ಸಂಘದಕ್ಷ, ಸಾವಧಾನ್, ವಿಶ್ರಾಮ್ ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ, ಶಿಸ್ತು, ಬದ್ಧತೆ, ಕಷ್ಟ ಸಹಿಷ್ಣುತೆ ಮೊದಲಾದ ಗುಣಗಳು ಸಂಘದ ಮೊದಲ ಪಾಠಗಳು. ಒಂದರ್ಥದಲ್ಲಿ ಶಿಸ್ತಿಗೆ ಸಮಾನಾರ್ಥಕವೇ ಸಂಘ. ಮಳೆ, ಗಾಳಿ, ಅತಿವೃಷ್ಟಿ ಮುಂತಾದ ಪ್ರಕೃತಿ ವಿಕೋಪಗಳಾದಾಗ, ಅಲ್ಲಿಗೆ ಎಲ್ಲರ ಮುಂಚೆ ಕಂದು ಚಡ್ಡಿಯ ಸ್ವಯಂಸೇವಕರು ಹಾಜರಿರುತ್ತಾರೆ. ಹಲವಾರು ಸ್ಥಳಗಳಲ್ಲಿ ರಕ್ಷಣಾ ಪಡೆಯ ಯೋಧರು ಆಗಮಿಸುವ ಮುನ್ನವೇ ಸ್ವಯಂಸೇವಕರು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿಯಾಗಿರುತ್ತದೆ. ಹಗಲು, ಇರುಳು, ಚಳಿ, ಮಳೆ, ಬಿಸಿಲು, ಗಾಳಿ, ಊಟ, ತಿಂಡಿಯ ಪರಿವಿಲ್ಲದೆ ಸದಾ ಸೇವೆಯ ಅವಶ್ಯಕತೆ ಇರುವಲ್ಲಿ ಸ್ವಯಂಸೇವಕರು ಸನ್ನದ್ಧ.
ಸೇನೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಂಘಟನೆಗಳು ತುರ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೆ ಅದನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದರಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ. ಆದರೆ ಈ ಮಾತು ಸಂಘದ ವಿಷಯದಲ್ಲಿ ಅಪವಾದವಾಗಿದೆ. ಘಟನಾ ಸ್ಥಳ ಹೊರತುಪಡಿಸಿ ಹೊರ ಜಗತ್ತಿಗೆ ಸಂಘದ ನಿಸ್ವಾರ್ಥ ಸೇವೆಯ ಬಗ್ಗೆ ಅರಿವೇ ಇರುವುದಿಲ್ಲ. ಹೊಗಳಿದರೂ, ತೆಗಳಿದರೂ, ಯಾವುದೇ ಆರೋಪಗಳನ್ನು ಹೊರಿಸಿದರೂ ಸಂಘದ ಉತ್ತರ, ಕೋಣದ ಮೇಲೆ ಮಳೆ ಹುಯ್ದಂತೆ. ಏಕೆಂದರೆ ಸೇವೆಯೇ ಸಂಘದ ಉಸಿರು. ಇಂದಿನ ಮಾಧ್ಯಮಗಳು ಕೂಡ ರಾಷ್ಟ್ರ ರಕ್ಷಕರ ಸೇವೆಯನ್ನು ಬಿತ್ತರಿಸುವಲ್ಲಿ ಯಾವುದೇ ಪ್ರಯತ್ನ ಮಾಡದಿರುವುದು ಖೇದಕರ.
ಕೆಲವು ದಿನಗಳ ಹಿಂದೆ ಪ್ರಾಯಶಃ ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಿದ್ದನೋ ವರುಣ, ಚಿಕ್ಕಸೂಚನೆಯನ್ನೂ ನೀಡದೆ ಅಬ್ಬರಿಸಿ ಬೊಬ್ಬಿರಿದು ಕೊಡಗು ಮತ್ತು ಕೇರಳದ ಬಹುಭಾಗಗಳನ್ನು ಆಕ್ರಮಿಸಿಕೊಂಡ. ಜನ ಜೀವನ ಅಸ್ತವ್ಯಸ್ತ. ಜನ ಅಕ್ಷರಶಃ ಬೀದಿಗೆ ಬಂದರು. ಪ್ರವಾಹ ಪರಿಸ್ಥಿಯಿಂದಾಗಿ ತಲೆದೋರಿದ ರಸ್ತೆ ಕುಸಿತ, ಭೂಕುಸಿತಗಳು ರಕ್ಷಣೆಯ ಎಲ್ಲಾ ಸಾಧ್ಯತೆಗಳಿಗೆ ತಡೆಗೋಡೆಗಳಾಗಿ, ಜನರ ಜೀವನವನ್ನು ಮತ್ತಷ್ಟು ಕಂಗಾಲಾಗಿಸಿದವು. ನೋಡಿದಲೆಲ್ಲಾ ಕೆಂಪು ನೀರಿನ ಓಕುಳಿ, ರಕ್ಷಣೆಗಾಗಿ ಜನರ ಆಕ್ರಂದನ. ಪರಿಸ್ಥಿತಿಯನ್ನು ಅರಿತ ಸಂಘ, ಎಂದಿನಂತೆ ತನ್ನ ಸೇವಾಭಾರತಿ ಸಂಸ್ಥೆಯ ಮುಖೇನ ಪ್ರವಾಹ ಸಂತ್ರಸ್ತರ ಪುನರ್ವಸತಿ ಸೇವೆಯನ್ನು ಯುದ್ದೋಪಾದಿಯಲ್ಲಿ ಆರಂಭಿಸಿತು. ಸೇನಾಪಡೆಗಿಂತಲೂ ಒಂದು ಹೆಜ್ಜೆ ಮುನ್ನ ಪರಿಹಾರ ಕಾರ್ಯಕ್ಕೆ ಧುಮುಕಿದ ಸಂಘ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಪರಿತಪಿಸುತ್ತಿದ್ದ ಅಸಂಖ್ಯಾತ ಜನರನ್ನು ಸತತವಾಗಿ ಜೀವದ ಹಂಗು ತೊರೆದು, ರಕ್ಷಿಸಿ ಮೆಚ್ಚುಗೆಗೆ ಪಾತ್ರರಾದರು. ಕಣ್ಮುಂದೆಯೇ ಕುಸಿಯುತ್ತಿದ್ದ ಗುಡ್ಡ, ಬೆಟ್ಟ, ಭಾರಿ ಸೆಳೆತದಿಂದ ಆಪತ್ತಿನಲ್ಲಿ ಹರಿಯುತ್ತಿದ್ದ ನದಿಗಳನ್ನು ದಾಟಿ ಪ್ರವಾಹ ಸಂತ್ರಸ್ತರನ್ನು ಸಾವಿರಾರು ನಿಸ್ವಾರ್ಥಿ ಸ್ವಯಂಸೇವಕರು ಜೊತೆಗೂಡಿ ಕಾಪಾಡಿದರು. ಸ್ಥಳೀಯ ಸೇವಕರು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು, ಮಂಡ್ಯ, ಹಾಸನ ಅಲ್ಲದೇ ರಾಜ್ಯದ ಇತರ ಭಾಗಗಳಿಂದ ಸ್ವಯಂಸೇವಕರು ಸಂತ್ರಸ್ತರ ನೆರೆವಿಗೆ ಧಾವಿಸಿದ್ದರು.
#SOS ಕೇರಳ ಮತ್ತು #SOS ಕೊಡಗು ವಾರ್ ರೂಮ್
#SOS ಕೇರಳ ಮತ್ತು #SOS ಕೊಡಗು ವಾರ್ ರೂಮ್ ನೆರೆ ಸಂತ್ರಸ್ತರನ್ನು ಬದುಕಿಸಲು ಸ್ವಯಂಸೇವಕರಿಂದ ದೇಶದಲ್ಲೇ ಮೊದಲಿಗೆ ವಿನೂತನ ಪ್ರಯೋಗ.
ಒಂದು ಕಡೆ ಸಂಘದ ಸ್ವಯಂಸೇವಕರು ತಳಮಟ್ಟದಲ್ಲಿ ಜನರನ್ನು ರಕ್ಷಿಸುತ್ತಿದ್ದರೆ, ಇನ್ನೊಂದೆಡೆ ಮಾಹಿತಿ ತಂತ್ರಜ್ಞಾನ ನುರಿತ ಸ್ವಯಂಸೇವಕರ ತಂಡ ಭಾರತದ ಹಲವು ರಾಜ್ಯಗಳಿಂದ ಮತ್ತು ಸಾಗರದಾಚೆಯಿಂದ ಸ್ವಯಂ ಪ್ರೇರಣೆಯಿಂದ “ವಾರ್ ರೂಮ್”ನಡಿ ಒಂದಾಗಿ ಕೊಡಗು ಮತ್ತು ಕೇರಳದ ನೆರೆ ಸಂತ್ರಸ್ತರ ಜೀವವನ್ನು ಸಂರಕ್ಷಿಸಿದ ರೋಮಾಂಚಕ ಕಥೆಯ ಒಂದಷ್ಟು ಮಾಹಿತಿ ನಿಮಗಾಗಿ.
ಆತಂಕದ SOS ಅಥವಾ ಜೀವ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕ್ರಮವಿಲ್ಲದೆ ಹರಿದಾಡಿ ಸಂದೇಶಗಳ ಪ್ರವಾಹವನ್ನೇ ಸೃಷ್ಟಿಸಿತು. ಅಪಾಯದ ಸೂಚನೆಯನ್ನು ಅರಿತ, 32 ಸ್ವಯಂಸೇವಕರು 30 ನಿಮಿಷಗಳಲ್ಲಿ ಆನ್ ಲೈನ್ ಒಟ್ಟಾಗಿ ಶೀಘ್ರ ಸಂವಹನಕ್ಕಾಗಿ ವಾಟ್ಸಾಪ್ ಗ್ರೂಪಿನ ಸಹಾಯದಿಂದ #SOSKerala ಮತ್ತು #SOSKodagu ಎಂಬ ಹ್ಯಾಶ್ ಟ್ಯಾಗ್ಗಳನ್ನು ಪ್ರಾರಂಭಿಸಿದರು. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟ್ಟರ್ ಮತ್ತು ವಾಟ್ಸಾಪ್ಗಳನ್ನು ಜಾಲಾಡಿದ ತಂಡ, ಎಲ್ಲಾ ಆತಂಕ (SOS) ಕರೆಗಳನ್ನು ಹ್ಯಾಶ್ ಟ್ಯಾಗ್ ನಡಿಯಲ್ಲಿ ಕ್ರೋಡೀಕರಿಸಿತು. ಒಟ್ಟು 95 ಸನ್ನಿವೇಶದಲ್ಲಿ ಭಯಭೀತರಾದ ಜನರನ್ನು ರಕ್ಷಿಸಲಾಯಿತು. ಅದರಲ್ಲಿ ನೀರು ತುಂಬಿದ ಮನೆಯ ಛಾವಣಿಯ ಮೇಲೆ ನಿಂತ ವಯಸ್ಸಾದ ಮಹಿಳೆ ಹಾಗೂ ಕುಸಿಯುತ್ತಿರುವ ಗುಡ್ಡದ ಹತ್ತಿರ ಜೀವವನ್ನು ಕೈಯಲ್ಲಿಹಿಡಿದು ಸಹಾಯಕ್ಕಾಗಿ ನಿರೀಕ್ಷಿಸುತ್ತಿದ್ದ ಜನರನ್ನು ಕಾಪಾಡಿದ ಉದಾಹರಣೆಗಳಿವೆ. ಈ ಸ್ವಯಂಸೇವಕರು ಆತಂಕದಲ್ಲಿದ್ದ ಜನರ ಮಾಹಿತಿಯನ್ನು ನಕ್ಷೆಯಲ್ಲಿ ಸಂಗ್ರಹಿಸಿ ತಳಮಟ್ಟದಲ್ಲಿ ಸೇವಾನಿರತ ಸ್ವಯಂಸೇವಕರಿಗೆ ಅದನ್ನು ಒದಗಿಸುವುದರ ಮೂಲಕ ಸಂತ್ರಸ್ತರು ಮತ್ತು ಸೇವಕರ ಮಧ್ಯೆ ಸಂಪರ್ಕ ಕೊಂಡಿಯಾಗಿ ಜನರ ಪ್ರಾಣವುಳಿಸಿದರು.
#SOS ಕೇರಳ ಮತ್ತು #SOS ಕೊಡಗು ವಾರ್ ರೂಮ್ ಕಾರ್ಯದ ಒಟ್ಟು ಸಾರಾಂಶ ಹೀಗಿದೆ
⇒ ಬಳಸಿದ ಹ್ಯಾಶ್ ಟ್ಯಾಗ್ : #SOSKerala & #SOSKodagu
⇒ ವಾರ್ ರೂಮಿನ ಸದಸ್ಯರು: 32
⇒ ಮನುಷ್ಯ ಶ್ರಮ ಗಂಟೆಗಳು (ಮ್ಯಾನ್ ಹವರ್ಸ್): 1200 ಗಂಟೆಗಳು
⇒ ಒಟ್ಟು ಮಾಡಿದ ಕರೆಗಳು : 1050 ಕರೆಗಳು
⇒ ಖುದ್ದು ಸಹಾಯದ ಸೇವೆಗಳು : 95 ನೆರೆ ಸಂತ್ರಸ್ತ ಸನ್ನಿವೇಶಗಳು
⇒ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು : ಅಂದಾಜು 3200
⇒ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಣೆ : 3 ರಿಂದ 4 ಲಕ್ಷ ಬೆಲೆಬಾಳುವಷ್ಟು.
⇒ ಅಂತರ್ಜಾಲ ಉಪಯೋಗಿಸಿ ಪರಿಹಾರ ನಿಧಿ ಸಂಗ್ರಹಣಾ ಕೇಂದ್ರಗಳು : 2
⇒ ಸುಲಭದಲ್ಲಿ ಆನ್ ಲೈನ್ ದಾನ ಮಾಡುವ ಕ್ರೌಡ್ ಫಂಡಿಂಗ್ ಸೌಲಭ್ಯ: ಚಾಲ್ತಿಯಲ್ಲಿದೆ.
ಮೂಲದಲ್ಲಿ ಕ್ಷಿಪ್ರ ಗತಿಯ ರಕ್ಷಣಾ ಕಾರ್ಯವನ್ನು ಸಂಘದ ಸ್ವಯಂಸೇವಕರೇ ಮಾಡುತ್ತಿದ್ದರು, ಇವರನ್ನು ಸಂಪರ್ಕಿಸುವ “ವಾರ್ ರೂಮ್” ಎಂಬ ನೂತನ ಕಲ್ಪನೆಗೆ ನಾಂದಿ ಹಾಡಿದ್ದು ಸ್ವತಃ ನಿಸ್ವಾರ್ಥಿ ದೇಶಭಕ್ತ ಸೇವಕರು, ಮಾತೆಯರ ತಂಡ ಹಾಗೂ ನಮ್ಮ ಸಾಮಾಜಿಕ ಜಾಲತಾಣದ ಹಲವು ಮುಂದಾಳುಗಳು. ಮೇಲಿನ ತಂಡದಲ್ಲಿ ಕೆಲವು ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇದು ಸಂಘದ ಸೇವಾ ವೃತ್ತಿಯ ಒಂದು ಉದಾಹರಣೆ. ರಾಷ್ಟ್ರೀಯ ಸಂಘದ ಸ್ಥಾಪನೆಯ ನಂತರ ಸಮಾಜದಲ್ಲಿ ಜರುಗಿದ ದುರಂತ ಕ್ಷಣಗಳಲ್ಲಿ ಸಂಘ ದೇಶಕ್ಕೆ ಭುಜಬಲವನ್ನು ನೀಡಿದೆ. ಅಂತಹ ಹಲವು ಸೇವಾ ಪಟ್ಟಿ ಕೆಳಕಂಡಂತಿದೆ:
ಭಾರತದ ಸ್ವಾತಂತ್ರ್ಯ ಸಂಗ್ರಾಮ: ಸಾಮೂಹಿಕ ತರಗತಿಗಳ ಮೂಲಕ ಸ್ವಯಂ ಸೇವಕರಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯದ ಅಗತ್ಯ ಮತ್ತು ಪಡೆಯುವ ವಿಧಾನವನ್ನು, ಸ್ವರಕ್ಷಣೆ ಮತ್ತು ಹೋರಾಟದ ವಿಧಾನಗಳ ಬಗ್ಗೆ ಶಿಕ್ಷಣವನ್ನು ನೀಡಿತು.
ಭಾರತದ ವಿಭಜನೆ: ವಿಭಜನೆ ಬಿಸಿಯನ್ನು ಅನುಭವಿಸಿದ ಎಲ್ಲಾ ಧರ್ಮಗಳ ಲಕ್ಷಾಂತರ ಜನರನ್ನು ರಕ್ಷಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಈ ಕಾರ್ಯವನ್ನು ಮೆಚ್ಚಿದ ಭಾರತ ರತ್ನ ಭಗವಾನ್ ದಾಸ್ರು ಸ್ವಯಂಸೇವಕರನ್ನು “Highly Spirited and self Sacrifying Boys ” ಎಂಬ ಬಿರುದನ್ನೂ ನೀಡಿದರು.
ಚೀನಾ -ಭಾರತ ಯುದ್ಧ: ಗಾಯಗೊಂಡ ಸಾವಿರಾರು ಸೈನಿಕರನ್ನು ಶಿಬಿರಗಳಿಗೆ ಸ್ಥಳಾಂತರಿಸಿ, ವೈದ್ಯಕೀಯ ಸೇವೆ ಒದಗಿಸುವುದರಲ್ಲಿ ನೆರವಾದರು. ಸಂಘದ ಕಾರ್ಯವನ್ನು ಶ್ಲಾಘಿಸಿ ಅಂದಿನ ಪ್ರಧಾನಿ ನೆಹರು ಸ್ವಯಂಸೇವಕರನ್ನು 1963 ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
ಪಾಕಿಸ್ತಾನ -ಭಾರತ ಯುದ್ಧ : ಸೈನಿಕರ ಅಗತ್ಯತೆ ಕಂಡ ಶಾಸ್ತ್ರೀಜಿ ಸಂಘದ ಸ್ವಯಂಸೇವಕರನ್ನು ದೆಹಲಿ ಮತ್ತು ದೇಶದ ಹಲವು ಭಾಗಗಳಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸರಾಗಿ ಕಾರ್ಯನಿರ್ವಹಿಸುವಂತೆ ವಿನಂತಿಸಿಕೊಂಡರು. ಅದರಂತೆ ಸತತ 22 ದಿನಗಳ ಕಾಲ ಸ್ವಯಂಸೇವಕರು ದೇಶಸೇವೆ ಮೆರೆದರು.
ಬಾಂಗ್ಲಾ ವಿಮೋಚನೆ: ಕಾನೂನನ್ನು ಕಾಪಾಡಲು ಮತ್ತು ಅಗತ್ಯ ರಕ್ತ ದಾನಕ್ಕೆ ಮೊದಲು ಧುಮುಕಿದ್ದು ಸಂಘದ ಸ್ವಯಂಸೇವಕರು.
ತುರ್ತು ಪರಿಸ್ಥಿತಿ : ಇಂದಿರಾ ಗಾಂಧಿ ಸಂಘವನ್ನು ಬಹಿಷ್ಕರಿಸಿದ್ದರೂ, ಸಾವಿರಾರು ಸ್ವಯಂಸೇವಕರು ತಳಮಟ್ಟದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದರು.
1971 ಒಡಿಶಾ ಚಂಡಮಾರುತ, 1977 ಆಂಧ್ರ ಚಂಡಮಾರುತ, 1984 ಭೋಪಾಲ್ ಅನಿಲ ದುರಂತ , 2001 ಗುಜರಾತ್ ಭೂಕಂಪ, 2004 ರ ಬಂಗಾಳ ಕೊಲ್ಲಿಯ ಭೂಕಂಪ, 2006 ಸೂರತ್ ಪ್ರವಾಹ, 2013 ಉತ್ತರಖಾಂಡದ ಮೇಘಸ್ಪೋಟ, 2014 ರ ಕಾಶ್ಮೀರ ಪ್ರವಾಹ, ಹೀಗೆ ಬರೆದಷ್ಟು ಮುಗಿಯದು ಸಂಘದ ಸೇವಾ ಪ್ರವರ.
ಸಾಮಾನ್ಯ ಜನರಿಗೆ ಜಾತಿ, ಮತ, ಪಂಥ ಮತ್ತು ಧರ್ಮದ ಭೇದವನ್ನು ಮರೆತು ಪ್ರಕೃತಿ ವಿಕೋಪಗಳಲ್ಲಿ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ವಿಕೋಪ ಬಾಧಿತ ಹಳ್ಳಿಗಳನ್ನು ಪುನರ್ನಿರ್ಮಿಸುವಲ್ಲಿ, ಸಂತ್ರಸ್ತರ ಪುನರ್ವಸತಿ, ವೈದ್ಯಕೀಯ ಸಹಾಯ ಒದಗಿಸುವಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘ ಅಂದು-ಇಂದು -ಎಂದೆಂದೂ ಒಂದು ಹೆಜ್ಜೆ ಮುಂದು. ಸ್ವಂತ ಸ್ವಾರ್ಥಗಳನ್ನು ಬದಿಗಿಟ್ಟು ದೇಶಸೇವೆಗೆ ಓಗೊಟ್ಟು ದೇಹವನ್ನು ದಂಡಿಸುವ ಸ್ವಯಂಸೇವಕರು ರಾಷ್ಟ್ರೀಯ ಸಂಘದಲ್ಲಿ ಹೊರತು ಪಡಿಸಿ ಬೇರೆಲ್ಲಿ ಸಿಗುತ್ತಾರೆ ಅಲ್ವಾ ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.