ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ‘ಹೆಣ್ಣು ಕಾಳಿಯ ಸ್ವರೂಪಿ’ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ ಶಕ್ತಿ ಎಂಬ ತತ್ವ ಚಿಂತನೆ ನಮ್ಮದು.
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂಬ ಉದಾತ್ತ ಭಾವನೆಯನ್ನು ಜಗತ್ತಿಗೆ ಸಾರಿ ಹೇಳುವ ಸನಾತನ ಸಂಸ್ಕೃತಿಯ ನಾಡು ನಮ್ಮದು. ಜನ್ಮ ನೀಡಿದ ಪುಣ್ಯಭೂಮಿಯನ್ನು ತಾಯಿಯ ಸ್ಥಾನದಲ್ಲಿ ಇಟ್ಟು ಪೂಜಿಸುವ ಮಂದಿ ನಾವು.
ಭಾರತೀಯ ಮಹಿಳೆ ಪ್ರಾಚೀನ ಹಾಗು ಆಧುನಿಕ ಜಗತ್ತಿನಲ್ಲಿ ನಮ್ಮ ಸಮಾಜದ ಹಾಗು ಸಂಸ್ಕೃತಿಯ ಪರಿಪಾಲನೆ ಮಾಡುತ್ತ ಬಂದಿರುವುದು ಅತ್ಯಂತ ವಿಶೇಷ ಸಂಗತಿ. ನಾನಾಬಗೆಯ ಸಂದರ್ಭಗಳಲ್ಲಿ ಅವಳ ಸ್ಥಾನಮಾನ ಬೆಳವಣಿಗೆ ಹಾಗು ಆಕೆಯ ಉನ್ನತಿಗಾಗಿ ತನ್ನ ಜೀವವನ್ನೇ ತೇಯ್ದ ಅಕ್ಕ ನಿವೇದಿತಾಳನ್ನು ನಾವಿಂದು ಸ್ಮರಿಸಲೇಬೇಕು.
ಅಕ್ಕ ಇಲ್ಲಿನ ಹೆಣ್ಣು ಮಕ್ಕಳ ಸೇವೆ ಸಲ್ಲಿಸಲು ತನ್ನದೆಲ್ಲವನ್ನು ಬಿಟ್ಟು ದೂರದ ಐರ್ಲೆಂಡ್ನಿಂದ ಭಾರತಕ್ಕೆ ಬಂದು ಇಲ್ಲಿ ನಮ್ಮದೇ ಆದ ರೀತಿಯ ಜೀವನ ನಡೆಸಿ ಇಲ್ಲಿನವರಗಿಂತಲು ಹೆಚ್ಚು ಭಾರತಕ್ಕಾಗಿ ಬದುಕಿದಳು ದುಡಿದಳು. ಕಲ್ಕತ್ತಾದಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸಿದಳು. ಅದರಲ್ಲಿ ಭಾರತೀಯ ರೀತಿಯ ಶಿಕ್ಷಣ ನೀಡಿದಳು. ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸ ದೊಡ್ದವರಿಗೆ ರಾಷ್ಟ್ರೀಯತೆ, ಚಂಡೀಪಾಠ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತಿತ್ತು. ಆ ಕಾಲದಲ್ಲಿ ವಿಧವೆಯರನ್ನು ಮನೆಯಿಂದ ಆಚೆ ಕರೆದುಕೊಂಡು ಬಂದು ಅವರಿಗೆ ಹೊಲಿಗೆ, ಸೇವೆ, ರಾಷ್ಟ್ರಭಕ್ತಿಯ ಬಗ್ಗೆ ಪಾಠ ಹೇಳಿಕೊಟ್ಟಳು ಅಕ್ಕ.
“ಭಾರತೀಯ ಹೆಣ್ಣುಮಕ್ಕಳಿಗೆ ಭಾರತೀಯತ್ವದ ಪರಿಚಯವಾಗಬೇಕು. ತಾನು ಭಾರತೀಯಳು ಎಂದು ಹೆಮ್ಮೆಯಿಂದ ಹೇಳುವಂತಾಗಬೇಕು. ಅದಕ್ಕಾಗಿ ಅವಳಿಗೆ ಯೋಗ್ಯ ವಿದ್ಯಾಭ್ಯಾಸವನ್ನು ನೀಡಬೇಕು.” ಎಂದಳು. ಅಷ್ಟಕ್ಕೆ ನಿಲ್ಲಿಸದೇ ಹೆಣ್ಣು ಈ ರಾಷ್ಟ್ರವನ್ನು ನಡೆಸುವ ಶಕ್ತಿಯಾಗಬೇಕು ಎಂದಿದ್ದಳು ನಿವೇದಿತಾ.
ಸಬಲ, ವಿದ್ಯಾವಂತ, ಅಭಿವೃದ್ಧಿಶೀಲ ಮಹಿಳಾ ಸಮಾಜದಿಂದ ಸಮಾಜದ ಉನ್ನತಿ ಸಾಧ್ಯ. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ದುಡಿಯುತ್ತಿರುವ ಮಹಿಳೆಯರ ಸಾಧನೆಗೆ ಗೌರವ ಸೂಚಿಸುವ ಸಲುವಾಗಿ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯ.
ಅಭಿವೃದ್ಧಿಯ ದಾರಿಯಲ್ಲಿ ಸಾಗಲು ಮೊದಲು ರಕ್ಷಣೆ ಬೇಕು. ನಿರ್ಭಯ ವಾತಾವರಣ ಬೇಕು. ತಾನು ಇಲ್ಲಿ ಸುರಕ್ಷಿತ ಎಂಬ ಭಾವನೆ ಭಾರತೀಯ ಮಹಿಳೆಯರ ಮನಸ್ಸಿನಲ್ಲಿದ್ದಾಗ ಮಾತ್ರ ಅವರು ತಮ್ಮ ಏಳಿಗೆ, ಅಭಿವೃದ್ಧಿಯ ಕುರಿತು ಚಿಂತಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ರಾಜ್ಯದಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗೆ ಒಂದರ ಹಿಂದೆ ಒಂದು ನಡೆಯುತ್ತಿರುವ ಮಾನಭಂಗಗಳಂತಹ ಪ್ರಕರಣಗಳೇ ಉತ್ತರಿಸುತ್ತವೆ.
ಮಹಿಳಾ ಸಶಕ್ತಿಕರಣ, ಮಹಿಳೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಜಾಗೃತಿಯಂತಹ ಯೋಜನೆಗಳು ಭಾರತದಲ್ಲಿ ಕಳೆದ ಒಂದಷ್ಟು ವರ್ಷದಿಂದ ಏಳಿಗೆ ಕಾಣುತ್ತಿದೆ. ದೇಶದ ರಕ್ಷಣೆಯ ಜವಾಬ್ದಾರಿ ಹೆಣ್ಣಿನ ಮೇಲಿದೆ. ಅಡುಗೆ ಮಾಡುವ ಕೈ ಶಸ್ತ್ರವನ್ನೂ ಹಿಡಿಯಬಲ್ಲದು ಎಂದು ನಾವು ವಿಶ್ವಕ್ಕೆ ತೋರಿಸಿದ್ದೇವೆ.
“ಯಾವ ಜಗನ್ಮಾತೆ ಅನ್ನಪೂರ್ಣೆಯಾಗಿ ತನ್ನ ಕೈಯಲ್ಲಿ ಅನ್ನದ ಪಾತ್ರೆ ಹಿಡಿದು ನಿಂತಿರುವಳೋ ಅದೇ ಜಗನ್ಮಾತೆ ಲೋಕವನ್ನು ರಕ್ಷಿಸಲು ದುರ್ಗೆಯಾಗಿ ಕಾಳಿಯಾಗಿ ನಿಲ್ಲಲೂ ಸಿದ್ಧಳು” ಎಂದು ವಿಶ್ವಕ್ಕೆ ತೋರಿಸಿಕೊಟ್ಟ ಭವ್ಯ ಪರಂಪರೆ ನಮ್ಮದು.
ನೈಸರ್ಗಿಕವಾಗಿ ಮಹಿಳೆ ಪುರುಷನಿಗಿಂತ ಕಡಿಮೆ ದೈಹಿಕ ಶಕ್ತಿಯುಳ್ಳವಳು ಎಂಬುದು ವೈಜ್ಞಾನಿಕ ಸತ್ಯ. ಆದರೆ, ಮಹಿಳೆ ದುರ್ಬಲಳು ಎಂಬ ಕಾರಣಕ್ಕೆ ಹಿಂದಿನಿಂದಲೂ ಅವಳನ್ನು ಪುರುಷ ಸಮಾಜ ಅಲಕ್ಷ್ಯ ಮಾಡಿತ್ತು. ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಮಹಿಳೆ ದೂರವೇ ಉಳಿಯುವಂತೆ ಮಹಿಳೆಯನ್ನು ಹತ್ತಿಕ್ಕಲಾಗಿತ್ತು. ಈ ಬೇಧ ಭಾವ ಭಾರತದಲ್ಲೊಂದೇ ಅಲ್ಲ… ವಿಶ್ವದೆಲ್ಲೆಡೆ ಸರ್ವೇ ಸಾಮಾನ್ಯವಾಗಿತ್ತು. ಕ್ರಮೇಣ ಎಲ್ಲ ವಿಶ್ವದ ಹಲವೆಡೆ ಮಹಿಳಾ ಜಾಗೃತಿ ಮೂಡಲು ಪ್ರಾರಂಭವಾಯಿತು. ತಮ್ಮ ಅಭಿವೃದ್ಧಿ, ಸ್ವಾತಂತ್ರ್ಯಕ್ಕೋಸ್ಕರ ವಿಶ್ವದಾದ್ಯಂತ ಮಹಿಳೆಯರು ದನಿ ಎತ್ತಿದರು. 1945ರ ಹೊತ್ತಿಗೆ ಯೂರೋಪಿನಲ್ಲಿ ಲಿಂಗ ಸಮಾನತಾ ತತ್ವಗಳು ಜಾರಿಗೆ ಬಂದವು. ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಹೀಗಾಗಿ ಯೂರೋಪ್ನ ದೇಶಗಳ ಅಭಿವೃದ್ಧಿಯ ಜೊತೆ ಜೊತೆಗೆ ಮಹಿಳಾ ಸಶಕ್ತೀಕರಣವೂ ನಡೆದಿದೆ. ಭಾರತದ ಮಹಿಳೆ ಇಂದು ಕೇವಲ ತನ್ನ ಮನೆಯನ್ನು ನಡೆಸುತ್ತಿಲ್ಲ ಪ್ರಪಂಚಕ್ಕೆ ಮಾದರಿಯಾಗಿ ನಿಂತಿದ್ದಾಳೆ. ಆಕೆ ತನ್ನ ಸಂಸಾರಕ್ಕಾಗಿ ತನ್ನ ದೇಶಕ್ಕಾಗಿ ಯಾವ ತ್ಯಾಗ ಸೇವೆಗಳನ್ನು ಮಾಡಲು ಸಿದ್ಧಳಾಗಿದ್ದಾಳೆ.
ಇಂದು ಭಾರತೀಯ ನಾರಿ ಆಗಸವನ್ನು ಮುಟ್ಟಿದ್ದಾಳೆ. ನಿವೇದಿತಾ ಎಂತಹ ನಾರೀತ್ವದ ಆದರ್ಶವನ್ನು ತೋರಿಸಿದಳೋ ಇಂದು ಭಾರತೀಯ ನಾರಿ ಅದೇ ದಾರಿಯಲ್ಲಿ ಸಾಗುತ್ತಿರುವುದು ಕಾಣುತ್ತಿದೆ. ಭಾರತವನ್ನು ಮತ್ತೆ ಜಗದ್ಗುರು ವಿಶ್ವಮಾತೆಯನ್ನಾಗಿಸಲು ನಾರಿಶಕ್ತಿಯೇ ಕಾರಣವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.