ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಹಲವು ವಲಯಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಇಂಗ್ಲೀಷರ ಕೈಗಾರಿಕಾ ನಗರ ಮಾಂಚೆಸ್ಟರ್ನಲ್ಲಿ ಅಳವಡಿಸಲಾದ ನೂತನ ತಂತ್ರಜ್ಞಾನಗಳಿಂದಾಗಿ ಭಾರತದ ಜವಳಿ ಕಾರ್ಮಿಕರು ಪತನಕ್ಕೀಡಾದರು ಎಂಬುದನ್ನು ನಾವು ಭಾರತೀಯ ಇತಿಹಾಸವನ್ನು ಓದಿ ತಿಳಿದುಕೊಂಡಿದ್ದೇವೆ. ಬಟ್ಟೆ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆಯಿಂದಾಗಿ ನೇಕಾರರಿಗೆ ಸಾಕಷ್ಟು ಅನಾನುಕೂಲವಾಗಿದೆ. ಯಂತ್ರಗಳು ಕಡಿಮೆ ಹೂಡಿಕೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಬಟ್ಟೆಗಳನ್ನು ಉತ್ಪಾದನೆ ಮಾಡುವ ಮೂಲಕ ನೇಕಾರರ ಕೆಲಸವನ್ನು ಸಂಪೂರ್ಣವಾಗಿ ಕಿತ್ತುಕೊಂಡಿವೆ. ಭಾರತದಲ್ಲೂ ಕಲಾವಿದರ ಮತ್ತು ನೇಕಾರರ ಸಮಸ್ಯೆಗಳನ್ನು ನೀಗಿಸುವುದಕ್ಕಾಗಿ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ. ಖ್ಯಾತ ಬನಾರಸಿ ಸೀರೆ (ಚೀನಾ ಮೇಡ್ ನಕಲಿ ಸೀರೆಗಳು ಈಗ ಮಾರುಕಟ್ಟೆಯಲ್ಲಿ ಇವೆ) ಗಳನ್ನು ತಯಾರಿಸುವ ವಾರಣಾಸಿ ಗ್ರಾಮ ನಿರಂತರ ವಿದ್ಯುತ್ ಕಡಿತಗಳಿಂದ ಸಂಕಷ್ಟಕ್ಕೀಡಾಗುತ್ತಿತ್ತು.
ನೇಕಾರರು ಡಿಸೇಲ್ ಚಾಲಿತ ಜನರೇಟರ್ ಅನ್ನು ಅತ್ಯಧಿಕ ಮತ್ತು ದುಬಾರಿ ನಿರ್ವಹಣೆಯ ಕಾರಣದಿಂದಾಗಿ ಬಳಕೆ ಮಾಡಲಾರರು. ಇನ್ವರ್ಟರ್ಗೆ ಸಾಕಷ್ಟು ಸ್ಥಳಾವಕಾಶ ಬೇಕಾಗಿರುವುದರಿಂದ ಅದನ್ನೂ ಬಳಕೆ ಮಾಡಲಾರರು. “ನೇಕಾರಿಕೆಗೆ ಸಂಬಂಧಿಸಿದ ವಸ್ತುಗಳೇ ಇರುವುದರಿಂದ ನನ್ನ ಮನೆಯಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲ. ಹಳೆ ಬ್ಯಾಟರಿಗಳನ್ನು ಹೊಂದಿರುವ ಇನ್ವರ್ಟರ್ ಇಡಲು ಹೆಚ್ಚು ಸ್ಥಳಬೇಕಾಗುತ್ತದೆ” ಎಂದು ನೇಕಾರ ಮೊಹಮ್ಮದ್ ಹಸನ್ ಹೇಳುತ್ತಾರೆ. ಈ ವಿದ್ಯುತ್ ಕಟ್ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಕಾರ್ಪೋರೇಟ್ ಮತ್ತು ಎನ್ಜಿಓಗಳ ಸಹಕಾರದೊಂದಿಗೆ ಮೋದಿ ಸರ್ಕಾರ ಪ್ರತಿ ನೇಕಾರರ ಮನೆ ಮೇಲೂ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿದೆ. ಇದಕ್ಕೆ ಅರ್ಧಕ್ಕಿಂತ ಹೆಚ್ಚಿನ ಬಜೆಟ್ ಕಾರ್ಪೋರೇಟ್ ಸೋಶಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್)ನಿಂದ ಬಂದಿದೆ ಮತ್ತು ಉಳಿದ ಬಜೆಟ್ ಅನ್ನು ನೇಕಾರರೇ ಹಾಕಬೇಕು. ಕ್ಲೀನ್ ಎನರ್ಜಿಯಲ್ಲಿ ದಶಕಗಳ ಅನುಭವವನ್ನು ಹೊಂದಿರುವ ದೆಹಲಿ ಮೂಲದ ಎನರ್ಜಿ ಆಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (TERI) ಇದಕ್ಕೆ ತಾಂತ್ರಿಕ ಸಲಹೆಗಳನ್ನು ನೀಡುವ ಮೂಲಕ ಸಹಾಯ ಮಾಡಿದೆ.
“ಇಡೀ ರಚನೆಯಲ್ಲಿ ಮೂರು ವಿದ್ಯುತ್ ಮೂಲಗಳು ಸೇರಿಕೊಂಡಿವೆ. ಸೋಲಾರ್, ಗ್ರಿಡ್ ಮತ್ತು ಲಿಥಿಯಂ ಬ್ಯಾಟರಿ. ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಗಾಗಿ ನಾವೇ ಆದ್ಯತೆಯ ಮೂಲವನ್ನು ಆಯ್ಕೆ ಮಾಡಿಕೊಳ್ಳಬೇಕು. ನಾವು 6 ಕಿಲೋವ್ಯಾಟ್ ಸಾಮರ್ಥ್ಯದ ಇನ್ವೆರ್ಟರ್ ಅನ್ನು ಪರಿಚಯಿಸಿದ್ದೇವೆ, ಇದು 6.6 KWh ಲಿಥಿಯಂ ಬ್ಯಾಟರಿ ಮತ್ತು 2-ಕಿಲೋವಾಟ್ ದ್ಯುತಿವಿದ್ಯುಜ್ಜನಕ ಸೌರ ಫಲಕವನ್ನು ಹೊಂದುವ ಮೂಲಕ ಅವಶ್ಯಕತೆಯನ್ನು ಪರಿಹರಿಸಿದೆ” ಎಂದು ಕ್ಷೇತ್ರ ವ್ಯವಸ್ಥಾಪಕರಾದ ಜಿತೇಂದ್ರ ತಿವಾರಿ ಹೇಳುತ್ತಾರೆ. ನೇಕಾರರ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಸಿಸ್ಟಮ್ಗಳನ್ನು ವಿನ್ಯಾಸಗೊಳಿಸುವುದು ಕಷ್ಟಕರ ಕೆಲಸವಾಗಿತ್ತು, ಏಕೆಂದರೆ ಅವುಗಳ ಬಹಳ ಕಡಿಮೆ ಮಧ್ಯಂತರಗಳಲ್ಲಿ ವಿಭಿನ್ನ ಶಕ್ತಿಯ ಅಗತ್ಯವಿರುತ್ತದೆ. ಆದರೆ ಸೌರ ಸ್ಥಾವರಗಳ ಸ್ಥಾಪನೆಯ ನಂತರ, ವಾರಣಾಸಿಯಲ್ಲಿನ ನೇಕಾರರು ಬಹಳ ಸಂತೋಷದಿಂದ ಇದ್ದಾರೆ.
“ಹಿಂದೆ ನಾನು ಸುದೀರ್ಘ ಸಮಯ ಕೆಲಸ ಮಾಡುತ್ತಿದ್ದೆ. ಯಾಕೆಂದರೆ ನನ್ನ ವೇತನ ಕಾರ್ಯ ಆಧಾರಿತವಾಗಿತ್ತು. ವಿದ್ಯುತ್ ಕಡಿತವಾದರೆ ಒಂದು ಸೀರಿಯನ್ನು ಪೂರ್ಣಗೊಳಿಸಲು ನನಗೆ ದುಪ್ಪಟ್ಟು ಸಮಯ ಬೇಕಾಗುತ್ತಿತ್ತು. ಕೆಲವು ಬಾರಿ ನನಗೆ ಸೀರೆಯನ್ನು ಪೂರ್ಣಗೊಳಿಸಲು 15-16 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತಿತ್ತು” ಎಂದು 40 ವರ್ಷದ ನೇಕಾರ ಬಾಬುಲಾಲ್ ಹೇಳುತ್ತಾರೆ. ನೇಕಾರರ ವೇತನವು ಕಾರ್ಯ ಆಧಾರಿತವಾಗಿರುತ್ತದೆ ಮತ್ತು ಅವರು ಸೀರೆಯಿಂದ 500 ರೂಪಾಯಿಗಳನ್ನು ಸಂಪಾದನೆ ಮಾಡುತ್ತಾರೆ. ಆದರೆ ಪದೇ ಪದೇ ವಿದ್ಯುತ್ ಕಡಿತಗಳು ಆಗುತ್ತಿದ್ದರೆ ಅವರ ಕೆಲಸದ ಅವಧಿಯು ದೀರ್ಘಗೊಳ್ಳುತ್ತದೆ.
ನಿರಂತರ ವಿದ್ಯುತ್ ಪೂರೈಕೆಯಿಂದಾಗಿ, ಉದ್ದಿಮೆಗಳ ಮಾಲೀಕರಿಗೂ ಹೆಚ್ಚು ಉತ್ಪಾದಿಸಲು ಮತ್ತು ಉತ್ತಮ ಲಾಭ ಗಳಿಸಲು ಸಹಾಯವಾಗುತ್ತಿದೆ. “ವಿದ್ಯುತ್ ಸರಬರಾಜು ನಿಯಮಿತವಾಗಿಲ್ಲದಿದ್ದರೆ ನೇಕಾರರು ಹಣವನ್ನು ಕಳೆದುಕೊಳ್ಳುತ್ತಾರೆ ಮತ್ತು ಬೇರೆ ಕೆಲಸವನ್ನು ಹುಡುಕುತ್ತಾರೆ. ಕಷ್ಟಪಟ್ಟು ದುಡಿಯುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ನಿಯಮಿತ ವಿದ್ಯುತ್ ಸರಬರಾಜು ಹೊಂದುವುದು ನಮಗೆ ಬಹಳ ಮುಖ್ಯ. ಈಗ ವಿದ್ಯುತ್ ಸೆಟ್ಅಪ್ಗಳು ನಮಗೆ ಸಾಕಷ್ಟು ಸಹಾಯ ಮಾಡಿದೆ “ಎಂದು 10 ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಉದ್ದಿಮೆಯ ಮಾಲೀಕರಾದ ಪರಾಸ್ನಾಥ್ ಪಟೇಲ್ ಹೇಳುತ್ತಾರೆ.
ರೈತರು, ನೇಕಾರರು ಮತ್ತು ಕುಶಲಕರ್ಮಿಗಳ ಸಬಲೀಕರಣಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡಬಹುದು ಎಂಬುದನ್ನು ಹಳೆಯ ಸಮಸ್ಯೆಗೆ ಸ್ವಚ್ಛ ಇಂಧನ ಪರಿಹಾರ ಪ್ರತಿಬಿಂಬಿಸುತ್ತದೆ. ತಂತ್ರಜ್ಞಾನಕ್ಕೆ ಮೋದಿ ಸರಕಾರವು ಹೆಚ್ಚಿನ ಒತ್ತು ನೀಡುತ್ತಿರುವುದು ಸಾಮಾನ್ಯ ಜನರ ಜೀವನ ಮಟ್ಟ ಸುಧಾರಣೆಗೆ ಸಹಾಯ ಮಾಡಿದೆ. ತಂತ್ರಜ್ಞಾನದ ನವೀನ ಬಳಕೆಯ ಮೂಲಕ ಅಭಿವೃದ್ಧಿಯತ್ತ ದೇಶವು ಬೃಹತ್ ಹೆಜ್ಜೆಯನ್ನಿಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.