ಜಸ್ಟೀಸ್ ಲೋಯಾ ಸಾವಿನ ಪ್ರಕರಣದ ಕುರಿತಾಗಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ ಮಾಡಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಸಲ್ಲಿತವಾಗಿದ್ದ ಅರ್ಜಿಯನ್ನು ಇದೊಂದು ರಾಜಕೀಯ ಪ್ರೇರಿತ ದುರುದ್ದೇಶಪೂರಿತ ಅರ್ಜಿ ಎಂದು ಹೇಳಿ ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ. ಮೊದಲು ಅಮಿತ್ ಷಾ ಮೇಲಿನ ಯಾವುದೋ ಆರೋಪದ ತನಿಖೆಯನ್ನು ಜಸ್ಟೀಸ್ ಲೋಯಾ ಮಾಡಿದ್ದರು. ಕೆಲಕಾಲ ಹಿಂದೆ ಜಸ್ಟೀಸ್ ಲೋಯಾ ಆಕಸ್ಮಿಕವಾಗಿ ನಿಧನಹೊಂದಿದ್ದರು. ಲೋಯಾ ಪುತ್ರರು ಕೂಡಾ ಇದೊಂದು ಆಕಸ್ಮಿಕ ಮರಣವೇ ಹೊರತು ಕೊಲೆಯಲ್ಲ ಎಂಬುದನ್ನು ಸ್ಪಷ್ಟೀಕರಿಸಿದ್ದರು. ಆದರೆ ಜಸ್ಟೀಸ್ ಲೋಯಾ ಸಾವನ್ನು ನೆಪವಾಗಿಸಿ ಈ ಮೊದಲು ಲೋಯಾ ಅಮಿತ್ ಷಾ ಮೇಲೆ ತನಿಖೆ ನಡೆಸಿದ ದ್ವೇಷದಿಂದ ಜಸ್ಟಿಸ್ ಲೋಯಾರನ್ನು ಹತ್ಯೆ ಮಾಡಲಾಗಿದೆ ಎಂದು ನರೇಂದ್ರ ಮೋದಿ ವಿರೋಧಿ ಪ್ರಗತಿಪರರು, ಪ್ರಶಾಂತ್ ಭೂಷಣ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕಪಿಲ್ ಸಿಬಲ್ ಮುಂತಾದವರು ಬೊಬ್ಬೆ ಹಾಕಿ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ಈ ಕುರಿತು ಅಹವಾಲನ್ನೂ ಸಲ್ಲಿಸಿದ್ದರು. ಜೊತೆಗೆ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನೂ ಹಾಕಿದ್ದರು. ಇದಿಗ ಬಂದ ಸುಪ್ರೀಂ ಕೋರ್ಟಿನ ಆದೇಶದಿಂದ ಇವರೆಲ್ಲರ ಹುರುಳಿಲ್ಲದ ಆರೋಪವನ್ನು ನ್ಯಾಯಾಲಯವೂ ತಿರಸ್ಕರಿಸಿದಂತಾಗಿದೆ.
ಮೆಕ್ಕಾ ಮಸೀದಿಯ ಮೇಲೆ, ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ನಲ್ಲಿ ಸಂಭವಿಸಿದ್ದ ಬಾಂಬು ಸ್ಫೋಟದ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ ಸಾದ್ವಿ ಪ್ರಗ್ಯಾ, ಕರ್ನಲ್ ಪುರೊಹಿತ್ ಹಾಗೂ ಸ್ವಾಮೀ ಅಸೀಮಾನಂದ ಅವರನ್ನು ಯುಪಿಎ ಸರಕಾರದ ಕಾಲದಲ್ಲಿ ಬಂಧಿಸಲಾಗಿತ್ತು. ಮುಸಲ್ಮಾನರು ಭಯೋತ್ಪಾದನೆ ಮಾಡಿದಾಗ ಇಸ್ಲಾಂಗೆ ಭಯೋತ್ಪಾದನೆಯನ್ನು ತಳುಕು ಹಾಕಬೇಡಿ ಎಂದಿದ್ದರು ಕಾಂಗ್ರೆಸ್ಸಿಗರು. ಆದರೆ ಮೆಕ್ಕಾ ಮಸೀದಿಯ ಮೇಲೆ, ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ನಲ್ಲಿ ಸಂಭವಿಸಿದ್ದ ಬಾಂಬು ಸ್ಫೋಟದ ಪ್ರಕರಣದಲ್ಲಿ, ಸಾದ್ವಿ ಪ್ರಗ್ಯಾ, ಕರ್ನಲ್ ಪುರೊಹಿತ್ ಹಾಗೂ ಸ್ವಾಮೀ ಅಸೀಮಾನಂದ ಅವರನ್ನು ಬಂಧಿಸಿದ ಅಂದಿನ ಕಾಂಗ್ರೆಸ್ ಸರಕಾರ ಕೇಸರಿ ಭಯೋತ್ಪಾದನೆ/ ಹಿಂದೂ ಭಯೋತ್ಪಾದನೆ ಎಂಬ ಹೊಸ ಶಬ್ದ ಪ್ರಯೋಗವನ್ನು ಮಾಡಿತ್ತು. ಕಾಂಗ್ರೆಸ್ನ ಮುಖಂಡರಾದ ರಾಹುಲ್ ಗಾಂಧಿ, ಚಿದಂಬರಂ, ದಿಗ್ವಿಜಯ್ ಸಿಂಗ್ ಮುಂತಾದವರು ಈ ಪದಪ್ರಯೋಗವನ್ನು ಮಾಡಿದವರಲ್ಲಿ ಮೊದಲಿಗರು. ಕೆಲ ತಿಂಗಳುಗಳ ಹಿಂದೆಯೇ ಈ ಪ್ರಕರಣದಲ್ಲಿ ಸಾಧ್ವೀ ಪ್ರಗ್ಯಾ ಹಾಗೂ ಕರ್ನಲ್ ಪುರೊಹಿತ್ ಅವರ ಬಿಡುಗಡೆಯಾಗಿತ್ತು. ಮೊನ್ನೆ ಸ್ವಾಮೀ ಅಸೀಮಾನಂದರ ಬಿಡುಗಡೆಯೂ ಆಯಿತು. ಮೆಕ್ಕಾ ಮಸೀದಿಯ ಮೇಲೆ, ಹಾಗೂ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಪ್ರಕರಣದಲ್ಲಿ, ಸಾಧ್ವೀ ಪ್ರಗ್ಯಾ, ಕರ್ನಲ್ ಪುರೊಹಿತ್ ಹಾಗೂ ಸ್ವಾಮೀ ಆಸೀಮಾನಂದರ ಯಾವುದೇ ಪಾತ್ರವಿಲ್ಲ ಎಂಬುದೂ ಕೋರ್ಟ್ನಲ್ಲಿ ಸಾಬೀತಾಯಿತು. ಕೇಸರಿ ಭಯೋತ್ಪಾದನೆ ಎನ್ನುವ ಆರೋಪವೂ ಸುಳ್ಳು ಎಂದು ಸಾಬೀತಾಯಿತು. ಆದರೆ ಕೇಸರಿ ಭಯೋತ್ಪಾದನೆ ಎಂದು ಹುಯಿಲೆಬ್ಬಿಸಿದ್ದವರು ದಿವ್ಯ ಮೌನಕ್ಕೆ ಶರಣಾದರು.
ನರೇಂದ್ರ ಮೋದಿಗೆ ಸುಳ್ಳು ಆರೋಪಗಳು ಹೊಸತೇನಲ್ಲ. ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗಲೇ ಇಲ್ಲ ಸಲ್ಲದ ಆರೋಪಗಳು ಅವರ ಮೇಲೆ ಬಂದಿತ್ತು. ಕಾಂಗ್ರೆಸ್ ನಾಯಕಿ ಸೊನಿಯಾ ಗಾಂಧಿ, ಮೋದಿಯನ್ನು ಮೌತ್ ಕೀ ಸೌದಾಗರ್ (ಸಾವಿನ ವ್ಯಾಪಾರಿ) ಎಂದು ಕರೆದಿದ್ದರು. ಸುಪ್ರೀಂ ಕೋರ್ಟ್ನ ಎಸ್ ಐ ಟಿ ಯೇ ತನಿಖೆ ಮಾಡಿ ಮೋದಿಗೆ ಕ್ಲೀನ್ ಚಿಟ್ ಕೊಟ್ಟಾಗ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಕೈವಾಡ ಇದೆ ಎಂಬ ಕಾಂಗ್ರೆಸ್ ಹಾಗೂ ಎಡಪರ ಬುದ್ಧಿ ಜೀವಿಗಳ ಬಹುಕಾಲಗಳ ಆರೋಪವು ಕರಗಿಹೋಗಿತ್ತು.
ಪ್ರಧಾನ ಮಂತ್ರಿಯಾದ ಮೇಲೂ ಇಂತಹ ಆರೋಪಗಳು ಮೋದಿಯ ಮೇಲೆ ಮುಂದುವರಿಯುತ್ತಲೇ ಹೋಯಿತು. ಸುದ್ದಿಗಳನ್ನು ತಿರುಚಿ, ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಿ ಮೋದಿ ಸರಕಾರದ ಮೇಲೆ, ಆರ್ಎಸ್ಎಸ್ನ ಮೇಲೆ ಅಪವಾದಗಳನ್ನು ಹೊರಿಸುವುದು ನಿತ್ಯ ನಡೆಯಿತು. ರಾಜ್ಯಗಳ ಚುನಾವಣೆಗಳು ಸಮೀಪಿಸಿದಾಗ ಇಂತಹ ಪ್ರಕ್ರಿಯೆಗಳು ಜೋರಾಗಿ ನಡೆದವು. ಅಖಿಲೇಶ್ ಯಾದವ್ನ ಆಡಳಿತವಿದ್ದಾಗ ಅಖ್ಲಾಖ್ ಎಂಬ ಮುಸಲ್ಮಾನ ವ್ಯಕ್ತಿಯ ಹತ್ಯೆಯು ಉತ್ತರಪ್ರದೇಶದಲ್ಲಿ ನಡೆದಾಗ ಅದಕ್ಕೆ ಮೋದಿ ಸರಕಾರವನ್ನು ತಳುಕುಹಾಕಲಾಯಿತು. ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂದು ಗುಲ್ಲೆಬ್ಬಿಸಿ ಮಾಧ್ಯಮಗಳಲ್ಲಿ ನಿರಂತರ ಚರ್ಚೆಯಾಗುವಂತೆ ನೋಡಿಕೊಳ್ಳಲಾಯಿತು. ಜೊತೆಗೆ ಸಾಹಿತಿಗಳ ಅವಾರ್ಡ್ ವಾಪ್ಸಿ, ಅಮೀರ್ಖಾನ್ನಂತವರ ಹೇಳಿಕೆ ಬೇರೆ. ತದನಂತರ ಹರ್ಯಾಣಾದಲ್ಲಿ ರೈಲಿನಲ್ಲಿ ಜುನೈದ್ ಎನ್ನುವ ಹುಡುಗನ ಕೊಲೆಯಾಯಿತು. ಮುಸಲ್ಮಾನನಾದ ಕಾರಣ ಅವನನ್ನು ಹಿಂದೂಗಳು ಕೊಂದರು ಎಂದು ಪ್ರಚಾರ ಶುರುವಾಯಿತು. ಮಾಧ್ಯಮಗಳಲ್ಲಿ, ಟ್ವೀಟ್ಟರ್ನಲ್ಲಿ ಇನ್ನೊಮ್ಮೆ ಭಾರೀ ಸದ್ದಾಯಿತು. ಬುದ್ಧಿಜೀವಿಗಳು ಟೌನ್ಹಾಲ್ ಸಮ್ಮೆಳನ ಮಾಡಿದ್ದೇ ಮಾಡಿದ್ದು. ಸರಿಯಾದ ತನಿಖೆಯಾದ ನಂತರ ತಿಳಿದುಬಂದದ್ದೇನೆಂದರೆ ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳ ಜುನೈದ್ನ ಸಾವಿನ ಕಾರಣ ಎಂದು. ಆವಾಗ ಪ್ರತಿಭಟನಾಕಾರರ, ಅವಾರ್ಡ್ ವಾಪ್ಸಿಗಳ ಸುದ್ದಿಯೇ ಇಲ್ಲ. ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನ ವಿಚಾರದಲ್ಲೂ ಹೀಗೇ ಆಯಿತು. ರೋಹಿತ್ನ ಆತ್ಮಹತ್ಯೆಗೆ ಎಬಿವಿಪಿ ಕಾರಣ, ಯುನಿವರ್ಸಿಟಿ ಕಾರಣ, ಆಗಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಕಾರಣ, ಮೋದಿ ಕಾರಣ ಎಂದು ಗದ್ದಲವೆಬ್ಬಿಸಲಾಯಿತು, ಬಿಜೆಪಿ ದಲಿತ ವಿರೋಧಿ ಎಂದೂ ಬಿಂಬಿಸುವ ಪ್ರಯತ್ನ ನಡೆಯಿತು. ನಂತರ ತಿಳಿದುಬಂದ ಮಾಹಿತಿಯ ಪ್ರಕಾರ ರೋಹಿತ್ ವೆಮುಲ ದಲಿತನೇ ಅಲ್ಲ, ಆತ ಅತ್ಮಹತ್ಯೆ ಮಾಡಿಕೊಂಡದ್ದು ಖಿನ್ನತೆಯಿಂದ ಎಂಬ ಸತ್ಯವು ಬಯಲಾಯಿತು. ಆಗ ಪುನಃ ಬುದ್ಧಿಜೀವಿಗಳ ದಿವ್ಯ ಮೌನ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗೌರೀ ಲಂಕೇಶ್ ಹತ್ಯೆಯಾದಾಗ, ಪ್ರೊ. ಕಲ್ಬುರ್ಗಿ ಹತ್ಯೆಯಾದಾಗ ನೇರವಾಗಿ ಹಿಂದೂ ಸಂಘಟನೆಗಳ ಮೇಲೆ, ಮೋದಿ ಮೇಲೆ ಬೆರಳು ತೋರಿಸಲಾಯಿತು.
ಇದೀಗ ಜಮ್ಮು ಕಾಶ್ಮೀರದಲ್ಲಿನ ಪುಟ್ಟ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ವಿಚಾರವಾಗಿ ಆರೋಪವನ್ನು ಇಡೀ ಹಿಂದೂ ಧರ್ಮಕ್ಕೇ ಹಾಗೂ ಮೋದೀ ಸರಕಾರಕ್ಕೆ ಕಟ್ಟುವ ಹುನ್ನಾರವೂ ನಡೆಯಿತು. ಬರ್ಖಾದತ್, ರಾಜ್ ದೀಪ್ ಸರ್ದೇಸಾಯಿ ಮುಂತಾದ ಪತ್ರಕರ್ತರು ಪ್ರಕಟಿಸಿದ ಅತಿರಂಜಿತ ವರದಿಗಳೂ ಜನರನ್ನು ಉತ್ತೇಜಿಸಿದವು. ಬಾಲಿವುಡ್ ನಟ ನಟೀಮಣಿಯರೆಲ್ಲಾ ಹಿಂದುಸ್ಥಾನಿ ಎನ್ನಲು ನಾಚಿಗೆಯಾಗುತ್ತದೆ ಎಂಬ ರೀತಿಯಲ್ಲಿ ಹೇಳಿಕೆಯನ್ನೂ ಕೊಟ್ಟರು. ಟ್ವಿಟರ್ನಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್ ಕೂಡಾ ಆಯಿತು. ಈಗ ಇದರ ತನಿಖೆ ಶುರುವಾಗಿದೆ. ಸ್ವಲ್ಪಕಾಲದಲ್ಲೇ ಸತ್ಯಾಂಶ ಹೊರ ಬರಲಿದೆ. ಸತ್ಯಾಂಶ ಹೊರ ಬಂದಾಗ ಈ ಮೊದಲು ಪ್ರತಿಭಟಿಸಿದ್ದವರು, ಆರೋಪ ಮಾಡಿದ್ದವರು ಸುಮ್ಮನಾಗುವ ಬದಲು ಅರೋಪ ಮಾಡಲು ಇನ್ನೊಂದು ಪ್ರಕರಣವನ್ನು ಹುಡುಕಲು ಆರಂಭಿಸುತ್ತಾರೆ.
ಅಂತೂ ಕಾಲ ಕಾಲಕ್ಕೆ ಎಲ್ಲಾ ಆರೋಪಗಳನ್ನೂ ಮೋದಿಯ ಮೇಲೆಯೇ ಹಾಕುವ ಹುನ್ನಾರ ನಡೆದಿದೆ. ಇನ್ನೂ ನಡೆಯಲಿದೆ. ಆದರೆ ಪ್ರತೀ ಬಾರಿ ಆರೋಪಗಳು ಸುಳ್ಳೆಂದು ಸಾಬೀತಾಗಿ ಗುಳ್ಳೆಯಂತೆ ಒಡೆದುಹೋಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.