ಪ್ರಯಾಗ್ರಾಜ್ನಲ್ಲಿ ಈ ಬಾರಿ ನಡೆಯುತ್ತಿರುವ ಕುಂಭಮೇಳ, ಭಾರತದ ಅತ್ಯಂತ ಸ್ವಚ್ಛ ಕುಂಭಮೇಳ’ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಈ ಕುಂಭ ಮೇಳ ಅತ್ಯಂತ ಭವ್ಯ ಮತ್ತು ದೈವಿಕವಾಗಿರಲಿದೆ ಎಂದು ಕುಂಭ ಮೇಳದ ಆರಂಭಕ್ಕೂ ಮುನ್ನ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭರವಸೆ ನೀಡಿದ್ದರು. ಅದರಂತೆಯೇ ಈಗ ಕುಂಭಮೇಳ ನಡೆಯುತ್ತಿದೆ. ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚಿನ ಸಂಪನ್ಮೂಲವನ್ನು ಇದಕ್ಕೆ ಒದಗಿಸಿದೆ. 20 ಸಾವಿರ ಸ್ವಚ್ಛತಾ ಕಾರ್ಮಿಕರು 1500 ಸ್ವಚ್ಛತಾ ಸ್ವಯಂಸೇವಕರೊಂದಿಗೆ ಸೇರಿ ಕುಂಭಮೇಳದ ಪ್ರದೇಶವನ್ನು ಸ್ವಚ್ಛವಾಗಿಡುತ್ತಿದ್ದಾರೆ. ಮಾತ್ರವಲ್ಲ, ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ, ಎಲ್ಲೆಂದರಲ್ಲಿ ಕಸ ಎಸೆಯದಂತೆ ಜನರಿಗೆ ತಿಳಿ ಹೇಳುತ್ತಿದ್ದಾರೆ, ಕುಂಭಮೇಳಕ್ಕಾಗಿ 1.2 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ತಾತ್ಕಾಲಿಕ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿ ಕೊಳಕು ನೀರು ಗಂಗೆಗೆ ಸೇರದಂತೆ ನೋಡಿಕೊಳ್ಳಲಾಗುತ್ತಿದೆ. ‘ಸ್ವಚ್ಛ ಕುಂಭ, ಸುರಕ್ಷಿತ್ ಕುಂಭ’ ಎಂರೀ ಬಾರಿಯ ಕುಂಭಮೇಲದ ಥೀಮ್ನ್ನು ತಲೆಯಲ್ಲಿಟ್ಟುಕೊಂಡು ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಿದ್ದಾರೆ.
ಕುಂಭ ಮೇಳಕ್ಕೆ ಆಗಮಿಸಿರುವ ಭಕ್ತಾದಿಗಳೂ ಸ್ವಚ್ಛತೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆಂದೂ ಕುಂಭ ಮೇಳದಲ್ಲಿ ಇಷ್ಟೊಂದು ಸ್ವಚ್ಛತೆ ಇರಲಿಲ್ಲ ಎಂದು ಈ ಹಿಂದೆಯೂ ಕುಂಭಮೇಳಕ್ಕೆ ಆಗಮಿಸಿದವರು ಮಾಧ್ಯಮಗಳ ಮುಂದೆಯೇ ಹೇಳಿಕೊಂಡಿದ್ದಾರೆ. ಹಿಂದಿನವುಗಳಿಗಿಂತ ಈ ಬಾರಿಯ ಕುಂಭ ವಿಭಿನ್ನವಾಗಿದೆ, ಸ್ವಚ್ಛವಾಗಿ, ತುಂಬಾ ಅಚ್ಚುಕಟ್ಟಾಗಿದೆ ಎಂಬುದು ಅವರ ಅನಿಸಿಕೆ.
ಒಂದು ಮೀಟರ್ ಅಂತರಗಳಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿದೆ, ಅಲ್ಲಲ್ಲಿ ನಿಂತಿರುವ ಸ್ವಯಂಸೇವಕರು ಭಕ್ತಾದಿಗಳಿಗೆ ಕಸವನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ನಿರ್ದೇಶನವನ್ನು ನೀಡುತ್ತಿದ್ದಾರೆ. ಈ ಮೂಲಕ ಗಂಗಾ ನದಿಗೆ ಒಂದು ಚೂರು ಕಸಗಳೂ ಬೀಳದಂತೆ ಮುಂಜಾಗೃತೆ ವಹಿಸುತ್ತಿದ್ದಾರೆ. ವಿಶೇಷವೆಂದರೆ ಸ್ವಚ್ಛಾಗ್ರಹಿಗಳು ದಿನದ 24 ಗಂಟೆಯೂ ಸಮವಸ್ತ್ರವನ್ನು ತೊಟ್ಟಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿಯೇ ಈ ಬಾರಿಯ ಕುಂಭಮೇಳ ತುಂಬಾ ಸ್ವಚ್ಛವಾಗಿದೆ.
ಹಿಂದೆ, ಸ್ವಚ್ಛತೆ ಮತು ನೈರ್ಮಲ್ಯ ಕುಂಭ ಸಮಾವೇಶದ ಅತೀದೊಡ್ಡ ಸವಾಲಾಗಿತ್ತು. ಗಂಗಾ ಮತ್ತು ಯಮುನಾ ನದಿಗಳು ಕಸದಿಂದ ತುಂಬಿ ತುಳುಕುತ್ತಿದ್ದವು. ಸ್ನಾನ ಮಾಡುವುದರಿಂದ ದೇಹ ಶುದ್ಧವಾಗುವ ಬದಲು ಮತ್ತಷ್ಟು ಕೊಳಕಾಗುತ್ತಿತ್ತು. ದೈವಿಕ ಭಾವನೆಯಿಂದ ಜನ ಸ್ನಾನ ಮಾಡುತ್ತಿದ್ದರೇ ಹೊರತು ಶುದ್ಧತೆಗಾಗಿ ಅಲ್ಲ ಎಂಬಂತಿತ್ತು. ಇದನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿರುವ ಆಯೋಜಕರು, ನೀರಿನ ಶುದ್ಧತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. 20 ಸಾವಿರ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿದ್ದಾರೆ. ದಿನದ 24 ಗಮಟೆಯೂ ಅವರು ಶ್ರಮಿಸುತ್ತಿದ್ದಾರೆ. ಖಾಟ್, ಕುಂಭ ಪ್ರದೇಶ ಮತ್ತು ಶೌಚಾಲಯಗಳ ನಿರ್ವಹಣೆಯನ್ನು ಇವರು ಮಾಡುತ್ತಿದ್ದಾರೆ. ಇನ್ನು ದೇಶದಾದ್ಯಂತದ ಸುಮಾರು 1500 ಸ್ವಯಂ ಸೇವಕರು ಕುಂಭಮೇಳಕ್ಕೆ ಆಗಮಿಸಿ ಜನರಿಗೆ ಸ್ವಚ್ಛತೆಯ ಪಾಠ ಮಾಡುತ್ತಿದ್ದಾರೆ. ಕಸವನ್ನು ಎಲ್ಲೆಂದರಲ್ಲಿ ಹಾಕದಂತೆ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಗಂಗಾ ಶುದ್ಧೀಕರಣ ಯೋಜನೆಯ ಫಲವಾಗಿ ಗಂಗೆ ಶೇ.30ರಷ್ಟು ಈಗಾಗಲೇ ಶುದ್ಧೀಕರಣವಾಗಿದ್ದಾಳೆ. ನೀರಿನ ಮೇಲೆ ಕಸದ ರಾಶಿಗಳು ತೇಲುತ್ತಿರುವುದು ಗೋಚರವಾಗುತ್ತಿಲ್ಲ. ಹೀಗಾಗಿ ನೋಡುವವರಿಗೂ ಕುಂಭ ಅತ್ಯಂತ ಸ್ವಚ್ಛವಾಗುತ್ತದೆ ಎಂಬುದು ಗೋಚರಿಸುತ್ತದೆ.
ಕುಂಭಮೇಳದಲ್ಲಿ 20 ಸಾವಿರ ಕಸದಬುಟ್ಟಿಗಳನ್ನು ಅಳವಡಿಸಲಾಗಿದೆ, ಅಷ್ಟೇ ಅಲ್ಲದೇ 120 ಕಸ ಸಂಗ್ರಹಿಸುವ ಸಣ್ಣ ವಾಹನಗಳನ್ನೂ ಇಡಲಾಗಿದೆ. ಈ ವಾಹನಗಳು ಕಸದಬುಟ್ಟಿಯಿಂದ ನಿರಂತರವಾಗಿ ಕಸ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿವೆ. ಈ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ಗಳೂ ಇದ್ದು ಪರಿಶೀಲನೆಗೊಳಪಟ್ಟಿರುತ್ತವೆ. ದಿನಕ್ಕೆ ಇಲ್ಲಿ 100 ಮೆಟ್ರಿಕ್ ಟನ್ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ. ಇವುಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡಲಾಗುತ್ತಿದೆ, ಉಳಿದ ಕಸವನ್ನು ಬಸ್ವರ್ನಲ್ಲಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ. ರಿಸೈಕ್ಲಿಂಗ್ ಕೂಡ ಮಾಡಲಾಗುತ್ತಿದೆ.
ನೀರಿನ ಕಸವನ್ನು ಸಂಗ್ರಹಿಸಲು ಟ್ರ್ಯಾಶ್ ಸ್ಕಿಮ್ಮರ್ಸ್ಗಳನ್ನು ಅಳವಡಿಸಲಾಗಿದೆ. ಇವುಗಳು ಭಕ್ತಾದಿಗಳು ಎಸೆದ ಹೂವು, ಬೂದಿ, ಬಟ್ಟೆಗಳನ್ನು ತೆಗೆಯುವ ಕೆಲಸ ಮಾಡುತ್ತಿವೆ. 1.2 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳು ಸ್ವಚ್ಛವಾಗಿರುವಂತೆ ಸ್ವಚ್ಛಾಗ್ರಹಿಗಳು ನೋಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಬಯಲು ಶೌಚ ಮಾಡದಂತೆ ಕಣ್ಗಾವಲನ್ನೂ ಇರಿಸಿದ್ದಾರೆ. ಮಾತ್ರವಲ್ಲ ಸ್ವಚ್ಛಾಗ್ರಹಿಗಳಿಗೆ ಆಡಳಿತ ಡಿವೈಸ್ಗಳನ್ನೂ ನೀಡಿದ್ದು, ನ್ಯೂನ್ಯತೆ ಹೊಂದಿರುವ ಪ್ರದೇಶಗಳ ಫೋಟೋಗಳನ್ನು ತೆಗೆದು ಕಳುಹಿಸುವಂತೆ ತಿಳಿಸಿದೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಬಾರಿಯ ಕುಂಭಮೇಳವನ್ನು ಅತ್ಯಂತ ಸ್ವಚ್ಛ ಕುಂಭ ಮೇಳವನ್ನಾಗಿ ಮಾಡಲಾಗಿದೆ. ಈ ಮೂಲಕ ಸ್ವಚ್ಛ ಭಾರತ ಅಭಿಯಾನದ ಘನತೆಯನ್ನು ಎತ್ತಿ ಹಿಡಿಯಲಾಗಿದೆ. ಜನರಲ್ಲಿ ನಿಧಾನಕ್ಕೆ ಸ್ವಚ್ಛತೆಯ ಅರಿವು ಹೆಚ್ಚುತ್ತಿದೆ ಎಂಬುದಕ್ಕೂ ಈ ಕುಂಭಮೇಳ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.