಇನ್ಸ್ಟಾಗ್ರಾಂನಲ್ಲಿ ಅವರಿಗೆ 2.12 ಕೋಟಿ ಹಿಂಬಾಲಕರು ಇದ್ದಾರೆ. ಭಾರತದ ರಾಜಕೀಯ ನಾಯಕರಲ್ಲಿ ಸಾಮಾಜಿಕ ಮಾಧ್ಯಮದ ಮಹತ್ವವನ್ನು ಮೊದಲಿಗೇ ಅರಿತು ಅದನ್ನು ಜನರನ್ನು ತಲಪುವ ಮಾಧ್ಯಮವನ್ನಾಗಿ ಬಳಸಿಕೊಂಡವರಲ್ಲಿ ಮೋದಿಯೇ ಮುಂಚೂಣಿಯಲ್ಲಿರುವವರು. ಇಂದು ನರೇಂದ್ರ ಮೋದಿಯವರು ಜಾಗತಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ 2 ನೇ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದ ರಾಜಕೀಯ ನಾಯಕರಾಗಿದ್ದಾರೆಂದು ಅಂಕಿ ಅಂಶಗಳು ಹಾಗೂ ವರದಿಗಳು ಹೇಳುತ್ತವೆ. ನರೇಂದ್ರ ಮೋದಿಯವರು ಟ್ವೀಟ್ಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಒಟ್ಟಾಗಿ 11 ಕೋಟಿಗಿಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಟ್ವೀಟರ್ನಲ್ಲಿ ನರೇಂದ್ರ ಮೋದಿಯವರು 2009 ನೇ ಇಸವಿಯಲ್ಲೇ ಖಾತೆ ತೆರೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅತೀ ಅಂದರೆ 18 ಕೋಟಿ ಹಿಂಬಾಲಕರನ್ನು ಹೊಂದಿರುವವರುವ ರಾಜಕೀಯ ನಾಯಕ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಜಾಗತಿಕವಾಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಪ್ರಸ್ತುತ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 9.6 ಕೋಟಿ ಸಾಮಾಜಿಕ ಮಾಧ್ಯಮ ಹಿಂಬಾಲಕರನ್ನು ಹೊಂದಿದ್ದಾರೆ. ನರೇಂದ್ರ ಮೋದಿಯವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ ರಾಹುಲ್ ಗಾಂಧಿಯವರು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಹಿಂದೆ ಇದ್ದಾರೆ. ರಾಹುಲ್ ಗಾಂಧಿಯವರಿಗೆ ಟ್ವಿಟರ್ನಲ್ಲಿ 94 ಲಕ್ಷ ಹಿಂಬಾಲಕರು, ಫೇಸ್ಬುಕ್ನಲ್ಲಿ 27.8 ಲಕ್ಷ ಅನುಯಾಯಿಗಳು ಇದ್ದಾರೆ. ಒಟ್ಟಾರೆ ಸಾಮಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿಯವರಿಗಿರುವ ಫಾಲೋವರ್ಗಳ ಸಂಖ್ಯೆ 1,2 ಕೋಟಿಯಷ್ಟು ಮಾತ್ರ. ರಾಹುಲ್ ಗಾಂಧಿಯವರು ಟ್ವಿಟ್ಟರ್ಗೆ ಕಾಲಿರಿಸಿದ್ದೂ ತೀರಾ ಇತ್ತೀಚೆಗೆ ಅಂದರೆ 2015 ರಲ್ಲಿ. ಇನ್ನುಳಿದಂತೆ ಅರವಿಂದ ಕೇಜ್ರೀವಾಲ್ 1.48 ಕೋಟಿ, ಅರುಣ್ ಜೇಟ್ಲಿ 1.47 ಕೋಟಿ, ಅಮಿತ್ ಷಾ 1.34 ಕೋಟಿ ಟ್ವೀಟರ್ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನು ರಾಜಕೀಯ ಪಕ್ಷಗಳು ಕೂಡಾ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಗೆ ಟ್ವೀಟರ್ ನಲ್ಲಿ 1.1 ಕೋಟಿ ಹಾಗೂ ಫೇಸ್ಬುಕ್ನಲ್ಲಿ 1.5 ಕೋಟಿ, ಕಾಂಗ್ರೆಸ್ ಪಕ್ಷಕ್ಕೆ ಟ್ವೀಟರ್ನಲ್ಲಿ 51 ಲಕ್ಷ ಹಾಗೂ 53 ಲಕ್ಷ ಬೆಂಬಲಿಗರಿದ್ದಾರೆ.
ಈ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮವನ್ನು ರಾಜಕೀಯ ಪ್ರಚಾರಕ್ಕೆ ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ಧಾರಾಳವಾಗಿ ಬಳಸಿಕೊಂಡಿವೆ. ಪಕ್ಷದ ಸಾಧನೆಯನ್ನು ತಿಳಿಸಲು, ತನ್ನ ಆಡಳಿತ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಲು ಆಡಳಿತ ಪಕ್ಷವು ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡರೆ ಆಡಳಿತ ಪಕ್ಷದ ವೈಫಲ್ಯತೆಯನ್ನು ಎತ್ತಿ ತೋರಿಸಲು, ತನ್ನ ಪ್ರಣಾಳಿಕೆಯನ್ನು ಪ್ರಚಾರ ಪಡಿಸಲು ವಿರೋಧ ಪಕ್ಷಗಳು ಬಳಸಿಕೊಂಡವು. ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿಯವರ ಕುರಿತು “ಚೌಕೀದಾರ್ ಚೋರ್ ಹೈ” ಎಂದು ಆರೋಪ ಮಾಡಿದಾಗ ಬಿಜೆಪಿ ಪಕ್ಷದ ಬೆಂಬಲಿಗರು ತಮ್ಮ ಹೆಸರಿನ ಜೊತೆಗೆ ಚೌಕೀದಾರ್ ಅನ್ನುವ ವಿಶೇಷಣವನ್ನು ಸೇರಿಸಿಕೊಂಡು “ಮೈ ಭೀ ಚೌಕೀದಾರ್ ಹೂಂ” ಎನ್ನುವ ಹ್ಯಾಷ್ಟ್ಯಾಗ್ನ ಅಡಿಯಲ್ಲಿ ದೊಡ್ಡ ಟ್ವೀಟರ್ ಟ್ರೆಂಡ್ ಅನ್ನೇ ಸೃಷ್ಟಿಮಾಡಿದರು. ಈ ಹ್ಯಾಷ್ಟ್ಯಾಗ್ ಅಡಿಯಲ್ಲಿ 8 ಲಕ್ಷಗಳಿಗಿಂತಲೂ ಹೆಚ್ಚು ಟ್ವೀಟ್ಗಳು ಮಾಡಲ್ಪಟ್ಟು ಅದೊಂದು ಜಾಗತಿಕ ಟಾಪ್ ಟ್ರೆಂಡ್ ಆಗಿ ವಿಶ್ವದ ಗಮನ ಸೆಳೆಯಿತು. ಅದೇ ರೀತಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಭೇಟಿ ಕೊಟ್ಟಾಗ ವಿರೋಧ ಪಕ್ಷಗಳು “ಮೋದಿ ಗೋ ಬ್ಯಾಕ್” ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ ಲಕ್ಷಕ್ಕೂ ಮೀರಿದ ಟ್ವೀಟ್ಗಳನ್ನು ಹರಿಯ ಬಿಟ್ಟಿದ್ದವು. ಕಾಂಗ್ರೆಸ್ ಪಕ್ಷವು ತನ್ನ 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಜನರಿಗೆ ಕನಿಷ್ಠ ಆದಾಯದ ಯೋಜನೆ ನ್ಯಾಯ್ ಅನ್ನು ಬಿಡುಗಡೆ ಮಾಡಿದಾಗ “ಅಬ್ ನ್ಯಾಯ್ ಹೋಗಾ” ಅನ್ನುವ ಟ್ರೆಂಡ್ ಅನ್ನು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಸೃಷ್ಟಿ ಮಾಡಿದ್ದರು.
ಚುನಾವಣೆಯ ಘೋಷಣೆಯಾದಂದಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ವಿಚಾರಗಳೇ ಹೆಚ್ಚು ಪ್ರಾಧಾನ್ಯತೆಯನ್ನು ಪಡೆದುಕೊಂಡಿವೆ. ಚುನಾವಣಾ ಪ್ರಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾಡುವ ವಿಚಾರದಲ್ಲಿ ಚುನಾವಣಾ ಆಯೋಗವು ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದರೂ ಅದು ಪ್ರಯೋಜನಕಾರಿಯಾಗಿಲ್ಲ. ವಿವಿಧ ಪಕ್ಷಗಳ ಬೆಂಬಲಿಗರು ತಮ್ಮ ಆಯ್ಕೆಯ ಪಕ್ಷಗಳ ಬಗೆಗೆ ಅಥವಾ ಅಭ್ಯರ್ಥಿಗಳ ಬಗೆಗೆ ಧನಾತ್ಮಕ ವಿಚಾರಗಳನ್ನು ಪ್ರಕಟ ಮಾಡುತ್ತಲೇ ಇದ್ದಾರೆ. ತಮ್ಮ ನಾಯಕನ ಭಾಷಣವನ್ನು ಫೇಸ್ಬುಕ್ ಅಥವಾ ಟ್ವೀಟರ್ನಲ್ಲಿ ನೇರ ಹರಿಯ ಬಿಡುತ್ತಾರೆ. ಕಳೆದ 2 ತಿಂಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ನಡೆದ ಬಹುತೇಕ ಪೋಸ್ಟ್ ಗಳು, ಪ್ರತಿಕ್ರಿಯೆಗಳು, ಸಂಭಾಷಣೆ ಹಾಗೂ ಚರ್ಚೆಗಳು ಚುನಾವಣೆ ಕುರಿತದ್ದೇ ಆಗಿವೆ.
ಮೈನ್ ಸ್ಟ್ರೀಮ್ ಮೀಡಿಯಾಗಳೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಸೋಶಿಯಲ್ ಮೀಡಿಯಾದ ಮೊರೆ ಹೋಗಿವೆ. ಬಹುತೇಕ ನ್ಯೂಸ್ ಚಾನೆಲ್ ಗಳು ಹಾಗೂ ದಿನ ಪತ್ರಿಕೆಗಳು ತಮ್ಮ ಹೆಸರಿನಲ್ಲೇ ಟ್ವೀಟರ್ ಹಾಗೂ ಫೇಸ್ ಬುಕ್ ಅಕೌಂಟ್ ಗಳನ್ನು ಹೊಂದಿವೆ. 2019 ರ ಚುನಾವಣಾ ಹಿನ್ನೆಲೆಯಲ್ಲಿ ಬಹುತೇಕ ನ್ಯೂಸ್ ಚಾನೆಲ್ಗಳು ರಾಜಕೀಯ ನಾಯಕರನ್ನು ಸಂದರ್ಶನ ಮಾಡಿವೆ. ಆ ಎಲ್ಲಾ ಸಂದರ್ಶನಗಳನ್ನು ಟಿವಿಯಲ್ಲಿ ಅಲ್ಲದೆ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಸಾರ ಮಾಡುತ್ತಿದ್ದಾರೆ. ಸಂದರ್ಶನವನ್ನು ಎಷ್ತು ಜನರು ಯೂಟ್ಯುಬ್ನಲ್ಲಿ ನೋಡಿದ್ದಾರೆ, ಎಸ್ಟುಜನ ಫೇಸ್ ಬುಕ್ ಲೈವ್ ಮೂಲಕ ನೋಡಿದ್ದಾರೆ ಎನ್ನುವ ಅಂಕಿ ಅಂಶಗಳೂ ಕರಾರುವಕ್ಕಾಗಿ ಸಿಗುತ್ತದೆ. ಹೆಚ್ಚು ವೀಕ್ಷಿಸಲ್ಪಟ್ಟ ಸಂದರ್ಶನವು ಹೆಚ್ಚು ಜನಪ್ರಿಯವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ನರೇಂದ್ರ ಮೋದಿಯವರ ಇತ್ತೀಚೆಗಿನ ರಿಪಪ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ಗಳ ಸಂದರ್ಶನವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದಾರೆ. ಖ್ಯಾತ ನಿರೂಪಕ ರಜತ್ ಶರ್ಮಾ ಅವರು ನಡೆಸಿಕೊಟ್ಟ ಮೋದಿ ಸಂದರ್ಶನವನ್ನು ಯೂಟ್ಯೂಬ್ನಲ್ಲಿ 13 ಲಕ್ಷ ಜನರು ನೋಡಿದ್ದಾರೆ ಹಾಗೂ ನರೇಂದ್ರ ಮೋದಿ ಆ್ಯಪ್ನಲ್ಲಿ ಈ ಸಂದರ್ಶನವು 23 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಎನ್ ಡಿ ಟಿ ವಿ ಯ ರವೀಶ್ ಕುಮಾರ್ ನಡೆಸಿದ ರಾಹುಲ್ ಗಾಂಧಿ ಸಂದರ್ಶನವನ್ನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಲಕ್ಶಕ್ಕೂ ಮೀರಿದ ಸಂಖ್ಯೆಯಲ್ಲಿ ಜನರು ನೋಡಿದ್ದಾರೆ.
ಈ ಚುನಾವಣಾ ಗಡಿಬಿಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವವರು, ರಾಜಕೀಯ ನಾಯಕರ ಫೊಟೋಗಳನ್ನು ಫೋಟೋಶಾಪ್ ಮಾಡಿ ಹರಡುವುದೂ ನಡೆದಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಬಿಜೆಪಿ ಯೂತ್ ವಿಂಗ್ನ ಮುಖ್ಯಸ್ಥೆ ಪ್ರಿಯಾಂಕಾ ಶರ್ಮ ಎಂಬ ಮಹಿಳೆ ಮಮತಾ ಬ್ಯಾನರ್ಜಿ ಮುಖವನ್ನು ಇತ್ತೀಚೆಗಿನ ಪ್ರಿಯಾಂಕಾ ಚೋಪ್ರಾ ಅವರ ಗಾಲಾ 2019 ರ ದಿರಸಿನ ಫೊಟೋವಿನ ಜೊತೆಗೆ ಕಾಪಿ ಪೇಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಕ್ಕೆ ಫ್ರಿಯಾಂಕಾ ಶರ್ಮಾರನ್ನು ಕೋಲ್ಕೊತಾ ಪೋಲೀಸರು ಬಂಧಿಸಿದ್ದರು. ಇದನ್ನು ಪ್ರತಿಭಟಿಸಿ ಐ ಸಪೋರ್ಟ್ ಪ್ರಿಯಾಂಕಾ ಶರ್ಮಾ ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ 56000 ದಷ್ಟು ಟ್ವೀಟ್ಗಳು ಬಂದವು. ಸುಪ್ರೀಂ ಕೋರ್ಟ್ನಲ್ಲಿ ಪ್ರಿಯಾಂಕಾ ಶರ್ಮರಿಗೆ ಜಾಮೀನೂ ಸಿಕ್ಕಿತು. ಇತ್ತೀಚೆಗೆ ರಾಹುಲ್ ಗಾಂಧಿ ಕೂಡಾ ಸುಳ್ಳಿಗೆ ಸಮಾನಾರ್ಥಕವಾಗಿ ಮೋದಿಲೈ ಶಬ್ದವನ್ನು ಇಂಗ್ಲಿಷ್ ಡಿಕ್ಷನರಿಗೆ ಸೇರಿಸಲಾಗಿದೆ ಎನ್ನುವ ಫೊಟೋ ಶಾಪ್ ಮಾಡಿದ ಪೋಸ್ಟ್ ಅನ್ನು ಟ್ವೀಟರ್ನಲ್ಲಿ ಪ್ರಕಟಿಸಿದ್ದರು. ಆದರೆ ಪ್ರಸಿದ್ಧ ಆಕ್ಸ್ ಫರ್ಡ್ ಡಿಕ್ಷನರಿ ಸಂಸ್ಥೆಯು ರಾಹುಲ್ ಟ್ವೀಟ್ಗೆ ಪ್ರತಿಕ್ರಿಯ ನೀಡಿದ್ದು ಮೋದಿಲೈ ಎನ್ನುವ ಶಬ್ದವು ಆಕ್ಸ್ ಫರ್ಡ್ ಡಿಕ್ಷನರಿ zಯಲ್ಲಿಲ್ಲ ಹಾಗೂ ರಾಹುಲ್ ಗಾಂಧಿ ಪ್ರಕಟಿಸಿದ ಚಿತ್ರವು ನಕಲಿಯಾಗಿದೆ ಎಂದು ಹೇಳಿದ್ದು ರಾಹುಲ್ ಗಾಂಧಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. 1984 ನೇ ಇಸವಿಯ ಸಿಕ್ಖರ ಮಾರಣ ಹೋಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಸ್ಯಾಮ್ ಪಿತ್ರೋಡಾ ಅವರು ಹುವಾ ತೋ ಹುವಾ ಎಂದು ಹೇಳಿಕೆ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದುಂಟುಮಾಡಿದೆ. ಅದೇ ರೀತಿ ಬಿಜೆಪಿಯ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾಧ್ವೀ ಪ್ರಜ್ಞಾ ಸಿಂಗರ ಹೇಮಂತ್ ಕರ್ಕರೆ ಹಾಗೂ ಗೋಡ್ಸೆ ಬಗೆಗಿನ ವಿವಾದಾತ್ಮಕ ಹೇಳಿಕೆಯೂ ಕೂಡಾ.
ಸಾಮಾಜಿಕ ಜಾತಾಣಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರೀಯ ಪಕ್ಷಗಳು ಹಾಗೂ ರಾಷ್ತ್ರೀಯ ಪಕ್ಷಗಳ ನಾಯಕರು ಮಾಡಿದಷ್ಟು ಸುದ್ದಿ ಹಾಗೂ ಸದ್ದನ್ನು ಪ್ರಾದೇಶಿಕ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರು ಮಾಡಿಲ್ಲ. ಅರವಿಂದ ಕೇಜ್ರೀವಾಲರ ಆಮ್ ಆದ್ಮಿ ಪಾರ್ಟಿಯು ಪಕ್ಷದ ಆರಂಭಿಕ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದ್ದರೂ ನಂತರದ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಕುಸಿದಂತೆ ಸೋಶಿಯಲ್ ಮೀಡಿಯಾದಲ್ಲೂ ಅದರ ಪಾರಮ್ಯತೆ ಕಡಿಮೆಯಾಗುತ್ತಾ ಹೋಯಿತು. ಇತ್ತಿಚೆಗಿನ ಪಶ್ಚಿಮ ಬಂಗಾಳದ ಚುನಾವಣೆಯ ವಿಚಾರದಲ್ಲಿ ತೃಣ ಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನಲ್ಲಿ ಮಮತಾ ಬ್ಯಾನರ್ಜಿ ಹೆಸರು ಸ್ವಲ್ಪ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಲ್ಪಟ್ಟಿರುವುದನ್ನು ಹೊರತು ಪಡಿಸಿದರೆ ಮಾಯಾವತಿ, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು ಮುಂತಾದ ಮಹಾಘಟಬಂಧದ ಘಟಾನುಘಟಿ ನಾಯಕರುಗಳ ಹೆಸರುಗಳು, ನಿತೀಶ್ ಕುಮಾರ್, ಉದ್ಧವ್ ಠಾಕ್ರೆ ಅವರಂತಹ ಎನ್ಡಿಎ ನಾಯಕರ ಹೆಸರುಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ಉಳಿದ ಎಲ್ಲಾ ಪಕ್ಷಗಳಿಂತ ಸಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಪಕ್ಷವೇ ಪ್ರಬಲವಾಗಿರುವಂತೆ ಕಾಣಿಸುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಇವರ ಹೆಸರುಗಳು ಟ್ವಿಟರ್ನ ಟಾಪ್ ಟ್ರೆಂಡ್ಗಳಲ್ಲಿ ಯಾವಾಗಲೂ ಕಂಡುಬರುತ್ತಿದೆ. ಆಯೇಗಾತೋ ಮೋದೀ ಹಿ, ಫಿರ್ ಏಕ್ ಬಾರ್ ಮೋದಿ ಸರ್ಕಾರ್, ಮೈ ಭೀ ಚೌಕೀದಾರ್, ಅಬ್ ಕಿ ಬಾರ್ 300 ಪಾರ್ ಮುಂತಾದ ಬಿಜೆಪಿಯ ಟ್ರೆಂಡ್ಗಳಿಗೆ ಸರಿಸಮಾನವಾದ ಟ್ರೆಂಡ್ಗಳು ಕಾಂಗ್ರೆಸ್ ಪಕ್ಷದದಿಂದ ಮೂಡಿಬಂದಿಲ್ಲ. ಬಿಜೆಪಿ ಪಕ್ಷವು ನರೇಂದ್ರ ಮೋದಿ ಆ್ಯಪ್ ಹಾಗೂ ಈ ಆ್ಯಪ್ನ ಒಳಗೆ ಸಿಗುವ ನಮೋ ಟಿವಿಯ ಮೂಲಕ ಕಾರ್ಯಕರ್ತರು ಹಾಗೂ ಮತದಾರರ ಜೊತೆಗೆ ಸತತ ಸಂಪರ್ಕವನ್ನು ಕಾಪಾಡಿಕೊಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಾಧಿಸಿದ ಮೇಲುಗೈ ಚುನಾವಣೆಯಲ್ಲಿ ಕೂಡಾ ಪ್ರತಿಫಲಿಸಲ್ಪಡುವುದೋ ಎಂದು ತಿಳಿಯಲು ಮೇ 23 ತಾರೀಕಿನವರೆಗೆ ಕಾದು ನೋಡಬೇಕಿದೆ.
✍ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.