ನವದೆಹಲಿ: ರಫೆಲ್ ಒಪ್ಪಂದದ ವಿವರಗಳನ್ನು ಒಳಗೊಂಡ ಸಿಎಜಿ (ಮಹಾಲೇಖಪಾಲಕರ) ವರದಿಯನ್ನು ಇಂದು ಎನ್ಡಿಎ ಸರ್ಕಾರ ರಾಜ್ಯಸಭೆಯಲ್ಲಿ ಮಂಡನೆಗೊಳಿಸಿದೆ. ಈ ವರದಿಯಲ್ಲಿ, ಯುಪಿಎ ಆಡಳಿತಕ್ಕಿಂತ ಎನ್ಡಿಎ ಸರ್ಕಾರವು ರಫೆಲ್ ಒಪ್ಪಂದವನ್ನು ಶೇ. 2.86ರಷ್ಟು ಕಡಿಮೆ ದರಕ್ಕೆ ಮಾಡಿಕೊಂಡಿದೆ, ಈ ಮೂಲಕ ಶೇ. 17 ರಷ್ಟು ಹಣವನ್ನು ಉಳಿತಾಯ ಮಾಡಿದೆ ಎಂಬುದು ವರದಿಯಿಂದ ಸ್ಪಷ್ಟವಾಗಿದೆ.
ಫ್ರಾನ್ಸ್ನ ಡೆಸಾಲ್ಟ್ ರಫೆಲ್ ಕಂಪನಿಯಿಂದ 36 ಫೈಟರ್ ಜೆಟ್ಗಳನ್ನು ಖರೀದಿಸುವ ಒಪ್ಪಂದವೇ ರಫೆಲ್ ಒಪ್ಪಂದ. ಈ ಒಪ್ಪಂದವನ್ನು ಹಿಡಿದುಕೊಂಡು ಕಾಂಗ್ರೆಸ್ ನೇತೃತ್ವದ ಪ್ರಕ್ಷಗಳು ನರೇಂದ್ರ ಮೋದಿ ಸರ್ಕಾರವನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಿವೆ.
ಸಿಎಜಿಯು ‘ಕ್ಯಾಪಿಟಲ್ ಅಕ್ವಿಝಿಶನ್ ಇನ್ ಇಂಡಿಯನ್ ಏರ್ಫೋರ್ಸ್’ ಶೀರ್ಷಿಕೆಯ 141 ಪುಟಗಳ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ 32 ಪುಟಗಳನ್ನು ರಫೆಲ್ ಒಪ್ಪಂದಕ್ಕಾಗಿ ಮೀಸಲಿಟ್ಟಿದೆ. 2012ರಿಂದ 2017ರವರೆಗಿನ ಅವಧಿಯ ವರದಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಈ ವರದಿಯಲ್ಲಿ ಎರಡು ವಿಭಾಗಗಳಿವೆ. ಮೊದಲ ವಿಭಾಗವು 7 ಅಧ್ಯಾಯಗಳನ್ನು ಒಳಗೊಂಡಿದ್ದು, ವ್ಯವಸ್ಥಿತ ಸ್ವಾಧೀನ ಪ್ರಕ್ರಿಯೆಗಳ ಬಗ್ಗೆ ವಿವರಿಸುತ್ತದೆ. ಎರಡನೇ ವಿಭಾಗ ರಫೆಲ್ ಒಪ್ಪಂದದ ನಿರ್ದಿಷ್ಟ ವಿಷಯಗಳ ಬಗ್ಗೆ ವಿವರಿಸಿದೆ.
ಇಂಡೋ-ಫ್ರೆಂಚ್ ಅಗ್ರಿಮೆಂಟ್ 2008ರ ಅನ್ವಯ ರಕ್ಷಣಾ ಸಚಿವಾಲಯದ ಮನವಿಯ ಮೇರೆಗೆ ರಫೆಲ್ ಒಪ್ಪಂದ ದರಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿಲ್ಲ ಎಂದು ಸಿಎಜಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಎನ್ಡಿಎ ಮಾಡಿಕೊಂಡ ರಫೆಲ್ ಒಪ್ಪಂದದ ಬಗೆಗಿನ ಸಿಎಜಿಯ ಪ್ರಮುಖ ನಿರ್ಣಯಗಳು ಇಂತಿವೆ.
1.ಯು.ಪಿ.ಎ. ಆಡಳಿತದ ಉದ್ದೇಶಿತ ಒಪ್ಪಂದ ಮತ್ತು ಎನ್ಡಿಎ ಮಾತುಕತೆ ಮೂಲಕ ನಡೆಸಿದ ಒಪ್ಪಂದಗಳಲ್ಲಿ ರಾಫೆಲ್ ಜೆಟ್ಗಳ ಫ್ಲೈವೇ ದರ ಒಂದೇ ಆಗಿದೆ. 2007 ಮತ್ತು 2016 ಒಪ್ಪಂದಗಳಲ್ಲಿ ವಿಮಾನಗಳ ಮೂಲ ಬೆಲೆ ಒಂದೇ ಆಗಿದೆ.
2.ಯುಪಿಎ ಮಾತುಕತೆ ನಡೆಸಿದ ಒಪ್ಪಂದಕ್ಕಿಂತ ಎನ್ಡಿಎ ನಡೆಸಿದ ರಫೇಲ್ ಒಪ್ಪಂದವು 2.86%ರಷ್ಟು ಅಗ್ಗವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಹೇಳಿಕೊಂಡಂತೆ 9%ರಷ್ಟು ಅಗ್ಗ ಅಲ್ಲ.
3.ಸ್ಪರ್ಧಾತ್ಮಕ ಕಡಿಮೆ ಬೆಲೆಯ ಹೇಳಿಕೆಗಳು ವಾಸ್ತವವಾಗಿ ತಪ್ಪಾಗಿವೆ.
4.ಎನ್ಡಿಎ ಒಪ್ಪಂದದಡಿಯಲ್ಲಿ ಮಾಡಿದ ಭಾರತ-ನಿರ್ದಿಷ್ಟ ಸುಧಾರಣೆಗಳು ಶೇ.17.08% ಕಡಿಮೆಯಾಗಿದೆ.
5.ಯುಪಿಎ ಬೆಲೆ ಬೆಂಚ್ಮಾರ್ಕ್ಗಳು ಅವಾಸ್ತವಿಕವಾಗಿ ಕಡಿಮೆ.