ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು ವಿದ್ಯಾನಂದ ಶೆಣೈ ಜೀ. ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದ್ದಲ್ಲದೇ ‘ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ’ ಅಂದರೆ ಭೂಮಿ ನನ್ನ ತಾಯಿ, ನಾನು ಅವಳ ಮಗು ಅಂಥ. ಈ ರೀತಿಯ ತಾಯಿ ಮತ್ತು ಮಗುವಿನ ಸಂಬಂಧದೊಂದಿಗೆ ದೇಶವನ್ನು ಬೆಸೆದು ತೋರಿಸಿದವರು ವಿದ್ಯಾನಂದಜೀ.
ಪೂಜ್ಯ ವಿದ್ಯಾನಂದ ಶೆಣೈ ಅವರ ಪ್ರವಚನ ಕೇಳುವುದೆಂದರೆ ಕರ್ಣಾನಂದಕರ ಸಂಗೀತವನ್ನು ಅಂತರಾಳದಿಂದ ಅನುಭಾವಿಸುವಂತಹ ಒಂದು ಅಪೂರ್ವ ಸುಯೋಗ. ಅವರ ವಿದ್ವತ್ತು, ಸ್ಪಷ್ಟತೆ, ಇಂಪಾದ ಧ್ವನಿ, ಅಪೂರ್ವ ಸಾಹಿತ್ಯಕ ಮೌಲ್ಯ ಮತ್ತು ಅವೆಲ್ಲವನ್ನೂ ಮೀರಿಸುವಂತಹ ಅದಮ್ಯ ದೇಶಭಕ್ತಿ, ಕೇಳುಗನೊಂದಿಗೆ ಅಪೂರ್ವ ಅನುಭೂತಿ ಇವೆಲ್ಲಾ ಇನ್ನಿಲ್ಲದಂತೆ ನಮ್ಮ ಹೃನ್ಮನಗಳನ್ನು ಸೆಳೆಯುತ್ತವೆ.
ವಿದ್ಯಾನಂದ ಶೆಣೈ ಅವರ ‘ಭಾರತ ದರ್ಶನ’ದಲ್ಲಿ, “ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯ; ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು; ಮತ್ತು ಪ್ರಮುಖ ತೀರ್ಥ-ಕ್ಷೇತ್ರಗಳು, ಅಖಂಡ ಭಾರತದ ಆರಾಧನೆ” ಎಂಬ ವಿಷಯಗಳ ಕುರಿತಾಗಿ ಹಲವಾರು ಉಪನ್ಯಾಸ ಮಾಲಿಕೆ. ಇಂಥಹ ಮಹಾನ್ ರಾಷ್ಟೀಯ ಜೀವನಾಡಿಯ ಪರಿಚಯವೇ ವಿದ್ಯಾನಂದ ಶೆಣೈ ಅವರು ಮಾಡಿಕೊಟ್ಟಿರುವ ‘ಭಾರತ ದರ್ಶನ’.
ಭಾರತ ದರ್ಶನದ ಕುರಿತು ಸಂತ ಭದ್ರಗಿರಿ ಅಚ್ಯುತದಾಸರ ಮಾತುಗಳು ಇಂತಿವೆ: “ಇದೊಂದು ಚೇತೋಹಾರಿ ಕಥಾನಕ. ಒಂದು ಮಗು ತನ್ನ ತೊಡೆಯ ಮೇಲೆ ಕುಳಿತು ಅವಳನ್ನು ವರ್ಣಿಸಿದಂತೆ ಮೋಹಕವಾಗಿ ಸಾಗಿದೆ ಈ ಉಪನ್ಯಾಸದ ಪ್ರವಾಹ”. ಕನ್ನಡಿಗರ ಕಣ್ಮಣಿ ರಾಜ್ಕುಮಾರ್ ನುಡಿದಿದ್ದಾರೆ “ಭಾರತ ದರ್ಶನದಲ್ಲಿ ವಿವರಣೆಗಳನ್ನು ಕೇಳುವಾಗ ನನಗೆ ಕಣ್ತುಂಬಿ ಬರುತ್ತದೆ. ಆ ಭಾಷೆ, ವರ್ಣನೆ, ಅಬ್ಬಬ್ಬಾ! ಎಂಥ ದೇಶ ನಮ್ಮದು! ಎಲ್ಲರೂ ಕೇಳಬೇಕು”.
‘ಇಂಟಲೆಕ್ಚುಯಲ್ ಕ್ರಾಂತಿಕಾರಿ ಸಾವರ್ಕರ್’ ಅವರನ್ನ ಅದೆಷ್ಟೋ ಯುವ ಮನಸ್ಸುಗಳಿಗೆ ಪರಿಚಯಿಸಿದವರು ವಿದ್ಯಾನಂದ ಜೀ ಎಂದರೆ ತಪ್ಪಾಗಲಾರದು.
ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ‘ವೀರ ಸಾವರ್ಕರ್’ ಪುಸ್ತಕ ಹೊರಬಂದಿದ್ದೇ ವಿದ್ಯಾನಂದ ಜೀಯವರ ಪ್ರೇರಣೆಯಿಂದ ಮತ್ತು ಅವರ ಮಾರ್ಗದರ್ಶನದಿಂದ ಅಂಥ ಚಕ್ರವರ್ತಿ ಸೂಲಿಬೆಲೆ ಅವರೇ ಅದೆಷ್ಟೋ ಭಾಷಣದಲ್ಲಿ ಹೇಳಿದ್ದಾರೆ.
ಹೀಗೆ, ವಿದ್ಯಾನಂದ ಶೆಣೈ ಅವರು ತಮ್ಮ ಜೀವಿತದ 56 ವರ್ಷಗಳಲ್ಲಿ ಬ್ರಹ್ಮಚರ್ಯವನ್ನು ಪಾಲಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದರು. ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ ಅಪ್ರತಿಮ ಖ್ಯಾತಿಗಳಿಸಿದ್ದ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಅವರು ಹೊರತಂದಿದ್ದ ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.
ಈ ಮಹಾನ್ ರಾಷ್ಟ್ರಭಕ್ತರು ದಿನಾಂಕ 26 ಏಪ್ರಿಲ್ 2007 ರ ವರ್ಷದಲ್ಲಿ ಈ ಲೋಕವನ್ನಗಲಿದರು. ಇಂದು ದೇಶ ಎದುರಿಸುತ್ತಿರುವ ಹಲವಾರು ಸಂದಿಗ್ಧಗಳಲ್ಲಿ ವಿದ್ಯಾನಂದ ಶೆಣೈ ಅವರ ಮಾತುಗಳ ಅರ್ಥೈಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದ ಅವಶ್ಯಕತೆಯಿದೆ. ಈ ಮಹನೀಯರ ಆತ್ಮ ನಿತ್ಯ ಶಾಂತಿಯಲ್ಲಿರಲಿ. ಆ ಶಾಂತಿ ದಿವ್ಯ ಜ್ಞಾನಗಳು ನಮ್ಮ ಬದುಕಿಗೆ ದಾರಿದೀಪವಾಗಿರಲಿ.
ವಿದ್ಯಾನಂದ ಜೀ ನಮ್ಮನ್ನಗಲಿ ಇಂದಿಗೆ ಹನ್ನೆರಡು ವರ್ಷ ಕಳೆದೇ ಹೋಯಿತು!!
(ಸಂಗ್ರಹ)
✍ ರಶ್ಮಿ ನಾಯಕ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.