ಹಣಕ್ಕಾಗಿ ವೈದ್ಯ ವೃತ್ತಿಯನ್ನು ಮಾಡುವವರ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ನಿಸ್ವಾರ್ಥವಾಗಿ ಆರೋಗ್ಯ ಸೇವೆಯನ್ನು ಮಾಡುವ ವೈದ್ಯರನ್ನು ನಾವು ಕಾಣುತ್ತೇವೆ. ಅಂತಹ ವಿರಳ ವೈದ್ಯರ ಸಾಲಿನಲ್ಲಿ ಡಾ. ಚಿತ್ತರಂಜನ್ ಜೇನ ಅವರು ಕೂಡ ಒಬ್ಬರು, ಒರಿಸ್ಸಾದವದಾರ ಇವರು, ಪ್ರತಿ ವಾರ ತಮ್ಮ ತಂಡದೊಂದಿಗೆ ಕಿಲೋಮೀಟರ್ಗಟ್ಟಲೆ ನಡೆದು ಕುಗ್ರಾಮಗಳಿಗೆ ತೆರಳುತ್ತಾರೆ, ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಆರೋಗ್ಯ ಸೇವೆಯನ್ನು ನೀಡುತ್ತಾರೆ. ಕಳೆದ ಎರಡು ವರ್ಷಗಳಿಂದ ಸತತವಾಗಿ ಅವರು ಈ ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ಮೂಲಕ ನೂರಾರು ಬುಡಕಟ್ಟು ಜನರ ಆರೋಗ್ಯವನ್ನು ಕಾಪಾಡಿದ್ದಾರೆ.
ಕೊರಪುಟ್, ನಬರಗಂಗ್ಪುರ, ಮಲ್ಕನ್ಗಿರಿ, ರಾಯಘಡ, ಸೋನೆಪುರ, ಬಲಂಗಿರ್, ಕಲಹಂಡಿ, ನೌಪಡ ಜಿಲ್ಲೆಗಳನ್ನು ಒಳಗೊಂಡ ಒರಿಸ್ಸಾದ ಕೆಡಿಕೆ ಪ್ರದೇಶದಲ್ಲಿ ಸಾವಿರಾರು ಬುಡಕಟ್ಟು ಗ್ರಾಮಗಳಿವೆ. ದೇಶದ ಅತೀ ಹಿಂದುಳಿದ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ವಾಸಿಸುವ ಜನರು ಅತೀವ ಬಡವರಾಗಿದ್ದು, ಇವರ ಜೀವನದ ಮಟ್ಟ ಶೋಚನೀಯವಾಗಿದೆ. ಇಲ್ಲಿ ಶಿಶು ಮರಣ ಪ್ರಮಾಣವೂ ಅಧಿಕವಿದ್ದು, ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅನಕ್ಷರತೆ, ನಿರುದ್ಯೋಗ, ಶೂನ್ಯ ನೈರ್ಮಲ್ಯ, ಅನಾರೋಗ್ಯ, ಬಡತನ ಇಲ್ಲಿ ತಾಂಡವಾಡುತ್ತಿದೆ.
ಕಳೆದ ಎರಡು ವರ್ಷಗಳಿಂದ ಡಾ. ಚಿತ್ತರಂಜನ್ ಮತ್ತು ಅವರ ತಂಡ ಕೋರಪುಟ್ ಜಿಲ್ಲೆಯ ದಸ್ಮಂತಪುರ ಬ್ಲಾಕ್ಗೆ ಭೇಟಿ ಕೊಡುತ್ತಲೇ ಇದ್ದು, ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ. ತೀವ್ರವಾದ ಸ್ವರೂಪದ ಅನಾರೋಗ್ಯಕ್ಕೆ ತುತ್ತಾದವರನ್ನು ನಗರಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದೆ. ಈ ಜಿಲ್ಲೆಯಲ್ಲಿ ಘಟ್ಮುಂದರ್, ಬಘಾಲ್ಮತಿ, ಕಲಟಿ, ಗಾದ್ರಿ, ಹಲದಿಸಿಲ್ ಮುಂತಾದ ಹಲವು ಗ್ರಾಮಗಳಿವೆ. ಒಂದೊಂದು ವಾರ ಒಂದೊಂದು ಗ್ರಾಮಗಳಿಗೆ ಇವರ ತಂಡ ಭೇಟಿಕೊಡುತ್ತದೆ.
ಡಾ. ಚಿತ್ತರಂಜನ್ ಅವರು, ಗಾಂವ್ಕು ಚಲ ಕಮಿಟಿಯನ್ನು ಸ್ಥಾಪನೆ ಮಾಡಿದ್ದಾರೆ. ಇದರರ್ಥ ಗ್ರಾಮಗಳಿಗೆ ನಡಿಯಿರಿ ಎಂದು. ಈ ಕಮಿಟಿಯಲ್ಲಿ ವೈದ್ಯಕೀಯ ತಜ್ಞರು ಇದ್ದಾರೆ. ಈ ವೈದ್ಯರ ಕಮಿಟಿ ಪ್ರತಿ ವಾರ ಗ್ರಾಮಗಳಿಗೆ ತೆರಳುತ್ತದೆ. ಅಲ್ಲಿನ ಜನರಿಗೆ ಆರೋಗ್ಯ ಸೇವೆಯನ್ನು ಇವರು ಒದಗಿಸುತ್ತಾರೆ. ಮಾತ್ರವಲ್ಲ, ಆರೋಗ್ಯ ಜಾಗೃತಿಯನ್ನು ಮೂಡಿಸುತ್ತಾರೆ. ಪ್ರತಿ ಮನೆಗಳಿಗೂ ಸಾಬೂನುಗಳನ್ನು ಹಂಚುತ್ತಾರೆ. ಕೈತೊಳೆಯುವ, ಸ್ವಚ್ಛವಾಗಿ ಸ್ನಾನ ಮಾಡುವ ಹವ್ಯಾಸವನ್ನು ರೂಢಿಸುವಂತೆ ಅರಿವು ಮೂಡಿಸುತ್ತಾರೆ. ಡಯೇರಿಯಾ, ಕಾಲರದಂತಹ ನೀರಿನಿಂದ ಬರುವ ರೋಗಗಳಿಂದ ಅವರನ್ನು ದೂರವಿಡಲು ಇವರು ಪ್ರಯತ್ನಿಸುತ್ತಾರೆ.
ಈ ಗ್ರಾಮಗಳಿಗೆ ಸೊಳ್ಳೆ ಪರೆದಗಳನ್ನೂ ಇವರು ಹಂಚುತ್ತಾರೆ. ಅದಕ್ಕೂ ಮುನ್ನ ಸೊಳ್ಳೆಗಳ ಬಗ್ಗೆ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಾರೆ. ಸೊಳ್ಳೆಗಳ ಉತ್ಪಾದನೆಗೆ ಅವಕಾಶ ನೀಡದಂತೆ ಅರಿವು ಮೂಡಿಸುತ್ತಾರೆ. ಮಕ್ಕಳು ಸೇರಿದಂತೆ ಎಲ್ಲರೂ ಸೊಳ್ಳೆ ಪರದೆ ಹಾಕಿಕೊಂಡೇ ಮಲಗಬೇಕು ಎಂದು ಮನವಿ ಮಾಡಿಕೊಳ್ಳುತ್ತಾರೆ.
ಗ್ರಾಮಸ್ಥರ ಆರೋಗ್ಯ ತಪಾಸಣೆಯನ್ನು ಈ ವೈದ್ಯರ ತಂಡ ನಿರಂತರವಾಗಿ ಮಾಡುತ್ತದೆ. ಉಚಿತವಾಗಿ ಔಷಧಿಗಳನ್ನು ವಿತರಿಸುತ್ತದೆ. ಕುಡಿತದ ಚಟವನ್ನು ಬಿಡಿಸಲು ಪ್ರಯತ್ನಿಸುತ್ತದೆ. ಬಾಲ್ಯ ವಿವಾಹಗಳನ್ನು ನಡೆಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆಯನ್ನೂ ನೀಡುತ್ತದೆ. ಮಕ್ಕಳಿಗೆ ಪರಿಶುದ್ಧವಾದ ನೀರು ಕುಡಿಯಲು ನೀಡುವಂತೆ ಉತ್ತೇಜಿಸುತ್ತದೆ.
ಸ್ವಾಸ್ಥ್ಯ ಸಹಾಯಕ ಬಾಹಿನಿಯನ್ನು ಇವರು ರಚನೆ ಮಾಡಿದ್ದು, ಇದರಡಿ ಕೆಲವು ಗ್ರಾಮಸ್ಥರನ್ನು ಆಯ್ಕೆ ಮಾಡಿ ಅವರಿಗೆ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣ ಮಾಹಿತಿಯನ್ನು ಸ್ಥಳಿಯ ಆಶಾ ಕಾರ್ಯಕರ್ತರಿಗೆ ಅಥವಾ ಆರೋಗ್ಯ ಕೇಂದ್ರಕ್ಕೆ ತಿಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ಪ್ರಯತ್ನದಿಂದಾಗಿ ದಸ್ಮಂತಪುರ ಬ್ಲಾಕ್ ನಿಧಾನವಾಗಿ ಬದಲಾಗುತ್ತಿದೆ. ಅತೀಹೆಚ್ಚು ಶಿಶು ಮರಣವನ್ನು ಹೊಂದಿದ್ದ ಈ ಗ್ರಾಮದಲ್ಲಿ ಶಿಶುಗಳ ಮರಣ ಪ್ರಮಾಣ ತುಸು ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರದೇಶ ಇನ್ನಷ್ಟು ಸುಧಾರಣೆಗಳನ್ನು ಕಾಣುವ ನಿರೀಕ್ಷೆ ಇದೆ.
ಈ ವೈದ್ಯರ ತಂಡ ಮಾಡುತ್ತಿರುವ ಕಾರ್ಯದಿಂದ ಪ್ರೇರಣೆ ಪಡೆದುಕೊಂಡಿರುವ ಸ್ಥಳಿಯ ಸರ್ಕಾರಿ ಆರೋಗ್ಯ ಇಲಾಖೆಗಳು, ಇಂತಹುದೇ ಮಾದರಿಯ ಕಾರ್ಯಕ್ರಮಗಳನ್ನು ಇತರ ಗ್ರಾಮಗಳಲ್ಲಿ ಆಯೋಜನೆಗೊಳಿಸುತ್ತಿದೆ. ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮಗಳ ಭೇಟಿ ಕಾರ್ಯಕ್ರಮವನ್ನು ನಡೆಸುತ್ತಿವೆ.
ಡಾ. ಚಿತ್ತರಂಜನ್ ಮತ್ತು ಅವರ ತಂಡದ ನಿಸ್ವಾರ್ಥ ಸೇವೆ ದೇಶದ ಎಲ್ಲಾ ನಾಗರಿಕರಿಗೂ ಪ್ರೇರಣೆಯಾಗಲಿ, ದೇಶದಲ್ಲಿ ಆರೋಗ್ಯ ಸೇವೆ ಎಂಬುದು ಎಲ್ಲರಿಗೂ ಕೈಗೆಟುಕುವಂತಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.