“ಶಂ ನೋ ವರುಣಃ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಕಡಲನ್ನು ರಕ್ಷಿಸುತ್ತಿರುವ ಮಹಾರಕ್ಷಕರು ಇವರು.
ಇಂದು ಭಾರತೀಯ ನೌಕಾದಳ ದಿನಾಚರಣೆ (Indian Navy Day). ಭಾರತದ ಕಡಲ ಗಡಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡುತ್ತಿರುವ ನಮ್ಮ ನೌಕಾ ಪಡೆಯ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಅವರ ತ್ಯಾಗ ಬಲಿದಾನಗಳನ್ನು ನೆನೆಯೋಣ.
ಭಾರತೀಯ ನೌಕಾಪಡೆ (Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.
ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಬೇಕು. ಆದರೆ ಭಾರತ ಈಗ ‘ವಿಕ್ರಮಾದಿತ್ಯ’ ಒಂದನ್ನೇ ನೆಚ್ಚಿದೆ. ಈ ನೌಕೆಗೂ ಅಗತ್ಯ ಸಂಖ್ಯೆಯಲ್ಲಿ ಬೆಂಗಾವಲು ಸಬ್ಮರೀನ್ಗಳು ಮತ್ತು ಆಗಸದಿಂದಲೇ ಸಬ್ಮರೀನ್ಗಳನ್ನು ಗುರುತಿಸಿ ನಾಶಪಡಿಸಬಲ್ಲ ಹೆಲಿಕಾಪ್ಟರ್ಗಳ ಬೆಂಬಲ ಇಲ್ಲ.
ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ‘ಐಎನ್ಎಸ್ ವಿಕ್ರಾಂತ್’ 2013ರಲ್ಲಿ ಸಾಗರಕ್ಕಿಳಿದಿದೆ. ಆದರೆ ಇನ್ನೂ ಅದರ ಪರೀಕ್ಷೆಗಳು ಮುಗಿದಿಲ್ಲ. ಇದು 2020ರ ವೇಳೆಗೆ ಸೇವೆಗೆ ಲಭ್ಯವಾಗಬಹುದು. ಕೊಚಿನ್ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮತ್ತೊಂದು ವಿಮಾನ ವಾಹಕ ನೌಕೆ 2023ರ ವೇಳೆಗೆ ನೌಕಾಪಡೆ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ರಕ್ಷಣಾ ಸಮತೋಲನದಲ್ಲಿ ಚೀನಾಗೆ ಸಮಾನ ನೆಲೆಯಲ್ಲಿ ನಿಲ್ಲಲು ಮತ್ತು ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಕನಸು ನನಸು ಮಾಡಿಕೊಳ್ಳಲು ನಮ್ಮ ನೌಕಾದಳದ ತ್ವರಿತ ಸುಧಾರಣೆ ಅತ್ಯಗತ್ಯ.
ಭಾರತ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್ಮರೀನ್ಗಳು, 16 ಸಾಂಪ್ರದಾಯಿಕ ಸಬ್ಮರೀನ್ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್ಗಳು ನೌಕಾದಳದಲ್ಲಿ ಇರಬೇಕಂತೆ.
ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಗ್ರಾಹಕನಿಂದ ಉತ್ಪಾದಕ ಸ್ಥಾನಕ್ಕೆ ಭಡ್ತಿ ಪಡೆದಿದೆ. ಹಲವು ಸ್ವದೇಶಿ ನಿರ್ಮಿತ ಯುದ್ಧನೌಕೆ ಮತ್ತು ಸಬ್ಮರೀನ್ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿದಂತೆ ವಿವಿಧೆಡೆ ಯುದ್ಧನೌಕೆಗಳನ್ನು ಕಟ್ಟುವ ಕೆಲಸ ಭರದಿಂದ ಸಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಸೇವೆಗೆ ನಿಯೋಜನೆಗೊಂಡ ಯುದ್ಧನೌಕೆಗಳ ಪೈಕಿ ‘ಗೈಡೆಡ್ ಮಿಸೈಲ್ ಡೆಸ್ಟ್ರಾಯರ್’ (ಕ್ಷಿಪಣಿ ನಾಶಕ ನೌಕೆ) ಐಎನ್ಎಸ್ ಮರ್ಮಗೋವಾ, ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಸಬ್ಮರೀನ್ ನಾಶಕ ನೌಕೆ ಐಎನ್ಎಸ್ ಕರ್ಮೊತ್ರಾ ಉಲ್ಲೇಖನೀಯ. ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ರೀಚ್ (ತಲುಪುವಿಕೆ) ಹೆಚ್ಚಿಸುವ ಸಾಮರ್ಥ್ಯ ಬಂದಿದೆ. ಟಾರ್ಪೆಡೊ (ನೀರಿನಾಳದ ಕ್ಷಿಪಣಿಗಳು) ಮತ್ತು ಸಬ್ಮರೀನ್ಗಳ ದಾಳಿಯನ್ನು ಕರ್ಮೋತ್ರಾ ನಿರ್ವಹಿಸಬಲ್ಲದು.
ವಿಶಾಖಪಟ್ಟಣ ನೌಕಾನೆಲೆಯಲ್ಲಿ ನಿರ್ಮಾಣವಾದ ಭಾರತದ ಮೊದಲ (ಸ್ವದೇಶಿ ನಿರ್ಮಿತ) ಅಣ್ವಸ್ತ್ರ ಚಾಲಿತ ಸಬ್ಮರೀನ್ ಐಎನ್ಎಸ್ ಅರಿಹಂತ್ ಸದ್ದಿಲ್ಲದೆ ಸೇವೆಗೆ ನಿಯೋಜನೆಗೊಂಡಿದೆ. ರಕ್ಷಣಾ ಇಲಾಖೆ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಲೂ ಇಲ್ಲ– ನಿರಾಕರಿಸುತ್ತಲೂ ಇಲ್ಲ. ಐಎನ್ಎಸ್ ಅರಿಹಂತ್ನ ಸಾಮರ್ಥ್ಯ, ಸಾಗರ ಪರೀಕ್ಷೆಗಳ ಮಾಹಿತಿ ಹೊರ ಜಗತ್ತಿಗೆ ಅಪರಿಚಿತ. ಆದರೆ ಇದು ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಕನಸೊಂದು ನನಸಾದ ಸಾಧನೆ ಎನ್ನುವುದು ಮಾತ್ರ ನಿರ್ವಿವಾದ. ‘ಐಎನ್ಎಸ್ ಅರಿಹಂತ್’ ಸೇವೆಗೆ ನಿಯೋಜನೆಗೊಳ್ಳುವ ಮೂಲಕ ನಮ್ಮ ದೇಶಕ್ಕೆ ನೀರಿನಾಳದಿಂದಲೂ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯ ಬಂದಿದೆ. ಈ ಸಾಧನೆಯೊಂದಿಗೆ ಅಣ್ವಸ್ತ್ರ ಚಾಲಿತ ಸಬ್ಮರೀನ್ ವಿನ್ಯಾಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
ನಮ್ಮ ದೇಶ ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ವ್ರತ ಪಾಲಿಸುತ್ತಿದೆ. ಇಂಥ ದೇಶಗಳಿಗೆ ಸಮುದ್ರದಾಳದಿಂದ ಅಣ್ವಸ್ತ್ರ ಸಿಡಿತಲೆ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್ಮರೀನ್ಗಳನ್ನು ಹೊಂದುವುದು ಸೇನಾ ಕಾರ್ಯಪದ್ಧತಿ (ಮಿಲಿಟರಿ ಸ್ಟ್ರಾಟಜಿ) ದೃಷ್ಟಿಯಿಂದ ಅತ್ಯಗತ್ಯ. ಅರಿಹಂತ್ನಿಂದಾಗಿ ನೆಲದಿಂದ, ಬಾನಿನಿಂದ, ಸಮುದ್ರದ ಮೇಲಿನಿಂದ ಮತ್ತು ಸಾಗರದಾಳದಿಂದಲೂ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಸಿಕ್ಕಂತೆ ಆಗಿದೆ.
1971 ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ನೌಕಪಡೆ ಪಾಕಿಸ್ತಾನದ ವಿವಿಧ ಬಂದರುಗಳಲ್ಲಿ, ವಿಶೇಷವಾಗಿ ಕರಾಚಿ ನೌಕಾನೆಲೆಯನ್ನು ನಾಶಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಭಾರತದ ಜಯವನ್ನು ಸುಲಭಗೊಳಿಸಿತು. ಈ ಯುದ್ಧದಲ್ಲಿ ಭಾರತೀಯ ನೌಕಾಪಡೆ ಪ್ರದರ್ಶಿಸಿದ ಅಸೀಮ ಶೌರ್ಯ, ಸಾಹಸದ ಗೌರವಾರ್ಥ ಡಿಸೆಂಬರ್ 4ನ್ನು ಭಾರತೀಯ ನೌಕಾದಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಸಮುದ್ರ ಮಾರ್ಗದ ಮೂಲಕ ದೇಶವನ್ನು ರಕ್ಷಿಸುತ್ತಾ ಭಾರತಾಂಬೆಯ ಸೇವೆ ಮಾಡುತ್ತಿರುವ ಆ ಮಹಾರಕ್ಷಕರಿಗೆ ಶತ-ಶತ ಪ್ರಣಾಮಗಳು.
(ಸಂಗ್ರಹ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.