ಕೃಷಿಯಲ್ಲಿ ಕೀಟನಾಶಕಗಳನ್ನು, ಅಪಾಯಕಾರಿ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ದುಷ್ಪರಿಣಾಮಗಳು ಬೀರುತ್ತಿವೆ. ಈ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡ ಒರಿಸ್ಸಾದ ಶಿಕ್ಷಕರೊಬ್ಬರು ಕಳೆದ ಎರಡು ದಶಕಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ರಾಸಾಯನಿಕ ಮುಕ್ತವಾದ ಭತ್ತವನ್ನು ಬೆಳೆಯುತ್ತಿದ್ದಾರೆ.
32 ವರ್ಷಗಳ ಕಾಲ ಸರ್ಕಾರಿ ಶಿಕ್ಷಕನಾಗಿ ಸೇವೆ ಸಲ್ಲಿಸಿ, ಅದರ ಜೊತೆಜೊತೆಗೆಯೇ ತಮ್ಮ ಪೂರ್ವಜರ ಕಸುಬು ಆದ ಭತ್ತದ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ನಟಬರ್ ಸಾರಂಗಿ ಅವರು, ತಮ್ಮ 3.5 ಎಕರೆ ಭೂಮಿಯಲ್ಲಿ ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ರಾಸಾಯನಿಕಗಳನ್ನು ಬಳಸುತ್ತಿದ್ದ ಅವರು ಎರಡು ದಶಕಗಳಿಂದ ಸಂಪೂರ್ಣವಾಗಿ ಸಾವಯವಕ್ಕೆ ಬದಲಾಗಿದ್ದಾರೆ. ಅದಕ್ಕೆ ಕಾರಣವೂ ಇದೆ.
ಅವರ ಭತ್ತದ ಬೇಳೆ ಕೀಟದಿಂದ ಬಾಧಿತಗೊಂಡು ಬೆಳವಣಿಗೆಯನ್ನು ಕಳೆದುಕೊಂಡಾಗ ಅವರು ಸ್ಥಳಿಯರ ಸಲಹೆಯಂತೆ ‘ಕಾರ್ಬೋಪ್ಯೂರನ್’ ಎಂಬ ರಾಸಾಯನಿಕವನ್ನು ಬಳಸಿದರು. ಒಂದು ಎಕರೆಗೆ 10 ಕೆಜಿಯಂತೆ ಈ ರಾಸಾಯನಿಕವನ್ನು ಬಳಸಬೇಕಿತ್ತು. ಇದಕ್ಕಾಗಿ ಅವರು ಕಾರ್ಮಿಕನೊಬ್ಬನಿಗೆ ರಾಸಾಯನಿಕ ಸಿಂಪಡಿಸುವ ಕಾರ್ಯವನ್ನು ನೀಡಿದರು. ಆತ ಶೇ. 40ರಷ್ಟು ರಾಸಾಯನಿಕವನ್ನು ಸಿಂಪಡಿಸುತ್ತಿದ್ದಂತೆ ಪ್ರಜ್ಞಾಹೀನನಾಗಿ ಬಿದ್ದು ಬಿಟ್ಟ. ಈ ಘಟನೆ ನಟಬರ್ ಅವರನ್ನು ಭಯಭೀತಗೊಳಿಸಿತ್ತು, ಒಂದು ವೇಳೆ ಆತನಿಗೇನಾದರೂ ಆಗಿದ್ದರೆ ತಾನು ಜೈಲು ಸೇರಬೇಕಿತ್ತು ಎಂಬ ಆತಂಕ ಅವರಿಗೆ ಮೂಡಿತ್ತು.
ಕಾರ್ಮಿಕ ಚೇತರಿಸಿಕೊಂಡ ನಂತರ ಬಂದು ನಾನು ರಾಸಾಯನಿಕ ಸಿಂಪಡಿಸುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದರೂ ಅವರು ಅದಕ್ಕೆ ಬಿಡಲಿಲ್ಲ. ರಾಸಾಯನಿಕದ ವಾಸನೆ ಅತ್ಯಂತ ಅಪಾಯಕಾರಿ ಎಂಬುದು ಆ ವೇಳೆಗೆ ಅವರಿಗೆ ಮನದಟ್ಟಾಗಿತ್ತು. ಮರುದಿನ ಬೆಳಗ್ಗೆ ಅವರು ಗದ್ದೆಯ ಸಮೀಪ ಹೋದಾಗ, ಗದ್ದೆಯಲ್ಲಿದ್ದ ಎಲ್ಲಾ ಕಪ್ಪೆ, ಹುಳ, ಕ್ರಿಮಿ, ಕೀಟಗಳು, ಹಾವು ಸತ್ತು ಬಿದ್ದಿದ್ದವು. ಮಣ್ಣನ್ನು ಆರೋಗ್ಯವಾಗಿಡುವಂತಹ ಹುಳ, ಕ್ರಿಮಿಗಳು ರಾಸಾಯನಿಕ ಬಳಕೆಯಿಂದ ಸಂಪೂರ್ಣ ನಾಶವಾಗಿ ಹೋಗಿದೆ. ಹಾಗಾದರೆ ಇದು ನಾವು ಬೆಳೆಯುವ ಆಹಾರ ವಿಷವಾಗದೇ ಇರಲು ಸಾಧ್ಯವೇ? ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಅವರು ಕಂಡುಕೊಂಡರು.
ಈ ಘಟನೆ ನಟಬರನ್ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ನಂತರದ ದಿನಗಳಲ್ಲಿ ಅವರು ಎಲ್ಲಾ ಬಗೆಯ ರಾಸಾಯನಿಕ ಗೊಬ್ಬರ ಬಳಸುವುದನ್ನು ನಿಲ್ಲಿಸಿಬಿಟ್ಟರು. ಸಾವಯವ ಕೃಷಿಯ ಹಾದಿಯಲ್ಲಿ ನಡೆಯಲು ಆರಂಭಿಸಿದರು. ಅಂದಿನಿಂದ ಎರಡು ದಶಕಗಳಿಂದ ಅವರು ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೇವಲ ಇದೊಂದೇ ಕಾರಣಕ್ಕೆ ನಟಬರನ್ ಅವರು ಖ್ಯಾತರಾಗಿಲ್ಲ.
ಕಳೆದ 24 ವರ್ಷಗಳಿಂದ ಸುಮಾರು 2 ಸಾವಿರ ರೈತರಿಗೆ ಸ್ಥಳೀಯ ಬೀಜಗಳ ಬಳಕೆ, ಸಾವಯವ ಗೊಬ್ಬರ ಮತ್ತು ಕೀಟನಾಶಕ ಮುಂತಾದವುಗಳ ಬಗ್ಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ, ಸಮಾನ ಮನಸ್ಕರೊಂದಿಗೆ ಸೇರಿ ತರಬೇತಿ ಕೇಂದ್ರವನ್ನೂ ಇವರು ಆರಂಭಿಸಿದ್ದಾರೆ. ಈ ಕೇಂದ್ರಕ್ಕೆ ರಾಜೇಂದ್ರ ದೇಸಿ ಚಸ ಗಬೆಸನ ಕೇಂದ್ರ (ರಾಜೇಂದ್ರ ಸ್ಥಳಿಯ ಕೃಷಿ ಸಂಶೋಧನಾ ಕೇಂದ್ರ) ಎಂಬ ಹೆಸರನ್ನು ಇಡಲಾಗಿದೆ. ನಟಬರನ್ ಮುಖ್ಯಸ್ಥರಾಗಿರುವ ಲೋಕ ಸಮಬಯ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಈ ಕೇಂದ್ರವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಈ ಕಾರ್ಯಕ್ರಮದ ಮೂಲಕ ಅವರು ಇದುವರೆಗೆ ಸುಮಾರು 700 ವಿವಿಧ ದೇಶೀ ಭತ್ತದ ತಳಿಗಳ ಸಂರಕ್ಷಣೆ ಮಾಡಿದ್ದಾರೆ, ಅದನ್ನು ರೈತರಿಗೆ ಹಂಚಿಕೆ ಮಾಡಿದ್ದಾರೆ.
ದೇಶೀ ಭತ್ತ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದೆ. ಮಾತ್ರವಲ್ಲ ಭಾರತದ ಎಲ್ಲಾ ಹವಾಗುಣವನ್ನು ಮೀರಿಯೂ ಬೆಳೆಯಬಲ್ಲ ಸಾಮರ್ಥ್ಯವನ್ನು ಅದು ಹೊಂದಿದೆ. ಭಾರತದಲ್ಲಿ ಒಂದು ಕಾಲದಲ್ಲಿ 1,10,000 ಸಾಂಪ್ರದಾಯಿಕ ತಳಿಯ ಭತ್ತಗಳಿದ್ದವು. ಆದರೆ ಹಸಿರು ಕ್ರಾಂತಿ ಕುಗ್ಗಿದ ಬಳಿಕ ಇದರ ಪ್ರಮಾಣ ಶೇ.90ರಷ್ಟು ಕುಸಿತವನ್ನು ಕಂಡಿತು.
ಒರಿಸ್ಸಾದ ಮೂಲೆ ಮೂಲೆಯನ್ನು ಸುತ್ತಿದರೂ ನಮಗೆ ಕೆಲವೇ ಕೆಲವು ಮಾದರಿಯ ತಳಿಗಳು ಕಾಣಿಸಿಕೊಳ್ಳುತ್ತವೆ. ಆದರೆ ನಟಬರನ್ ಅವರೊಬ್ಬರ ಬಳಿಯೇ 700 ವಿಧದ ಭತ್ತದ ತಳಿಗಳಿವೆ. ಅದನ್ನು ಅವರು ಮ್ಯೂಸಿಯಂನಲ್ಲಿ ಇಡಲು ಬಯಸುವುದಿಲ್ಲ, ಬದಲಿಗೆ ತಮ್ಮ 3.5 ಎಕರೆ ಭೂಮಿಯಲ್ಲಿ ಬಿತ್ತು ಬೆಳೆ ತೆಗೆಯುತ್ತಾರೆ. ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಾರೆ ಮತ್ತು ಅದನ್ನು ರೈತರಿಗೆ ಹಂಚುತ್ತಾರೆ. ಮೊದಮೊದಲು ಅವರಿದನ್ನು ಉಚಿತವಾಗಿಯೇ ಹಂಚುತ್ತಿದ್ದರು, ಆದರೀಗ ಒಂದಿಷ್ಟು ದರವನ್ನು ನಿಗದಿಪಡಿಸಿದ್ದಾರೆ.
ಪ್ರತಿ ವರ್ಷ ಅವರು 100 ಕ್ವಿಂಟಾಲ್ಗಳಷ್ಟು ಈ ದೇಸಿ ಭತ್ತದ ಬೀಜಗಳನ್ನು ಬೆಳೆಯುತ್ತಾರೆ. ಬಳಿಕ ಅವುಗಳನ್ನು ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶ, ಛತ್ತೀಸ್ಗಢ ಮತ್ತು ಗುಜರಾತ್ ರಾಜ್ಯಗಳಿಗೆ ಹಂಚಿಕೆ ಮಾಡುತ್ತಾರೆ.
ನಟಬರನ್ ಅವರು ಕೃಷಿ ವಿದ್ಯೆಯನ್ನು ತಮ್ಮ ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡವರು. ಭತ್ತವನ್ನು ಏಕ ಕೃಷಿಯಾಗಿ ಮಾಡುತ್ತಿದ್ದ ಹಲವಾರು ರೈತರ ನಡುವೆ ಇವರ ತಂದೆ ವಿಭಿನ್ನವಾಗಿದ್ದರು. ಯಾಕೆಂದರೆ ಭತ್ತದ ಜೊತೆ ಜೊತೆಗೆ ಅವರು 30 ವಿಧದ ತರಕಾರಿಗಳನ್ನೂ ಬೆಳೆಯುತ್ತಿದ್ದರು. ತಂದೆಯವರ ಕೃಷಿ ಕೌಶಲ್ಯವನ್ನು ನಿಷ್ಠೆಯಿಂದ ಇವರು ಅತ್ಯಂತ ಹೆಮ್ಮೆಯಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ.
ವಿದ್ಯಾವಂತನೂ ಆಗಿರುವ ನಟಬರನ್ ಅವರು, 1960 ರಿಂದ ಶಿಕ್ಷಕ ವೃತ್ತಿ ಮಾಡಿದ್ದಾರೆ. ಈಗ ಅವರ ವಯಸ್ಸು 86 ವರ್ಷ.
ಇಂದು ಅವರ ರಾಜೇಂದ್ರ ದೇಸಿ ಚಸ ಗಬಸೇನ ಕೇಂದ್ರದ ಜೊತೆಗೆ ಒರಿಸ್ಸಾ ಸರ್ಕಾರ ಕೈಜೋಡಿಸಿ, ಅದರ ಮೂಲಕ ತನ್ನ ಪರಂಪರಾಗತ ಕೃಷಿ ವಿಕಾಸ್ ಯೋಜನಾವನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯಾದ್ಯಂತದ ರೈತರಿಗೆ ಸಾವಯವ ಕೃಷಿಯ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯಕ್ರಮ ಇದಾಗಿದೆ.
ಇಂದಿಗೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದುಕೊಳ್ಳುತ್ತಿಲ್ಲ. ಬೀಜಗಳನ್ನು ಮಾರಾಟ ಮಾಡಿ, ಸಹೃದಯಿಗಳಿಂದ ದಾನ ಪಡೆದುಕೊಂಡು ಈ ಕೇಂದ್ರ ಸಮಾಜದ ಆರೋಗ್ಯವನ್ನು ಕಾಪಾಡುವ ಕಾರ್ಯವನ್ನು ಮುಂದುವರೆಸುತ್ತಿದೆ. ಅದರ ಗ್ರಂಥಾಲಯದಲ್ಲಿ ವಿವಿಧ ದೇಶಗಳ ಸಾವಯವ ಕೃಷಿ ಬಗೆಗಿನ ಸುಮಾರು 500 ಪುಸ್ತಕಗಳಿವೆ.
ನಾವು ನಮ್ಮ ಸಾಂಪ್ರದಾಯಿಕ ಕೃಷಿ ವೈಭವದತ್ತ ಮರಳಿ ಹೋಗಬೇಕು ಮತ್ತು ದೇಸಿ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಸಾವಯವ ಕೃಷಿ ಕೇವಲ ಕೃಷಿಯ ಒಂದು ವಿಧಾನವಲ್ಲ, ಅದು ಜೀವನ ವಿಧಾನ. ರಾಸಾಯನಿಕ ಬಳಕೆ ಹಲವಾರು ವರ್ಷಗಳಿಂದ ನಮ್ಮ ಭೂಮಿಯನ್ನು ಕೊಲ್ಲುತ್ತಾ ಬರುತ್ತಿದೆ. ಈಗ ಭೂಮಿ ತಾಯಿ ಕೋಮಾ ಸ್ಥಿತಿಯಲ್ಲಿ ಇದ್ದಾಳೆ. ಆಕೆಯನ್ನು ಪುನರುಜ್ಜೀವನಗೊಳಿಸುವ ಸಮಯ ಈಗ ಬಂದಿದೆ. ಸಾವಯವ ಕೃಷಿಗಿಂತಲೂ ಉತ್ತಮವಾದ ವಿಧಾನ ಇದಕ್ಕೆ ಬೇರೆ ಇಲ್ಲ” ಎಂದು ನಟಬರನ್ ಹೇಳುತ್ತಾರೆ.
ಅವರ ಮಾತುಗಳು ಅಕ್ಷರಶಃ ನಿಜವಾಗಿದೆ. ಭೂಮಿಯ ಆರೋಗ್ಯವನ್ನು ಕಾಪಾಡಲು ನಾವು ಸಾವಯವ ಕೃಷಿಯತ್ತ ಹೊರಳದೆ ಬೇರೆ ದಾರಿಯಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.