ಪ್ರಜಾಪ್ರಭುತ್ವ ಪದ್ಧತಿಯನ್ನು ಮಿಕ್ಕೆಲ್ಲ ಆಡಳಿತ ವಿಧಾನಗಳಿಗಿಂತ ಕಡಿಮೆ ತೊಂದರೆಯುಳ್ಳ ಪದ್ಧತಿಯೆಂದು ತಿಳಿಯಲಾಗುತ್ತಿದೆ. ಇದರರ್ಥ ಆಡಳಿತದ ಎಲ್ಲಾ ಪ್ರಕಾರಗಳು ಒಂದಲ್ಲ ಒಂದುತರದ ನ್ಯೂನತೆಯಿಂದ ಬಳಲುತ್ತಿವೆ ಎಂಬುದು. ಯಾವುದೇ ಆಡಳಿತ ಪದ್ಧತಿಯು ನೂರಕ್ಕೆ ನೂರು ದೋಷರಹಿತ ಎನ್ನುವಂತಿಲ್ಲ ಎಂಬುದು ಇದರರ್ಥ. ರಾಜನ ಆಳ್ವಿಕೆ, ಒಂದು ನಿರ್ದಿಷ್ಟ ಪಕ್ಷದ್ದೇ ಆಳ್ವಿಕೆ (ಉದಾ: ಚೀನಾದಲ್ಲಿರುವಂತೆ ಕಮ್ಯುನಿಸ್ಟ್ ಪಕ್ಷ) ವಿವಿಧ ಪಕ್ಷಗಳು ಅಥವಾ ಜನಸಮೂಹಗಳ ಪ್ರತಿನಿಧಿಗಳು ಒಟ್ಟು ಸೇರಿ ರಾಜ್ಯಭಾರ ನಡೆಸುವುದು, ಏಕಾಧಿಪತ್ಯ ಅಥವಾ ನಿರಂಕುಶ ಪ್ರಭುತ್ವ- ಹೀಗೆ ಹತ್ತಾರು ತರಹದ ಆಡಳಿತ ವಿಧಾನಗಳನ್ನು ವಿಶ್ವದಾದ್ಯಂತ ಕಳೆದ ನೂರಾರು ವರ್ಷಗಳಲ್ಲಿ ನಾವು ಕಂಡಿದ್ದೇವೆ. ಈ ಎಲ್ಲಾ ವಿಧಾನಗಳ ಒಳಿತು ಕೆಡುಕುಗಳ ವಿಶ್ಲೇಷಣೆಯಿಂದ ಗಮನಿಸಬಹುದಾದ ಅಂಶವೆಂದರೆ ಅತ್ಯಂತ ಕಡಿಮೆ ತೊಂದರೆ ಉಳ್ಳ ವಿಧಾನವೇ ಪ್ರಜಾಪ್ರಭುತ್ವವೆಂಬುದು.
ಪ್ರಜಾಪ್ರಭುತ್ವಕ್ಕೆ ಅಮೇರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ನೀಡಿದ್ದೆನ್ನಲಾದ ನಿರ್ವಚನವನ್ನೇ ಎಲ್ಲರೂ ಉಲ್ಲೇಖಿಸುವುದನ್ನು ಕಾಣುತ್ತೇವೆ.
ಜನರಿಂದ, ಜನರಿಗಾಗಿ, ಜನರೇ ನಿರ್ವಹಿಸುವ ಆಡಳಿತ ಪದ್ಧತಿಯನ್ನು ‘ಪ್ರಜಾಪ್ರಭುತ್ವ ವೆಂದು ಲಿಂಕನ್ ಕರೆದಿದ್ದ. ಮೇಲಿಂದ ಮೇಲೆ ಸದರಿ ವಿವರಣೆಯನ್ನು ಒಪ್ಪಬಹುದೆಂದಿಟ್ಟುಕೊಂಡರೂ ನಿಜ ಅರ್ಥದಲ್ಲಿ ಬಹುಜನರ ಭಾವನೆಗಳಿಗೆ ಪ್ರಜಾಪ್ರಭುತ್ವದಲ್ಲಿ ಮನ್ನಣೆ ಸಿಗದಿರುವುದನ್ನೂ ಕಾಣುತ್ತೇವೆ.
ಇಂದಿನದ್ದೇ ಉದಾಹರಣೆ ನೀಡುವುದಾದರೆ ರಾಮಜನ್ಮ ಭೂಮಿಯಲ್ಲೇ ರಾಮಮಂದಿರ ನಿರ್ಮಿಸುವ ನಮ್ಮ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಅದಿನ್ನೂ ಮನ್ನಣೆ ಬಂದಿಲ್ಲದಿರುವುದು ಪ್ರಜಾಪ್ರಭುತ್ವದ ಅಣಕವೆನ್ನಬೇಕಷ್ಟೆ.
ಪ್ರಜಾಪ್ರಭುತ್ವದ ವ್ಯವಸ್ಥೆಯೇ ಆಡಳಿತ ನಡೆಸುತ್ತಿರುವ ನಮ್ಮ ದೇಶದಲ್ಲಿಯೂ 1975-76 ರಲ್ಲಿ ಶ್ರೀಮತಿ ಇಂದಿರಾಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ವಿಶ್ವದ ಯಾವುದೇ ನಿರಂಕುಶ ಆಡಳಿತಕ್ಕಿಂತಲೂ ಕೆಟ್ಟದಾಗಿ ಜನತೆಯ ಮೂಲಭೂತ ಹಕ್ಕುಗಳನ್ನು ಕಸಿದು, ಜೈಲಿಗೆ ದೂಡಿದ ಉದಾಹರಣೆಯನ್ನು ಇತಿಹಾಸ ದಾಖಲಿಸಿದೆ.
ತಥಾಕಥಿತ ನಿರಂಕುಷ ಆಡಳಿತದ ಮುಂದಾಳು/ ರಾಜ ಬಹುಜನ ಸುಖಾಯ, ಬಹುಜನಹಿತಾಯ ಎಂಬ ಪರಮೋದ್ದೇಶ ಇಟ್ಟುಕೊಂಡು ಜನರಿಗೆ ಆಡಳಿತ ನೀಡಿದ್ದಕ್ಕೆ ಅನೇಕ ದೇಶಗಳಲ್ಲಿ, ವಿಶೇಷವಾಗಿ ಭಾರತ ದೇಶದಲ್ಲೂ ತುಂಬಾ ಉದಾಹರಣೆಗಳು ಸಿಗುತ್ತವೆ.
ರಾಮಾಯಣಕಾಲದ ಶ್ರೀ ರಾಮಚಂದ್ರನ ರಾಜ್ಯಭಾರದ ಕ್ರಮದಿಂದ ರಾಮರಾಜ್ಯ ಕಲ್ಪನೆಯೇ ಸೃಷ್ಟಿಯಾದುದನ್ನು ನಾವು ಕಾಣುತ್ತೇವೆ. ಬಹು ಜನರ ಭಾವನೆಗಳನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ಎಲ್ಲೋ ಒಬ್ಬ ಅಗಸ ಸಿಟ್ಟಿನಿಂದ ತನ್ನ ಹೆಂಡತಿಯ ಬಳಿ ರಾಮನ ಬಗ್ಗೆ ಏನೋ ಹೇಳಿದನೆಂಬ ಕಾರಣಕ್ಕೆ ಸ್ವತಃ ಶ್ರೀ ರಾಮನೇ ಗೂಡಚಾರರ ಮೂಲಕ ತಿಳಿದ ಸಂಗತಿಯ ಕಾರಣಕ್ಕೆ ಪತ್ನಿ ಸೀತೆಯನ್ನೇ ಪರಿತ್ಯಜಿಸಿದ ವಿಷಯವನ್ನು ಆದರ್ಶದ ಪರಾಕಾಷ್ಠೆ ಎನ್ನೋಣವೇ? ಪ್ರಜಾಪ್ರಭುತ್ವದ ಮೂಲ ಸ್ವರೂಪವೆನ್ನೋಣವೇ? ಚರ್ಚಿಸಬಹುದಾದ ವಿಷಯವಿದು.
ಯಾವುದೇ ಆಡಳಿತ ವ್ಯವಸ್ಥೆಯು ಬಹುಜನ ಸುಖಾಯ ಬಹುಜನ ಹಿತಾಯ ಆಗುವುದಲ್ಲದೆ ಸರ್ವಜನ ಸುಖಾಯ, ಸರ್ವಜನ ಹಿತಾಯ ಆಗಬೇಕಾದುದೇ ನಮಗೆ ಆದರ್ಶವಾಗಬೇಕು. ಎಲ್ಲರಿಗೂ ಒಳ್ಳೆಯದಾಗಲಿ, ಸುಖವಾಗಲಿ ಎಂದು ಬಯಸುವುದೇ ಸರ್ವೇ ಜನಾಃ ಸುಖಿನೋ ಭವಂತು ಎಂಬ ಭಾರತೀಯ ವಿಚಾರದ ಮೂಲ ಮಂತ್ರ. ಈ ಉದ್ದೇಶವನ್ನು ಈಡೇರಿಸುವ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿದೆ ಎನ್ನಬಹುದಷ್ಟೇ.
ಸಾಮ್ರಾಟ್ ಅಶೋಕನ ರಾಜ್ಯಭಾರ, ವಿಜಯನಗರದ ಅರಸರ ಸ್ವರ್ಣಮಯ ಇತಿಹಾಸ, ಹಾಗೆಯೇ ಇನ್ನೂ ಅನೇಕ ಉದಾಹರಣೆಗಳು ನಮ್ಮ ದೇಶದ ಅರಸರು ಪ್ರಜಾಪ್ರಭುತ್ವಕ್ಕೂ ಮೀರಿದ ಏಕಾಧಿಪತ್ಯವೆನ್ನಲಡ್ಡಿಯಿಲ್ಲ.
ಇಂದಿನ ಭಾರತೀಯ ಪ್ರಜಾಪ್ರಭುತ್ವ ಬ್ರಿಟನ್ನ ಪ್ರಜಾಪ್ರಭುತ್ವವನ್ನು ಆದರ್ಶವಾಗಿ ಮಾದರಿಯಾಗಿ ಬಳಸಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಬ್ರಿಟನ್ ಮತ್ತು ಅಮೇರಿಕಾದಲ್ಲಿನ ಪ್ರಜಾಪ್ರಭುತ್ವವನ್ನು ಅಧ್ಯಕ್ಷೀಯ ಮಾದರಿ ಎಂದೂ ಭಾರತೀಯ ಪ್ರಜಾಪ್ರಭುತ್ವವನ್ನು ಸಂಸದೀಯ ಮಾದರಿ ಎಂದೂ ಗುರುತಿಸಲಾಗುತ್ತದೆ. ಎರಡೂ ಮಾದರಿಗಳಲ್ಲೂ ಕೆಲವೊಂದು ಕೊರತೆಗಳನ್ನು ಗುರುತಿಸಲಾಗುತ್ತದೆ.
ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ವಿಶ್ವದಲ್ಲಿಯೇ ಅತ್ಯಂತ ಸಮರ್ಥವಾದ ಪ್ರಜಾಪ್ರಭುತ್ವದ ಮಾದರಿ ಭಾರತದ ಇತಿಹಾಸ ಪರಂಪರೆ ಹಾಗೂ ಆಡಳಿತ ವ್ಯವಸ್ಥೆಗಳಲ್ಲಿ ಕಾಣಸಿಗುತ್ತದೆ ಎಂಬುದು.
✍ ಶ್ರೀ ಬಾಲಕೃಷ್ಣ ಭಟ್
ದಕ್ಷಿಣ ಕ್ಷೇತ್ರೀಯ ಪ್ರಮುಖ್, ಎ.ಬಿ.ಆರ್.ಎಸ್.ಎಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.