ಭಾರತದ ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ ಜನವರಿ 26 ನ್ನು ದೇಶದಲ್ಲಿ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನವು ಹಲವು ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿದ್ದು ಅದನ್ನು ತಿಳಿಯಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಭಾರತೀಯ ಸಂವಿಧಾನ ಎಂಬುದು ಒಂದು ಬೃಹತ್ ದಾಖಲೆ. 395 ಪರಿಚ್ಛೇದಗಳನ್ನು ಒಳಗೊಂಡ 22 ಭಾಗಗಳೊಂದಿಗೆ ಇದು ರಚನೆಗೊಂಡಿದೆ. ಹೆಚ್ಚುವರಿಯಾಗಿ ಇದರಲ್ಲಿ 12 ಪರಿಚ್ಛೇದಗಳು ಮತ್ತು 5 ಅನುಬಂಧಗಳು ಇವೆ. ಎಲ್ಲಾ ಭಾಗ, ಪರಿಚ್ಛೇದ ಮತ್ತು ಅನುಬಂಧಗಳ ಪ್ರಿಂಟ್ ಆದ ಪ್ರತಿಗಳ ಪುಟಗಳ ಸಂಖ್ಯೆ ಒಂದು ಸಾವಿರ.
ಸಂವಿಧಾನ ರಚನೆಗಾಗಿ ಸುದೀರ್ಘ ಸಮಯವನ್ನೇ ತೆಗೆದುಕೊಳ್ಳಲಾಗಿದೆ.
1946 ರಲ್ಲಿ ಸಂವಿಧಾನ ಸಭೆ ರಚನೆಯಾದರೆ, 1947 ರ ಜುಲೈ 22 ರಂದು ಈ ಸಂವಿಧಾನ ಸಭೆಯು ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. 1948 ರ ಜನವರಿಯಲ್ಲಿ ಮೊದಲ ಕರಡು ಸಿದ್ಧಗೊಂಡಿತು. 1948 ರ ನವೆಂಬರ್ 4 ರಂದು ಕರಡಿನ ಮೇಲಿನ ಚರ್ಚೆ ಆರಂಭಗೊಂಡಿತು. 1950 ರ ಜನವರಿ 24 ರಂದು ಸಂವಿಧಾನಕ್ಕೆ ಅಂಕಿತ ಬಿದ್ದಿತು. 1950 ರ ಜನವರಿ 26ರಂದು ಸಂವಿಧಾನ ಅನುಷ್ಠಾನಕ್ಕೆ ಬಂದಿತು.
ಸಂವಿಧಾನ ರಚನೆ ನಿಜಕ್ಕೂ ಒಂದು ದೊಡ್ಡ ಸವಾಲಿನ ಕಾರ್ಯವಾಗಿತ್ತು
ಸವಾಲು ಎಷ್ಟು ದೊಡ್ಡದಾಗಿತ್ತು ಎಂಬುದನ್ನು ವಿವರಿಸುವುದು ಅಷ್ಟು ಸುಲಭವಲ್ಲ. ಸಂವಿಧಾನದ ಕರಡು ವರದಿಯನ್ನು ಸಿದ್ಧಪಡಿಸಲು ರಚನೆಗೊಂಡಿದ್ದ ಸಮಿತಿಯಲ್ಲಿ 13 ಮಂದಿ ಸದಸ್ಯರಿದ್ದರು.
ಸಂವಿಧಾನ ಸಭೆಯಲ್ಲಿ 389 ಸದಸ್ಯರು ಇದ್ದರು. 262 ಮಂದಿ ವಿವಿಧ ಪ್ರಾಂತ್ಯಗಳ ಪ್ರತಿನಿಧಿಗಳು, 93 ವಿವಿಧ ರಾಜ್ಯಗಳ ಪ್ರತಿನಿಧಿಗಳು, 3 ಮುಖ್ಯ ಆಯುಕ್ತ ಪ್ರಾಂತ್ಯಗಳ ಪ್ರತಿನಿಧಿಗಳು, ಒರ್ವ ಬಲೂಚಿಸ್ಥಾನ್ ಪ್ರತಿನಿಧಿ ಸಂವಿಧಾನ ರಚನೆಯಲ್ಲಿ ಭಾಗವಹಿಸಿದ್ದರು. 7635 ತಿದ್ದುಪಡಿಗಳು ಪ್ರಸ್ತಾಪಗೊಂಡವು, 2473 ತಿದ್ದುಪಡಿಗಳು ವಿಸ್ತೃತವಾಗಿ ಚರ್ಚೆಗೊಳಪಟ್ಟವು. ಒಟ್ಟು ಸಂವಿಧಾನ ರಚನೆಯ ಪ್ರಕ್ರಿಯೆಗೆ 2 ವರ್ಷ, 11 ತಿಂಗಳು, 17 ದಿವಸಗಳು ಬೇಕಾಯಿತು.
ರಚನಾ ಸಮಿತಿಗೆ ಸಂವಿಧಾನದ ಕರಡನ್ನು ರಚನೆ ಮಾಡುವ ಸವಾಲನ್ನು ನೀಡಲಾಯಿತು. 1947ರ ಆಗಸ್ಟ್ 29ರಂದು ಸದಸ್ಯರನ್ನು ಒಳಗೊಂಡ ರಚನಾ ಸಮಿತಿಯನ್ನು ರಚನೆ ಮಾಡಲಾಯಿತು. ಇದರಲ್ಲಿದ್ದ 7 ಸದಸ್ಯರೆಂದರೆ- ಡಾ. ಬಿ. ಆರ್. ಅಂಬೇಡ್ಕರ್ (ಮುಖ್ಯಸ್ಥ), ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಅಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ. ಕೆ.ಎಂ. ಮುನ್ಶಿ, ಸೈಯದ್ ಮೊಹಮ್ಮದ್ ಸಾದುಲ್ಲಾಹ, ಎನ್. ಮಾಧವ್ ರಾವ್ (ಅನಾರೋಗ್ಯದಿಂದ ರಾಜೀನಾಮೆ ಸಲ್ಲಿಸಿದ್ದ ಬಿ.ಎಲ್. ಮಿತ್ತಲ್ ಅವರ ಬದಲಿಗೆ ನೇಮಕಗೊಂಡರು), ಟಿ.ಟಿ. ಕೃಷ್ಣಮಚಾರಿ (1948 ರಲ್ಲಿ ಮೃತರಾದ ಡಿ.ಪಿ. ಖಿತನ್ ಅವರ ಬದಲಿಗೆ ನೇಮಕಗೊಂಡರು).
ಸಂವಿಧಾನ ರಚನೆಗೆ ಹಲವರು ಕೊಡುಗೆ ನೀಡಿದರು. ಪಂಡಿತ್ ಜವಾಹರ್ ಲಾಲ್ ನೆಹರು, ಮೌಲಾನ ಆಜಾದ್, ಫಿರೋಜ್ ಗಾಂಧಿ, ಸಿ.ರಾಜಗೋಪಾಲಚಾರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಶ್ಯಾಮ್ ಪ್ರಸಾದ್ ಮುಖರ್ಜಿ, ಆಲಾಡಿ ಕೃಷ್ಣ ಸ್ವಾಮಿ ಅಯ್ಯರ್, ಡಾ.ಎಸ್. ರಾಧಾಕೃಷ್ಣನ್, ಆರ್. ವೆಂಕಟರಾಮನ್, ಜೆ.ಬಿ. ಕೃಪಲಾನಿ, ಜಾನ್ ಮಥೈ, ಜಿ.ವಿ. ಮವಲಂಕರ್, ಶೇಖ್ ಅಬ್ದುಲ್ಲಾ, ಜಗಜೀವನ್ ರಾಮ್, ಗಿವಿಂದ್ ಬಲ್ಲಭಾ ಪಂಥ್, ಪಂಜಾಬ್ರಾವ್ ದೇಶ್ಮುಖ್, ರಾಮನಾಥ್ ಗೋಯಂಕ್ ಸಂವಿಧಾನ ರಚನೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ನಮ್ಮ ಸಂವಿಧಾನ ರಚನೆಗೆ ಕೊಡುಗೆಯನ್ನು ನೀಡುವುದರಲ್ಲಿ ಮಹಿಳೆಯರೇನು ಹಿಂದೆ ಬಿದ್ದಿಲ್ಲ. 15 ಮಹಿಳೆಯರು ಸಂವಿಧಾನ ರಚನೆಗೆ ಕೊಡುಗೆ ನೀಡಿದ್ದಾರೆ. ಸರೋಜಿನಿ ನಾಯ್ಡು, ಲೀಲಾ ರಾಯ್, ಸುಚೇತಾ ಕೃಪಲಾನಿ. ಶೈಸ್ತ ಸುರಹ್ವರ್ಡಿ ಇಕ್ರಮುಲ್ಲಾ, ಮಾಲತಿ ಚೌಧುರಿ, ಹನ್ಸ ಜೀವರಾಜ್ ಮೆಹ್ತಾ, ಬೇಗಂ ಜಹನರ ಶೆಹನವಾಝ್, ರಾಜಕುಮಾರಿ ಅಮೃತ ರಾವ್, ಜಿ.ದುರ್ಗಾಭಾಯ್ ಸಂವಿಧಾನ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಭಾರತ ಸಂವಿಧಾನಕ್ಕೆ ಇತರ ರಾಷ್ಟ್ರಗಳಿಂದ ಕೆಲವೊಂದು ಅಂಶಗಳನ್ನು ಪಡೆಯಲಾಗಿದೆ. ಭಾರತೀಯ ಸಂವಿಧಾನದ ಮೂಲ ರಚನೆ ಗವರ್ನ್ಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಮೇಲೆ ನಿಂತಿದೆ. ಕೆಲವೊಂದು ಪ್ರಮುಖ ಅಂಶಗಳು ಇತರ ದೇಶಗಳ ಮೇಲೆ ಆಧರಿಸಿದೆ. ಐರ್ಲೆಂಡ್ನಿಂದ ನಿರ್ದೇಶಕ ತತ್ವಗಳು, ಯುಎಸ್ಎನಿಂದ ಪೀಠಿಕೆ, ಮೂಲಭೂತ ಹಕ್ಕುಗಳು, ಜಪಾನ್ನಿಂದ ಸುಪ್ರೀಂಕೋರ್ಟ್ ಕಾರ್ಯವಿಧಾನ, ಗ್ರೇಟ್ ಬ್ರಿಟನ್ನಿಂದ ಒಟ್ಟು ಸಂಸದೀಯ ವ್ಯವಸ್ಥೆ, ಆಸ್ಟ್ರೇಲಿಯಾದಿಂದ ಸಮಕಾಲೀನ ಪಟ್ಟಿ, ಜರ್ಮನಿಯಿಂದ ತುರ್ತು ಪರಿಸ್ಥಿತಿ ನಿರ್ವಹಣೆಯಂತ ವಿಷಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ.
ನಮ್ಮ ಸಂವಿಧಾನವು ಕೇವಲ ದೀರ್ಘ, ಶುಷ್ಕ ದಾಖಲೆ ಅಲ್ಲ. ಅದು ಚಿತ್ರ, ಚಿಹ್ನೆ ಮತ್ತು ಭಾರತೀಯ ಸಂಸ್ಕೃತಿಯ ಉಲ್ಲೇಖಗಳನ್ನು ಹೊಂದಿದೆ.
ಶ್ರೇಷ್ಠ ಕಲಾವಿದ ಪ್ರೇಮ್ ಬಿಹಾರಿ ನರೈನ್ ರಾಯ್ಝದ್ ಅವರ ಮೂಲಕ ಸಂವಿಧಾನವನ್ನು ಇಳಿಜಾರು ಇಟಾಲಿಕ್ ಶೈಲಿಯ ಕ್ಯಾಲಿಗ್ರಫಿಯಲ್ಲಿ ಬರೆಯಲಾಗಿದೆ. ಇದರ ಅಂಚುಗಳಿಗೆ ಬಳಕೆ ಮಾಡಲಾಗಿರುವ ಅಲಂಕಾರಗಳು ಶಾಂತಿನಿಕೇತನ ಶೈಲಿಯನ್ನು ಸಾಕ್ಷೀಕರಿಸುತ್ತದೆ. ಸಂವಿಧಾನದ ಮೊದಲ ಕೈಬರಹ ಪ್ರತಿಗಾಗಿ ಕಾಗದಗಳನ್ನು ಪುಣೆಯಲ್ಲಿನ ’ಹ್ಯಾಂಡ್ ಮೇಡ್ ಪೇಪರ್ ಇನ್ಸ್ಟ್ಯೂಟ್’ನಲ್ಲಿ ಸಿದ್ಧಪಡಿಸಲಾಗಿದೆ.
ಮೂಲ ಸಂವಿಧಾನದ ಮೂಲಭೂತ ಹಕ್ಕುಗಳ ಪುಟಗಳಲ್ಲಿ ರಾಮ ಮತ್ತು ಲಕ್ಷ್ಮಣ, ಸೀತೆಯರ ಚಿತ್ರಗಳಿದ್ದವು. ನಿರ್ದೇಶಕ ತತ್ವ (ಡೈರೆಕ್ಟಿವ್ ಪ್ರಿನ್ಸಿಪಲ್)ಗಳ ಪುಟಗಳು ಕೃಷ್ಣನ ಚಿತ್ರ ಹೊಂದಿದ್ದವು. ಇತರ ಪುಟಗಳಲ್ಲಿ ನಟರಾಜ ಮತ್ತು ಇತರ ದೇವತೆಗಳ ಚಿತ್ರಗಳಿದ್ದವು. ಗುರುಕುಲದ ದೃಶ್ಯದ ಮೂಲಕ ವೇದಿಕ್ ಅವಧಿಯನ್ನು ಪ್ರತಿಬಿಂಬಿಸಲಾಗಿತ್ತು. ಬುದ್ಧ ಮತ್ತು ಮಹಾವೀರರ ಬದುಕಿನ ಚಿತ್ರಣವೂ ಇತ್ತು. ಅಶೋಕ ಚಕ್ರವರ್ತಿ ಮತ್ತು ವಿಕ್ರಮಾದಿತ್ಯನ ನ್ಯಾಯಾಂಗ ಚಿತ್ರಗಳು ಸ್ಥಾನಪಡೆದುಕೊಂಡಿತ್ತು. ಶಿವಾಜಿ, ಗುರುಗೋವಿಂದ್ ಸಿಂಗ್, ಝಾನ್ಸಿ ರಾಣೀ ಲಕ್ಷ್ಮೀಬಾಯಿ ಮುಂತಾದ ಇತಿಹಾಸ ವ್ಯಕ್ತಿಗಳ ಚಿತ್ರವೂ ಇತ್ತು. ಮಹಾತ್ಮ ಗಾಂಧೀಜಿಯವರ ದಂಡೀ ಸತ್ಯಾಗ್ರದ ಚಿತ್ರದ ಮೂಲಕ ಸ್ವಾತಂತ್ರ್ಯ ಚಳುವಳಿಯನ್ನು ಬಿಂಬಿಸಲಾಗಿತ್ತು. ಸುಭಾಷ್ ಚಂದ್ರ ಬೊಸ್ ಅವರ ಚಿತ್ರವನ್ನೂ ಇದು ಹೊಂದಿತ್ತು.
ಸಾಮಾಜಿಕ ಮತ್ತು ರಾಜಕೀಯ ವಲಯದ ಮಹತ್ವದ ಆಯಾಮಗಳನ್ನು ನಿರ್ವಹಿಸುವ ಹಲವು ಪರಿಚ್ಛೇದಗಳನ್ನು ಸಂವಿಧಾನ ಒಳಗೊಂಡಿದೆ.
ಪರಿಚ್ಛೇದ ಸಂಖ್ಯೆ 12-35 ಮೂಲಭೂತ ಹಕ್ಕುಗಳ ನಿರ್ವಹಣೆಯನ್ನು ಹೊಂದಿದೆ, 36-50 ನಿರ್ದೇಶಕ ತತ್ವಗಳ ರಾಜ್ಯ ನಿಮಯಗಳನ್ನು ಒಳಗೊಂಡಿದೆ. 51ಎ ಭಾರತೀಯರ ಮೂಲಭೂತ ಕರ್ತವ್ಯಗಳ ನಿರ್ವಹಣೆ, 100 ಭಾರತೀಯ ಮೂಲಭೂತ ಕರ್ತವ್ಯಗಳ ನಿರ್ವಹಣೆ, 141 ಮತ್ತು 343 ಸುಪ್ರೀಂಕೋರ್ಟ್ ಕಾನೂನು ಎಲ್ಲಾ ನ್ಯಾಯಾಲಯಗಳಿಗೂ ಅನ್ವಯ 352 ರಾಷ್ಟ್ರೀಯ ತುರ್ತುಪರಿಸ್ಥಿತಿಯ ನಿರ್ವಹಣೆ, 368 ಸಂವಿಧಾನ ತಿದ್ದುಪಡಿಗೊಳಿಸಲು ಸಂಸತ್ತಿಗೆ ಅಧಿಕಾರ ನೀಡುವ ವಿಷಯದ ನಿರ್ವಹಣೆ, 370 ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ನಿಬಂಧನೆಗಳನ್ನು ಒಳಗೊಂಡಿದೆ.
ಇದುವರೆಗೆ ಸಂವಿಧಾನವನ್ನು 123 ಬಾರಿ ತಿದ್ದುಪಡಿ ಮಾಡಲಾಗಿದೆ.
ಕೆಲವೊಂದು ಮಹತ್ವದ ತಿದ್ದುಪಡಿಗಳೆಂದರೆ
1956 ರಲ್ಲಿ ಭಾಷಾ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ಮತ್ತು ವರ್ಗ ಎ, ಬಿ, ಸಿ ಮತ್ತು ಡಿ ರಾಜ್ಯಗಳ ನಿರ್ಮೂಲನೆ ಮತ್ತು ಕೇಂದ್ರಾಡಳಿತ ಪ್ರಾಂತ್ಯಗಳ ಪರಿಚಯಕ್ಕಾಗಿ ತಿದ್ದುಪಡಿ.
1960 ರಲ್ಲಿ ಪಾಕಿಸ್ಥಾನದೊಂದಿಗಿನ ಒಪ್ಪಂದದ ಫಲವಾಗಿ ಭಾರತೀಯ ಭೂಪ್ರದೇಶಗಳ ಹೊಂದಾಣಿಕೆ ತಿದ್ದುಪಡಿ.
1961 ರಲ್ಲಿ ಪೋರ್ಚುಗಲ್ನಿಂದ ಸ್ವಾಧೀನಪಡಿಸಿಕೊಂಡ ದಾದ್ರ, ನಗರ್ ಮತ್ತು ಹವೇಲಿಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರ್ಪಡೆ.
1961 ರಲ್ಲಿ ಪೋರ್ಚುಗಲ್ನಿಂದ ಸ್ವಾಧೀನಪಡಿಸಿಕೊಂಡ ಗೋವಾ, ದಾಮನ್ ಮತ್ತು ದಿಯೂಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರ್ಪಡೆ.
1962 ರಲ್ಲಿ ಫ್ರಾನ್ಸ್ನಿಂದ ವರ್ಗಾವಣೆಯಾದ ಬಳಿಕ ಪುದುಚೇರಿಯು ಭಾರತೀಯ ಒಕ್ಕೂಟದೊಂದಿಗೆ ವಿಲಿನವಾಯಿತು.
1963 ರಲ್ಲಿ ನಾಗಾಲ್ಯಾಂಡ್ ರಾಜ್ಯವನ್ನು ಪರಿಚ್ಛೇದ 371ಎ ಅನ್ವಯ ವಿಶೇಷ ರಕ್ಷಣೆಯೊಂದಿಗೆ ರಚನೆ ಮಾಡಲಾಯಿತು.
1967 ರಲ್ಲಿ ಸಿಂಧಿ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲಾಯಿತು.
1971 ರಲ್ಲಿ ರಾಜಾಡಳಿತವಿದ್ದ ರಾಜ್ಯಗಳ ಮಾಜಿ ರಾಜರಿಗೆ ನೀಡಲಾಗುತ್ತಿದ್ದ ಹಣವನ್ನು ರದ್ದುಪಡಿಸಲಾಯಿತು.
1975 ರಲ್ಲಿ ಸಿಕ್ಕಿಂನ್ನು ಭಾರತದ ರಾಜ್ಯವಾಗಿ ಸೇರ್ಪಡೆಗೊಳಿಸಲಾಯಿತು.
1975 ರಲ್ಲಿ ಮೂಲಭೂತ ಕರ್ತವ್ಯಗಳನ್ನು ಸೂಚಿಸಲಾಯಿತು, ಭಾರತ ಸಮಾಜವಾದಿ ಜಾತ್ಯಾತೀತ ಗಣರಾಜ್ಯವಾಯಿತು.
1978 ರಲ್ಲಿ ಮೂಲಭೂತ ಹಕ್ಕುಗಳ ಪಟ್ಟಿಯಿಂದ ಆಸ್ತಿ ಹೊಂದುವ ಹಕ್ಕನ್ನು ತೆಗೆಯಲಾಯಿತು.
1985 ರಲ್ಲಿ ಚುನಾವಣಾ ನಂತರ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಕಾನೂನು ಬಾಹಿರಗೊಂಡಿತು.
2002 ರಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.
2016 ರಲ್ಲಿ ಸರಕು ಮತ್ತು ಸೇವಾ ತೆರಿಗೆಯ ಪರಿಚಯಕ್ಕಾಗಿ ತಿದ್ದುಪಡಿಯನ್ನು ಮಾಲಾಯಿತು.
ಒಟ್ಟಿನಲ್ಲಿ ಭಾರತೀಯ ಸಂವಿಧಾನ ಭಾರತೀಯರ ಹಕ್ಕು, ಆಶಯಗಳನ್ನು ಎತ್ತಿಹಿಡಿಯುವ ಬೃಹತ್ ದಾಖಲೆಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.