×
Home About Us Advertise With s Contact Us

ದೇಶದ ಎರಡನೇ ಅತೀದೊಡ್ಡ ಸರ್ಕಾರಿ ಆಸ್ಪತ್ರೆ ಪಡೆದ ಸಿಕ್ಕಿಂ

ಈಶಾನ್ಯ ಭಾಗ ನಿಧಾನಕ್ಕೆ ಪ್ರಗತಿಯ ಹಳಿಗೆ ಮರಳುತ್ತಿದೆ. ಕಠಿಣ ಭೂಪ್ರದೇಶದ ಭಾಗವಾದ ಕಾರಣ ಇಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು, ಆದರೀಗ ಅಲ್ಲಿ ಅಭಿವೃದ್ಧಿ ಚಿಗುರೊಡೆಯುತ್ತಿದೆ. ರಸ್ತೆ, ಬ್ರಿಡ್ಜ್, ಆಸ್ಪತ್ರೆ ಎಲ್ಲವೂ ನಿರ್ಮಾಣವಾಗುತ್ತಿದೆ. ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಈಗ ದೇಶದ ಎರಡನೇ ಅತೀದೊಡ್ಡ ಸರ್ಕಾರಿ ಆಸ್ಪತ್ರೆ ತಲೆ ಎತ್ತಿದೆ. 10 ಮಹಡಿಗಳ ಸರ್ ತುಟೋಬ್ ನಂಗ್ಯಾಲ್ ಮೆಮೋರಿಯಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗಂಗ್ಟೋಕ್‌ನಿಂದ 3 ಕಿಮೀ ದೂರದಲ್ಲಿರುವ ಸೋಚಯ್‌ಗಂಗ್‌ನಲ್ಲಿ ನಿರ್ಮಾಣವಾಗಿದೆ.

1002 ಬೆಡ್‌ಗಳುಳ್ಳ ಆಸ್ಪತ್ರೆ ಇದಾಗಿದ್ದು, ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಿಂದಷ್ಟೇ ಹಿಂದಿದೆ, 100 ವರ್ಷ ಹಳೆಯ, ಗಂಗ್ಟೋಕ್‌ನಲ್ಲಿನ ಎಸ್‌ಟಿಎನ್‌ಎಂ ಆಸ್ಪತ್ರೆ ತನ್ನ ಆವರಣವನ್ನು ಇಲ್ಲಿಗೆ ಶಿಫ್ಟ್ ಮಾಡಲಿದೆ.

ಆಸ್ಪತ್ರೆಯ ಕೆಲವೊಂದು ವಿಶೇಷತೆಗಳು ಇಲ್ಲಿವೆ

1. ರೂ.1,281 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ಇದರ ನಿರ್ಮಾಣ ತೆಗೆದುಕೊಳ್ಳಲಾದ ಕಾಲಾವಧಿ ಬರೋಬ್ಬರಿ 9 ವರ್ಷ, 15 ಎಕರೆ ಪ್ರದೇಶದಲ್ಲಿ ಇದು ಹರಡಿದೆ.

2. ಆಸ್ಪತ್ರೆಯ ಪ್ರಮುಖ ಬ್ಲಾಕ್‌ನ್ನು ಭೂಕಂಪ ತಡೆ ಉಪಕರಣಗಳ ಮೂಲಕ ನಿರ್ಮಿಸಲಾಗಿದೆ, ರಿಕ್ಟರ್ ಮಾಪನ 8 ರಷ್ಟು ತೀವ್ರತೆಯ ಭೂಕಂಪವನ್ನು ಇದು ಸಹಿಸಿಕೊಳ್ಳಲಿದೆ.

3. ಜಾಗತಿಕ ಗುಣಮಟ್ಟವನ್ನು ಆಸ್ಪತ್ರೆ ಹೊಂದಿದ್ದು, ಪ್ರತ್ಯೇಕ ಜನರಲ್ ವಿಭಾಗ, ಸರ್ಜಿಕಲ್ ವಿಭಾಗ, ವಿಶೇಷ ವಿಭಾಗಗಳನ್ನು ಹೊಂದಿದೆ. ಎಂಆರ್‌ಐ, ಸಿಟಿ ಸ್ಕ್ಯಾನರ್, ಡೋಪ್ಲರ್ ಫೇಟಲ್ ಮಾನಿಟರ್‌ಗಳು ಸೇರಿದಂತೆ ಆಧುನಿಕ ಸೌಲಭ್ಯ ಇಲ್ಲಿದೆ.

4. ಗಂಗ್ಟೋಕ್‌ನಿಂದ ಈ ಆಸ್ಪತ್ರೆಗೆ 9 ಬಸ್‌ಗಳು ಸಂಚರಿಸುವಂತೆ ಮಾಡಲಾಗಿದೆ. ಉಚಿತವಾಗಿ ಈ ಬಸ್‌ಗಳು ರೋಗಿಗಳನ್ನು ಆಸ್ಪತ್ರೆಗೆ ತಂದು ಬಿಡುವ, ಕೊಂಡೊಯ್ಯವ ಕಾರ್ಯ ಮಾಡಲಿವೆ.

5. 47  ತಜ್ಞ ವೈದ್ಯರು ಮತ್ತು 261 ನರ್ಸ್‌ಗಳನ್ನು ಈ ಆಸ್ಪತ್ರೆ ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಇಲ್ಲಿ ನಿಯೋಜಿತರಾಗಲಿದ್ದಾರೆ.

6. 119 ಬೆಡ್‌ಗಳ ಯಾತ್ರಿ ನಿವಾಸ್ ಈ ಆಸ್ಪತ್ರೆಯಲ್ಲಿದ್ದು, ರೋಗಿಗಳ ಉಪಚಾರಕ್ಕೆ ಬಂದವರು ಇಲ್ಲಿ ತಂಗಬಹುದು. ಉಚಿತವಾದ ಆಹಾರ ವ್ಯವಸ್ಥೆಯೂ ಇಲ್ಲಿದೆ.

7. ವೈದ್ಯಕೀಯ ಕಾಲೇಜು ಕೂಡ ಇಲ್ಲಿ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಆಸ್ಪತ್ರೆಯಿಂದ ಕೇವಲ ಸಿಕ್ಕಿಂ ಜನರಿಗೆ ಮಾತ್ರವಲ್ಲ ಈಶಾನ್ಯ ಭಾಗದ, ಪಶ್ಚಿಮಬಂಗಾಳದ ಜನರಿಗೂ ಸಾಕಷ್ಟು ಪ್ರಯೋಜನವಾಗಲಿದೆ.

 

Recent News

Back To Top
error: Content is protected !!