ಈಸ್ಟರ್ ಭಾನುವಾರದ ಸಂದರ್ಭದಲ್ಲಿ ಶ್ರೀಲಂಕಾದ ಮೂರು ಚರ್ಚ್ ಮತ್ತು ನಾಲ್ಕು ಐಷಾರಾಮಿ ಹೋಟೆಲ್ ಗಳ ಮೇಲೆ ನಡೆದ ಭಯೋತ್ಪಾದನಾ ದಾಳಿಯಿಂದಾಗಿ 359 ಮಂದಿ ಮೃತಪಟ್ಟರು ಮತ್ತು 500 ಮಂದಿ ಗಾಯಗೊಂಡರು. ಈ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ವಿಶ್ವದಾದ್ಯಂತದಿಂದ ಖಂಡನೆಗಳು ವ್ಯಕ್ತವಾದವು. ಖಂಡನೆ ವ್ಯಕ್ತಪಡಿಸುವುದು ಸಾಂಪ್ರದಾಯಿಕ ಪದ್ಧತಿ ಎಂಬಂತಾಗಿದೆ. ಇಂತಹ ಭೀಕರ ಘಟನೆಗಳು ನಡೆದ ಬಳಿಕ ಖಂಡನೆ ವ್ಯಕ್ತಪಡಿಸುವುದು, ಸಂತಾಪ ಸೂಚಿಸುವುದು, ಪ್ರಾರ್ಥನೆ ಮಾಡುವುದು ಇದೆಲ್ಲವೂ ಸರ್ವೇಸಾಮಾನ್ಯ. ಆದರೆ ಇಂತಹ ನೀಚತನಕ್ಕೆ ಖಂಡನೆ ಮತ್ತು ಸಂತಾಪಗಳಷ್ಟೇ ಸಾಕೇ?
ಚರ್ಚ್, ದೇವಸ್ಥಾನ, ಮಸೀದಿ ಮುಂತಾದ ಪವಿತ್ರ ಸ್ಥಳಗಳ ಮೇಲೆ ಇದುವರೆಗೆ ಎಷ್ಟು ದಾಳಿಗಳು ಸಂಭವಿಸಿಲ್ಲ? ಇಂತಹ ಘಟನೆಗಳು ಮರುಕಳಿಸುವುದುಕ್ಕೆ ಕಾರಣವಾಗುವ ಪ್ರಮುಖ ಅಂಶಗಳು ಯಾವುದು? ತಂತ್ರಜ್ಞಾನ, ಆಧುನಿಕತೆಯನ್ನು ಮೈಗೂಡಿಸುತ್ತಾ ಬರುತ್ತಿರುವ ನಾವು ಬದುಕಿನ ಮೂಲ ವಾಸ್ತವಗಳಿಂದ ದೂರವಾಗುತ್ತಿದ್ದೇವೆಯೇ?
ಇತ್ತೀಚಿನ ಸರಣಿ ಬಾಂಬ್ ದಾಳಿಗಳು ನಮ್ಮನ್ನು ಹಿಂದೆಂದಿಗಿಂತಲೂ ಹೆಚ್ಚು ಭಯಭೀತಗೊಳಿಸಿದೆ. ಇಂತಹ ಘಟನೆಗಳು ನಮ್ಮ ವಿಶ್ವ ನಾಯಕರನ್ನು, ಆಧ್ಯಾತ್ಮಿಕ ಚಿಂತಕರನ್ನು, ರಾಜಕೀಯ ನಾಯಕರನ್ನು ಮತ್ತು ಚಿಂತಕರನ್ನು ಒಟ್ಟುಗೂಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಪ್ರೇರೇಪಿಸುವುದಿಲ್ಲವೇಕೆ? ಇವರ್ಯಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕಾಣುತ್ತಿಲ್ಲವೇಕೆ? ಮುಗ್ಧ ಜನರು ಈ ರೀತಿಯಾಗಿ ಸಾಯುವುದು ಭವಿಷ್ಯದಲ್ಲೂ ಖಚಿತವೇ?
ಅಸಹಿಷ್ಣುತೆ, ದ್ವೇಷ, ದುಷ್ಟತೆಗಳು ಧರ್ಮ ಎಂಬ ಪವಿತ್ರ ಶಕ್ತಿಯಿಂದಲೇ ಹುಟ್ಟಿಕೊಳ್ಳುತ್ತಿದೆ ಎಂಬುದು ನಿಜಕ್ಕೂ ಒಂದು ದೊಡ್ಡ ವ್ಯಂಗ್ಯ! ಈಗ ಜಗತ್ತು ನಾಸ್ತಿಕರಿಗಿಂತ ಹೆಚ್ಚಾಗಿ ಧರ್ಮಾಂಧರಿಗೆ ಭಯಪಡಬೇಕಾಗುತ್ತಿದೆ ಎಂಬುದು ವಿಪರ್ಯಾಸ. ನಾವು ಆಳವಾಗಿ ಶೋಧಿಸಿದರೆ, ಇಂತಹ ರಕ್ತಸಿಕ್ತ ಹಗೆತನಕ್ಕೆ ಪ್ರಮುಖ ಕಾರಣಗಳು ದೇವರ ಬಗ್ಗೆ ಮತ್ತು ನಾವು ಅನುಸರಿಸುತ್ತಿರುವ ಪವಿತ್ರ ಪುಸ್ತಕಗಳ ಬಗ್ಗೆ ನಮಗಿರುವ ತಪ್ಪು ಕಲ್ಪನೆಯಿಂದಲೇ ಸೃಷ್ಟಿಯಾಗಿದೆ ಎಂಬುದು ಕಂಡುಬರುತ್ತವೆ. ನಾವು ನಮ್ಮ ಮಟ್ಟಕ್ಕೆ ಬ್ರಹ್ಮಾಂಡನಾದ ದೇವರನ್ನು ಇಳಿಸಲು ಪ್ರಯತ್ನಿಸುತ್ತಿರುವುದು ಅನಾಹುತಕ್ಕೆಲ್ಲಾ ಮೂಲ ಕಾರಣವಾಗುತ್ತಿದೆ.
ತಮಗಿಂತ ವಿಭಿನ್ನವಾಗಿ ದೇವರನ್ನು ಪೂಜಿಸಿದರೆ ಅವರನ್ನು “ದೈವ ಭಕ್ತಿ ಇಲ್ಲದವರು” ಎಂದು ಕೆಲವರು ಪರಿಗಣಿಸುತ್ತಾರೆ. ಅವರನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಾರೆ, ಅವರ ಪವಿತ್ರ ಪುಸ್ತಕಗಳನ್ನು ಕಡೆಗಣಿಸುತ್ತಾರೆ, ಅವರ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡುತ್ತಾರೆ ಮತ್ತು ಅವರ ಸಂಪ್ರದಾಯ ಮತ್ತು ಆಚರಣೆಗಳನ್ನು ಹಾಸ್ಯ ಮಾಡಲಾಗುತ್ತದೆ. ಇದಲ್ಲದೆ, ಅವರ ಗ್ರಂಥಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಮತ್ತು ಅದರ ಮೂಲಕ ಅವರ ಸಂಪೂರ್ಣ ಸಂಸ್ಕೃತಿ ಮತ್ತು ಧರ್ಮಾಂಧತೆಗಳನ್ನು ದೂಷಿಣೆ ಮಾಡುತ್ತಾರೆ. ಈ ರೀತಿಯ ದೂಷಣೆಗಳು ಮಾನವ ಬಾಂಬ್ ಗಿಂತ ಕಡಿಮೆಯೇನಲ್ಲ, ಇಂತಹ ಧೋರಣೆ ಜನರು, ಸಮುದಾಯಗಳು ಮತ್ತು ಅವರ ನಂಬಿಕೆಗಳ ನಡುವೆ “ವಿಭಜನೆ ಮತ್ತು ದ್ವೇಷವನ್ನು” ತರಲು ಸಹಾಯ ಮಾಡುತ್ತದೆ. ಅಂತಹ ಜನರು ಅಕ್ಷರಶಃ ಹೃದಯದ ಮತ್ತು ಆತ್ಮದ ಮೇಲೆ ಹಾನಿಯನ್ನುಂಟು ಮಾಡುತ್ತಾರೆ, ಇದು ಬಾಂಬ್ ಸ್ಫೋಟಗಳಲ್ಲಿ ಕೊಲ್ಲಲ್ಪಟ್ಟವರು ಅನುಭವಿಸುವ ನೋವಿಗಿಂತಲೂ ಕೆಟ್ಟದಾಗಿರುತ್ತದೆ.
ಒಬ್ಬರು ಅನುಸರಿಸುವ ಧರ್ಮದ ಬಗ್ಗೆ ನಿರಂತರವಾಗಿ ಅವಹೇಳನ ಮಾಡುವುದರಿಂದ ಅವರಲ್ಲಿ ಕಠೋರತೆಯನ್ನು ಬೆಳೆಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದಂತಾಗುತ್ತದೆ. ತಮ್ಮ ಪಾಪಿ ಕೃತ್ಯಗಳನ್ನು ಧರ್ಮ ಮತ್ತು ಪವಿತ್ರ ಪುಸ್ತಕಗಳಿಗೆ ಅರ್ಪಣೆ ಮಾಡುವಷ್ಟರ ಮಟ್ಟಿಗೆ ಇವರು ಬೆಳೆದು ಬಿಡುತ್ತಾರೆ.
ನಮ್ಮ ನೆರೆಯವರನ್ನು ಮತ್ತು ಇತರರನ್ನು ನಾವು ಯಾಕೆ ಪ್ರೀತಿಸಲಾಗುವುದಿಲ್ಲ? ಪ್ರೀತಿಸಿ ಎನ್ನುವುದು ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳ ಅತ್ಯಂತ ಸಾಮಾನ್ಯ ಮತ್ತು ಮೂಲಭೂತ ಬೋಧನೆ ಅಲ್ಲವೇ? ಇತರ ಭಾವನೆಗಳನ್ನು ಗೌರವಿಸುವುದರಿಂದ ನಾವು ವಿಚ್ಛಿದ್ರಕಾರಕಗಳನ್ನು ಪಕ್ಕಕ್ಕೆ ಇಡಲು ಸಾಧ್ಯವಾಗುತ್ತದೆ. ಇನ್ನೊಬ್ಬರಿಗೆ ನೋವು ಮಾಡುವ ಬದಲು, ಎಲ್ಲರೊಂದಿಗೂ ಒಟ್ಟಾಗಿ ಸೇರಿಕೊಳ್ಳುತ್ತಿದ್ದರೆ ಮತ್ತು ಪರಸ್ಪರ ಪ್ರೀತಿ ಮತ್ತು ಸಹೋದರತ್ವಕ್ಕಾಗಿ ಕೆಲಸ ಮಾಡುತ್ತಿದ್ದರೆ ದೇವರು ನಮ್ಮನ್ನು ಎಂದಿಗೂ ಶಿಕ್ಷಿಸುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.
ದೇವರ ಸೃಷ್ಟಿಯ ಬಗ್ಗೆ ಆಳವಾಗಿ ಅರ್ಥ ಮಾಡಿಕೊಳ್ಳುತ್ತಾ ಹೋದರೆ ನಾವು ನಮ್ಮ ಮೂರ್ಖತನದ ಬಗ್ಗೆಯೇ ನಗುತ್ತೇವೆ. ಉದಾಹರಣೆಗೆ -ದೇವರ ಅಪಾರ ಮತ್ತು ಅಪರಿಮಿತ ಸಂಖ್ಯೆಯ ನಕ್ಷತ್ರಪುಂಜಗಳಲ್ಲಿ (150000 -200000 ಜ್ಯೋತಿರ್ವರ್ಷಗಳಲ್ಲಿ ಹರಡುವ ಕೇವಲ “ಒಂದು” ಗ್ಯಾಲಕ್ಸಿ) ತಮ್ಮದೇ ಆದ ಧರ್ಮಗಳನ್ನು ಹೊಂದಿರುವ ಅನಂತ ಸಂಖ್ಯೆಯ “ಭೂಮಿಗಳು” ಇವೆ. ಅಲ್ಲಿರುವ ದೇವರು ಮತ್ತು ನಮ್ಮ ದೇವರು ಒಂದೇ ಅಲ್ಲವೇ? ನಮ್ಮ ಧರ್ಮವನ್ನು ಅವರು ಅನುಸರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ನಾಸ್ತಿಕರು, ದ್ವೇಷ ಮಾಡುವವರೂ ಆಗುತ್ತಾರಾ? ವಿಶ್ವವೇ ಒಂದು ಎಂದು ಪರಿಗಣಿಸುವ ಯಾವ ಧರ್ಮವು ಸಂಕುಚಿತವಾದುದಲ್ಲ. ಆದರೆ ತಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುವುದು, ಮಗುವೊಂದು ಜಗತ್ತಿನಲ್ಲಿ ನನ್ನದೇ ಗೊಂಬೆ ಅತೀ ಸುಂದರ ಎಂದು ಹೇಳುವಷ್ಟು “ಚೈಲ್ಡಿಶ್” ಹೇಳಿಕೆ ಅನಿಸುತ್ತದೆ.
ಧರ್ಮದ ತಪ್ಪು ಗ್ರಹಿಕೆಯಿಂದ ಬಂದಿರುವ ದ್ವೇಷ, ಕ್ರೂರತೆಗಳು ನಮ್ಮ ಮಾನವೀಯ ಮೌಲ್ಯಗಳನ್ನು ನಾಶ ಮಾಡುತ್ತಿವೆ. ನಮ್ಮೊಳಗಿನ ದೈವೀಕತೆಯನ್ನು ಈ ಕ್ರೂರತೆ ಹೊರದಬ್ಬುತ್ತಿದೆ. ಹೀಗಾಗಿ, ಮೊದಲು ನಾವು ಇತರರ ನಂಬಿಕೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಬೆಲೆ ಕೊಡುವುದನ್ನು ಕಲಿಯಬೇಕಿದೆ. ನಮ್ಮ ಮಾರ್ಗಗಳು ಬೇರೆ ಬೇರೆಯಾಗಿರಬಹುದು, ಆದರೆ ಸೇರುವ ಗುರಿ ಒಂದೇ ಆಗಿರುತ್ತದೆ.
ಬೇರೆಯವರ ನಂಬಿಕೆಯನ್ನು ಗೌರವಿಸುವುದರಿಂದ ಮತ್ತು ಅವರ ಸಂಭ್ರಮಗಳಲ್ಲಿ ಭಾಗಿಯಾಗುವುದರಿಂದ ನಮ್ಮೊಳಗಿನ ದೈವತ್ವ ಜಾಗೃತಗೊಳ್ಳುತ್ತದೆ. ಇದರಿಂದ ನಮ್ಮ ಮನಸ್ಸು ಪರಿಶುದ್ಧವಾಗುತ್ತದೆ ಮತ್ತು ಶ್ರದ್ಧೆ ಹೆಚ್ಚುತ್ತದೆ. ಯಾರ ಸಮರ್ಪಣಾ ಭಾವವೂ ಸ್ಪೋಟ, ಮಾನವ ಹತ್ಯೆಗಳಲ್ಲಿ ಕೊನೆಯಾಗಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.