ಬೆಳ್ತಂಗಡಿ : ದುಶ್ಚಟಗಳೆಂದರೆ ಒಂದು ಕತ್ತಲೆ ಪ್ರಪಂಚ. ಇದರಿಂದ ಗುಪ್ತವಾಗಿ ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಕಷ್ಟಗಳು ಬಂದಾಗ, ಸಮಸ್ಯೆಗಳು ಎದುರಾದಾಗ, ಸೋಲಿಗೆ ಸಿಲುಕಿದಾಗ ಜನರು ಹುಡುಕುವ ಸುಲಭದ ದಾರಿಯೇ ವ್ಯಸನಕ್ಕೆ ಬಲಿಬೀಳುವುದಾಗಿದೆ. ಇಂದು ಈ ರೋಗಕ್ಕೆ ತುತ್ತಾಗಿ ನರಳುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಆತಂಕಕಾರಿಯಾಗಿದೆ.
ಇಂತವರನ್ನು ಹುಡುಕಿ ಮನಪರಿವರ್ತನೆ ಮಾಡಿ ಹೊಸ ಬದುಕು ನೀಡುವುದು ಅನಿವಾರ್ಯವಾಗಿದೆ. ಕರಿಹಿಡಿದ ಪಾತ್ರೆಗೆ ತೊಳೆದು ಶುದ್ದಮಾಡಿದಾಗ ಅದಕ್ಕೆ ನವ ಕಳೆ ಬರುತ್ತದೆ. ಹಾಗೆಯೇ ದುಶ್ಚಟಗಳಿಗೆ ಬಲಿಯಾದವರನ್ನು ಮದ್ಯವರ್ಜನ ಶಿಬಿರಗಳ ಮೂಲಕ ಶುದ್ದೀಕರಣ ಮಾಡಿ ಮನಪರಿವರ್ತನೆ ಮಾಡುವುದು ನಿಜವಾಗಿಯೂ ಸರ್ವಶ್ರೇಷ್ಠ ಕಾಯಕ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಸ್ವಾಮಿಕೃಪಾ ಕಲ್ಯಾಣ ಮಂಟಪ ಕನ್ಯಾಡಿಯಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ೫೧ನೇ ವಿಶೇಷ ಮದ್ಯವರ್ಜನ ಶಿಬಿರದ ೬ನೇ ದಿನದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿದರು.
ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ೫೨ ಮಂದಿ ಶಿಬಿರಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ನೌಕರರು, ಉದ್ಯಮಿಗಳು, ಸ್ವಉದ್ಯೋಗಿಗಳು, ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು, ಕೃಷಿಕಾರ್ಮಿಕರು ಈ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಶಿಬಿರದಲ್ಲಿ ಮನೋದೈಹಿಕ ಚಿಕಿತ್ಸೆ, ಹಿಂತೆಗೆತದ ಚಿಹ್ನೆಗಳ ನಿರ್ವಹಣೆ, ಸಲಹೆ, ಕೌಟುಂಬಿಕ ಸಮಾಲೋಚನೆ, ಆಪ್ತಸಮಾಲೋಚನೆ, ಗುಂಪುಚಟುವಟಿಕೆ, ಯೋಗ ಚಿಕಿತ್ಸೆ, ಭಜನೆ ಮತ್ತು ಆಧ್ಯಾತ್ಮಕ್ಕೆ ಪೂರಕವಾದ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಶಿಬಿರವು ನಿರ್ದೇಶಕರಾದ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಶಿಬಿರಾಧಿಕಾರಿಗಳಾದ ಗಣೇಶ್ ಆಚಾರ್ಯ, ಆರೋಗ್ಯ ಸಹಾಯಕರಾದ ಚಿತ್ರಾ ಇವರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ನಡೆಸಲಾಗಿದೆ. ಮುಂದಿನ ಶಿಬಿರ ಜುಲೈ೦೬ ರಂದು ಆರಂಭವಾಗಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.