ಅಹ್ಮದಾನಗರ್: ಭಾರತೀಯ ಸಂಜಾತೆ ನೀಲ ವಿಖೆ ಪಾಟೀಲ್ ಅವರು ಸ್ವೀಡಿಶ್ ಪ್ರಧಾನಮಂತ್ರಿ ಕಾರ್ಯಾಲಯದ ರಾಜಕೀಯ ಸಲಹೆಗಾರ್ತಿಯಾಗಿ ನೇಮಕವಾಗಿದ್ದಾರೆ.
32 ವರ್ಷದ ಪಾಟೀಲ್ ಅವರು, ಖ್ಯಾತ ಶಿಕ್ಷಣ ತಜ್ಞ ಅಶೋಕ್ ವಿಖೆ ಪಾಟೀಲ್ ಅವರ ಪುತ್ರಿಯಾಗಿದ್ದಾರೆ. ಇವರು ಕಳೆದ ವರ್ಷ ಸ್ವೀಡಿಶ್ ಪ್ರಧಾನಿಯಾಗಿ ಆಯ್ಕೆಯಾದ ಸೋಶಿಯಲ್ ಡೆಮಾಕ್ರಾಟಿಕ್ ನಾಯಕ ಸ್ಟೀಫನ್ ಲೊಫ್ವೆನ್ ಅವರ ರಾಜಕೀಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಅವರು, ನೀಲಾ ಸ್ವೀಡಿಶ್ ಪ್ರಧಾನಮಂತ್ರಿ ಕಾರ್ಯಾಲಯದ ರಾಜಕೀಯ ಸಲಹೆಗಾರ್ತಿಯಾಗಿ ನೇಮಕವಾಗಿದ್ದು, ಹಣಕಾಸು, ತೆರಿಗೆ, ಬಜೆಟ್, ಹಣಕಾಸು ಮಾರುಕಟ್ಟೆ, ವಸತಿಗಳ ನಿರ್ವಹಣೆ ಮಾಡಲಿದ್ದಾರೆ’ ಎಂದಿದ್ದಾರೆ.
ನೀಲಾ ಅವರು, ಸ್ಟಾಕೋಲ್ಮ್ ಮುನ್ಸಿಪಲ್ ಕಾರ್ಪೋರೇಶನ್ ಸಿಟಿ ಕೌನ್ಸಿಲ್ಗೂ ನೇಮಕವಾಗಿದ್ದಾರೆ.
ನೀಲಾ ಅವರು ಗ್ರೀನ್ ಪಾರ್ಟಿ ಪಕ್ಷದ ಸಕ್ರಿಯ ಸದಸ್ಯೆಯಾಗಿದ್ದು, ಆ ಪಕ್ಷ ಚುನಾವಣಾ ಸಮಿತಿ ಸದಸ್ಯೆಯೂ ಹೌದು, ಹಿಂದಿನ ಸರ್ಕಾರದಲ್ಲೂ ಪಿಎಂಓ ಸಲಹೆಗಾರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.
ಸ್ವಿಡನ್ನಲ್ಲಿ ಜನಿಸಿದರೂ, ಬಾಲ್ಯವನ್ನು ಮಹಾರಾಷ್ಟ್ರದ ಅಹ್ಮದಾನಗರ್ನಲ್ಲಿ ಕಳೆದಿದ್ದಾರೆ. ಇವರು ಮಾಜಿ ಕೇಂದ್ರ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಮೊಮ್ಮಗಳು, ಮಹಾರಾಷ್ಟ್ರ ವಿಧಾನಸಬೆಯ ಪ್ರತಿಪಕ್ಷ ನಾಯಕ ರಾಧಕೃಷ್ಣ ವಿಖೆ ಪಾಟೀಲ್ ಅವರ ಸೋದರ ಸೊಸೆ.
ಇವರು ಅರ್ಥಶಾಸ್ತ್ರ ಮತ್ತು ಕಾನೂನುಗಳೊಂದಿಗೆ ಗಾಥೆನ್ಬರ್ಗ್ ಸ್ಕೂಲ್ ಆಫ್ ಬಿಸಿನೆಸ್ ನಿಂದ ಬ್ಯಾಚುಲರ್ ಪದವಿ ಮತ್ತು ಎಂಬಿಎ ಹೊಂದಿದ್ದಾರೆ ಮತ್ತು ಮ್ಯಾಡ್ರಿಡ್ ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಅಧ್ಯಯನ ಮಾಡಿದ್ದಾರೆ.