ಕಪ್ಪುಹಣವನ್ನು ತೊಲಗಿಸುತ್ತೇನೆ ಎನ್ನುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮೊದಲ ನಿರ್ಣಯವೇ ಕಪ್ಪು ಹಣದ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ಸುಪರ್ದಿಯಲ್ಲಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (SIT) ರಚನೆ ಮಾಡುವುದು ಆಗಿತ್ತು. ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಮೋದಿ ಸರಕಾರ ಅಂದಿನಿಂದ ಇಂದಿನವರೆಗೂ ಒಂದು ನಿಮಿಷವನ್ನೂ ಹಾಳುಮಾಡಲಿಲ್ಲ. 2015 ನೇ ಇಸವಿಯಲ್ಲಿ ಕಪ್ಪು ಹಣವುಳ್ಳವರಿಗೆ “ಸ್ವಯಂ ಕಪ್ಪು ಹಣ ಘೋಷಿಸುವ “ಅವಕಾಶವನ್ನು ಕೇಂದ್ರ ಸರಕಾರವು ಕೊಟ್ಟಿತು. ಈ ಅವಕಾಶದಲ್ಲಿ ಕಪ್ಪು ಹಣವುಳ್ಳ ಜನರು ತಾವು ಇದುವರೆಗೆ ತೆರಿಗೆ ಕಟ್ಟದೆ ಸಂಗ್ರಹಿಸಿಕೊಂಡು ಬಂದ ಹಣ ಹಾಗೂ ಆಸ್ತಿಯ ಪ್ರಮಾಣದ ಕುರಿತು ಸರಕಾರಕ್ಕೆ ಮಾಹಿತಿ ಕೊಟ್ಟು ಒಟ್ಟು ಮೌಲ್ಯದ ಶೇಕಡಾ 40 ರನ್ನು ಸರಕಾರಕ್ಕೆ ತೆರಿಗೆಯಾಗಿ ಕೊಟ್ಟು ಉಳಿದ 60% ವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ಇದರ ಪರಿಣಾಮವಾಗಿ ಸಾವಿರಾರು ಮಂದಿ ಕಾಳಧನಿಕರು 31 ಆಗಸ್ಟ್ 2016 ರ ಮೊದಲು ತಮ್ಮಲ್ಲಿದ್ದ 65, 250 ಕೋಟಿ ರೂಪಾಯಿಗಳ ಕಾಳಧನವನ್ನು ಸರಕಾರದೊಡನೆ ಗೌಪ್ಯವಾಗಿ ಹಂಚಿ ಕೊಂಡು ಘೋಷಿಸಿಕೊಂಡರು. 40:60 ಶೇಕಡಾ ಹಂಚಿಕೆಯ ಒಪ್ಪಂದದ ಅನುಸಾರವಾಗಿ ಅನುಸಾರವಾಗಿ ಸರಕಾರಕ್ಕೆ 40% ಅಂದರೆ 30,000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ತೆರಿಗೆ ಹರಿದು ಬಂತು.
ಆದರೂ ಬಹಳಷ್ಟು ಜನ ಬುದ್ಧಿವಂತ(?) ಕಾಳಧನಿಕರು ಕಪ್ಪುಹಣವನ್ನು ಘೋಷಿಸದೆಯೇ ಸುಮ್ಮನೇ ಕುಳಿತರು. ಇದನ್ನು ಪರಿಹರಿಸಲು ಮೋದಿ ಸರಕಾರ 8 ನವೆಂಬರ್ 2016 ರಂದು ಹೂಡಿದ ಬ್ರಹ್ಮಾಸ್ತ್ರವೇ ನೋಟ್ ಬ್ಯಾನ್. ಡಿಮಾನೆಟೈಸೇಷನ್ ನಂತರ ಆರ್ಬಿಐ ಅದುವರೆಗೂ ಬಿಡುಗಡೆ ಮಾಡಿದ್ದ ರೂ. 500 ಹಾಗೂ 1000 ರೂಪಾಯಿಗಳ ನೋಟುಗಳಲ್ಲಿ ಸುಮಾರು 16,35,000 ಕೋಟಿ ಮೌಲ್ಯದ 99% ನೋಟುಗಳೂ ಬ್ಯಾಂಕ್ ಅಕೌಂಟ್ಗಳ ಮೂಲಕ ಹರಿದು ಬಂದವು. ಆದರೆ ಅವುಗಳಲ್ಲಿ 23.22 ಲಕ್ಷ ಅಕೌಂಟ್ಗಳ ಮೂಲಕ ರೂ. 3.68 ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕ್ಗೆ ಹಾಕಲಾದ 17.73 ಲಕ್ಷ ಅನುಮಾನಾಸ್ಪದ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಇವರೆಲ್ಲರೂ ನೋಟ್ ಬ್ಯಾನ್ ಆದ ನಂತರ ರೂಪಾಯಿ 2.5 ಲಕ್ಷದಿಂದ 25 ಲಕ್ಷಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ನಿಷೇಧಿತ ನೋಟನ್ನು ಬ್ಯಾಂಕ್ನಲ್ಲಿ ಹಾಕಿದವರು ಜೊತೆಗೆ ಇವರಾರೂ ಇದುವರೆಗೆ ಆದಾಯ ತೆರಿಗೆ ಪಾವತಿ ಮಾಡಿದವರಲ್ಲ. ಬ್ಯಾಂಕ್ನ ಅಕೌಂಟಿನಲ್ಲಿ ಈ ಮೊತ್ತವನ್ನು ಈಗಾಗಲೇ ಡೆಪಾಸಿಟ್ ಮಾಡಿರುವ ಈ ತೆರಿಗೆ ಕಳ್ಳರು ಹಗ್ಗ ಕೊಟ್ಟು ಕೈ ಕಟ್ಟಿಸಿದ ಹಾಗೆ ಆಗಿದೆ. ಸರಕಾರ ಇವರೆಲ್ಲರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ತೆರಿಗೆ ಕಳ್ಳರಿಗೆ 200% ದಂಡ ವಿಧಿಸಲಾಗುತ್ತಿದೆ. ಹಾಗಾಗಿ 3.68 ಲಕ್ಷ ಕೋಟಿ ರೂಪಾಯಿಗಳು ಕೂಡಾ ಸರಕಾರಕ್ಕೆ ಹಿಂತಿರುಗಲಿದೆ. ಹೀಗಾಗಿ ಮೊದಲು ಕಪ್ಪು ಹಣ ಘೋಷಿಸಿದವರ 30 ಸಾವಿರ ಕೋಟಿ ರೂಪಾಯಿಗಳು ಹಾಗೂ ಡಿಮಾನೆಟೈಸೇಷನ್ ನಂತರ ಅನುಮಾನಾಸ್ಪದ ಅಕೌಂಟ್ಗಳಲ್ಲಿ ಕ್ರೋಢೀಕೃತ ಮೊತ್ತ ಸುಮಾರು 3.68 ಲಕ್ಷ ಕೋಟಿಗಳು ಸೇರಿ ಸರಕಾರಕ್ಕೆ ರೂಪಾಯಿ 4 ಲಕ್ಷ ಕೋಟಿಗಳ ಕಪ್ಪು ಹಣವು ಲಭಿಸಿದಂತಾಗುತ್ತದೆ. ಡಿಮಾನೆಟೈಸೇಷನ್ ನಂತರ 3 ಲಕ್ಷಕ್ಕಿಂತಲೂ ಬೋಗಸ್ ಕಂಪೆನಿಗಳ ನೊಂದಾವಣೆಯನ್ನು ಸರಕಾರವು ರದ್ದು ಮಾಡಿದೆ. ಈ ಫೇಕ್ ಕಂಪೆನಿಗಳು ಬ್ಯಾಂಕ್ನಲ್ಲಿ ಜಮೆ ಮಾಡಿದ್ದ 37500 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಯಾರೂ ಕೂಡಾ ವಾರಸುದಾರರು ಮುಂದೆ ಬಂದಿಲ್ಲ. ಆ ಕಪ್ಪು ಹಣವೂ ಕೂಡಾ ಸರಕಾರದ ಸ್ವಾಧೀನವಾಗಲಿದೆ. ಈ ಮೊತ್ತವೂ ಸೇರಿದರೆ ಒಟ್ಟಿನಲ್ಲಿ 4.35 ಲಕ್ಷ ಕೋಟಿ ರೂಪಾಯಿ ಕಪ್ಪು ಹಣವು ದೇಶೀಯವಾಗಿಯೇ ಪತ್ತೆ ಹಚ್ಚಲ್ಪಟ್ಟು ಸರಕಾರಕ್ಕೆ ಸಿಗಲಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಷ್ಟು ದೊಡ್ಡ ಹಂತದಲ್ಲಿ ಇಷ್ಟು ವ್ಯವಸ್ಥಿತವಾಗಿ ಕಪ್ಪುಹಣದ ವಿರುದ್ಧ ಕಾರ್ಯಾಚರಣೆ ನಡೆದದ್ದೂ ಅದು ಈ ಮಟ್ಟಿಗೆ ಯಶಸ್ವಿಯಾದದ್ದೂ ಇದೇ ಮೊದಲು.
ಇನ್ನು ವಿದೇಶೀ ಬ್ಯಾಂಕ್ಗಳಲ್ಲಿರುವ ಕಪ್ಪುಹಣವನ್ನು ಪತ್ತೆ ಹಚ್ಚಲು ಸರಕಾರವು ಭಾರೀ ಕ್ರಮಗಳನ್ನು ಕೈಗೊಂಡಿದೆ. ಭಾರತದ ಸತತ ಒತ್ತಡದ ಪರಿಣಾಮವಾಗಿ ಸ್ವಿಸರ್ಲ್ಯಾಂಡ್ ಸರಕಾರವು ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಬಚ್ಚಿಟ್ಟ ಭಾರತೀಯರ ಪಟ್ಟಿಯನ್ನು ಕೊಡಲು ಒಪ್ಪಿದೆ. ಭಾರತ ಸರಕಾರದ ಚತುರ ವಿದೇಶಾಂಗ ನೀತಿಯ ಫಲವಾಗಿ ತೆರಿಗೆ ಸ್ವರ್ಗವೆಂದು ಗುರುತಿಸಲಾದ ಸಿಂಗಾಪುರ, ದುಬೈ, ಮಾರಿಷಸ್ ಮುಂತಾದ ದೇಶಗಳೂ ತಮ್ಮ ದೇಶದಲ್ಲಿ ಭಾರತೀಯರು ಹೂಡಿಕೆ ಮಾಡಿದ ಕಪ್ಪುಹಣದ ಮಾಹಿತಿಯನ್ನು ಭಾರತಕ್ಕೆ ಕೊಡಲು ಒಪ್ಪಿವೆ. ಈ ಪ್ರಕ್ರಿಯೆಯು ತುಸು ಕಠಿಣ ಹಾಗೂ ಹೆಚ್ಚು ಸಮಯವನ್ನು ವಿನಿಯೋಗಿಸುವುದಾದರೂ ವಿದೇಶೀ ಬ್ಯಾಂಕ್ಗಳಲ್ಲಿನ ಕಪ್ಪು ಹಣವನ್ನು ಹಿಂಪಡೆಯುವಲ್ಲಿ ಮೇಲೆ ಹೇಳಿದ ಭಾರತ ಸರಕಾರದ ಸಾಧನೆಯು ಮಹತ್ತರವಾದುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.