ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ಘಟನೆಗಳನ್ನು ನಾವೆಲ್ಲರೂ ಟಿವಿ, ನ್ಯೂಸ್ ಪೇಪರ್ಗಳಲ್ಲಿ ಗಮನಿಸಿಯೇ ಗಮನಿಸಿರುತ್ತೇವೆ. ದಿನವೂ ಗಡಿಯಲ್ಲಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನೀ ಪ್ರಾಯೋಜಿತ ಉಗ್ರಗಾಮಿಗಳು, ಅವರ ಬೆಂಗಾವಲಾಗಿ ನಿಂತಿರುವ ಪಾಕಿಸ್ತಾನೀ ಸೇನೆ, ಪ್ರತೀ ನುಸುಳುಕೊರನನ್ನೂ ಹುಡುಕಿ ಕೊಲ್ಲುತ್ತಿರುವ ಭಾರತೀಯ ಸೇನೆ, ಕೆಲವು ಸಂದರ್ಭಗಳಲ್ಲಿ ಈ ಪ್ರಕ್ರಿಯೆಯೆಯಲ್ಲಿ ಹುತಾತ್ಮರಾಗುವ ಸೈನಿಕರು. ಇವುಗಳನ್ನೆಲ್ಲ ಟಿ.ವಿ.ಯಲ್ಲಿ ಒಂದು ಸಲ ನೋಡಿ ಇದು ಮಾಮೂಲಿ ಎಂಬಂತೆ ಚ್ಯಾನೆಲ್ನ್ನು ಬದಲಾಯಿಸುತ್ತೇವೆ.
ಆದರೆ ಕಾಶ್ಮೀರದಲ್ಲಿ ನಿಜವಾಗಿ ಏನು ನಡೆಯುತ್ತಿದೆ? ಮತಾಂಧರ ಧಾಳಿಗೆ ಸಿಲುಕಿ ಕಾಶ್ಮೀರವನ್ನೇ ತೊರೆದ ಕಾಶ್ಮೀರಿ ಪಂಡಿತರ ಪರಿಸ್ಥಿತಿ ಏನು? ಅವರು ಯಾವ ಪರಿಸ್ಥಿತಿಯಲ್ಲಿ ಕಾಶ್ಮೀರವನ್ನು ತೊರೆಯಬೇಕಾಯಿತು? ಸ್ಥಳಿಯ ಮುಸಲ್ಮಾನರಲ್ಲಿ ಮತೀಯ ಭಾವನೆಯನ್ನು ಹೇಗೆ ಕೆರಳಿಸಲಾಗುತ್ತಿದೆ? ಅಲ್ಲಿನ ಯುವಕರ ಮನಸ್ಥಿತಿ ಹೇಗಿದೆ? ಅವುಗಳನ್ನೆಲ್ಲಾ ತೆರೆದು ತೋರಿಸುವ ಪ್ರಯತ್ನವನ್ನು ಶ್ರೀಮತಿ ಸಹನಾ ವಿಜಯ ಕುಮಾರ್ ತಮ್ಮ ‘ಕಶೀರ’ ಕಾದಂಬರಿಯ ಮೂಲಕ ಅವರು ಮಾಡಿದ್ದಾರೆ.
ಕಾದಂಬರಿಯ ಮುಖ್ಯ ಪಾತ್ರ ಸಂಶೋಧಕ ನರೆಂದ್ರನಾದರೂ ಕಾದಂಬರಿಯಲ್ಲಿ ಬರುವ ಉಳಿದೆಲ್ಲಾ ಪಾತ್ರಗಳೂ ತೆರೆದುಕೊಳ್ಳುತ್ತಾ ಸಾಗುತ್ತವೆ. ಕಾದಂಬರಿಕಾರ್ತಿಯು ಪರಕಾಯ ಪ್ರವೇಶವನ್ನು ಮಾಡಿದಂತೆ ಹೆಚ್ಚಿನ ಪ್ರಮುಖ ಪಾತ್ರಗಳೂ ಸ್ವಗತದ ರೀತಿಯಲ್ಲಿ ವಿಸ್ತಾರವಾಗುತ್ತಾ ಹೋಗುತ್ತವೆ.
ಕಾಶ್ಮೀರ ಭಯೊತ್ಪಾದನೆಯ ಬಲಿಪಶುಗಳಾದ ಕಾಶ್ಮೀರೀ ಪಂಡಿತರ ಪ್ರತಿನಿಧಿಗಳಾಗಿ ಕಾಣುವ ಸಂಜೀವ್, ಆರತಿ ಕೌಲ್, ತನ್ನ ಮಕ್ಕಳು ಮಡದಿ ಹಾಗೂ ಸರ್ವಸ್ವವನ್ನೂ ಕಳೆದುಕೊಂಡ ಕೈಲಾಶ್ ಪಂಡಿತ್ ಜೀ, ಕೈಲಾಶ್ ಜೀ ಅವರ ಒಂದು ಕಾಲದ ಗೆಳೆಯ ಬಶೀರ್ ಅಹಮ್ಮದ್, ಸ್ವರ್ಗದ ಕನಸಿನಲ್ಲಿ ಇಸ್ಲಾಮನ್ನು ಅನುಸರಿಸಿ, ಹೆಜ್ಜೆ ಹೆಜ್ಜೆಗೂ ಖುರಾನ್ ಹಾಗೂ ಹದೀಸ್ ಗಳನ್ನು ಉದಾಹರಿಸಿ ಕಾಶ್ಮೀರದ ಮುಸಲ್ಮಾನ ಯುವಕರನ್ನು ಭಾರತದ, ಹಿಂದುಗಳ ವಿರುದ್ಧ ಎತ್ತಿಕಟ್ಟುವ ಖಟ್ಟರ್ ಇಸ್ಲಾಮಿಸ್ಟ್ ಮುಫ್ತಿ ಲತೀಫ್, ಲತೀಫ್ ನಿಂದ ಪ್ರಭಾವಿತನಾಗಿ ಕಲ್ಲು ಎಸೆಯೂದನ್ನೇ ವೃತ್ತಿಯಾಗಿಸಿಕೊಂಡ ಮುಷ್ತಾಕ್, ಎಡಚಿಂತನೆಯ ಬುದ್ಧಿಜೀವಿ ವರ್ಗದ ಪ್ರತೀಕವಾದ ಸುಂದರಕೃಷ್ಣ, ಸದಾ ಪ್ರಸಿದ್ಧಿ,ಸುದ್ದಿಯ ಹಪಹಪಿಯ ಮೀರಾ ದೇವಿ ಇವರೆಲ್ಲಾ ಕಾದಂಬರಿಯಲ್ಲಿ ಬಂದು ಹೋಗುವ ಪ್ರಧಾನ ಪಾತ್ರಗಳು.
ಕಾಶ್ಮೀರದ ನಿಜಸ್ಥಿತಿಯನ್ನು ಅರಿಯಲು ನರೇಂದ್ರ ಕಾಶ್ಮೀರಕ್ಕೆ ಹೋಗುತ್ತಾನೆ. ಅಲ್ಲಿ ಕಾಶ್ಮೀರಿ ಪಂಡಿತರಾದ ಸಂಜೀವರ ಮನೆಯಲ್ಲಿ ಉಳಕೊಳ್ಳುತ್ತಾನೆ. ಸಂಜೀವರ ಮೂಲಕ ಕಾಶ್ಮೀರದ ಇತಿಹಾಸ, ಇಸ್ಲಾಮೀ ತೀವ್ರವಾದದ ಉಗಮ, ಬೆಳವಣಿಗೆಗಳ ಬಗ್ಗೆ ಅರಿವು ಆಗುತ್ತದೆ. ಸಂಜೀವ್ರ ಮಡದಿ ಆರತಿಯವರ ಸ್ವಗತದಲ್ಲಿ ಆಕೆಯ ಕುಟುಂಬವು ಕಾಶ್ಮೀರವನ್ನು ತೊರೆದು ಜಮ್ಮುವಿನ ತಾತ್ಕಾಲಿಕ ಟೆಂಟ್ನಲ್ಲಿ ಆಶ್ರಯ ಪಡೆಯಬೇಕಾದ ಸ್ಥಿತಿಗತಿ, ಕೊನೆಗೂ ಯಾವುದೋ ಕಟ್ಟಡದ 7 ನೇ ಮಹಡಿಯಲ್ಲಿ ಒಂದು ಚಿಕ್ಕ ರೂಂನ್ನು ಬಾಡಿಗೆ ಪಡೆದು ಗಂಡ, ಅತ್ತೆ ಮಾವಂದಿರ ಜೊತೆಗೆ ಜೀವಿಸಿದ್ದು, ನಿತ್ಯವೂ ನಲ್ಲಿಯ ನೀರನ್ನು ಏಳನೇ ಮಹಡಿಗೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ, ಎಲ್ಲದಕ್ಕಿಂತಲೂ ಹೆಚ್ಚಾಗಿ ಆ ಕಿರಿದಾದ ಕಿಕ್ಕಿರಿದ ಕೊಣೆಯಲ್ಲಿ ಗಂಡ ಹೆಂಡಿರ ನಡುವೆ ಏಕಾಂತತೆಯ ಅವಕಾಶವೇ ಇಲ್ಲದೆ ಆರತಿ ಹಾಗೂ ಸಂಜೀವರು ದಾಂಪತ್ಯದ ಸುಖದಿಂದಲೇ ವಂಚಿತರಾಗಬೇಕಾದ ಅನಿವಾರ್ಯತೆ ಕಾಶ್ಮೀರ ತೊರೆದು ಹೋಗಬೇಕಾಗಿ ಬಂದ ಮಹಿಳೆಯರ ಕಥೆಯನ್ನು ತೆರೆದಿಡುತ್ತದೆ.
ಕೈಲಾಶ್ ಪಂಡಿತ್ ಕಾಶ್ಮೀರದ ಉನ್ಮಾದೀ ಇಸ್ಲಾಮೀ ಯುವಕರ ಕೈಗೆ ಸಿಲುಕಿ ಮಗ ಮಗಳನ್ನು ಕಳೆದುಕೊಂಡ ವ್ಯಕ್ತಿ. ನೆರೆಮನೆಯ ಗೆಳೆಯ ಬಶೀರ್ನ ಮಗ ಆಸಿಫ್ನೇ ಕೈಲಾಶ್ ಪಂಡಿತ್ನ ಮಗ ಸತೀಶ್ನನ್ನು ಕೊಲ್ಲುತ್ತಾನೆ. ಆಸಿಫ್ ಅಷ್ಟಕ್ಕೂ ಬಿಡದೆ ಕೈಲಾಶ್ ಜೀಯ ಮಗಳಾದ ಸವಿತನನ್ನೂ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆಕೆಯ ದೇಹವನ್ನು ತುಂಡು ತುಂಡು ಮಾಡಿ ಝೀಲಂ ನದಿಗೆ ಎಸೆಯುತ್ತಾನೆ. ಕೈಲಾಶ್ ಪಂಡಿತ್ ಮತಾಂಧರ ಕೃತ್ಯಕ್ಕೆ ತನ್ನೆಲ್ಲವನ್ನೂ ಸಂಪೂರ್ಣವಾಗಿ ಕಳೆದುಕೊಂಡ ಕಾಶ್ಮೀರೀ ಪಂಡಿತರ ಪ್ರತೀಕವಾಗಿ ಭಾಸವಾಗುತ್ತಾನೆ.
ಕಾದಂಬರಿಯ ಇನ್ನೊಬ್ಬ ಪ್ರಮುಖ ಪಾತ್ರ ಮುಫ್ತಿ ಲತೀಫ್. ಖುರಾನ್ನ ಬಗ್ಗೆ ಅಪಾರ ಶ್ರದ್ಧೆ, ಇಸ್ಲಾಂನ ಕುರಿತು ಧರ್ಮ ನಿಷ್ಠೆ ಹೊಂದಿರುವ ಈತ ಸರಿಯಾದ ರೀತಿಯಲ್ಲಿ ಇಸ್ಲಾಂ ಪಾಲಿಸಿ ಪ್ರವಾದಿಗಳ ಜೊತೆಗೆ ಸ್ವರ್ಗ ವಾಸಿಯಾಗಬೇಕೆಂಬ ಅಪಾರ ಆಸೆ ಹೊತ್ತ ವ್ಯಕ್ತಿ. ಕಾಫಿರರನ್ನು, ವಿಗ್ರಹಾರಾಧಕರನ್ನು ದ್ವೇಷಿಸುವ ಈತ ಕಾಶ್ಮೀರಿ ಯುವಕರಿಗೆ, ಖುರಾನ್ನ ನಿದರ್ಶನ, ಬದ್ರ್ ಯುದ್ಧದ ಕಥೆಗಳನ್ನು ಹೇಳುತ್ತಾ, ಅವರನ್ನು ಭಾರತದ ಸೇನೆಯ ವಿರುದ್ಧ ಕಲ್ಲೆಸೆಯಲು, ಹೋರಾಡಲು ಪ್ರೇರೇಪಿಸುತ್ತಾ ಕಾಶ್ಮೀರವನ್ನು ಭಾರತದಿಂದ ಸ್ವತಂತ್ರ ಮಾಡಿ ಸಂಪೂರ್ಣ ಇಸ್ಲಾಂಮಯ ಮಾಡುವ ಹುನ್ನಾರವನ್ನು ಮಾಡುತ್ತಾ ಇದ್ದವನು. ಯುವಕರನ್ನು ಖುರಾನನ್ನೇ ಪ್ರಮಾಣವಾಗಿ ಇಟ್ಟುಕೊಂಡಿರುವ ಈತ ತನ್ನ ಎಲ್ಲಾ ಕೃತ್ಯಗಳೂ ಕುರಾನ್ ಹಾಗೂ ಇಸ್ಲಾಂನ ಪಾಲನೆಯ ಭಾಗ ಎಂದು ತಿಳಿದುಕೊಂಡವನು.
ಬಶೀರ್ ಅಹಮದ್, ಆತ ಒಂದು ಕಾಲದ ಕೈಲಾಶ್ನ ನೆರೆಮನೆಯ ಗೆಳೆಯ. ತನ್ನ ಮಗನಾದ ಆಸಿಫ್ನಿಂದಲೇ ಕೈಲಾಶ್ನ ಸಂಸಾರ ನಾಶಹೊಂದಿದಾಗ ಏನೂ ಮಾಡಲಾಗದೆ, ಕೊನೆಗೆ ಕೈಲಾಶ್ನ ಮುಖವನ್ನೂ ನೋಡಲು ಆಗದಷ್ಟು ನೈತಿಕವಾಗಿ ಕುಗ್ಗಿಹೋದ ವ್ಯಕ್ತಿ. ಮಿಲಿಟರಿ ಕಾರ್ಯಾಚರಣೆಯಲ್ಲಿ ಉಗ್ರವಾದಿಯಾಗಿದ್ದ ಆಸಿಫ್ನನ್ನು ಕಳೆದುಕೊಂಡಿದ್ದರೆ, ಇನ್ನೊಬ್ಬ ಮಗ ಅನ್ವರ್ನನ್ನು ಉಗ್ರಾವಾದಿಗಳು ಹಚ್ಚಿದ ಬೆಂಕಿಯಲ್ಲಿ ಕಳೆದುಕೊಳ್ಳುತ್ತಾನೆ. ನಂತರ ಕುರಾನ್ನಲ್ಲಿನ ನ್ಯಾಯ ಹಾಗೂ ಸಾಕ್ಷ್ಯದ ಹುಡುಕಾಟ ಆರಂಭಿಸಿ ಕೊನೆಗೆ ನರೇಂದ್ರನ ಮೂಲಕ ಕುರಾನ್ನ ಸೂರಹ್ ನಾಲ್ಕು ಆಯಹ್ ನೂರಾಮೂವತ್ತೈದರಲ್ಲಿ ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತ: ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ, ನ್ಯಾಯ ಪರಿಪಾಲನೆಯಿಂದ ಹಿಂದೆ ಸರಿಯಬೇಡಿರಿ ಎಂಬುದನ್ನು ಅರಿಯುತ್ತಾನೆ. ಕೈಲಾಶ್ ಹಾಗೂ ಬಶೀರ್ ಇವರಿಬ್ಬರೂ ಕಾಶ್ಮೀರದ ಭಯೋತ್ಪಾದನೆಯ ಬಲಿಪಶುಗಳು. ಇಬ್ಬರೂ ತಮ್ಮ ಇಬ್ಬರ ಮಕ್ಕಳನ್ನು ಕಳೆದುಕೊಂಡವರೇ. ಇದು ಕಾಶ್ಮೀರದ ಉಗ್ರ ಹೋರಾಟಗಳು ಹೇಗೆ ಹಿಂದೂ ಹಾಗೂ ಮುಸಲ್ಮಾನರಿಬ್ಬರನ್ನೂ ಬಲಿತೆಗೆದುಕೊಳ್ಳುತ್ತಿದೆ, ಹೇಗೆ ಎರಡೂ ಸಮುದಾಯದ ಜನರ ಶಾಂತಿಯನ್ನೂ ಕಸಿದುಕೊಂಡಿದೆ ಎಂಬುದಕ್ಕೆ ಕೈಲಾಶ್ ಹಾಗೂ ಬಶೀರ್ ಇರೂ ನಿದರ್ಶನವಾಗುತ್ತಾರೆ.
ಸೇನೆಯ ವಿರುದ್ಧ ಕಲ್ಲೆಸೆಯುವುದನ್ನೇ ತನ್ನ ಕಸುಬಾಗಿಸಿಕೊಡಿದ್ದು ಉಗ್ರಗಾಮಿಗಳ ಅಂತಃಕಲಹದಲ್ಲಿ ತನ್ನ ಗೆಳೆಯನ ಸಾವನ್ನು ಕಣ್ಣಾರೆ ಕಂಡು ಕಶ್ಮೀರ ಹೋರಾಟದ ಬಗೆಗೆ ಭ್ರಮನಿರಸನಗೊಂಡು, ನಂತರ ಗೆಳೆಯ ಸಲೀಂನ ಮೂಲಕ ನರೇಂದ್ರನ ಸಂಪರ್ಕಕ್ಕೆ ಬಂದು ಮನಃಪರಿವರ್ತನೆಗೊಂಡು ಶಾಂತಿಯುತ ಬದುಕನ್ನು ಬಾಳಬೇಕೆಂಬ ಹಂಬಲಿಸಿದ ಮುಷ್ತಾಕ್ ಕಾಶ್ಮೀರದಲ್ಲಿನ ಯುವಕರ ಮನಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಗೆ ಪ್ರತೀಕವಾಗುತ್ತಾನೆ.
ಸುಂದರಕೃಷ್ಣ ತನ್ನ ಒಣ ಸಿದ್ಧಾಂತಕ್ಕೇ ಜೊತುಬಿದ್ದು ಕಾಶ್ಮೀರಿ ಉಗ್ರರನ್ನು ಸ್ವಾತಂತ್ರ್ಯ ಹೊರಾಟಗಾರರೆಂಬ ರೀತಿಯಲ್ಲಿ ಬಿಂಬಿಸುವ ನಮ್ಮ ಸುತ್ತುಮುತ್ತಲಿನ ಲಿಬರಲ್ ಕ್ಲಾಸ್ ಬುದ್ಧಿ ಜೀವಿಗಳ ಪ್ರತಿಬಿಂಬ. ವಾಸ್ತವದಲ್ಲಿ ಬದುಕದ ಅತ ಆದರ್ಶದ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿ.
ಒಟ್ಟಿನಲ್ಲಿ ಕಾದಂಬರಿಕಾರ್ತಿಯು ಕೃತಿಯ ಮೂಲಕ ಕಾಶ್ಮೀರದ ಇತಿಹಾಸ, ಅಲ್ಲಿನ ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗಳ ಬಗ್ಗೆ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ನೆಲದಲ್ಲೇ ನಿರಾಶ್ರಿತರಾಗಿ ತಮ್ಮ ಮನೆ ಹಾಗೂ ಮಕ್ಕಳನ್ನು ಕಳೆದುಕೊಂಡ ಪಂಡಿತರ ದುಸ್ಥಿತಿಯ ಬಗ್ಗೆ ಓದುಗರಿಗೆ ತಿಳಿಸುವ ಪ್ರಯತ್ನದಲ್ಲಿ ಖಂಡಿತವಾಗಿಯೂ ಸಫಲರಾಗಿದ್ದಾರೆ. ಆದರೂ ಓದುಗ ಇಲ್ಲಿ, ಉದ್ವೇಗ, ದ್ವೇಷ, ಹಗೆ ಹಾಗೂ ಭಾವೋದ್ವೇಗಕ್ಕೆ ಒಳಗಾಗದಂತೆ ಕಾದಂಬರಿಯನ್ನು ಬೆಳೆಸಿಕೊಂಡು ಹೋದದ್ದು ಕಾದಂಬರಿಕಾರ್ತಿಯ ಸಾಮಾಜಿಕ ಪ್ರಜ್ಞೆಯನ್ನು ತೋರಿಸುತ್ತದೆ. ಸಾಹಿತ್ಯಲೋಕವನ್ನು ಆವರಿಸಿರುವ ನಕಲಿ ಜಾತ್ಯತೀತತೆಯ, ತುಷ್ಟೀಕರಣದ ಮಬ್ಬನ್ನು ಛೇದಿಸಿ ಕಾಶ್ಮೀರದ ನಿಜ ಸ್ಥಿತಿಯ ಬಗ್ಗೆ ಕೃತಿಯನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿರುವುದಕ್ಕೆ ಓದುಗರು ಶ್ರೀಮತಿ ಸಹನಾ ವಿಜಯ ಕುಮಾರ್ ಅವರಿಗೆ ಚಿರಋಣಿಗಳು.
ಖ್ಯಾತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರ ಮುನ್ನುಡಿಯೊಂದಿಗೆ, ಶತಾವಧಾನಿ ಶ್ರೀ ಆರ್ ಗಣೇಶ್ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾದಂಬರಿಯ ಮೊದಲ ಆವೃತ್ತಿಯ ಎಲ್ಲಾ ಪ್ರತಿಗಳೂ ಅತೀ ಕಡಿಮೆ ಸಮಯದಲ್ಲಿ ಮಾರಾಟವಾಗಿ ಕಾದಂಬರಿಯು ಎರಡನೆಯ ಮುದ್ರಣಕ್ಕೆ ಹೊಗಿರುವುದು ಕಾದಂಬರಿಯನ್ನು ಜನರು ಹೇಗೆ ಸ್ವೀಕರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.