ಆಫ್ರಿಕಾ ಅಂದರೆ ಬಾಲ್ಯದಿಂದಲೂ ಅದೇನೋ ಆಸಕ್ತಿ ಹಾಗಾಗಿ ಸಮಯ ಸಿಕ್ಕಿದಾಗಲೆಲ್ಲ ಈ ದೇಶಗಳ ಬಗ್ಗೆ ಗೂಗಲ್ನಲ್ಲೋ, ಯೂ ಟ್ಯೂಬಿನಲ್ಲೋ ಕೆದಕೋದು ಜಾಸ್ತಿ. ಹಾಗೆ ಕೆದಕಿದಾಗಲೆಲ್ಲ ಅಲ್ಲಿನ ಹಸಿರು, ಪ್ರಕೃತಿ ಮೈಮನ ಮುದ ಗೊಳಿಸಿದರೆ ಅಲ್ಲಿನ ಜನಾಂಗೀಯ ಕಲಹಗಳು, ಕೊಲೆ, ಮಾರಣಹೋಮಗಳು ಬೆಚ್ಚಿ ಬೀಳಿಸುತ್ತದೆ. ಸಿಯೆರಾ ಲಿಯೋನ್, ಕಾಂಗೋ, ಎರಿಟ್ರಿಯಾ, ಸುಡಾನ್, ಮೊಜಾಂಬಿಕ್, ಚಾಡ್, ಐವರಿ ಕೋಸ್ಟ್ ಹೀಗೆ ಹೆಚ್ಚಿನ ಎಲ್ಲಾ ದೇಶಗಳು ಒಂದಿಲ್ಲೊಂದು ಜನಾಂಗೀಯ ಕಲಹಕ್ಕೆ ಸಾಕ್ಷಿಯಾದವುಗಳೇ.
ಅಂತಹುದೇ ಒಂದು ದೇಶ ರುವಾಂಡಾ (ಇತ್ತೀಚಿಗೆ ಪ್ರಧಾನಿ ಮೋದಿಯವರು ರುವಾಂಡಾ ದೇಶಕ್ಕೆ ಭೇಟಿ ನೀಡಿದ್ದರು) ಸರಿ ಸುಮಾರು 24 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ನಡೆದ ಜನಾಂಗೀಯ ಕಲಹಕ್ಕೆ ಬರೋಬರಿ 8 ರಿಂದ 10 ಲಕ್ಷ ಜನ ಸಾವನ್ನಪ್ಪಿದ್ದರು. ಇವರ ನೆನಪಿಗಾಗಿ ರಾಜಧಾನಿ ಕಿಗಾಲಿಯಲ್ಲಿ ಒಂದು ಸ್ಮಾರಕವನ್ನೂ ಕಟ್ಟಲಾಗಿದೆ. ಹಾಗಂತ ರುವಾಂಡದಲ್ಲಿ ಈ ಜನಾಂಗೀಯ ದ್ವೇಷ ನಿನ್ನೆ ಮೊನ್ನೆದಲ್ಲ ಅದು ರುವಾಂಡಾ ಯುರೋಪ್ ವಸಾಹತು ಆದಾಗಿನಿಂದಲೂ ಇತ್ತು ಅಸಲಿಗೆ ಈ ದ್ವೇಷಕ್ಕೆ ತುಪ್ಪ ಸುರಿದದ್ದೇ ಈ ಪಾಶ್ಚಿಮಾತ್ಯ ದೇಶಗಳು.
ರುವಾಂಡಾ ಅನ್ನೋದು ಆಫ್ರಿಕಾದ ಒಂದು ಕೃಷಿ ಪ್ರಧಾನ ದೇಶ. 1894 ರಿಂದ 1914 ರ ವರೆಗೆ ಜರ್ಮನ್ ಈಸ್ಟ್ ಆಫ್ರಿಕಾದ ಭಾಗವಾಗಿದ್ದ ಇದು ಮೊದಲನೇ ಮಹಾಯುದ್ಧದ ನಂತರ ತನ್ನ ನೆರೆಯ ಬುರುಂಡಿ ದೇಶದೊಂದಿಗೆ ಬೆಲ್ಜಿಯಂ ವಸಾಹತು ಆಗಿ ಮಾರ್ಪಟ್ಟಿತು.ಹುತು ಅನ್ನೋದು ಇಲ್ಲಿನ ಪ್ರಮುಖ ಬುಡಕಟ್ಟು ಮತ್ತು ಸರಿಸುಮಾರು 85% ಜನಸಂಖ್ಯೆ ಹೊಂದಿರೋ ಇವರು ಈ ದೇಶದ ಬಹುಸಂಖ್ಯಾತರು ಮತ್ತು ಮೂಲನಿವಾಸಿಗಳು. ತುತ್ಸಿ ಅನ್ನೋದು ಇಲ್ಲಿನ ಇನ್ನೊಂದು ಪ್ರಮುಖ ಬುಡಕಟ್ಟು. ಎರಡೂ ಬುಡಕಟ್ಟಿನ ಆಚಾರ, ಸಂಪ್ರದಾಯ, ಭಾಷೆ, ಧರ್ಮ ಎಲ್ಲದರಲ್ಲೂ ಸಾಮ್ಯತೆ ಇದೆ ಆದರೆ ಹುತುಗಳು ದಪ್ಪಗಿದ್ದರೆ ತುತ್ಸಿಗಳು ತೆಳ್ಳಗಿದ್ದು ಉದ್ದಗಿದ್ದಾರೆ (ಈ ವ್ಯತ್ಯಾಸವನ್ನು ನೀವು ಮೇಜರ್ ಹಾಬ್ಯಾರಿಮಾನ ಮತ್ತು ಮೇಜರ್ ಪಾಲ್ ಕೀಗಾಮಿ ಫೋಟೋ ನೋಡುವಾಗ ಗುರುತಿಸಬಹುದು) ಹಾಗಾಗಿ ಇವರು ಇಥಿಯೋಪಿಯಾ ಮೂಲದವರು ಈ ದೇಶದವರಲ್ಲ ಅನ್ನೋದು ಹುತುಗಳ ವಾದ.
ಭಾರತದಲ್ಲಿ ಬ್ರಿಟಿಷ್ ಸರಕಾರ ಹಿಂದೂ ಮುಸಲ್ಮಾನರ ಮದ್ಯೆ ತಂದಿಟ್ಟದ್ದನ್ನು ಕೇಳಿರುತ್ತೀರಿ ಇದೆ ತಂತ್ರವನ್ನು ಬೆಲ್ಜಿಯಂ ಸರಕಾರ ರುವಾಂಡದಲ್ಲಿ ಉಪಯೋಗಿಸುತ್ತದೆ. ಬಹುಸಂಖ್ಯಾತ ಹುತುಗಳನ್ನೂ ತುಳಿಯಲು ಅಲ್ಪಸಂಖ್ಯಾತ ತುತ್ಸಿಗಳ ತುಷ್ಟೀಕರಣಕ್ಕೆ ಮುಂದಾಗುತ್ತದೆ.ಇದು ಬಹುಸಂಖ್ಯಾತ ಹುತುಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ.ಇದು 1959 ರ ಹೊತ್ತಿಗೆ ಭುಗಿಲೆದ್ದು ಹುತು ಬಂಡಾಯಗಾರರು ಸರಕಾರದ ವಿರುದ್ಧ ಬಂಡೆದ್ದು ವ್ಯಾಪಕ ಹಿಂಸಾಚಾರದಲ್ಲಿ ತೊಡಗುತ್ತಾರೆ ಪರಿಣಾಮ 3,೦೦,೦೦೦ದಷ್ಟು ತುತ್ಸಿಗಳು ನೆರೆ ದೇಶಗಳಿಗೆ ಪಲಾಯನ ಮಾಡಬೇಕಾಗಿ ಬರುತ್ತದೆ. 1962 ರ ಹೊತ್ತಿಗೆ ಬೆಲ್ಜಿಯಂ ರುವಾಂಡವನ್ನು ಸ್ವತಂತ್ರ ದೇಶ ಎಂದು ಘೋಷಿಸುತ್ತದೆ. ಸ್ವತಂತ್ರಾನಂತರವೂ ಈ ಹಿಂಸಾಚಾರ ಮುಂದುವರೆದು 1973 ರ ಹೊತ್ತಿಗೆ ಮೇಜರ್ ಜನರಲ್ ಜುವೆನೈಲ್ ಹಾಬ್ಯಾರಿಮನ ಅಧ್ಯಕ್ಷನಾಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಅಸ್ಥಿರತೆಗೆ ಮುಕ್ತಾಯ ಹಾಡಲಾಗುತ್ತದೆ.ಆನಂತರ ಆತ ತನ್ನದೇ ಆದ ನ್ಯಾಷನಲ್ ರೆವೊಲ್ಯೂಷನರಿ ಮೂವ್ಮೆಂಟ್ ಫಾರ್ ಡೆವಲಪ್ಮೆಂಟ್ (NRMD) ಅನ್ನೋ ಪಕ್ಷ ಸ್ಥಾಪಿಸಿವುದರ ಮೂಲಕ ಇನ್ನು 3 ಅವಧಿಗೆ (1978, 1983, 1988) ಆಯ್ಕೆಯಾಗುತ್ತಾನೆ.
1990 ಅಕ್ಟೋಬರ್ 1 ಪಕ್ಕದ ಉಗಾಂಡಕ್ಕೆ ಪಲಾಯನಗೈದಿದ್ದ ತುತ್ಸಿಗಳು ಫ್ರೆಡ್ ರಿಗೆಮ ನೇತೃತ್ವದಲ್ಲಿ ರುವಾಂಡನ್ ಪೆಟ್ರಿಯೋಟಿಕ್ ಫ್ರಂಟ್ (RPF)ಅನ್ನೋ ತನ್ನದೇ ಆದ ಸೈನ್ಯವನ್ನು ಸ್ಥಾಪಿಸಿ ಗೆರಿಲ್ಲ ಯುದ್ಧದ ಮೂಲಕ ವಾಪಸು ರುವಾಂಡಾಕ್ಕೆ ಬರೋ ಪ್ರಯತ್ನ ಮಾಡುತ್ತಾರೆ.ಎರಡನೇ ದಿನ ಅಂದರೆ ಅಕ್ಟೋಬರ್ 2 ರಂದು ಫ್ರೆಡ್ ರಿಗೆಮ ಹತ್ಯೆಯಾಗುವುದರ ಮೂಲಕ ಅಮೇರಿಕಾದಲ್ಲಿ ಸೈನ್ಯಭ್ಯಾಸದಲ್ಲಿದ್ದ ಪೌಲ್ ಕೀಗಾಮಿ ಅನಿವಾರ್ಯವಾಗಿ RPF ನೇತೃತ್ವ ವಹಿಸಬೇಕಾಗುತ್ತದೆ. 1993 ಆಗಸ್ಟ್ ರಂದು ಹಾಬ್ಯಾರಿಮನ ಮತ್ತು RPF ಮದ್ಯೆ ತಾಂಜನಿಯಾದಲ್ಲಿ ಒಪ್ಪಂದ ನಡೆದು ತುತ್ಸಿಗಳು ರವಾಂಡಾದಲ್ಲಿ ನೆಲೆಸುವುದಕ್ಕೆ ಹಾಗು ಸರಕಾರದಲ್ಲಿ ಪಾಲುಗೊಳ್ಳುವುದಕ್ಕೆ ಒಪ್ಪಿಗೆ ನೀಡಲಾಯಿತು. ಈ ಒಂದು ಒಪ್ಪಂದ ಉಗ್ರ ಹುತುಗಳ ಕಣ್ಣುರಿಗೆ ಕಾರಣವಾಯಿತು.
1994 ಏಪ್ರಿಲ್ 6 ನಡೆಯಬಾರದ ಅವಘಡವೊಂದು ಆಗಿ ಹೋಗುತ್ತದೆ ರುವಾಂಡಾ ಅಧ್ಯಕ್ಷ ಹುತುಗಳ ಪರಮೋಚ್ಚ ನಾಯಕ ಹಾಬ್ಯಾರಿಮಾನ ಮತ್ತು ಪಕ್ಕದ ಬುರುಂಡಿ ದೇಶದ ಅಧ್ಯಕ್ಷ ಸಿಫಿರ್ ನತ್ಯರಮಿರಾ ಇವರವುಗಳು ಪ್ರಯಾಣಿಸುತ್ತಿದ್ದ ವಿಮಾನವನ್ನು ಹೊಡೆದುರುಳಿಸಲಾಗುತ್ತದೆ ಈ ಮೂಲಕ ಸರಿ ಸುಮಾರು ದಶಕಗಳ ತನಕ ರುವಾಂಡವನ್ನು ಆಳಿದ ಹಾಬ್ಯಾರಿಮಾನನ ಅಂತ್ಯವಾಗುತ್ತದೆ (ಇಂದಿನವರೆಗೂ ಈ ಹತ್ಯೆಯ ಸೂತ್ರದಾರರನ್ನು ಕಂಡುಹಿಡಿಯಲಾಗಿಲ್ಲ). ಇದು ಹುತುಗಳನ್ನು ಕೆರಳಿಸುತ್ತದೆ ಪರಿಣಾಮ ಮಾತ್ರ ಗಂಭೀರ. ಹುತು ಪ್ರಭಾವದ ಸೈನ್ಯ, NRMD ಬಂಡುಗಾರರು ದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ರೇಡಿಯೋ ಸ್ಟೇಷನ್ಗಳಲ್ಲಿ ತುತ್ಸಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವಂತೆ ಹುತುಗಳನ್ನು ಪ್ರಚೋದಿಸಲಾಗುತ್ತದೆ. ರುವಾಂಡಾದಿಂದ ಕೊನೆ ತುತ್ಸಿಯನ್ನು ಕೊಲ್ಲುವ ತನಕ ಇದು ಮುಂದುವರೆಯಬೇಕು ಅನ್ನೋದನ್ನು ಬಹುಸಂಖ್ಯಾತ ಹುತುಗಳ ಮನಸ್ಸಿಗೆ ತುಂಬಲಾಗುತ್ತದೆ. ಇದಕ್ಕೆ ಮೊದಲ ಬಲಿಯಾದದ್ದೇ ರುವಾಂಡಾದ ಆಗಿನ ಹಂಗಾಮಿ ಪ್ರಧಾನಿಯಾಗಿದ್ದ ಸುಧಾರಣಾವಾದಿ ಅನಿಸಿಕೊಂಡಿದ್ದ ಅಗಾತ್ಯಾ ಉಲಿಂಗಮಾನ ಅವರದ್ದು. ಇದರ ಅನುಮಾನವಿದ್ದ ಆಕೆ ಕೊಲೆಯಾಗುವ ಕೆಲವೇ ತಾಸುಗಳ ಮುಂಚೆ ರಕ್ಷಣೆ ಕೋರಿ ಬೆಲ್ಜಿಯಂ ದೂತಾವಾಸದಲ್ಲಿ ಆಶ್ರಯ ಕೋರಿದ್ದರಂತೆ. ಆದರೆ ಬಂಡಾಯ ಶುರುವಾದ 1 ತಾಸಿನೊಳಗೆ ಆಕೆಯನ್ನು ಆಕೆಯ 10 ಜನ ಬೆಲ್ಜಿಯಂ ಅಂಗರಕ್ಷಕರೊಂದಿಗೆ ಹೊಡೆದುರುಳಿಸಲಾಯಿತು. ರಸ್ತೆಗಳನ್ನು ತಡೆದು ಹಾದು ಹೋಗೋ ಎಲ್ಲಾ ವಾಹನಗಳನ್ನು ತಡೆದು ಗುರುತು ಪಾತ್ರ ಪರಿಶೀಲಿಸಲಾಯಿತು (ಆಗ ಗುರುತು ಪಾತ್ರದಲ್ಲಿ ಜನಾಂಗವನ್ನು ನಮೂದಿಸೋ ಕ್ರಮವಿತ್ತು ಆನಂತರ ಅದನ್ನು ತೆಗೆದು ಹಾಕಲಾಯಿತು) ತುತ್ಸಿಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕತ್ತರಿಸಲಾಯಿತು ಇದಕ್ಕೆ ಪ್ರತಿರೋಧಿಸಿದ ಸುಧಾರಣಾವಾದಿ ಹುತುಗಳನ್ನು ಕೊಲ್ಲಲಾಯಿತು. ಹೀಗೆ ಕೊಲ್ಲಲ್ಪಟ್ಟ ತುತ್ಸಿಗಳನ್ನು ಹರಿಯೋ ನದಿಗೆ ಬಿಸಾಡೋ ಮೂಲಕ ತುತ್ಸಿಗಳನ್ನು ಅವರುಗಳ ಮೂಲವಾದ ಇಥಿಯೋಪಿಯಾಕ್ಕೆ ರವಾನಿಸಲಾಗುತ್ತಿದೆ ಅನ್ನೋ ಸಂದೇಶ ರವಾನಿಸಲಾಯಿತು.
ಈ ಹಿಂಸಾಚಾರ ಎಷ್ಟೊಂದು ಭೀಕರವಾಗಿತ್ತು ಅಂದರೆ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪದೇ ರುವಾಂಡಾಕ್ಕೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಹಾಕಲು ಹಿಂದೇಟು ಹಾಕಿತು. ಅಮೆರಿಕಾದಂತ ಅಮೆರಿಕವೇ ತನ್ನ ನಾಗರಿಕರನ್ನು ರುವಾಂಡಾದಿಂದ ಹಿಂದೆ ಬರುವಂತೆ ಸೂಚಿಸಿತು ಮತ್ತು ಯಾವುದೇ ತುತ್ಸಿಯನ್ನು ರಕ್ಷಿಸುವ ಮೂಲಕ ಹುತುಗಳ ವಿರೋಧ ಕಟ್ಟಿಕೊಳ್ಳಬಾರದು ಅನ್ನೋದನ್ನು ನಿರ್ದೇಶಿಸಲಾಯಿತು. ಕಣ್ಣೆದುರೇ ತುತ್ಸಿಗಳ ಮರಣಹೋಮವಾಗುತಿದ್ದರೂ ಅನಿವಾರ್ಯವಾಗಿ ಏನು ಮಾಡಲಾಗದೆ ತನ್ನ ನಾಗರಿಕರನ್ನು ರಕ್ಷಿಸುವುದಕ್ಕಷ್ಟೇ ಆದ್ಯತೆ ನೀಡಲಾಯಿತು. ಕಿಗಾಲಿಯಲ್ಲಿ ಶುರುವಾದ ಈ ದಂಗೆ ಬಹು ಶೀಘ್ರವಾಗಿ ರುವಾಂಡವನ್ನು ಹಬ್ಬಿತು. ಪರಿಣಾಮ ೮ರಿಂದ 10 ಲಕ್ಷ ತುತ್ಸಿಗಳ ಮಾರಣಹೋಮ. ಚರ್ಚು, ರಸ್ತೆ, ನದಿ ಹೀಗೆ ಎತ್ತ ನೋಡಿದರು ಹೆಣಗಳ ರಾಶಿ.ರಕ್ತ ಅನ್ನೋದು ನದಿ ನೀರಿಗೆ ಸ್ಪರ್ಧೆ ನೀಡೋ ಭರದಲ್ಲಿ ಹರಿಯಿತು.
ಆದರೆ ಅಲ್ಲೊಬ್ಬನಿದ್ದ ನೋಡಿ ಕರಿಯ ಕೀಗಾಮಿ ಮತ್ತು ಆತನ RPF ಪಡೆ ಒಂದಿಷ್ಟು ವಿದೇಶಿ ನೆರವಿನೊಂದಿಗೆ ಹುತು ಬಂಡುಗಾರರಿಗೆ ಪ್ರಭಲ ಪ್ರತಿರೋಧವನ್ನು ನೀಡಲಾರಂಭಿಸಿತು ಮತ್ತು ಅದರಲ್ಲಿ ಯಶಸ್ವಿಯೂ ಆಯಿತು. 12 ವಾರಗಳ ಕಾಲ ಮುಂದುವರೆದ ಈ ಮಾರಣಹೋಮ ಜುಲೈ ಮೊದಲನೇ ವಾರಕ್ಕೆ ಕೀಗಾಮಿ ನೇತೃತ್ವದ RPF ರಾಜಧಾನಿಯನ್ನು ತನ್ನ ಸುಪರ್ದಿಗೆ ತಗೊಳ್ಳುವ ಮೂಲಕ ಇತಿಶ್ರೀ ಕಂಡಿತು.
ಇದಾದ ನಂತರ ತಾಂಜನಿಯಾದಲ್ಲಿ ನಡೆದ ಒಪ್ಪಂದದಂತೆ ಹುತು ಮತ್ತು ತುತ್ಸಿಗಳ ಸಮ್ಮಿಶ್ರ ಸರಕಾರ ರಚನೆಯಾಗುತ್ತದೆ. ಸುಧಾರಣವಾದಿ ಹುತು ಪ್ಯಾಸ್ಟಾರ್ ಬಿಝಿಮುಂಗು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಮತ್ತು RPF ನಾಯಕ ಪೌಲ್ ಕೀಗಾಮಿ ಉಪಾಧ್ಯಕ್ಷ ಮತ್ತು ರಕ್ಷಣಾ ಸಚಿವನಾಗಿ ಆಯ್ಕೆಯಾಗುತ್ತಾನೆ. ಹಾಬ್ಯಾರಿಮಾನನ NRMD ನಾಮಶೇಷವಾಗುತ್ತದೆ. 2000 ದಲ್ಲಿ ಅಧ್ಯಕ್ಷನಾಗಿ ಭಡ್ತಿ ಪಡೆದ ಕೀಗಾಮಿ ಈಗಲೂ ಅಧ್ಯಕ್ಷನ್ನಾಗಿ ಮುಂದುವರೆದಿದ್ದಾನೆ. ಅಂದ ಹಾಗೆ 24 ವರ್ಷದ ಹಿಂದೆ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾದ ಕಿಗಾಲಿ ಈಗ ಆಫ್ರಿಕಾದ 10 ಉನ್ನತ ವಾಸಯೋಗ್ಯ ಸ್ಥಳಗಳಲ್ಲಿ ಒಂದಂತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.