ನವದೆಹಲಿ: ಇಂದು ಜೂನ್ 12, ವಿಶ್ವದಾದ್ಯಂತ ಈ ದಿನವನ್ನು ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತದೆ. 14 ವರ್ಷದೊಳಗಿನ ಮಕ್ಕಳು ದುಡಿಯುವುದನ್ನು ತಡೆಯುವುದು ಮತ್ತು ಆ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮಹತ್ತರ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.
ಬಡತನದ ಸುಳಿಗೆ ಸಿಕ್ಕಿ ಪುಸ್ತಕ ಹಿಡಿಯುವ ವಯಸ್ಸಲ್ಲಿ ಕಸ ಮುಸುರೆ ತೊಳೆಯುವ, ಇಟ್ಟಿಗೆ- ಮಣ್ಣು ಹೊರುವ ಮಕ್ಕಳನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಬದುಕಿನ ಬಂಡಿ ಎಳೆಯುವ ಅನಿವಾರ್ಯತೆಗೆ ಸಿಲುಕಿ ಕೆಲ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಬದಲು ದುಡಿಯಲು ಕಳುಹಿಸುತ್ತಾರೆ. ಇದನ್ನು ತಪ್ಪಿಸುವುದು ವಿಶ್ವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನ ದಿನಾಚರಣೆಯ ಉದ್ದೇಶವಾಗಿದೆ.
ಸರ್ಕಾರಗಳು ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ಹಲವಾರು ಕಾನೂನುಗಳನ್ನು ರೂಪಿಸಿದೆ. ನಮ್ಮ ದೇಶದಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ 20 ಸಾವಿರ ದಂಡ ಮತ್ತು ಒಂದು ವರ್ಷದವರೆಗೆ ಜೈಲುಶಿಕ್ಷೆಯನ್ನೂ ನೀಡಲಾಗುತ್ತದೆ.
ಇಷ್ಟೆಲ್ಲಾ ಇದ್ದರೂ ಇನ್ನೂ ಕೆಲ ಕಟ್ಟಡ ಮಾಲೀಕರು, ಹೋಟೆಲ್ ಉದ್ಯಮಿಗಳು, ಕಾರ್ಖಾನೆ ಮಾಲೀಕರು ತಮ್ಮ ಕೆಲಸಗಳಿಗೆ ಎಳೆ ಮಕ್ಕಳನ್ನು ಬಳಕೆ ಮಾಡುತ್ತಿದ್ದಾರೆ, ಕೆಲ ಮನೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಮನೆಗೆಲಸಕ್ಕೂ ಇರಿಸಿಕೊಳ್ಳಲಾಗುತ್ತಿದೆ. ಕೆಮಿಕಲ್, ವಿದ್ಯುತ್ನಂತಹ ಅಪಾಯಕಾರಿ ಕೆಲಸಗಳಿಗೂ ಮಕ್ಕಳನ್ನು ಬಳಕೆ ಮಾಡಲಾಗುತ್ತದೆ. ಕಡಿಮೆ ಸಂಬಳಕ್ಕೆ ಮಕ್ಕಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳಬಹುದು ಎಂಬ ದುರುದ್ದೇಶವೂ ಇದರ ಹಿಂದೆ ಅಡಕವಾಗಿದೆ.
ಬಾಲ ಕಾರ್ಮಿಕರು ಎಲ್ಲೇ ಕಂಡರು ತಕ್ಷಣ ಸಂಬಂಧಪಟ್ಟವರಿಗೆ ಅವರ ಬಗ್ಗೆ ಮಾಹಿತಿ ಕೊಟ್ಟು ಅವರನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿಯನ್ನು ಎಲ್ಲರೂ ಸೇರಿ ಪಾಲಿಸುವುದು ಅತ್ಯವಶ್ಯಕ. ಅದರಂತೆ ಬಾಲ ಕಾರ್ಮಿಕ ವಿರೋಧಿ ಕಾನೂನುಗಳನ್ನು ಸರ್ಕಾರಗಳೂ ಇನ್ನೂ ಕಠಿಣವಾಗಿ ಜಾರಿಗೊಳಿಸಬೇಕಾಗಿದೆ.
ಕಳೆದ 15 ವರ್ಷದಲ್ಲಿ ಬಾಲ ಕಾರ್ಮಿಕರ ಸಂಖ್ಯೆ 247 ಮಿಲಿಯನ್ನಿಂದ 168 ವಿಲಿಯನ್ಗೆ ಕಡಿಮೆಯಾಗಿದೆ. ಇನ್ನೂ ಹೆಚ್ಚಿನ ಪ್ರಯತ್ನಪಟ್ಟರೆ ಬಾಲ ಕಾರ್ಮಿಕತೆಯನ್ನು ನಿರ್ಮೂಲನೆ ಮಾಡುವುದು ಕಷ್ಟವಲ್ಲ, ಅಲ್ಲದೇ ಮಕ್ಕಳ ಭವಿಷ್ಯವನ್ನೂ ಹಸನುಗೊಳಿಸಬಹುದು ಎಂದು ನೋಬೆಲ್ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಅಭಿಪ್ರಾಯಪಡುತ್ತಾರೆ.
ದುಡಿಮೆ ಬೇಡ ಶಿಕ್ಷಣ ಬೇಕು, ಕೆಲಸ ಸಾಕು ಕಲಿಕೆ ಬೇಕು ಎಂಬ ಘೋಷವಾಕ್ಯಗಳೊಂದಿಗೆ ನಾವು ಈ ದಿನ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ನಮ್ಮ ಈ ಆಶಯ ನಿಜಕ್ಕೂ ವಾಸ್ತವವಾಗಬೇಕಾದರೆ, ನಾವೆಲ್ಲರೂ ಜೊತೆಯಾಗಿ ಸೇರಿ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.