ನಾನೇಕೆ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಯಾದೆ ಎಂದು ಪ್ರಶ್ನೆಯನ್ನು ನಾನು ನನ್ನಲ್ಲೆ ಕೇಳಿಕೊಂಡು ಉತ್ತರ ಹುಡುಕಲು ಹೊರಟಾಗ ನನ್ನ ಮನಸ್ಸಿಗೆ ಅತಿಯಾಗಿ ಹಿಡಿಸಿದ್ದು ಅವರ ಒಂದು ವಾಕ್ಯ, ಅದೇ “ಏಕ್ ಭಾರತ್ ಶ್ರೇಷ್ಠ ಭಾರತ್” ಈ ಮೂರು ಪದಗಳ ಪ್ರಾಸ ಬದ್ಧ ವಾಕ್ಯ ನರೇಂದ್ರ ಮೋದಿಯವರನ್ನು ನನ್ನಲ್ಲಿ ಆವರಿಸುವಂತೆ ಮಾಡಿತು.
ಅಂತಹದ್ದೇನಿದೆ ಈ ವಾಕ್ಯದಲ್ಲಿ? ಬಾಲ್ಯದಿಂದಲೂ ಸಂಘದ ಶಾಖೆಗೆ ಹೋಗುತ್ತಿದ್ದ ನನಗೆ ಸಂಘದ ಪ್ರಾರ್ಥನೆಯಲ್ಲಿರುವ ‘ಪರಂವೈಭವನೇ ತುಮೇ ತತ್ಸ್ವರಾಷ್ಟ್ರಂ ಎಂಬ ವಾಕ್ಯ ಮನಸ್ಸಿನಲ್ಲಿ ಅಚ್ಚಳಿಯದೆ ಹೃದಯಕ್ಕೆ ನಾಟಿತ್ತು. ಆದರೆ ಇದೇ ರೀತಿಯಲ್ಲಿ “ಏಕ್ ಭಾರತ್ ಶ್ರೇಷ್ಠ ಭಾರತ್” ಎಂಬ ಕಲ್ಪನೆಯನ್ನು ರಾಷ್ಟಕ್ಕೆ ಕೊಟ್ಟ ಮೊದಲ ರಾಜಕಾರಣಿ ನರೇಂದ್ರ ಮೋದಿ. ಇವರು ಪ್ರಧಾನಿಯಾದ ನಂತರ ವಿಶ್ವಗುರು ಭಾರತದ ನಮ್ಮ ಕಲ್ಪನೆಗೆ ಜೀವ ಬಂತೆಂದರೆ ತಪ್ಪಾಗಲಾರದು.
ನಮ್ಮ ದೇಶ ಹಿಂದೆ ಯಾವತ್ತಾದರು ವಿಶ್ವಕ್ಕೆ ಮಾರ್ಗದರ್ಶನ ಮಾಡಿತ್ತೆ? ಭಾರತ ವಿಶ್ವಗುರುವಾಗುವತ್ತ ಭಾರತ ಸರ್ಕಾರದ ಹೆಜ್ಜೆಗಳೇನು? ಭವಿಷ್ಯದಲ್ಲಿ ಭಾರತ ವಿಶ್ವಗುರುವಾದರೆ ಆ ಸ್ಥಿತಿ ಹೇಗಿರಬಹುದು?
ಭಾರತದ ಇತಿಹಾಸವನ್ನು ಕೆದಕಿದರೆ ಇಡೀ ಜಗತ್ತಿಗೆ ನಾಗರಿಕತೆಯ ಪಾಠ ಕಲಿಸಿದ್ದೇ ಭಾರತ. ಇಂದಿನ ಮುಂದುವರಿದ ರಾಷ್ಟ್ರಗಳು ಇನ್ನೂ ಬಟ್ಟೆಯನ್ನೇ ಕಾಣದಿದ್ದ ಸಂದರ್ಭದಲ್ಲಿ ಭಾರತದಲ್ಲಿ ಬಂದು ವ್ಯವಸ್ಥಿತ ನಾಗರಿಕ ಜೀವನ ನೆಲೆ ನಿಂತಿತ್ತು. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಿಂದ ವಿಶ್ವಕ್ಕೆ ಜ್ಞಾನದ ಪ್ರಸಾರವಾಗುತ್ತಿತ್ತು. ಆದರೆ ನಂತರದ ಮೊಗಲರ ಆಕ್ರಮಣ, ಬ್ರಿಟಿಷರ ಆಳ್ವಿಕೆ, ಸ್ವಾತಂತ್ರ್ಯ ನಂತರ ನಮ್ಮ ರಾಜಕಾರಣಿಗಳ ಬೌದ್ಧಿಕ ದಾರಿದ್ರ್ಯದಿಂದ ಭಾರತದ ಘನತೆ ಧರಶಾಹಿಯಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾಗಿದ್ದೇ ತಡ ನೆರೆಹೊರೆ ದೇಶಗಳೊಡನೆ ಭಾಂದವ್ಯ ವೃದ್ಧಿಸುವ ಪ್ರಯತ್ನಕ್ಕೆ ಕೈ ಹಾಕಿದರು.
ಪ್ರಮಾಣವಚನ ಸಮಾರಂಭದಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿ ಮೊದಲ ಎಸೆತದಲ್ಲೆ ಸಿಕ್ಸರ್ ಬಾರಿಸಿದರು. ಮುಂದೆ ಭಾರತದ ಪ್ರಧಾನಿ ಹೋದ ರಾಷ್ಟ್ರದಲ್ಲೆಲ್ಲಾ ಅನಿವಾಸಿ ಭಾರತೀಯರ ಅಂತಃಸತ್ವವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಭಾರತದ ಬದಲಾದ ನಡೆಯನ್ನು ಗಮನಿಸಿದ ಮುಂದುವರಿದ ರಾಷ್ಟ್ರಗಳು ಭಾರತದ ಸ್ನೇಹವನ್ನು ಪಡೆಯಲು ಮುಂದು ಬಂದವು. ಭಾರತದ ವಿಶ್ವಯೋಗ ದಿನದ ನಿವೇದನೆಯನ್ನು ವಿಶ್ವಸಂಸ್ಥೆ ಕೆಲವೇ ದಿನಗಳಲ್ಲಿ ಘೋಷಿಸಿದ್ದಲ್ಲದೇ 170 ರಾಷ್ಟ್ರಗಳೂ ಈ ಕ್ರಮವನ್ನೇ ಅನುಮೋದಿಸಿದವು.
ಬಾಲಿಯಲ್ಲಿ ನಡೆದ ವಿಶ್ವವ್ಯಾಪಾರ ಒಪ್ಪಂದದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಬಲಗೊಳಿಸಿದೆ. ಇನ್ನೊಂದೆಡೆ ತನ್ನ ರಕ್ಷಣಾ ವ್ಯೂಹವನ್ನು ಬಲಗೊಳಿಸಿದ ಭಾರತ ಪಾಕಿಸ್ಥಾನ -ಚೀನಾವನ್ನು ಬಾಲ ಮುದುಡಿಕೊಳ್ಳುವಂತೆ ಮಾಡಿತ್ತು.
ಅಮೇರಿಕ, ಚೀನಾ, ರಷ್ಯಾದಂತಹ ರಾಷ್ಟ್ರಗಳು ಭಾರತದ ಪ್ರಧಾನಿಯನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತವು. ಆದರೆ ನೈಜ ತೇಜಸ್ಸು ಜಗತ್ತಿನ ಮುಂದೆ ಅನಾವರಣಗೊಂಡದ್ದು “ಆಪರೇಷನ್ ರಾಹತ್” ಮೂಲಕ ಯುದ್ದಗ್ರಸ್ಥ ಯಮನ್ ನಿಂದ 4500 ಭಾರತೀಯರನ್ನು ರಕ್ಷಿಸಿತು. ಇದನ್ನು ಕಂಡ ಜಗತ್ತಿನ ಅಮೇರಿಕ, ಫ್ರಾನ್ಸ್ ಸೇರಿದಂತೆ 28 ರಾಷ್ಟ್ರಗಳು ತಮ್ಮ ರಾಷ್ಟ್ರದ ನಾಗರಿಕರನ್ನು ರಕ್ಷಿಸುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡವು. ನೇಪಾಳದಲ್ಲಿ ಭೂಕಂಪ ನಡೆದಾಗಲೂ ಭಾರತ ಸರ್ಕಾರ ತಕ್ಷಣ ಸ್ಪಂದಿಸಿ ನೇಪಾಳ ಸರ್ಕಾರದ ಜೊತೆ ಕೈ ಜೋಡಿಸಿದ್ದು, ನೇಪಾಳ ಸಂತ್ರಸ್ಥರಿಗಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಹೀಗೇ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ.
ಆದರೆ ಒಂದಂತು ನಿಶ್ಚಿತ. ಭಾರತ ಬದಲಾಗುತ್ತಿದೆ. ವಿಶ್ವಗುರುವಾಗುವತ್ತ ಸ್ಪಷ್ಟ ಹೆಜ್ಜೆಯನ್ನಿಡುತ್ತಿದೆ. ನನ್ನ ಭವಿಷ್ಯದ ವಿಶ್ವಗುರು ಭಾರತ ಜಗತ್ತಿನ ಯಾವ ರಾಷ್ಟ್ರಕ್ಕೂ ಗುಲಗಂಜಿಯಷ್ಟು ಕಡಿಮೆ ಇರುವುದಿಲ್ಲ. ನನ್ನ ವಿಶ್ವಗುರು ಭಾರತ ಅಮೇರಿಕದಂತೆ ದೊಡ್ಡಣ್ಣನಾಗಿ ಎರಡು ದೇಶಗಳ ನಡುವೆ ತಂದಿಟ್ಟು ಲಾಭ ಮಾಡಿಕೊಳ್ಳುವ ಸ್ವಾರ್ಥಿಯಾಗಿರುವುದಿಲ್ಲ. ಬದಲಾಗಿ ತನ್ನ “ವಸುದೈವ ಕುಟುಂಬಕಂ” ಎಂಬ ಧ್ಯೇಯದಂತೆ ವಿಶ್ವವನ್ನೇ ಜೋಡಿಸುತ್ತದೆ. ನನ್ನ ದೇಶ ತಲೆ ಎತ್ತಿ ನಿಲ್ಲುತ್ತಿದೆ. ಇದು ನರೇಂದ್ರ ಮೋದಿಯೊಬ್ಬರಿಂದಲೇ ಸಾಧ್ಯವಾಗಿದೆ ಎಂದು ಹೇಳುತ್ತಿಲ್ಲ.
ಭಾರತದ ಅನಾದಿ ಕಾಲದ ಆ ಇತಿಹಾಸವೇ ಇದಕ್ಕೆ ಸ್ಪೂರ್ತಿ. ಈ ದೇಶಕ್ಕೆ ಒಂದು ಸಮರ್ಥ ನಾಯಕತ್ವದ ಅವಶ್ಯಕತೆ ಇತ್ತು. ಇಂತಹ ಸಮರ್ಥ ನಾಯಕತ್ವವನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ. ಈ ದೇಶದ ಪ್ರಜೆಗಳೇ ಭಾರತ ವಿಶ್ವಗುರುವಾಗುವತ್ತ ನಮ್ಮ ಹೊಣೆಗಾರಿಕೆಯೂ ಇದೆ.
ಈ ದೇಶಕ್ಕಾಗಿ ನಾವೇನು ಮಾಡಬಹುದು ಎಂದು ಯೋಚನೆ ಮಾಡಲು ಆರಂಭಿಸಬೇಕಾಗಿದೆ. ಎಂದಿಗೂ ನನ್ನ ದೇಶದ ಬಗ್ಗೆ ಋಣಾತ್ಮಕವಾಗಿ ಯೋಚನೆಯೂ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕಾಗಿದೆ. ಬನ್ನಿ ಜಾತಿ, ಮತ, ಪ್ರಾಂತ ಪಕ್ಷಗಳ ಬಗ್ಗೆ ಯೋಚನೆ ಮಾಡದೆ ಭಾರತವನ್ನು ವಿಶ್ವಗುರುವನ್ನಾಗಿಸಲು ಒಂದಾಗೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.