ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥಾಪಕ ಮತ್ತು ಸಂಘ ಪರಿವಾರದ ಹಿರಿಯ ಮುಖಂಡ ಪ್ರಕಾಶ್ ಕಾಮತ್ ಅವರು ಭಾನುವಾರ ಬೆಳಗಾವಿಯಲ್ಲಿ ಇಹಲೋಕವನ್ನು ತ್ಯಜಿಸಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
1949ರ ಎಪ್ರಿಲ್ 10ರಂದು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜನಿಸಿದ ಅವರು, ದಕ್ಷಿಣಕನ್ನಡ ಸುರತ್ಕಲ್ ರೀಜಿನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಂಗಾರದ ಪದಕದೊಂದಿಗೆ ಪದವಿಯನ್ನು ಪಡೆದುಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತಗೊಂಡಿದ್ದ ಅವರು, ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಸಂಘ ಪರಿವಾರವನ್ನು ಸೇರಿಕೊಂಡರು. ತಮ್ಮ ಇಡೀ ಜೀವನವನ್ನೇ ಸಾಮಾಜಿಕ ಕಾರ್ಯಕ್ಕಾಗಿ ಮುಡಿಪಾಗಿಟ್ಟರು, ಅದರಲ್ಲೂ ಮುಖ್ಯವಾಗಿ ರಾಜ್ಯದ ವನವಾಸಿ ಜನಾಂಗದ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದರು.
ಎರಡು ದಶಕಗಳ ಕಾಲ ಅವರು ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಪ್ರಚಾರಕ್ ಆಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ 1975ರಲ್ಲಿ ಹೇರಲ್ಪಟ್ಟ ತುರ್ತುಪರಿಸ್ಥಿತಿಯನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಅದರ ವಿರುದ್ಧ ಹೋರಾಡಲು ಜನರನ್ನು ಒಟ್ಟು ಸೇರಿಸಿದರು.
1989ರಲ್ಲಿ ವನವಾಸಿ ಕಲ್ಯಾಣ ಕರ್ನಾಟಕ (ವಿಕೆಕೆ)ವನ್ನು ಸ್ಥಾಪನೆ ಮಾಡಿ, ಅದರ ಮೂಲಕ ವನವಾಸಿ ಜನರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದರು. ರಾಷ್ಟ್ರೀಯ ಮಟ್ಟದ ಸಂಸ್ಥೆಯಾದ ವನವಾಸಿ ಕಲ್ಯಾಣ ಆಶ್ರಮದ ಭಾಗವಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
”ವನವಾಸಿ ಕಲ್ಯಾಣ ಕರ್ನಾಟಕ ಸ್ಥಾಪನೆಯಾದಾಗ ಪ್ರಕಾಶ್ ಕಾಮತ್ ಅವರು ಅತ್ಯಂತ ಉತ್ಸಾಹದಿಂದ ಮುಂಡಗೋಡ್ ತಾಲೂಕಿನ ಚಿಪಗೇರಿಯಲ್ಲಿ ಸಿದ್ಧಿ, ಗೊಂಡ, ಗೌಳಿ, ಕುನಂಬಿ ಇತ್ಯಾದಿ ವನವಾಸಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಿದರು. ಊಟ ವಸತಿ ಎಲ್ಲವೂ ಇಲ್ಲಿ ಉಚಿತವಾಗಿದೆ” ಎಂದು ವಿಕೆಕೆಯ ಮಾಜಿ ಟ್ರಸ್ಟಿ ಸಚ್ಚಿದಾನಂದ ಹೆಗ್ಡೆ ಹೇಳಿದ್ದಾರೆ.
”ಬಳಿಕ ಕಾಮತ್ ಅವರು, ಯಲ್ಲಾಪುರ, ಕುಮಟಾ ಸೇರಿದಂತೆ ಹಲವಾರು ಕಡೆಗಳಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಿದರು. ದಾಂಡೇಲಿಯಲ್ಲಿ, ದಕ್ಷಿಣಕನ್ನಡ, ಮೈಸೂರು, ಚಾಮರಾಜನಗರ, ಬೆಳಗಾವಿ ಇತ್ಯಾದಿ ಕಡೆಗಳಲ್ಲಿ ಅವರು ಮಹಿಳಾ ಹಾಸ್ಟೆಲ್ಗಳನ್ನೂ ತೆರೆದರು. ಮಾತ್ರವಲ್ಲ, ಬುಡಕಟ್ಟು ಸಮುದಾಯದವರ ಕಲ್ಯಾಣಕ್ಕಾಗಿ ಅವರು, ಕ್ರೀಡಾ ತರಬೇತಿ ಕೇಂದ್ರ, ಟೈಲರಿಂಗ್ ತರಬೇತಿ ಕೇಂದ್ರ, ರೀಡಿಂಗ್ ರೂಮ್ ಇತ್ಯಾದಿಗಳನ್ನು ತೆರೆದರು” ಎಂದಿದ್ದಾರೆ.
ಉತ್ತರಕನ್ನಡದಲ್ಲಿ ಎರಡು ದಶಕಗಳ ಕಾಲ ಪ್ರಚಾರಕ್ ಆಗಿ ದುಡಿದ ಬಳಿಕ ಅವರು, ವಿಭಾಗ್ ಪ್ರಚಾರಕ್ ಆಗಿ ಭಡ್ತಿ ಪಡೆದರು ಮತ್ತು ಹಲವಾರು ಹುದ್ದೆಗಳನ್ನು ಅಲಂಕರಿಸಿದರು. ಝಾರ್ಖಾಂಡ್, ಛತ್ತೀಸ್ಗಡ, ಈಶಾನ್ಯ ಭಾರತ ಸೇರಿದಂತೆ ವನವಾಸಿ ಕಾರ್ಯಕ್ರಮಗಳೊಂದಿಗೆ ಅವರು ಹಲವಾರು ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಕ್ಸಲ್ ಪ್ರದೇಶಗಳಲ್ಲಿ ವನವಾಸಿಗರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಇಡೀ ಜೀವನವನ್ನೇ ಅವರು ಬುಡಕಟ್ಟು ಜನಾಂಗದ ಉದ್ಧಾರ ಮತ್ತು ಸಂಘ ಪರಿವಾರದ ಸೇವೆಗಾಗಿ ಸವೆಸಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಅವರು ಅಖಿಲ ಭಾರತೀಯ ಗ್ರಾಮ ವಿಕಾಸ ಪ್ರಮುಖ್ ಹುದ್ದೆಯಿಂದ ಕೆಳಗಿಳಿದಿದ್ದರು.
”ಕಾಮತ್ ಅವರು ಅತ್ಯಂತ ವಿನಮ್ರ ವ್ಯಕ್ತಿತ್ವದವರಾಗಿದ್ದು, ಭಾರತದಲ್ಲಿನ ವಿವಿಧ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ. ಅರಣ್ಯ ಭಾಗಗಳಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಸ್ಥಾಪನೆ ಮಾಡಿರುವ ಹಾಸ್ಟೆಲ್ಗಳಿಂದಾಗಿ ಹಲವಾರು ಬುಡಕಟ್ಟು ಯುವಕ ಯುವತಿಯರು ಶಿಕ್ಷಣವನ್ನು ಪಡೆಯುವಂತಾಯಿತು. ಇಲ್ಲಿ ಕಲಿತವರು ಒಳ್ಳೆಯ ಉದ್ಯೋಗದಲ್ಲಿದ್ದಾರೆ ಮತ್ತು ಕೆಲವರು ವಿಕೆಕೆಯೊಂದಿಗೆ ಕೈಜೋಡಿಸಿ ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಕಾಮತ್ ಅವರು ಎಲ್ಲರಿಗೂ ಪ್ರೇರಣಾಶೀಲರು. ಉನ್ನತ ಹುದ್ದೆಯನ್ನು ಅಲಂಕರಿಸಿದ ಬಳಿಕವೂ ಅವರು ಸಾರ್ವಜನಿಕ ಸಾರಿಗೆಯಲ್ಲೇ ಸಂಚರಿಸುತ್ತಿದ್ದರು” ಎಂದು ಹೆಗ್ಡೆ ನೆನಪಿಸಿಕೊಳ್ಳುತ್ತಾರೆ.
ಸರಳ ವ್ಯಕ್ತಿತ್ವ
ಅವರು ಬಳಸುವುದು ಎರಡು ಪಂಚೆ, ಎರಡು ಅಂಗಿ. ಒಂದು ಜೊತೆಯನ್ನು ಧರಿಸಿದರೆ ಮತ್ತೊಂದು ಜೊತೆ ಒಗೆದುಹಾಕುತ್ತಾರೆ. ಒಗೆದ ಬಟ್ಟೆಯನ್ನು ದಿಂಬಿನ ಅಡಿ ಇಟ್ಟು ಮಲಗಿದರೆ ಬೆಳಗಾಗುವುದರೊಳಗೆ ಇಸ್ತ್ರಿ ಆಗಿರುತ್ತದೆ. ಅವರು ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ಪಂಚೆ, ಅಂಗಿಯ ವಸ್ತ್ರವನ್ನೋ ನೀಡಿದರೆ ಅದನ್ನು ತಮ್ಮ ಜೊತೆಗಾರ ಸಾಮಾಜಿಕ ಕಾರ್ಯಕರ್ತರಿಗೆ ಕೊಟ್ಟುಬಿಡುತ್ತಾರೆ. ‘ಅರೇ ಅದು ನಿಮಗೆ ಕೊಟ್ಟಿದ್ದು’ ಎಂದು ಹೇಳಿದರೆ ‘ಹೌದು ಅವರೂ ನಮ್ಮವರೇ, ನನಗೆ ಎರಡೇ ಜೊತೆ ಸಾಕು ಬಿಡಿ’ ಎನ್ನುತ್ತಾರೆ. ಯಾವ ಕಾರ್ಯಕರ್ತನ ಬಳಿ ಎಷ್ಟು ಬಟ್ಟೆಗಳು ಇವೆ, ಯಾರಿಗೆ ಯಾವಾಗ ಕೊಟ್ಟಿದ್ದೇನೆ ಎಂಬುದರ ಮಾಹಿತಿಯೂ ಅವರಿಗೆ ಇತ್ತೆಂದು ಅವರ ನಿಕಟವರ್ತಿಗಳು ಹೇಳುತ್ತಾರೆ.
ಅವರೆಂದೂ ಕೈಗೆ ವಾಚು ಕಟ್ಟುವುದಿಲ್ಲ. ಆದರೆ ಸಮಯದ ಪಾಲನೆಯನ್ನು ಅವರು ಎಂದೂ ತಪ್ಪಿದ್ದನ್ನು ನೋಡಿಲ್ಲ. ಪೋಸ್ಟ್ ಕಾರ್ಡೇ ಅವರಿಗೆ ಸಂಪರ್ಕ ಸಾಧನ. ಲ್ಯಾಂಡ್ ಲೈನನ್ನೂ ಅವರು ಬಳಸುವುದು ಕಡಿಮೆ. ಹಾಗಿದ್ದರೂ ಎಂದೂ ಕಮ್ಯುನಿಕೇಶನ್ ಗ್ಯಾಪ್ ಆಗಿದ್ದನ್ನು ನೋಡಿಲ್ಲ. ಮುಂದಿನ ತಿಂಗಳು ಇಂಥ ದಿನಾಂಕ ಇಂಥ ಸಮಯಕ್ಕೆ ನಿಮ್ಮ ಮನೆಗೆ ಅಥವಾ ಇಂಥ ಸ್ಥಳಕ್ಕೆ ಬರುತ್ತೇನೆಂದು ಪೋಸ್ಟ್ ಕಾರ್ಡಲ್ಲಿ ಬರೆದು ತಿಳಿಸುತ್ತಿದ್ದರು. ಅವರು ಹೇಳಿದ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿಯೇ ಕಾಮತರ ಆಗಮನವಾಗುತ್ತಿತ್ತು. ಗೊತ್ತಿರಲಿ ಅವರೆಂದೂ ಕಾರು, ಮೋಟಾರು ಸೈಕಲ್ಲನ್ನು ಹತ್ತುವುದಿಲ್ಲ. ಕಾಮತರಿಗೆಂದೂ ಸರ್ಕಾರಿ ಬಸ್ಸು ಕೈಕೊಟ್ಟು ತಾಪತ್ರಯ ಅನುಭವಿಸಿದ್ದನ್ನು ನೋಡಿಲ್ಲ. ಏಕೆಂದರೆ ಅವರದು ಎಲ್ಲವೂ ವ್ಯವಸ್ಥಿತವಾದಂತಹ ಯೋಜನಾಬದ್ಧವಾಗಿರುತ್ತಿತ್ತು ಎಂದು ಅವರನ್ನು ಹತ್ತಿರದಿಂದ ಕಂಡವರು ನೆನಪಿಸಿಕೊಳ್ಳುತ್ತಾರೆ.
ಕಾಮತರಂಥ ನಿಸ್ವಾರ್ಥ ಸೇವಕರನ್ನು ಯಾವ ರೀತಿ ಗೌರವಿಸಿದರೂ ಕಡಿಮೆಯೇ. ಜೀವನದುದ್ದಕ್ಕೂ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದ ಪ್ರಕಾಶ್ ಕಾಮತ್ ಅವರು, ಸಾವಿನ ಬಳಿಕವೂ ಸಾರ್ಥಕತೆಯನ್ನು ಮೆರೆದಿದ್ದಾರೆ. ತನ್ನೆರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತಿದ್ದಾರೆ.
ಇಂದು ಅಂತ್ಯಸಂಸ್ಕಾರ
ಕಾಮತ್ ಅವರ ಹುಟ್ಟೂರು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸೋಮವಾರ ಅಂತ್ಯಸಂಸ್ಕಾರ ನೆರವೇರಲಿದೆ. ಧಾರವಾಡ ಮತ್ತು ಶಿರಸಿಯಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.