ಕಾಸರಗೋಡು : ಕೆನಡಾದ ವ್ಯಾಂಕೋವರ್ನಲ್ಲಿ 2015 ಜೂನ್ 8 ರಿಂದ 14 ರ ತನಕ ನಡೆಯಲಿರುವ 23ನೇ ಚರ್ಮಶುಷ್ರೂಷೆ(ಡರ್ಮಟೋಲಜಿ)ಯ ವಿಶ್ವ ಸಮ್ಮೇಳನದ ವೈಜ್ಞಾನಿಕ ಸಮಿತಿಯು “ಡಬ್ಲ್ಯುಎಸ್ 48 ಲಿಂಫೆಡಿಮಾದ ಹರಡುವಿಕೆಗೆ ತಡೆ: ಪ್ರಗತಿ ಮತ್ತು ಫಲಿತಾಂಶ’’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದಲ್ಲಿರುವ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿಯ ನಿರ್ದೇಶಕ ಮತ್ತು ಚರ್ಮರೋಗ ತಜ್ಞ ಡಾ|ಎಸ್.ಆರ್.ನರಹರಿಯವರನ್ನು ಆಹ್ವಾನಿಸಿದೆ.
ವಿಚಾರಗೋಷ್ಠಿಯು ಒಳಗೊಳ್ಳಬೇಕಾದ ವಿಷಯ ಮತ್ತು ತಜ್ಞ ಮಂಡನೆಯ ಕುರಿತು ವಿಚಾರಗೋಷ್ಠಿಯ ಇನ್ನಿಬ್ಬರು ಸಹ ಅಧ್ಯಕ್ಷರೊಂದಿಗೆ ಡಾ|ಎಸ್.ಆರ್. ನರಹರಿಯವರು ಚರ್ಚಿಸಿ ತೀರ್ಮಾನಿಸಿದ್ದಾರೆ. 1889ರಲ್ಲಿ ಆರಂಭವಾದ ಚರ್ಮಶುಶ್ರೂಷೆಯ ವಿಶ್ವ ಸಮ್ಮೇಳನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಲಿಂಫೆಡಿಮಾ ಕುರಿತ ವಿಚಾರವನ್ನು ಸೇರಿಸಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ಲಿಂಫೇಟಿಕ್ ಫೈಲೇರಿಯಾಸಿಸ್ (ಅನೆಕಾಲು ರೋಗ) ಶುಶ್ರೂಷೆಯಲ್ಲಿ ಸಂಯೋಜಿತ ಭಾರತೀಯ ಚಿಕಿತ್ಸಾ ಪದ್ಧತಿಯ ಕುರಿತಾದ ವಿಚಾರಮಂಡನೆ ಮತ್ತು ಚರ್ಚೆಯನ್ನು ಡಾ|ಎಸ್.ಆರ್.ನರಹರಿ ನಿರ್ವಹಿಸಲಿದ್ದಾರೆ. ಅತ್ಯಂತ ಪ್ರಮುಖವಾದ ಅಂತಾರಾಷ್ಟ್ರೀಯ ಸೈದ್ಧಾಂತಿಕ ಸಭೆಗಳಲ್ಲಿ ಇದುವರೆಗೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡದ ಮತ್ತು ಬಡವರ ರೋಗವೆಂದು ಕಡೆಗಣಿಸಲಾದ ಈ ರೋಗದ ಕುರಿತು ಈ ವಿಶ್ವ ಸಮ್ಮೇಳನವು ಚರ್ಚಿಸಲಿದೆ. http://derm2015.org/calendar/ ಎಂಬ ವೆಬ್ಸೈಟಿನಲ್ಲಿ ಚರ್ಮಶುಷ್ರೂಷೆಯ ವಿಶ್ವ ಸಮ್ಮೇಳನದ ಕಾರ್ಯಕ್ರಮ ಕುರಿತಾದ ಹೆಚ್ಚಿನ ವಿವರಗಳು ಲಭ್ಯವಿದೆ.
ಎಲ್ಲ ರಾಷ್ಟ್ರೀಯ ಡರ್ಮಟೋಲಜಿ ಸಂಸ್ಥೆಗಳ ಮಾತೃಸಂಸ್ಥೆಯಾದ ಇಂಟರ್ನೇಶನಲ್ ಲೀಗ್ ಓಫ್ ಡರ್ಮಟೋಲಜಿಕಲ್ ಸೊಸೈಟೀಸ್ (ILDS) ನಾಲ್ಕು ವರ್ಷಗಳಿಗೊಮ್ಮೆ ಚರ್ಮಶುಷ್ರೂಷೆಯ ವಿಶ್ವ ಸಮ್ಮೇಳನವನ್ನು ಆಯೋಜಿಸುತ್ತದೆ. ವಿಶ್ವದಾದ್ಯಂತದ ಸಹಸ್ರಾರು ಮಂದಿ ಚರ್ಮರೋಗ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ಪ್ರತಿಷ್ಟಿತ ಸಮ್ಮೇಳನದಲ್ಲಿ ವೈಜ್ಞಾನಿಕ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕೇವಲ ಮೂವರು ಭಾರತೀಯ ಚರ್ಮರೋಗ ತಜ್ಞರು ಮಾತ್ರ ಆಯ್ಕೆಯಾಗಿದ್ದು, ಡಾ|ಎಸ್.ಆರ್.ನರಹರಿಯವರ ಜೊತೆ ಚರ್ಮರೋಗ ತಜ್ಞರಾದ ಕೋಲ್ಕತ್ತಾದ ಇನ್ಸ್ಟಿಟ್ಯೂಟ್ ಓಫ್ ಚೈಲ್ಡ್ ಹೆಲ್ತ್ನ ವಿಭಾಗ ಮುಖ್ಯಸ್ಥ ಡಾ|ಸಂದೀಪ್ ಧರ್ ಮತ್ತು ಮುಂಬಯಿ ಕುಷ್ಠರೋಗ ನಿವಾರಣಾ ಯೋಜನೆಯ ಡಾ|ವಿ.ವಿ.ಪೈಯವರು ತಮ್ಮ ಸಂಶೋಧನೆಗಳನ್ನು ಪ್ರತ್ಯೇಕ ವಿಚಾರಗೋಷ್ಠಿಯಲ್ಲಿ ಮಂಡಿಸಲಿದ್ದಾರೆ.
ಲಿಂಫೆಡಿಮಾ ಚಿಕಿತ್ಸೆಯಲ್ಲಿ ಉತ್ತಮ ಅಭ್ಯಾಸ, ಆನುವಂಶಿಕ ತಳಹದಿ ಮತ್ತು ಲಿಂಫೆಡಿಮಾದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ಲಿಂಫೆಡಿಮಾ ವಿಚಾರಗೋಷ್ಠಿಯು ಪ್ರಧಾನವಾಗಿ ಲಕ್ಷ್ಯವಹಿಸಿದೆ. ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿಯು ರೂಪಿಸಿದ ಸಂಯೋಜಿತ ಚಿಕಿತ್ಸಾ ಪದ್ಧತಿಯು ವಿಶ್ವದಲ್ಲೇ ಅತ್ಯುತ್ತಮ ಚಿಕಿತ್ಸಾ ವಿಧಾನವೆಂಬ ಗೌರವಕ್ಕೆ ಪಾತ್ರವಾಗಿದೆ. ಭಾರತದಲ್ಲಿಯೇ 2 ಕೋಟಿ 30 ಲಕ್ಷ ಮಂದಿ ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದು, ಲಿಂಫೆಡಿಮಾವು ಮಾನವನನ್ನು ದೈಹಿಕವಾಗಿ ದುರ್ಬಲಗೊಳಿಸುವ ಎರಡನೇ ಅತಿ ದೊಡ್ಡ ಸಮಸ್ಯೆಯಾಗಿದೆ. ಅನೆಕಾಲು ರೋಗವು ‘ಬಡವರ ರೋಗವೆಂದು ಕಡೆಗಣಿಸಲಾದ ಖಾಯಿಲೆ’ಯಾಗಿದ್ದು ಅಭಿವೃದ್ಧಿ ಹೊಂದುತ್ತಿರುವ 78 ದೇಶಗಳನ್ನು ತೀವ್ರವಾಗಿ ಬಾಧಿಸುತ್ತಿದೆ.
ಲಿಂಫೋಲಜಿ ವಿಭಾಗದಲ್ಲಿ ಐಎಡಿಯು ವಿಶ್ವದಲ್ಲೇ ಅತ್ಯಂತ ಮುಂದುವರಿದಿದ್ದು ಈಗ ದೊರೆತಿರುವ ಅವಕಾಶವು ವಿಶ್ವದಾದ್ಯಂತ ಇರುವ ರೋಗಿಗಳಿಗೆ ಭಾರತದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಿತ ಸಂಯೋಜಿತ ಚಿಕಿತ್ಸಾ ಪದ್ಧತಿಗಳ ಕುರಿತ ಪ್ರಮುಖ ಅಂಶಗಳನ್ನು ಪಸರಿಸಲು ಸಿಕ್ಕ ಉತ್ತಮ ಅವಕಾಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.