ಇಂಟರ್ನೆಟ್ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಇವರ ಸಂದರ್ಶನ ನೋಡುತ್ತಿದ್ದೆ. ಸದ್ಗುರು ಇತ್ತೀಚೆಗೆ ಅಮೇರಿಕಾ ದೇಶಕ್ಕೆ ಭೇಟಿ ಕೊಟ್ಟಿದ್ದಾಗ ಅವರನ್ನು ಭೇಟಿಮಾಡಿದ್ದ 10 ಜನ ಅಮೇರಿಕದ ಸಂಸದರು ಕೂಡಾ ಮಾತನಾಡುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವವನ್ನು ಬಾಯ್ತುಂಬಾ ಹೊಗಳಿ ಭಾರತಕ್ಕೆ ಒಬ್ಬ ಅತ್ಯುತ್ತಮ ನಾಯಕ ದೊರಕಿದ್ದಾರೆ, ಮೋದಿ ವಿಶ್ವನಾಯಕನಾಗಿ (Global Leader) ಆಗಿ ಬೆಳೆದಿದ್ದಾರೆ ಎಂದರಂತೆ.
ಹೌದು ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವಗುರುವಾಗಿಸುವೆಡೆಗೆ ಕೊಂಡೊಯ್ಯುತ್ತಿದ್ದಾರೆ!
ಇದು ವಸುಧೈವ ಕುಟುಂಬಕಂ ಅಥವಾ Global Village ಎನ್ನುವ ಕಾಲ. ದೇಶದ ಬೆಳವಣಿಗೆಗೆ ಹೇಗೆ ದೂರಾಲೋಚನೆಯ, ಸದೃಢ ಆರ್ಥಿಕ ನೀತಿಯು ಹೇಗೆ ಮುಖ್ಯವೋ ಹಾಗೆಯೇ ಜಾಗತಿಕ ಸಂಬಂಧ, ವ್ಯವಹಾರ, ವ್ಯಾಪಾರಗಳಲ್ಲಿ ದೇಶವನ್ನು ಮುನ್ನಡೆಸಲು ಕುಶಲ, ಕ್ಷಿಪ್ರ, ದೂರ ದೃಷ್ಟಿಯುಳ್ಳ ದೃಢ ವಿದೇಶಾಂಗ ನೀತಿಯೂ ಮುಖ್ಯ.
ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ (ಸ್ವಲ್ಪ ಮಟ್ಟಿಗೆ ಪಿ.ವಿ. ನರಸಿಂಹ ರಾವ್) ಸರ್ಕಾರಗಳು ಮಾತ್ರ ಭಾರತದ ವಿದೇಶಾಂಗ ನೀತಿಯ ಬಗ್ಗೆ ಕಾಳಜಿ ವಹಿಸಿದವರು. ಆದರೆ ನರೇಂದ್ರ ಮೋದಿ ಮಾತ್ರ ವಿದೇಶಾಂಗ ವ್ಯವಹಾರಗಳಲ್ಲಿ ಇವರೆಲ್ಲರಿಗಿಂತಲೂ ಹತ್ತು ಹೆಜ್ಜೆ ಮುಂದೆಹೋಗಿ ಭಾರತದ ಘನತೆಯು ಅಂತಾರಾಷ್ಟ್ರೀಯವಾಗಿ ಮತ್ತಷ್ಟು ಬೆಳಗುವಂತೆ ಮಾಡಿದ್ದಾರೆ.
ಈ ಮೊದಲು ನಮ್ಮ ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನವನ್ನು ಬದಿಗೊತ್ತುವುದೇ ಪ್ರಮುಖವಾಗಿತ್ತು. ಆದರೆ ಬಹಳಷ್ಟು ಸರಕಾರಗಳು ಈ ವಿಚಾರದಲ್ಲಿ ಎಷ್ಟೋ ಸಲ ಪಾಕಿಸ್ತಾನದೆದುರೂ ಮುಖಭಂಗಕ್ಕೊಳಗಾದದ್ದಿದೆ. ಆದರೆ ಮೋದಿಯ ಚತುರ ನಡೆಗಳು ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಹೇಳಹೆಸರಿಲ್ಲದಂತೆ ಮೂಲೆಗುಂಪು ಮಾಡಿದ್ದು ಮಾತ್ರವಲ್ಲದೆ ಬಲಿಷ್ಠ ಚೀನವು ಕೂಡಾ ಒನ್ ಬೆಲ್ಟ್ ಒನ್ ರೋಡ್ ನಂತಹ ಬೃಹತ್ ಯೋಜನೆಯ ವಿಚಾರವಾಗಿ ಭಾರತದೆದುರು ಮುಖಭಂಗಕ್ಕೆ ಒಳಗಾಗುವ ಹಾಗೆ ಮಾಡಿದೆ. ಭಾರತ – ಚೀನಾ ಡೋಕ್ಲಾಂ ಗಡಿ ಬಿಕ್ಕಟ್ಟಿನ ವಿಚಾರದಲ್ಲೂ ಅಂತಾರಾಷ್ಟ್ರೀಯವಾಗಿ ಚೀನಾವನ್ನು ಒಬ್ಬಂಟಿಯಾಗಿಸಿ ಕೊನೆಗೆ ಚೀನಾವು ದೋಖ್ಲಾಂನಿಂದ ತನ್ನ ಸೇನೆಯನ್ನು ಹಿಂದೆ ತೆಗೆಯುವಂತೆ ಮಾಡಿದುದೂ ಭಾರತದ ವಿದೇಶಾಂಗ ವ್ಯವಹಾರ ಚಾತುರ್ಯಕ್ಕೆ ಕೈಗನ್ನಡಿ.
ಮೋದಿ ಸರಕಾರವು ತನ್ನ ಅಧಿಕಾರ ಗ್ರಹಣದ ಸನ್ನಿವೇಶದಲ್ಲೇ ನೆರೆಕರೆಯ 13 ದೇಶಗಳ ಪ್ರಮುಖರನ್ನು ಆಹ್ವಾನಿಸಿದಾಗಲೇ ಮೋದಿ ಸರಕಾರದ ವಿದೇಶಾಂಗ ನೀತಿಯ ಒಂದು ಮುನ್ನೋಟವು ಕಾಣಸಿಕ್ಕಿತ್ತು. ಅಧಿಕಾರಕ್ಕೆ ಬಂದ ನಂತರ ಮೊದಲನೆಯದಾಗಿ ತನ್ನ ನೆರೆರಾಷ್ಟ್ರಗಳಾದ ಭೂತಾನ್, ಶ್ರೀಲಂಕಾ, ನೇಪಾಳಗಳಿಗೆ ಭೇಟಿ ನೀಡಿದ ಮೋದಿ ಅವರೊಂದಿಗಿನ ದೇಶದ ಸಂಬಂಧವನ್ನು ಗಟ್ಟಿಗೊಳಿಸಿದರು. ಮೋದಿ ತನ್ನ ಲುಕ್ ಈಸ್ಟ್ ಪಾಲಿಸಿ(ಪೂರ್ವ ದೇಶಗಳೊಡನೆ ಸಂಬಂಧ ವೃದ್ಧಿಸುವ) ಯೋಜನೆಯಲ್ಲಿ ಜಪಾನ್, ಕೊರಿಯಾ, ಆಸ್ಟ್ರೇಲಿಯಾ ದೇಶಗಳಿಗೆ ಭೇಟಿನೀಡಿ ಆ ದೇಶಗಳೊಡನೆ ದೇಶದ ಸಂಬಂಧವನ್ನು ಬಲಗೊಳಿಸಿದರ. ಜಪಾನ್ ತನ್ನ ವಿಶ್ವ ಪ್ರಸಿದ್ಧ ಬುಲೆಟ್ ಟ್ರೈನ್ ಯೋಜನೆಯನ್ನು ಭಾರತಕ್ಕೆ ಕೊಡುಗೆಯಾಗಿ ಕೊಟ್ಟರೆ, ಆಸ್ಟ್ರೇಲಿಯಾ ಪರಮಾಣು ಇಂಧನವನ್ನು ಭಾರತಕ್ಕೆ ಪೂರೈಸಲು ಒಪ್ಪಿಕೊಂಡಿತು. ಅಮೇರಿಕಕ್ಕೆ ಅವಿಸ್ಮರಣಿಯ ಭೇಟಿಯನ್ನು ನೀಡಿದ ಮೋದಿ ಭಾರತ ಹಾಗೂ ಅಮೇರಿಕದ ನಡುವಿನ ಸಂಬಂಧಗಳನ್ನು ಉತ್ತುಂಗಕ್ಕೇರಿಸಿದರು. ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಇಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರೀರ್ವರಿಂದಲೂ ಮೋದಿಯವರು ಆದರಿಸಲ್ಪಟ್ಟು ಭಾರತಕ್ಕೆ ಸೂಕ್ತ ಸ್ಥಾನಮಾನ ಗೌರವ ದೊರಕಿದೆ. ಇಸ್ಲಾಂ ರಾಷ್ಟ್ರಗಳ ಯಾವುದೇ ಮುಲಾಜಿಗೂ ಒಳಗಾಗದ ಮೋದಿ ಭಾರತದ ನಿಜ ಗೆಳೆಯ ಇಸ್ರೇಲಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ. ಮೋದಿ ದುಬೈಗೆ ಭೇಟಿ ನೀಡಿದಾಗ ದುಬೈನ ವಿಶ್ವಪ್ರಸಿದ್ಧ ಬುರ್ಜ್ ಖಲೀಫಾ ಕಟ್ಟಡದಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಮೂಡಿಸಿದುದು ಭಾರತಕ್ಕೆ ದುಬೈ ನೀಡಿದ ಪ್ರಾಮುಖ್ಯತೆಯನ್ನು ಸಾರುತ್ತದೆ. ಖಟ್ಟರ್ ಇಸ್ಲಾಮಿಕ್ ದೇಶವಾದ ಸೌದೀ ಅರೇಬಿಯಾಕ್ಕೂ ಭೇಟಿ ನೀಡಿದ ಮೋದಿ ಭಾರತದ ಪ್ರಭಾವವನ್ನು ಆ ದೇಶದಲ್ಲೂ ಹೆಚ್ಚಿಸಿದ್ದಾರೆ. ಇರಾನ್, ಪ್ಯಾಲೆಸ್ತೀನ್, ಜರ್ಮನಿ, ಬ್ರೆಜಿಲ್, ರಷ್ಯಾ ಮುಂತಾದ ದೇಶಗಳಿಗೆ ಭೇಟಿ ನೀಡಿ ಆ ದೇಶಗಳೊಡನೆ ಭಾರತದ ಸಂಬಂಧವನ್ನು ವೃದ್ಧಿಸಿದ್ದಾರೆ ಮೋದಿ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾಗಳನ್ನೊಳಗೊಂಡ ಬ್ರಿಕ್ಸ್(BRICS) ಬ್ಯಾಂಕ್ ರಚನೆ ಆಗಿರಬಹುದು, G8 ರಾಷ್ಟ್ರಗಳ ಸಭೆ ಆಗಿರಬಹುದು, ಆಸಿಯಾನ್ ರಾಷ್ಟ್ರಗಳ ಸಭೆ ಆಗಿರಬಹುದು, ವಿಶ್ವ ಸಂಸ್ಥೆಯ ಸಭೆ ಆಗಿರಬಹುದು ಅಲ್ಲೆಲ್ಲಾ ಮೋದಿ ಭಾರತದ ಛಾಪನ್ನು ಮೂಡಿಸಿದ್ದಾರೆ.
ಮೋದಿ ವಿದೇಶಗಳಿಗೆ ತೆರಳುವಾಗ ಆ ದೇಶಗಳ ಉದ್ಯಮಿಗಳನ್ನು, ಉದ್ಯಮಗಳ ಸಿಇಓಗಳನ್ನು ಭೇಟಿಯಾಗುತ್ತಾರೆ. ಭಾರತ ದೇಶದಲ್ಲಿ ಹೂಡಿಕೆ ಮಾಡಲಿರುವ ಸದವಕಾಶಗಳನ್ನು ವಿವರಿಸಿ ಅವರನ್ನು ಹೂಡಿಕೆ ಮಾಡಲು ಪ್ರೇರೇಪಿಸುತ್ತಾರೆ. ನಮ್ಮ ದೇಶದ ಉದ್ಯಮಿಗಳ ಆಯೋಗವನ್ನು ತಮ್ಮ ಜೊತೆಗೆ ಕೊಂಡೊಯ್ದು ಅವರ ವಹಿವಾಟನ್ನು ಆಯಾ ದೇಶಗಳಲ್ಲಿ ಹೆಚ್ಚಿಸಿಕೊಳ್ಳುವ ವೇದಿಕೆಯನ್ನು ಸೃಷ್ಟಿಮಾಡಿಕೊಡುತ್ತಾರೆ.
ಮೇಕ್ ಇನ್ ಇಂಡಿಯಾದ ಮಂತ್ರದೊಂದಿಗೆ ಮೋದಿ ಕೈಗೊಂಡ ವಿದೇಶ ಯಾತ್ರೆಗಳ ಫಲವಾಗಿ ವಿಶ್ವಪ್ರಸಿದ್ಧ ತಯಾರಿಕಾ ಸಂಸ್ಥೆಗಳು ಭಾರತದಲ್ಲಿ ಹೇರಳವಾಗಿ ಹೂಡಿಕೆ ಮಾಡಿ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡುತ್ತಿವೆ. 2014 ರ ಮೊದಲು ವಾರ್ಷಿಕವಾಗಿ ಕೇವಲ 15 ರಿಂದ 20 ಬಿಲಿಯನ್ ಡಾಲರ್ ನಷ್ಟು ವಿದೇಶೀ ಹೂಡಿಕೆಯಾಗುತ್ತಿದ್ದು ಇದು 2017 ರಲ್ಲಿ ಮೂರು ಪಟ್ಟು ಹೆಚ್ಚಾಗಿ 60 ಬಿಲಿಯನ್ ಡಾಲರ್ ಗೆ ಏರಿದೆ. ಭಾರತೀಯರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸಿಗುತ್ತಿದೆ. ಅಮೇರಿಕಾ, ಇಸ್ರೇಲ್, ಫ್ರಾನ್ಸ್, ರಷ್ಯಾ ಮುಂತಾದ ದೇಶಗಳೊಡನೆ ಮಾಡಿಕೊಂಡ ರಕ್ಷಣಾ ಒಪ್ಪಂದಗಳು ಭಾರತದ ಭದ್ರತೆಯನ್ನು ಹೆಚ್ಚಿಸಿದರೆ, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾಗಳಂತಹ ದೇಶಗಳೊಂದಿಗಿನ ಸಂಬಂಧದಿಂದ ದೇಶದ ತಂತ್ರಜ್ಞಾನದಲ್ಲಿ ಪ್ರಗತಿ ಉಂಟಾಗಿದೆ.
ಮೋದಿ ಯಾವುದೇ ದೇಶಕ್ಕೆ ಹೋದರೂ ಆ ದೇಶದಲ್ಲಿರುವ ಅನಿವಾಸಿ ಭಾರತೀಯರ ಜೊತೆಗೆ ಸಂವಹನ ಮಾಡುತ್ತಾರೆ. ಅಮೇರಿಕದ ಮ್ಯಾಡಿಸನ್ ಸ್ಕ್ವೇರ್ನಲ್ಲಿ, ಲಂಡನ್ನ ವೆಂಬ್ಲೆ ಸ್ಟೇಡಿಯಂನಲ್ಲಿ, ದುಬಾಯಿಯಲ್ಲಿ, ಆಸ್ಟ್ರೇಲಿಯಾದಲ್ಲಿ, ಕೆನಡಾದಲ್ಲಿ, ನೇಪಾಳದಲ್ಲಿ ಎಲ್ಲೇ ಯಾವುದೇ ದೇಶವಾಗಿರಲಿ ಅಲ್ಲಿನ ಭಾರತೀಯ ಸಂಜಾತರು ಮೋದಿಗೆ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಮೋದಿ ಅನಿವಾಸಿ ಭಾರತೀಯರನ್ನು ಆದರಿಸಿ,ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಆಯಾ ದೇಶಗಳ ಜೊತೆಗೆ ಭಾರತದ ಸಂಬಂಧವನ್ನು ವೃದ್ಧಿಸುವ ರಾಯಭಾರಿಗಳನ್ನಾಗಿಸುತ್ತಾರೆ.
ಮೋದಿಯ ನಾಯಕತ್ವದಲ್ಲಿ ದೇಶವು ತನ್ನ ಪ್ರಭಾವವನ್ನು ಇತರ ದೇಶಗಳ ಮೇಲೆ ಪಸರಿಸಲು ತನ್ನ ಸಾಫ್ಟ್ಪವರ್ನ್ನು ಬಳಸುತ್ತಿದೆ. ಭಾರತೀಯ ಯೋಗ ಪರಂಪರೆಯನ್ನು ವಿಶ್ವಕ್ಕೇ ಪ್ರಚುರಪಡಿಸಿ ಪ್ರತೀ ವರ್ಷದ ಜೂನ್ 21 ನ್ನು ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸುವಂತೆ ಮಾಡಿದ ಕೀರ್ತಿ ಮೋದಿಯ ವಿದೇಶಾಂಗ ನೀತಿಗೇ ಸಲ್ಲುತ್ತದೆ. ಇಂದು ವಿಶ್ವದ 190 ಕ್ಕೂ ಹೆಚ್ಚಿನ ರಾಷ್ಟ್ರಗಳು ವಿಶ್ವ ಯೋಗದಿನವನ್ನಾಚರಿಸುತ್ತಿವೆ.
ಮೋದಿಯ ವಿದೇಶಾಂಗ ನೀತಿಯಲ್ಲಿ ಆಳವಾದ ಅಧ್ಯಯನವಿದೆ, ಚಾಣಾಕ್ಷತನವಿದೆ, ಕೌಶಲ್ಯವಿದೆ, ಸಮರ್ಥ ನಾಯಕತ್ವವಿದೆ, ಕ್ರಿಯಾಶೀಲತೆ ಇದೆ. ಎಲ್ಲದಕ್ಕೂ ಮಿಗಿಲಾಗಿ ಇಂಡಿಯಾ ಫಸ್ಟ್ ಎನ್ನುವ ಬದ್ಧತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.