ಐದು ದಶಕಗಳ ಹಿಂದೆ, 25 ವರ್ಷದ ರಾಜಸ್ಥಾನದ ಜೋಧ್ಪುರ ಇಕಲ್ಕೋರಿ ಗ್ರಾಮದ ಯುವಕ ಸಮುದಾಯ ಹಬ್ಬದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಕನೇರ್ಗೆ ತೆರಳಿದ್ದ, ಈ ಪ್ರವಾಸ ಒಂದು ದಿನ ತನಗೆ ಸ್ಪೂರ್ತಿಯಾಗುತ್ತದೆ ಎಂಬ ಕಲ್ಪನೆ ಆಗ ಆತನಿಗಿರಲಿಲ್ಲ. ಈ ಹಬ್ಬದಲ್ಲಿ ಯುವಕ ರಣರಾಮ್ ಬಿಷ್ಣೋಯ್ ಪರಿಸರದ ಬಗೆಗಿನ ಮತ್ತು ಗಿಡ ನೆಡುವುದರಿಂದ ಭವಿಷ್ಯದಲ್ಲಿ ಎಷ್ಟು ಲಾಭವಾಗಲಿದೆ ಎಂಬ ಬಗೆಗಿನ ಪರಿಣಾಮಕಾರಿ ವಿಚಾರಸಂಕಿರಣವೊಂದರಲ್ಲಿ ಪಾಲ್ಗೊಂಡ. ಇಲ್ಲಿ ಪಡೆದ ಹೊಸ ಜ್ಞಾನವನ್ನು ಕಾರ್ಯರೂಪಕ್ಕೆ ತರಲು ಸಜ್ಜಾದ, ಮರುಭೂಮಿಯಲ್ಲಿ ಗಿಡ ಬೆಳಸುವುದನ್ನೇ ತಮ್ಮ ಜೀವನದ ಗುರಿಯನ್ನಾಗಿಸಿಕೊಂಡ. ಪ್ರಸ್ತುತ 78 ವರ್ಷದವರಾಗಿರುವ ಆ ಯುವಕ ಬಿಷ್ಣೋಯ್ ಇಲ್ಲಿಯವರೆಗೆ 50 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಈ ಮೂಲಕ ಮರಳು ತುಂಬಿದ ಭೂಮಿಯನ್ನು ಹಸಿರು ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ.
ಗಿಡಗಳು ನನಗೆ ದೇವರಿದ್ದಂತೆ, ಅವುಗಳ ಆರೈಕೆಯಲ್ಲಿ ನನಗೆ ಸಂತೋಷ ಮತ್ತು ನಿರಾಳತೆ ಸಿಗುತ್ತದೆ ಎನ್ನುವ ರಣರಾಮ್, ಜನರಿಂದ ‘ಟ್ರೀ ಮ್ಯಾನ್’ ಎಂಬ ಬಿರುದನ್ನೂ ಪಡೆದುಕೊಂಡಿದ್ದಾರೆ. ಭೂಮಿ ಮೇಲೆ ನೆಲೆಸಲು ಮನುಷ್ಯರಿಗಿಂತ ಹೆಚ್ಚಿನ ಹಕ್ಕು ಮರಗಳಿಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ.
‘ಗಿಡಗಳು ಮತ್ತು ಪ್ರಾಣಿಗಳು ಮನುಷ್ಯನಿಗಿಂತ ಮೊದಲೇ ಈ ಭೂಮಿಗೆ ಬಂದಿದ್ದವು. ಈ ಭೂಮಿಯಲ್ಲಿರಲು ನಮಗಿಂತ ಹೆಚ್ಚಿನ ಅಧಿಕಾರ ಅವುಗಳಿಗಿದೆ. ಆ ಹಕ್ಕನ್ನು ಅವುಗಳಿಗೆ ನೀಡಲು ನಮ್ಮಿಂದ ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ನಮ್ಮ ಲಾಲಸೆಗಾಗಿ ಅವುಗಳನ್ನು ನಾಶ ಮಾಡುವುದನ್ನಾದರೂ ತಪ್ಪಿಸಬೇಕು ಎಂಬುದು ಅವರ ಅಂಬೋಣ.
ಕಳದೆ 50 ವರ್ಷಗಳಿಂದ ಇವರು, ನಿತ್ಯ ಬೆಳಗ್ಗೆ ಎದ್ದು ಎತ್ತರದ ಮರಳು ಭೂಮಿಗಳಿಗೆ ತೆರಳಿ, ಅಲ್ಲಿನ ಗಿಡಗಳಿಗೆ ನೀರುಣಿಸುತ್ತಾರೆ. ಇದಕ್ಕಾಗಿ ಮನೆಯಿಂದ ನಿತ್ಯ 3 ಕಿ.ಮೀ. ಕ್ರಮಿಸುತ್ತಾರೆ. ತಮ್ಮ ಸ್ನೇಹಿತ ಟ್ಯೂಬ್ವೆಲ್ನಿಂದ ನೀರು ತೆಗೆದುಕೊಂಡು ಹೋಗಿ ಗಿಡಗಳಿಗೆ ಹಾಕುತ್ತಾರೆ. ಇದಕ್ಕಾಗಿ ಹಲವಾರು ಬಾರಿ ಹತ್ತಿ ಇಳಿಯುವ ಕಾಯಕ ಮಾಡುತ್ತಾರೆ. ಇದುವರೆಗೆ ಅವರು 50 ಸಾವಿರ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಮರವನ್ನಾಗಿಸಿದ್ದಾರೆ. ನೀಮ್, ರೊಹಿಢಾ, ಫಿಗ್, ಖೇಜ್ರಿ, ಕಂಕೇರಿ, ಬಾಬೂಲ್, ಬೊಗೆನ್ವಿಲಿಲಿಯಾ ಮುಂತಾದವುಗಳನ್ನು ಸುಮಾರು 10 ಎಕರೆ ಪ್ರದೇಶಗಳಲ್ಲಿ ನೆಟ್ಟು ಬೆಳಸಿದ್ದಾರೆ.
ಸಾವಿರಾರು ಮರಗಳನ್ನು ಬೆಳಸಿದ ಕೀರ್ತಿ ಹೊಂದಿರುವ ಇವರು, ತಮ್ಮ ಮನೆಯಲ್ಲಿ ಪುಟ್ಟದಾಗಿ ಒಂದು ನರ್ಸರಿಯನ್ನೂ ಆರಂಭಿಸಿರುವ ಅವರು, ಅಲ್ಲಿ ಗಿಡ ಮತ್ತು ಬೀಜಗಳನ್ನು ಸಿದ್ಧಪಡಿಸುತ್ತಾರೆ. ಮಳೆಗಾಲದಲ್ಲಿ ಬೀಜ ಬಿತ್ತಿ ಗಿಡ ಮಾಡುತ್ತಾರೆ.
ಅವರ ಮಗ ವಿಶಾಖ್ ಬಿಷ್ಣೋಯ್ ಅವರು ತಂದೆಗೆ ದೊಡ್ಡ ಬೆಂಬಲವಾಗಿ ನಿಂತಿದ್ದು, ಗ್ರಾಮದ ಜನರಲ್ಲಿ ಗಿಡ ನೆಡುವ ಅವಶ್ಯಕತೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 5 ವರ್ಷ ಇದ್ದಾಗಿನಿಂದಲೂ ತಂದೆಯ ಜೊತೆ ತೆರಳಿ ಅವರ ಕಾಯಕವನ್ನು ಗಮನಿಸುತ್ತಿದ್ದ ವಿಶಾಖ್ ಅವರಿಗೆ ಸಹಜವಾಗಿಯೇ ಗಿಡ ಮರ ಪರಿಸರಗಳ ಕಾಳಜಿ ಬೆಳದು ಬಂದಿದೆ. ಪರಿಸರ ಉಳಿಸುವ ಚಳುವಳಿಯಲ್ಲಿ ಅವರು ಗ್ರಾಮಸ್ಥರನ್ನೂ ಭಾಗಿಯಾಗುವಂತೆ ಮಾಡುತ್ತಿದ್ದಾರೆ.
ರಣರಾಮ್ ಅವರ ಅಭಿಯಾನಕ್ಕೆ ಗ್ರಾಮಸ್ಥರು ಹಣಕಾಸಿನ ನೆರವು, ನೀರು ಮತ್ತು ಗಿಡಗಳನ್ನು ನೀಡುವ ಮೂಲಕ ನೆರವುಗಳನ್ನು ನೀಡುತ್ತಲೇ ಬಂದಿದ್ದಾರೆ. ಅದರಲ್ಲೂ ಮಹಿಳಾ ಸಮುದಾಯದ ನೆರವು ತುಂಬಾ ಹೆಚ್ಚಿದೆ. ಗಡಿಗಳಿಗೆ ನೀರುಣಿಸಲು ತಮ್ಮ ಮನೆಯ ಹೆಣ್ಣು ಮಕ್ಕಳನ್ನು, ಗ್ರಾಮದ ಹೆಣ್ಣುಗಳನ್ನು ಕರೆದುಕೊಂಡು ಹೋಗುವ ಇವರು ಅವರಿಗೆ ತಮ್ಮ ಕಿಸೆಯಿಂದಲೇ ರೂ. 2 ರಂತೆ ಗೌರವಧನವನ್ನೂ ನೀಡುತ್ತಾರೆ.
ರಣರಾಮ್ ಅವರು ಬಿಷ್ಣೋಯ್ ಜನಾಂಗಕ್ಕೆ ಸೇರಿದವರು. ಪ್ರಕೃತಿ ಆರಾಧನೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಈ ಸಮುದಾಯ ಹೆಸರುವಾಸಿಯಾಗಿದೆ. ರಾಜಸ್ಥಾನದಲ್ಲಿ ಕೃಷ್ಣಮೃಗಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವುದು ಕೂಡ ಇದೇ ಸಮುದಾಯ. ಮರಕಡಿಯುವುದನ್ನು ವಿರೋಧಿಸಿ ಈ ಸಮುದಾಯ ಸರ್ಕಾರ, ಅಧಿಕಾರಿಗಳನ್ನೇ ಎದುರು ಹಾಕಿಕೊಂಡ ಹಲವಾರು ಉದಾಹರಣೆಗಳಿವೆ. ತಮ್ಮ ಸಮುದಾಯದ ಪರಂಪರೆಯ ಹಾದಿಯನ್ನು ರಣರಾಮ್ ಬಿಷ್ಣೋಯ್ ಅವರು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾರೆ. ಭೂಮಿ ತಾಯಿಯನ್ನು ಸಂರಕ್ಷಿಸಲು ಗಿಡ ನೆಡುವ ಮೂಲಕ ಅವರು ಇಡೀ ಮಾನವ ಕುಲಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.