ಭಾರತ ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವ ಹೊಂದುವ ವಿಷಯ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆ ಆಗುತ್ತಿದೆ. ಫ್ರಾನ್ಸ್ ದೇಶ ಭಾರತದ ಪರವಾಗಿ ಮಾತನಾಡಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ. ಫ್ರಾನ್ಸ್ನ ರಾಯಭಾರಿ ಫ್ರಾಂಕೋಯಿಸ್ ಡೆಲಾಟ್ಟ್ರೆ ಭಾರತದ ಸದಸ್ಯತ್ವ ಅತ್ಯಾವಶ್ಯಕ ಎಂದು ಹೇಳಿದ್ದಾರೆ. ಈ ಭದ್ರತಾ ಮಂಡಳಿಯ ಕುರಿತು ಒಂದು ಕಿರು ನೋಟ.
ವಿಶ್ವ ಸಂಸ್ಥೆಯ ಆರು ಪ್ರಮುಖ ಅಂಗಗಳ ಪೈಕಿ ಭದ್ರತಾ ಮಂಡಳಿ ಕೂಡ ಒಂದು. “ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ” ಇದರ ಗುರಿ. ಹಾಗಾಗಿ ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಬಾಂಧವ್ಯ ಏರ್ಪಡಿಸುವುದು ಮತ್ತು ಮಧ್ಯಸ್ಥಿಕೆ ವಹಿಸಿ ಕಲೆಗಳ ತಿಳಿಗೊಳಿಸುವುದು ಇದರ ಜವಾಬ್ದಾರಿ.
UNSC ಇದರ ಸರಳ ರೂಪ. 1945ರಲ್ಲಿ ಸ್ಥಾಪನೆ ಆದ ಇದರ ನ್ಯೂಯಾರ್ಕ್ ಕೇಂದ್ರ ಕಛೇರಿ. ಭದ್ರತಾ ಮಂಡಳಿಯ ಮೊದಲ ಸಭೆ 17ನೇ ಜನವರಿ, 1946ರಂದು ಚರ್ಚ್ ಹೌಸ್ ಲಂಡನ್ನಲ್ಲಿ ನಡೆಯಿತು. ಈಗ ಒಟ್ಟು ಹದಿನೈದು ಸದಸ್ಯರು. ಐದು ಖಾಯಂ ಸದಸ್ಯರು – ಚೀನಾ, ಫ್ರಾನ್ಸ್, ರಷ್ಯಾ, ಅಮೇರಿಕ ಸಂಯುಕ್ತ ಸಂಸ್ಥಾನ ಹಾಗೂ ಯುನೈಟೆಡ್ ಕಿಂಗ್ಡಮ್ ಮತ್ತು ಹತ್ತು ತಾತ್ಕಾಲಿಕ ಸದಸ್ಯರು – ಬೆಲ್ಜಿಯಂ, ಡೊಮಿನಿಕನ್ ಗಣರಾಜ್ಯ, ಇಕ್ವೇಟೇರಿಯಲ್ ಗಿನಿಯಾ, ಜರ್ಮನಿ, ಇಂಡೊನೇಷ್ಯಾ, ಐವರೀಕೋಸ್ಟ್, ಕುವೈತ್, ಪೆರು, ಪೊಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ. ಈಗಿನ ಕಾರ್ಯದರ್ಶಿ – ಡೈಯನ್ ತ್ರಿನಸ್ಯಾ ಜಾನಿ.
ವಿಶ್ವಸಂಸ್ಥೆಯಂತೆ ಭದ್ರತಾ ಮಂಡಳಿಯು ಕೂಡ ಎರಡನೇ ಮಹಾಯುದ್ಧದ ನಂತರ ದೇಶಗಳ ನಡುವೆ ಬಾಂಧವ್ಯದ ಗುರಿ ಹೊತ್ತು ಸ್ಥಾಪಿತವಾಯಿತು. ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ರಷ್ಯಾ ಒಕ್ಕೂಟದ ನಡುವಿನ ಶೀತಲ ಸಮರ ಅದು ತಿಣುಕುತ್ತಾ ಸಾಗಿತು. ಆದರೂ ಕೋರಿಯ ಯುದ್ಧ, ಕಾಂಗೋ, ಸೂಯೆಜ್, ಸೈಪ್ರಸ್ ಮತ್ತು ಪಶ್ಚಿಮ ನ್ಯೂ ಗಿನಿಯಾ ಬಿಕ್ಕಟ್ಟುಗಳಲ್ಲಿ ಉತ್ತಮ ಸೇವೆ ಸಲ್ಲಿಸಿತು. ಅದೇಕೋ ಗೊತ್ತಿಲ್ಲ, ಬ್ರಿಟಿಷ್ ಭಾರತ ವಿಶ್ವ ಸಂಸ್ಥೆಯ ಪುರಾತನ ಸದಸ್ಯರಲ್ಲಿ ಒಂದು ದೇಶ. 30ನೇ ಅಕ್ಟೋಬರ್ 1945ರಲ್ಲಿ ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಿತು. ಆದರೂ ಇಲ್ಲಿಯ ತನಕ ಭಾರತದಂಥ ಗೌರವಾನ್ವಿತ ದೇಶ ಇನ್ನೂ ಖಾಯಂ ಸದಸ್ಯತ್ವ ಹೊಂದಲು ಸಾಧ್ಯವಾಗದೇ ಇರುವುದೇ ವಿಪರ್ಯಾಸ.
ಖಾಯಂ ಸದಸ್ಯತ್ವ ಹೊಂದಿರುವ ದೇಶಗಳು ಇಂದಿಗೂ ಸೇನಾ ಸಂಬಂಧೀ ವೆಚ್ಚಗಳಲ್ಲಿ ವಿಶ್ವದ ಅಗ್ರ ಗಣ್ಯ ದೇಶಗಳಾಗಿವೆ. 2013ರಲ್ಲಿ ವಿಶ್ವದ 55% ವೆಚ್ಚವನ್ನು ಈ ದೇಶಗಳೇ ಭರಿಸಿದ್ದವು. ಪರಮಾಣು ಶಕ್ತ ರಾಷ್ಟ್ರಗಳು ಎಂದು ಅಧಿಕೃತವಾಗಿ ಘೋಷಿಸಿಕೊಂಡಿವೆ. ತಾತ್ಕಾಲಿಕ ಸದಸ್ಯರು ಎರಡು ವರ್ಷಗಳ ಅವಧಿಗೆ ಮಂಡಳಿಯ ಸದಸ್ಯರಾಗಿರುತ್ತಾರೆ. ಅಧ್ಯಕ್ಷತೆ ಅವರ ನಡುವೆ ಮಾಸಿಕವಾಗಿ ಬದಲಾಗುತ್ತಿರುತ್ತದೆ.
ವಿಶ್ವ ಸಂಸ್ಥೆಯು ಮೊದಲು ಲೀಗ್ ಆಫ್ ನೇಷನ್ಸ್ ಆಗಿದ್ದು, ಪ್ಯಾರಿಸ್ ಶಾಂತಿ ಒಪ್ಪಂದದ ಪ್ರಕಾರ ಸ್ಥಾಪಿತವಾಗಿತ್ತು. ಇದು ರಾಷ್ಟ್ರಗಳ ನಡುವಿನ ಅನೇಕ ವ್ಯಾಜ್ಯಗಳನ್ನು ಮತ್ತು ಬಡ ದೇಶಗಳ ಅಂತರಿಕ ಸಮಸ್ಯೆಗಳ ಬಗೆಹರಿಸಿದ ನಂತರ, ಸಂಸ್ಥೆಗೆ ತನ್ನದೇ ಆದ ಒಂದು ಪಡೆಯನ್ನು ಹೊಂದುವ ಅವಶ್ಯಕತೆ ಕಂಡು ಬಂದಿತು. ಎರಡನೆಯ ಮಹಾಯುದ್ಧದ ತರುವಾಯ ಆದ ಬದಲಾವಣೆಗಳಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್, ಸೋವಿಯತ್ ಒಕ್ಕೂಟದ ರಷ್ಯಾ, ಫ್ರಾನ್ಸ್ ಮತ್ತು ಚೀನಾಗಳು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಡಂಬರ್ಟನ್ ವೋಕ್ಸ್ ಸಮ್ಮೇಳನದಲ್ಲಿ ವಿಶ್ವ ಸಂಸ್ಥೆಯ ರೂಪು ರೇಷೆಗಳನ್ನು ಚರ್ಚಿಸುವ ಜೊತೆಗೆ ಭದ್ರತಾ ಮಂಡಳಿಯನ್ನು ಜಾರಿಗೆ ತಂದವು. ಭದ್ರತಾ ಮಂಡಳಿಯು ಅಧಿಕಾರ ವ್ಯಾಪ್ತಿಯನ್ನು ನೋಡುವುದಾದರೆ, ಹೊಸ ಕಾರ್ಯದರ್ಶಿಯನ್ನು ವಿಶ್ವ ಸಂಸ್ಥೆಗೆ ನಾಮ ನಿರ್ದೇಶಿಸುವ ಮತ್ತು ಸಾಮಾನ್ಯ ಸಭೆಗೆ ಹೊಸ ರಾಷ್ಟ್ರಗಳ ಸೇರಿಸುವ ಜವಾಬ್ದಾರಿಯು ಇದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕುರಿತು ಬಂದಾಗೆಲ್ಲ ಎರಡು ವಿಷಯಗಳು ಗಮನ ಸೆಳೆಯುತ್ತವೆ. ಅವು ವಿಟೋ ಅಧಿಕಾರ ಮತ್ತು ಶಾಂತಿ ಪಾಲನಾ ಪಡೆ. ಶಾಂತಿ ಪಾಲನಾ ಪಡೆ ಬಗ್ಗೆ ನೋಡುವುದಾದರೆ, ಇದು ಭದ್ರತಾ ಮಂಡಳಿಯ ಒಂದು ಯಶಸ್ವಿ ನಿರ್ಧಾರ ಮತ್ತು ಹೆಮ್ಮೆ. ಇದರಲ್ಲಿ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸೈನಿಕರು ಕಾರ್ಯ ನಿರ್ವಹಿಸುತ್ತಾರೆ. ತನ್ನ ಬಜೆಟ್ ನಲ್ಲಿ ವಿಶ್ವ ಸಂಸ್ಥೆಯು ಇವರ ಖರ್ಚು ವೆಚ್ಚ ನೋಡಿಕೊಳ್ಳುತ್ತದೆ. 2016ರಂತೆ, ಶಾಂತಿ ಪಾಲನಾ ಪಡೆಯಲ್ಲಿ 103510 ಸೈನಿಕರು ಮತ್ತು 16471 ಸಾಮಾನ್ಯ ನಾಗರೀಕರು ಇದ್ದಾರೆ. ಈಗಾಗಲೇ 16 ಶಾಂತಿ ಪಾಲನಾ ಕಾರ್ಯಾಚರಣೆಗಳು ಮತ್ತು ಒಂದು ವಿಶೇಷ ರಾಜಕೀಯ ಕಾರ್ಯಾಚರಣೆ ಕೂಡ ಆಗಿದೆ. ಮೊದಲೇ ಹೇಳಿದಂತೆ ಶೀತಲ ಸಮರದ ಕಾರಣದಿಂದ ವಿಶ್ವ ಸಂಸ್ಥೆ ಬಡವಾಯಿತು. ಆದರೂ 1956ರಲ್ಲಿ ಶಾಂತಿ ಪಾಲನಾ ಪಡೆಯ ಮೊದಲ ಕಾರ್ಯಾಚರಣೆ ನಡೆಸಿ ಸೂಯೆಜ್ ಬಿಕ್ಕಟ್ಟನ್ನು ಬಗೆಹರಿಸಿತು. ಹಂಗೆರಿ ಮತ್ತು ಶ್ರೀಲಂಕಾ ನಾಗರಿಕ ಕಲಹಗಳಲ್ಲಿ ಭದ್ರತಾ ಮಂಡಳಿಯ ವೈಫಲ್ಯ ಕಂಡು ಬಂದಿತು. ಆದರೆ ನಮೀಬಿಯ, ಕಾಂಬೋಡಿಯಾ, ದಕ್ಷಿಣ ಆಫ್ರಿಕಾದ ಚುನಾವಣೆಗಳಲ್ಲಿ ಕಾರ್ಯ ನಿರ್ವಹಿಸಿ ಭೇಷ್ ಎನಿಸಿಕೊಂಡಿತು.
ವಿಶ್ವ ಸಂಸ್ಥೆಯ ಸನ್ನದಿನ 25ನೇ ವಿಧಿಯಂತೆ ವಿಟೋ ಎಂಬ ವಿಶೇಷ ಅಧಿಕಾರ ನೀಡಲಾಗಿದೆ. ಡಂಬರ್ಟನ್ ವೋಕ್ಸ್ ಸಮ್ಮೇಳನದಲ್ಲಿ ಸೋವಿಯತ್ ರಷ್ಯಾ ಒಕ್ಕೂಟವು ಪ್ರತೀ ಖಾಯಂ ಸದಸ್ಯರು ಈ ಹಕ್ಕನ್ನು ಕಾಯ್ದುಕೊಳ್ಳುವ ಬಗ್ಗೆ ಪ್ರತಿಪಾದಿಸಿತು. ಸದರಿ ಸಮ್ಮೇಳನದಲ್ಲೇ ಬ್ರೆಜಿಲ್ ಅನ್ನು ಅಮೇರಿಕಾ ಸಂಯುಕ್ತ ಸಂಸ್ಥಾನವು ಸಂಸ್ಥೆಗೆ ಸೇರಿಸಲು ಯತ್ನಿಸಿದಾಗ ರಷ್ಯಾ ಮತ್ತು ಬ್ರಿಟನ್ ಒಕ್ಕೂಟಗಳು ವಿರೋಧಿಸಿದವು. ವಿಟೋ ಒಂದು ರೀತಿಯ ಋಣಾತ್ಮಕ ಮತ ಎಂದೇ ಕರೆಯಬಹುದು. ವಿಪರ್ಯಾಸವೆಂದರೆ ಈ ಅಧಿಕಾರವೇ ಭಾರತವನ್ನು ಖಾಯಂ ಸದಸ್ಯತ್ವದಿಂದ ದೂರ ಇಟ್ಟಿರುವುದು. ಐದು ಖಾಯಂ ಸದಸ್ಯರ ಪೈಕಿ ಒಂದು ರಾಷ್ಟ್ರ ವಿರೋಧಿಸಿದರೂ, ಯಾವುದೇ ಕಾಯ್ದೆಯನ್ನು ಬಹುಮತವಿದ್ದರೂ ಜಾರಿ ಆಗದಂತೆ ತಡೆಯಲು ಸಾಧ್ಯ. ಆದರೆ ವಿಟೋ ಪ್ರಕಾರ ಹೊಸ ಕಾನೂನುಗಳ ಜಾರಿಗೆ ವಿರೋಧ ವ್ಯಕ್ತಪಡಿಸಬಹುದೇ ಹೊರತು, ಅದರ ಚರ್ಚೆಗೆ ಅಡ್ಡಿಪಡಿಸುವಂತಿಲ್ಲ. ಈ ಅಧಿಕಾರ ದುರುಪಯೋಗ ಆದದ್ದು ಹೆಚ್ಚು ಎಂದು ಬಿಡಿಸಿ ಹೇಳಬೇಕಿಲ್ಲ. 2012ರ ತನಕ ಒಟ್ಟು 269 ವಿಟೋ ಮತಗಳು ಚಲಾವಣೆ ಆಗಿವೆ. ಮೊದಲ ವಿಟೋ, ಅಮೇರಿಕ ಸಂಯುಕ್ತ ಸಂಸ್ಥಾನ 1970ರಲ್ಲಿ ಸಾಮಾನ್ಯ ಸಭೆಯು ದಕ್ಷಿಣ ರೊಡೇಸಿಯಾದಲ್ಲಿ ಕಾರ್ಯ ನಿರ್ವಹಿಸುವುದನ್ನು ತಡೆಯಲು ಬಳಸಿತು.
ಭಾರತ ಮತ್ತು ಭದ್ರತಾ ಮಂಡಳಿಯ ಸಂಬಂಧ ನೋಡುವುದಾದರೆ, 1945ರಿಂದಲೇ ಭಾರತ ಸದಸ್ಯತ್ವ ಹೊಂದಿದೆ. ಭದ್ರತಾ ಮಂಡಳಿಯಲ್ಲಿ ಏಳು ಅವಧಿಗಳಲ್ಲಿ ಒಟ್ಟು ಹದಿನಾಲ್ಕು ವರ್ಷ ಕಾರ್ಯ ನಿರ್ವಹಿಸಿದೆ. 2011-12ರಲ್ಲಿ ಕೊನೆಯ ಬಾರಿ ಸದಸ್ಯತ್ವ ಹೊಂದಿತ್ತು. ಸೈಯದ್ ಅಕ್ಬರುದ್ದೀನ್ ಭಾರತದ ಈಗಿನ ರಾಯಭಾರಿ. ಮೂಲತಃ ಶಾಂತಿಪ್ರಿಯ ದೇಶವಾದ ಭಾರತ ಅಸಹಕಾರ ಚಳವಳಿ, ತೃತೀಯ ವಿಶ್ವ, G4 ಮತ್ತು G77 ಇನ್ನಿತರ ವಿಧಾನಗಳಿಂದ ಇಂದಿಗೂ ವಿಶ್ವ ಸಂಸ್ಥೆಯಲ್ಲಿ ಸರ್ವಾಧಿಕಾರ ಸ್ಥಾಪನೆಯಾಗದಂತೆ ಪ್ರಯತ್ನ ಮಾಡುತ್ತಲೇ ಇದೆ. 1946ರಲ್ಲಿ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ದನಿ ಎತ್ತಿದ್ದು, ಲಿಂಗ ತಾರತಮ್ಯ ಕುರಿತು ಗಂಭೀರವಾಗಿ ಪರಿಗಣಿಸಿದ್ದು ಹಾಗೂ ಯಾವುದೇ ಅಂತರಾಷ್ಟ್ರೀಯ ರಾಜಕೀಯ ಸಂಘರ್ಷ ಮತ್ತು ಪ್ರಕೃತಿ ವಿಕೋಪಗಳಲ್ಲೂ ಭಾರತ ತನ್ನದೇ ಆದ ಒಂದು ಪರಿಹಾರ ನೀಡುತ್ತಲೇ ಬಂದಿದೆ.
2014ರಂತೆ ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶ, ಏಳನೇ ದೊಡ್ಡ ಆರ್ಥಿಕತೆ ಹೊಂದಿರುವ ದೇಶ, ಜಗತ್ತಿನ ಮೂರನೇ ಅತಿ ಹೆಚ್ಚು ಕೊಳ್ಳುವ ಶಕ್ತಿ ಇರುವ ಮತ್ತು ಶಾಂತಿ ಪಾಲನಾ ಪಡೆಯಲ್ಲಿ ಮೂರನೇ ಅತಿ ಹೆಚ್ಚು ಸೈನಿಕರನ್ನು ನೀಡಿರುವ ರಾಷ್ಟ್ರ. 7860 ಸೈನಿಕರು ಕಾರ್ಯ ನಿರ್ವಹಿಸುತ್ತಿದ್ದು, ಹತ್ತು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ. G4 ಶೃಂಗದ ಸದಸ್ಯತ್ವ ಹೊಂದಿರುವ ಭಾರತವು ಇತರ ಸದಸ್ಯರಾದ ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ದೇಶಗಳ ಖಾಯಂ ಸದಸ್ಯತ್ವಕ್ಕೆ ಒತ್ತಾಯಿಸುತ್ತಿರುವುದಲ್ಲದೇ, ಸದಸ್ಯರ ಸಂಖ್ಯೆಯನ್ನು ಹದಿನೈದರಿಂದ ಇಪ್ಪತ್ತೈದಕ್ಕೆ ಏರಿಸುವ ಗುರಿ ಹೊಂದಿದೆ. 2015-16ನೇ ಸಾಲಿನಲ್ಲಿ ಭಾರತ ರೂ.2,440,000,000ಗಳನ್ನು ವಿಶ್ವ ಸಂಸ್ಥೆಗೆ ನೀಡಿತ್ತು.
ಸೆಪ್ಟೆಂಬರ್ 2017ರಲ್ಲಿ ಅಮೇರಿಕಾವು ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ನಿರ್ಣಯ ತೆಗೆದುಕೊಂಡಿತ್ತು (H.Res.535). ಇಷ್ಟೆಲ್ಲ ಆಗಿಯೂ ಭಾರತದ ಖಾಯಂ ಸದಸ್ಯತ್ವಕ್ಕೆ ಚೀನಾ ಮತ್ತು ಪಾಕಿಸ್ತಾನಗಳು ತೊಡರುಗಾಲು ಹಾಕುತ್ತಲೇ ಇವೆ. ಭಾರತ ಮತ್ತು ಪಾಕಿಸ್ತಾನದ ವಿವಾದವನ್ನು 1948ರಲ್ಲಿ ಜಾಗತಿಕ ನಾಯಕನಾಗುವ ಹೆಮ್ಮೆಗೆ ನೆಹರು ವಿಶ್ವ ಸಂಸ್ಥೆಯ ಎದುರು ಇಟ್ಟಾಗಿನಿಂದ ಭಾರತವನ್ನು ತುಳಿಯುವ ಪ್ರಯತ್ನ ಆರಂಭವಾಯಿತು. ಯುನೈಟೆಡ್ ಕಿಂಗ್ಡಮ್ ಭಾರತವನ್ನು ಹಣಿಯಲು ಫ್ರಾನ್ಸ್, ಕೆನಡಾ ಮತ್ತು ಅಮೆರಿಕ ಮೊದಲಾದ ದೇಶಗಳನ್ನು ಪಾಕಿಸ್ತಾನ ಪರವಾಗಿ ನಿಂತುಕೊಳ್ಳಲು ಸೂಚಿಸಿತು. ಅಮೇರಿಕ, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ 1961ರಲ್ಲಿ ಗೋವಾದಿಂದ ಪೋರ್ಚುಗೀಸರ ಹೊರ ಹಾಕುವಾಗಲೂ ಅಡಚಣೆ ಮಾಡಿದವು. ಆದರೆ ರಷ್ಯಾ ದೇಶ ಭಾರತದ ಪರವಾಗಿ ವಿಟೋ ಚಲಾಯಿಸುವ ಮೂಲಕ ಗೋವಾ ಮತ್ತೊಂದು ಕಾಶ್ಮೀರ ಆಗುವುದನ್ನು ತಡೆಯಿತು. ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ನೀತಿ, ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ತಂದ ಬದಲಾವಣೆ ಮತ್ತು ಚಾತುರ್ಯ ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಒಬಾಮಾ ಅವರು ಭಾರತದ ಖಾಯಂ ಸದಸ್ಯತ್ವಕ್ಕೆ ಒತ್ತಾಯಿಸಿದ್ದರು. ಈಗ ಪ್ರಧಾನಿ ಮೋದಿಯವರು ಮತ್ತೊಮ್ಮೆ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿರುವಾಗಲೇ, ಫ್ರಾನ್ಸ್ ರಾಯಭಾರಿಯ ಹೇಳಿಕೆಯಿಂದ ಆ ಚರ್ಚೆ ಮುನ್ನೆಲೆಗೆ ಬಂದಿದೆ. ಬ್ರಹ್ಮ ಚೆಲ್ಲಾನಿ ಒಂದೆಡೆ ಹೇಳುತ್ತಾರೆ “ನೆಹರೂ ಅವರು ವಿಶ್ವಸಂಸ್ಥೆಯನ್ನು ಒಂದು ಸಶಕ್ತ ರಾಜಕೀಯ ಸಂಸ್ಥೆಯಾಗಿಯೂ ಅಥವಾ ಅಪಕ್ಷಪಾತಿ ರಕ್ಷಣಾ ಪಡೆಯಾಗಿಯೂ ಹೊಗಳಲಾರರು” ಎಂದು. ಇಂದಿರಾ ಗಾಂಧಿಯವರು ಶಾಂತಿ ಪಾಲನಾ ಪಡೆಗಾಗಿ ಮಾಡಿದ ಅನಗತ್ಯ ಭಾರತೀಯ ಸೈನಿಕರ ಮಾರಣಹೋಮ ಮತ್ತು ನೆಹರೂ ಅವರ ಮೂರ್ಖತನದ ಪರಮಾವಧಿಯಿಂದ ಹಿಂದುಳಿದ ಭಾರತಕ್ಕೆ ಖಾಯಂ ಸದಸ್ಯತ್ವ ಒಂದು ಗೌರವವೇ ಸರಿ. ಭಾರತದ ಖಾಯಂ ಸದಸ್ಯತ್ವ ಎಷ್ಟೋ ಸಣ್ಣ ಪುಟ್ಟ ದೇಶಗಳಿಗೂ ಹಾಗೂ ಚೀನಾ ಮತ್ತು ಪಾಕಿಸ್ತಾನಗಳ ನಿಭಾಯಿಸಲೂ ಸಹಕಾರಿ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.