ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ದೇವ್ಯೈ ನಮೋ ನಮಃ
ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ಆಕೆ ಪವಿತ್ರತೆಯ ಸಂಕೇತ ಸಾಕ್ಷಾತ್ ಕಾಳಿಯ ಪ್ರತಿರೂಪ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ ಶಕ್ತಿ ಎಂಬ ತತ್ವ ಚಿಂತನೆ ಭಾರತದ್ದು. ಈ ಮತಿಗೆ ತಕ್ಕ ಸಾಕ್ಷಿಯಾಗಿ ಆಧ್ಯಾತ್ಮದ ಶಕ್ತಿ ಪವಿತ್ರತೆಯ ಸಂಕೇತ ಮಾತೃತ್ವದ ಪ್ರತಿರೂಪವೇ “ಶ್ರೀ ಮಾತೆ ಶಾರದಾ ದೇವಿ”
ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೆ ಕಣ್ಮುಂದೆ ಹಾಯುವುದು ಅವರ ಪರಮಪವಿತ್ರವಾದ ಜೀವನ. ಅಬ್ಬರದ ಪ್ರಚಾರಗಳಾಗಲೀ ತೋರಿಕೆಯ ಅವಕಾಶಗಳಾಗಲೀ ಇಲ್ಲದ ಕಾಲದಲ್ಲಿ, ಯಾವ ಆಡಂಬರವೂ ಇಲ್ಲದೆ, ಲೌಕಿಕ ಶ್ರೀಮಂತಿಕೆಯ ಪ್ರದರ್ಶನವೂ ಇಲ್ಲದೆ ತಮ್ಮ ಆಧ್ಯಾತ್ಮಿಕ ಶಕ್ತಿಯ ಮೂಲಕ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಅವರು.
ಶ್ರೀರಾಮಕೃಷ್ಣ ಪರಮಹಂಸರ ಪತ್ನಿಯಾದ ಶ್ರೀಮಾತೆ ಶಾರದಾ ದೇವಿ ಅವರು ಶ್ರೀ ರಾಮಕೃಷ್ಣ ಆಧ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ‘ಶ್ರೀ ಮಾ’ ಎಂದು ಶ್ರೀ ರಾಮಕೃಷ್ಣರ ಅನುಯಾಯಿಗಳಿಂದ ಸಂಬೋಧಿಸಲ್ಪಡುತ್ತಿದ್ದ ಶ್ರೀ ಶಾರದಾ ದೇವಿಯವರು ದಕ್ಷಿಣೇಶ್ವರದಲ್ಲಿ ಸ್ಥಾಪಿತಗೊಂಡ ಶ್ರೀ ಶಾರದ ಮಠ ಮತ್ತು ಶ್ರೀ ರಾಮಕೃಷ್ಣ ಶಾರದಾ ಮಿಷನ್ನಿನ ಆಧ್ಯಾತ್ಮಿಕ ಪ್ರೇರಕ ಶಕ್ತಿ.
ಜೀವನದಲ್ಲಿ ನಾವೆಲ್ಲರೂ ಕಷ್ಟಗಳು ಅಥವಾ ಕಷ್ಟಗಳು ಎಂದುಕೊಳ್ಳುವಂತಹ ಘಟನೆಗಳನ್ನು ಕಾಣುತ್ತಿರುತ್ತೇವೆ. ನಾವು ಕಷ್ಟಗಳು ಎಂದುಕೊಂಡಿರುವ ಗಾತ್ರದ ಹಲವು ಪಟ್ಟು ಹೆಚ್ಚು ಕಷ್ಟಪಡುತ್ತಿರುವ ಜನರನ್ನು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ. ಆ ಕಷ್ಟಗಳು ನಮ್ಮನ್ನು ಆದಷ್ಟು ಬಿಟ್ಟು ಹೋಗಬೇಕು ಎಂದು ತವಕಿಸುವುದು ಈ ಲೋಕದ ನಿತ್ಯ ಅನುಭವ. ಹಾಗಾಗಿ ನಮ್ಮ ದೃಷ್ಟಿ ಕಷ್ಟಗಳೆಂಬ ಕತ್ತಲೆಯ ಕಡೆಗೆ ನೆಟ್ಟಿರುವಷ್ಟು, ಬಿಡುಗಡೆಯ ಮುಕ್ತಿಯೆಂಬ ಬೆಳಕಿನ ಕಡೆಗೆ ಹೊರಳುವುದೇ ಇಲ್ಲ. ಜಗತ್ತಿನಲ್ಲಿ ಕಷ್ಟಗಳ ನಡುವೆ ಇದ್ದು ಬೆಳಕಿನತ್ತ ಮುಖ ಮಾಡಿನಿಂತ ಅಪೂರ್ವ ವ್ಯಕ್ತಿತ್ವ ಶ್ರೀಮಾತೆ ಶಾರದಾದೇವಿಯವರದ್ದು.
“ಶ್ರೀಮಾತೆಯವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ. ಕೆಳಗೆ ನೋಡಿದರೆ ಸಂಸಾರದ ಕೆಸರು, ಕೊಳೆ, ಕಲ್ಮಶ ಎಲ್ಲಾ ಇವೆ. ಆದರೆ ಕಮಲ, ಕೆಳಗೆ ನೋಡುವುದಿಲ್ಲ, ಮೇಲೆ ನೋಡುವುದು, ಯಾವಾಗಲೂ ಸೂರ್ಯನ ದಿಕ್ಕಿಗೆ ತಿರುಗುವುದು. ಶ್ರೀಮಾತೆಯವರ ಜೀವನವೇ ಇದಕ್ಕೆ ಸಾಕ್ಷಿ. ಕೆಳಗೆ ನೋಡಬೇಡಿ. ಅಲ್ಲಿ ಕೊಳೆ ಇದೆ, ಕೆಸರಿದೆ ಎಂದು ತಪ್ಪು ಕಂಡು ಹಿಡಿಯಬೇಡಿ. ಕೆಸರಿನ ಲಕ್ಷಣವೇ ಅದು. ಆದರೆ ಮೇಲೆ ನೋಡಿ, ಆಗ ಭಗವಾನ್ ಸೂರ್ಯನನ್ನು ಕಾಣುತ್ತೇವೆ. ಕೆಳಗಿರುವುದನ್ನು ರಿಪೇರಿ ಮಾಡಲು ಹೋಗಬೇಡಿ. ಅದು ರಿಪೇರಿ ಆಗುವುದಕ್ಕೆ ಕಾಯುತ್ತಿಲ್ಲ. ಆದರೆ ಮೇಲೆ ನೀವು ನೋಡಿ. ಆಗ ಅವನ ದರ್ಶನ ನಿಮಗಾಗುವುದು.”
ಶಾರದಾ ದೇವಿ ಅವರು ಡಿಸೆಂಬರ್ 22, 1853 ರಂದು ಪಶ್ಚಿಮ ಬಂಗಾಳದ ಜಯರಾಂಬಟಿ ಎಂಬಲ್ಲಿ ಜನಿಸಿದರು. ಅವರ ಅಂದಿನ ಹೆಸರು ಶಾರದಾಮಣಿ ಮುಖೋಪಾಧ್ಯಾಯ್. ಅವರ ತಂದೆಯ ಹೆಸರು ರಾಮಚಂದ್ರ ಮುಖೋಪಾಧ್ಯಾಯ್ ಮತ್ತು ತಾಯಿ ಶ್ಯಾಮ ಸುಂದರ ದೇವಿ. ತಂದೆ ಬಡರೈತರಾಗಿದ್ದು ಜೊತೆಗೆ ಪೂಜಾರಿಯಾಗಿ ತಮ್ಮ ದೊಡ್ಡ ಸಂಸಾರವನ್ನು ನಿರ್ವಹಿಸುತ್ತಿದ್ದರು. ಶಾರದಾ ದೇವಿ ಅವರಿಗೆ ಬಾಲ್ಯದಲ್ಲೇ ಪೌರಾಣಿಕ ಕಥೆಗಳನ್ನು ಕೇಳುವುದರಲ್ಲಿ ಅಪಾರ ಆಸಕ್ತಿ. ಮನೆಯ ಕೆಲಸಗಳನ್ನು ಮಾಡುವುದರಲ್ಲಿ ತಾಯಿಗೆ ಹೆಗಲು ನೀಡುವುದರ ಜೊತೆಗೆ ಇತರರಿಗೆ ಸಹಾಯ ಮಾಡುವ ಗುಣ ಸಹಾ ಅವರಲ್ಲಿ ಮಡುಗಟ್ಟಿತ್ತು. 1864ರ ಅವಧಿಯಲ್ಲಿ ಕ್ಷಾಮ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಈಕೆ ತನ್ನ ತಂದೆ ತಾಯಿಗಳ ಜೊತೆ ಸೇರಿ, ಹಸಿದ ಜನರಿಗೆ ಜೀವ ಉಳಿಸಿಕೊಳ್ಳುವುದಕ್ಕೆ ಹಗಲಿರುಳೂ ಸಹಾಯ ಮಾಡಿದರು. ಮಣ್ಣಿನಲ್ಲಿ ಕಾಳಿ ಮತ್ತು ಲಕ್ಷ್ಮಿ ವಿಗ್ರಹಗಳನ್ನು ಮಾಡಿ ಪೂಜಿಸುವುದು ಆಕೆಗೆ ಬಲು ಇಷ್ಟವಾದ ಚಟುವಟಿಕೆಯಾಗಿತ್ತು. ಚಿಕ್ಕಂದಿನಿಂದಲೇ ಆಳವಾದ ಧ್ಯಾನದಲ್ಲಿ ತೊಡಗುತ್ತಿದ್ದುದು ಶಾರದದೇವಿಯವರಿಗೆ ರೂಢಿಯಾಗಿತ್ತಂತೆ.
ಇತ್ತ ಯಾವಾಗಲೂ ಪೂಜೆ ಪುನಸ್ಕಾರ ಧ್ಯಾನಗಳಲ್ಲಿ ಮುಳುಗಿ ಸಾಮಾನ್ಯರ ಬದುಕಿಗೆ ವ್ಯತಿರಿಕ್ತವಾಗಿ ಬದುಕುತ್ತಿದ್ದ ತಮ್ಮ ಮಗನಿಗೆ ಮದುವೆ ಮಾಡಿದರೆ ಆತ ಎಲ್ಲರಂತೆ ಸಹಜವಾಗಿರುತ್ತಾನೆ ಎಂದು ಭಾವಿಸಿದ ಶ್ರೀ ರಾಮಕೃಷ್ಣ ಪರಮಹಂಸರ ತಂದೆ ತಾಯಂದಿರು ಆತನಿಗೆ ಮದುವೆಯ ಏರ್ಪಾಡು ಮಾಡಿದರು. ಶ್ರೀ ರಾಮಕೃಷ್ಣರೇ, ಶಾರದಾ ದೇವಿಯನ್ನು ಮದುಮಗಳಾಗಿ ಸೂಚಿಸಿದರೆಂಬ ಮಾತೂ ಇದೆ. ಹೀಗೆ ಕೇವಲ ಐದು ವರ್ಷದಲ್ಲಿರುವಾಗಲೇ ಶ್ರೀ ಶಾರದಾದೇವಿ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರೊಡನೆ 1853ರ ವರ್ಷದಲ್ಲಿ ವಿವಾಹವಾಗಿತ್ತು. ಆಗ ಶ್ರೀ ರಾಮಕೃಷ್ಣರ ವಯಸ್ಸು 23. ಅಂದಿನ ಬಂಗಾಳಿ ಸಂಪ್ರದಾಯಗಳಲ್ಲಿ ವಧೂವರರಲ್ಲಿ ಇಂತಹ ವಯಸ್ಸಿನ ಅಂತರ ಸರ್ವೇಸಾಧಾರಣವಾಗಿತ್ತು.
ವಿವಾಹದ ನಂತರದಲ್ಲಿ ತನ್ನ ತಂದೆ ತಾಯಂದಿರ ಪೋಷಣೆಯಲ್ಲೇ ಇದ್ದ ಶಾರದಾ ದೇವಿ, ತಮ್ಮ 14ನೆಯ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣರಿದ್ದ ಕಾಮಾಪುಕುರಕ್ಕೆ ಬಂದು ಮೂರು ತಿಂಗಳು ಅವರ ಜೊತೆಯಲ್ಲಿದ್ದರು. ಈ ಸಮಯದಲ್ಲಿ ಶ್ರೀ ರಾಮಕೃಷ್ಣರು ಆಕೆಗೆ ಆಧ್ಯಾತ್ಮದಲ್ಲಿನ ಸಾಧನೆ, ವೈರಾಗ್ಯ ಮತ್ತು ಗುರಿಗಳ ಬಗ್ಗೆ ತಿಳಿಸಿಕೊಟ್ಟರು. ಮೂರು ತಿಂಗಳ ನಂತರದಲ್ಲಿ ಪುನಃ ಶಾರದಾ ದೇವಿ ತವರಿನಲ್ಲಿದ್ದರು. ಶ್ರೀ ರಾಮಕೃಷ್ಣರು ಆಗಾಗ ಭಾವ ಸಮಾಧಿಗೆ ಇಳಿಯುತ್ತಿದ್ದುದು ಬಹಳಷ್ಟು ಸಾಮಾನ್ಯ ಜನರ ಕಣ್ಣಿಗೆ ಹುಚ್ಚಾಗಿ ಕಂಡರೆ, ಕೆಲವೊಂದು ಜನರಿಗೆ ಅವರು ಮಹಾನ್ ಸಾಧುವಾಗಿ ಕಾಣತೊಡಗಿದರು. ಶ್ರೀ ರಾಮಕೃಷ್ಣರ ಮಾನಸಿಕ ಆರೋಗ್ಯದ ಬಗ್ಗೆ ಹಲವು ಮಾತುಗಳನ್ನು ಕೇಳಿದ್ದ ಶ್ರೀ ಶಾರದಾ ದೇವಿ ಅವರು, 1872ರಲ್ಲಿ 18ನೆಯ ವಯಸ್ಸಿನಲ್ಲಿ ತಮ್ಮ ಸ್ವಇಚ್ಚೆಯ ಮೇರೆಗೆ ದಕ್ಷಿಣೇಶ್ವರಕ್ಕೆ ಬಂದರು. ಅವರಿಗೆ ಶ್ರೀ ರಾಮಕೃಷ್ಣರು ಕರುಣಾಳುವಾಗಿಯೂ, ಸಹಾನುಭೂತಿಯುಳ್ಳವರಾಗಿಯೂ ಕಂಡುಬಂದರು. ಅವರಿಗೆ ಶೀಘ್ರದಲ್ಲೇ ಶ್ರೀ ರಾಮಕೃಷ್ಣರು ಸಾಮಾನ್ಯತೆಯಿಂದ ಹೊರಗೆ ಏರಿರುವ ಆಧ್ಯಾತ್ಮದ ಆಳದ ಅರಿವಾಯಿತು.
ದಕ್ಷಿಣೇಶ್ವರದಲ್ಲಿ ಶ್ರೀ ಶಾರದಾದೇವಿಯವರು ಒಂದು ಸಣ್ಣ ಕೋಣೆಯಲ್ಲಿ ಇರುತ್ತಿದ್ದರು. ಶ್ರೀ ರಾಮಕೃಷ್ಣರಿಗೆ ಮತ್ತು ಅವರನ್ನು ನೋಡಲು ಬರುತ್ತಿದ್ದವರಿಗೆ ಆಹಾರ ತಯಾರಿಸುವುದು ಅವರ ಕಾರ್ಯವಾಗುತ್ತಿತ್ತು. ಶ್ರೀ ರಾಮಕೃಷ್ಣರು ಶಾರದಾ ದೇವಿ ಅವರಿಗೆ ಮಂತ್ರಗಳನ್ನು ಹೇಳಿಕೊಟ್ಟಿದ್ದರು ಮತ್ತು ಹೇಗೆ ಜನರನ್ನು ಆಧ್ಯಾತ್ಮದ ಹಾದಿಗೆ ಪ್ರೇರಿಸಿ ಮಾರ್ಗದರ್ಶಿಸಬೇಕೆಂದು ಕೂಡಾ ಹೇಳುತ್ತಿದ್ದರು. ಶ್ರೀ ಶಾರದಾ ದೇವಿ ಅವರನ್ನು ಕಾಳಿಯ ಸ್ವರೂಪ ಎಂದೇ ಬಗೆದು ‘ಶ್ರೀ ಮಾ’ ಎಂದೇ ಅವರನ್ನು ಆಧ್ಯಾತ್ಮ ಭಾವದಲ್ಲಿ ಸಂಬೋಧಿಸುತ್ತಿದ್ದ ಶ್ರೀ ರಾಮಕೃಷ್ಣರು, ಅವರನ್ನು ಮಣೆಯ ಮೇಲೆ ಕಾಳಿಯ ಸ್ಥಾನದಲ್ಲಿ ಕುಳ್ಳಿರಿಸಿ ತ್ರಿಪುರಸುಂದರಿ ಮಾತೆ ಎಂದು ಶೋಡಷ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ.
ಯಾವಾಗಲೂ ಶಾರದಾ ಮಾತೆಯವರು ತೆರೆಯ ಮರೆಯಲ್ಲೇ ಇರುತ್ತಿದ್ದರೂ ಅನೇಕ ಸ್ತ್ರೀಯರು ಶಾರದಾ ಮಾತೆಯವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಬಳಿ ಬಂದು ಜೀವನಪರ್ಯಂತ ಅವರ ಸಹಜೀವಿಗಳಾದರು.
ಶ್ರೀ ರಾಮಕೃಷ್ಣರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಗಂಟಲಿನ ಕ್ಯಾನ್ಸರ್ ಬೇನೆಗೆ ತುತ್ತಾದಾಗ ಶ್ರೀ ಮಾತೆ ಶಾರದಾ ದೇವಿ ಅವರು ಅವರಿಗೆ ಉಪಚಾರ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆಗಸ್ಟ್ 1886ರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ನಿಧನರಾದ ಸಂದರ್ಭದಲ್ಲಿ ಶ್ರೀ ಮಾತೆಯವರು ವಿಧವೆಯಾಗಿ ತಮ್ಮ ಸುಮಂಗಲಿ ಲಕ್ಷಣಗಳನ್ನು ತೆಗೆಯಲು ಪ್ರಯತ್ನಿಸಿದಾಗಲೆಲ್ಲಾ ಶ್ರೀ ರಾಮಕೃಷ್ಣರು “ನಾನು ಒಂದು ಕೊಟಡಿಯಿಂದ ಮತ್ತೊಂದು ಕೊಟಡಿಗೆ ಹೋಗಿದ್ದೇನಷ್ಟೇ” ಎಂದು ಅನುಜ್ಞೆ ನೀಡಿ ತಮ್ಮನ್ನು ತಡೆದುದಾಗಿ ಹೇಳಿದ್ದಾರೆ.
ಶ್ರೀ ರಾಮಕೃಷ್ಣರ ನಿಧನಾನಂತರದಲ್ಲಿ ಶ್ರೀ ಮಾತೆ ಶಾರದಾ ದೇವಿ ಅವರು ಹಲವಾರು ಪುಣ್ಯ ಕ್ಷೇತ್ರಗಳಿಗೂ, ದೇಶದ ವಿವಿದೆಡೆಗಳಲ್ಲಿ ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಶ್ರೀ ರಾಮಕೃಷ್ಣರ ಶಿಷ್ಯರು ಸ್ಥಾಪಿಸಿದ ಶ್ರೀ ರಾಮಕೃಷ್ಣ ಮಿಷನ್ನಿನ ಹಲವು ಶಾಖೆಗಳಿರುವ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರ ಜೀವನ ಬಡತನದ ಜೊತೆಗೆ ಮತ್ತು ಅವರ ನಿಧನರಾದ ಅವರ ಸಹೋದರರ ಸಂಸಾರ ತಾಪತ್ರಯಗಳಿಗೆ ಹೆಗಲುಕೊಟ್ಟು ಕಷ್ಟಪಡುವಂತಹ ಸ್ಥಿತಿಗಳಲ್ಲಿ ಬಳಲುವಂತಾಯ್ತು. ಇವೆಲ್ಲವುಗಳ ನಡುವೆಯೂ ಶಾಂತಿಯನ್ನು ಕಾಪಾಡಿಕೊಂಡು ಶ್ರೀ ರಾಮಕೃಷ್ಣರ ಶಿಷ್ಯರಿಗೆ ಮಾತೆಯಾಗಿ ತಮ್ಮ ಬಳಿ ಬರುವವರಿಗೆ ಆಧ್ಯಾತ್ಮದ ಸಿಂಚನವನ್ನು ನೀಡುತ್ತಾ ತಮ್ಮ ಜೀವನವನ್ನು ನಡೆಸಿದರು. ಸಹೋದರಿ ನಿವೇದಿತಾ, ಸಹೋದರಿ ದೇವಮಾತಾ ಹಾಗೂ ಶ್ರೀ ರಾಮಕೃಷ್ಣರ ಶಿಷ್ಯರು ಶ್ರೀಮಾತೆ ಅವರು ವಾತ್ಸಲ್ಯದ ಮಾತೃಭಾವದೊಂದಿಗೆ ಭಕ್ತಿಭಾವದಿಂದಿದ್ದರು.
“ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಗವಂತನನ್ನು ಆಸೆಗಳಿಂದ ಪಾರುಮಾಡು ಎಂದು ಕೇಳಿಕೊಳ್ಳಬೇಕು. ಏಕೆಂದರೆ ಆಸೆಯೇ ಎಲ್ಲ ದುಃಖದ ಮೂಲ. ಮತ್ತೆ ಮತ್ತೆ ಜನನ ಮರಣಗಳಿಗೆ ತಳ್ಳುವುದೂ ಆಸೆಯೇ. ಮುಕ್ತಿಯ ಮಾರ್ಗದಲ್ಲಿ ಅದೇ ಅಡ್ಡಿ.”
“ಪ್ರಾಪಂಚಿಕ ಸಂಬಂಧಗಳು ಶಾಶ್ವತವಲ್ಲ. ಇಂದು ಅವೇ ಜೀವನದ ಸಾರಸರ್ವಸ್ವವೋ ಎಂಬಂತೆ ತೋರುತ್ತದೆ. ಆದರೆ ನಾಳೆ ಎಲ್ಲವೂ ಮಾಯವಾಗುತ್ತವೆ. ನಿನ್ನ ನಿಜವಾದ ಸಂಬಂಧ ದೇವರೊಂದಿಗೆ ಮಾತ್ರ.”
“ನೀನು ಮನುಷ್ಯ ಮಾತ್ರರನ್ನು ಪ್ರೀತಿಸಿದ್ದೆ ಆದರೆ ಕಷ್ಟಪಡಲೇಬೇಕಾಗುತ್ತದೆ. ಯಾರು ಭಗವಂತನನ್ನು ಮಾತ್ರವೇ ಪ್ರೀತಿಸುತ್ತಾನೋ ಅವನೇ ಧನ್ಯ. ಭಗವಂತನನ್ನು ಪ್ರೀತಿಸುವವನು ಕಷ್ಟಗಳಿಗೆ ಗುರಿಯಾಗುವುದಿಲ್ಲ.”
“ಮಗು, ನೀನು ಸಂಸಾರದಲ್ಲಿ ಇದ್ದರೆ ತಾನೇ ಏನಂತೆ? ಸಂಸಾರದಲ್ಲಿ ಇರುವುದು ಎಂದರೆ ನಿನ್ನ ಪಾಲಿಗೆ ಮರದ ನೆರಳಿನಲ್ಲಿ ಇದ್ದಂತೆ. ಸಂಸಾರವೇನು ದೇವರಿಂದ ಬೇರೆಯೇ? ದೇವರು ಎಲ್ಲೆಲ್ಲೂ ಇದ್ದಾನೆ…. ದೇವರು ನಿನ್ನನ್ನು ಎಲ್ಲಿಟ್ಟಿರುವನೋ ಅಲ್ಲೇ ತೃಪ್ತಿಯಿಂದಿರು. ದೇವರನ್ನು ಕರೆಯುವುದು, ಅವನನ್ನು ಪಡೆಯುವುದು, ಇದೇ ಗುರಿ. ನೀನು ಅವನನ್ನು ಕರೆದರೆ, ಅವನು ಕೈಹಿಡಿದು ನಡೆಸುತ್ತಾನೆ. ಅವನನ್ನು ನಂಬು.
ಶ್ರೀಮಾತೆ ಶಾರದಾ ದೇವಿ ಅವರು ತಮ್ಮ ಬಹುತೇಕ ದಿನಗಳನ್ನು ಕಲ್ಕತ್ತಾ ಮತ್ತು ಜಯರಾಂಬಟಿಗಳಲ್ಲಿ ಕಳೆದರು. ಜುಲೈ 20, 1920ರಂದು ತಮ್ಮ ಇಹಲೋಕದ ಬದುಕಿಗೆ ಮುಕ್ತಾಯ ಹೇಳಿದರು.
ವಿವೇಕಾನಂದರು ಆಕೆಯನ್ನು `ಆದ್ಯಾ ಶಕ್ತಿ’ಎಂದೇ ಕರೆದಿದ್ದರು. `ಪರಮಹಂಸರ ಅಧಿಕೃತತೆಯ ಬಗ್ಗೆ ಯಾರಾದರೂ ಸಂಶಯ ತೋರಿದರೆ ತೋರಿಕೊಳ್ಳಲಿ. ಆದರೆ ಶ್ರೀಮಾತೆಯವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾನದನ್ನು ಸಹಿಸಲಾರೆ. ಆಕೆ ಸ್ವಯಂ ವಿದ್ಯೆ. ಆದಿ ಶಕ್ತಿ’ ಎಂದಿದ್ದರು ಸ್ವಾಮೀಜಿ. ಶಾರದಾ ದೇವಿಯವರ ಬಗ್ಗೆ ಅವರ ವಿಶ್ವಾಸ ಅಂತಹದ್ದು.
ಇಂದಿನ ಸ್ತ್ರೀಯರು ಕೇವಲ ಬಾಹ್ಯ ಬೆಳವಣಿಗೆಗೆ ಗಮನಕೊಡುತ್ತಿದ್ದು, ಆಂತರಿಕ ಸಂವೇದನೆ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಇವೆರಡಕ್ಕೂ ಆದರ್ಶದಂತಿರುವ ಮಾತೆ ಶಾರದಾದೇವಿಯವರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ತಮ್ಮ ವೈಯಕ್ತಿಕ, ಕೌಟುಂಬಿಕ, ಸಮಾಜಿಕ ಜೀವನದಲ್ಲಿ ಶಾಂತಿ–ಆನಂದ ಪಡೆಯಲು ಸಾಧ್ಯ.
ಪ್ರತಿಯೊಬ್ಬ ಆಧುನಿಕ ಸ್ತ್ರೀ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸ್ತ್ರೀ ಆದರ್ಶವನ್ನು ಎಂದಿಗೂ ಕಡೆಗಣಿಸಬಾರದು. ಭೋಗಭೂಮಿಯಾದ ಪಾಶ್ಚಿಮಾತ್ಯ ದೇಶದ ಸ್ತ್ರೀಯು ಆದರ್ಶ ಪತ್ನಿಯಾದರೆ, ಯೋಗ ಭೂಮಿಯಾದ ಭಾರತೀಯ ಸ್ತ್ರೀಯು ಆದರ್ಶ ಮಾತೆಯಾಗಲಿ. ಪ್ರತಿಯೊಬ್ಬರಿಗೂ ಶ್ರೀ ಮಾತೆಯ ಕೃಪಾಶೀರ್ವಾದ ಅನುಗ್ರಹವಾಗಲಿ. ಮತ್ತೆ ಭಾರತ ತನ್ಮೂಲಕ ವಿಶ್ವಗುರುವಾಗಲಿ.
(ಸಂಗ್ರಹ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.